varthabharthi


ಕರ್ನಾಟಕ

ಬೊಮ್ಮಾಯಿ ನೇತೃತ್ವದ ಸರಕಾರಕ್ಕೆ ಆರು ತಿಂಗಳು: ಸರಕಾರಕ್ಕೆ ಆರು ಪ್ರಶ್ನೆಗಳನ್ನು ಕೇಳಿದ ಕಾಂಗ್ರೆಸ್

ವಾರ್ತಾ ಭಾರತಿ : 28 Jan, 2022

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಜ. 28: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಆರು ತಿಂಗಳು ಪೂರೈಸಿದ್ದು, ಈ ಹಿನ್ನೆಲೆ ಸರಕಾರಕ್ಕೆ ಕಾಂಗ್ರೆಸ್ ಆರು ಪ್ರಶ್ನೆಗಳನ್ನು ಕೇಳಿದೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಸರಕಾರಕ್ಕೆ 6 ತಿಂಗಳಾಗಿದೆ, ನಿಮ್ಮ ಸಚಿವರ ಕೆಲಸಗಳ ಬಗ್ಗೆ ನಿಮಗೆ ತೃಪ್ತಿ ಇದೆಯೇ? ಅಸಮಾಧಾನದಿಂದ ಒಲ್ಲದ ಖಾತೆ ನಿಭಾಯಿಸುತ್ತಿರುವವರು, ಉಸ್ತುವಾರಿಗಾಗಿ ಕಿತ್ತಾಡುವವರು, ತಮ್ಮದೇ ಶಾಸಕರೊಂದಿಗೆ ಮುನಿಸಿಟ್ಟುಕೊಂಡ ಸಚಿವರುಗಳು ನಿಮ್ಮಲ್ಲಿದ್ದಾರೆ, ಅವರ ಕೆಲಸಗಳ ಬಗ್ಗೆ ಸಮಾಧಾನವಿದೆಯೇ? ತಿಂಗಳು ಆರು.. ಓನ್ಲಿ ದಿಲ್ಲಿ ಟೂರು" ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

"ನೋಟ್ ಬ್ಯಾನ್ ಹಾಗೂ ಗಬ್ಬರ್ ಸಿಂಗ್ ಟ್ಯಾಕ್ಸ್ ಗಳಿಂದಾಗಿ ಶುರುವಾದ ನಿರುದ್ಯೋಗ ಸಮಸ್ಯೆ ಲಾಕ್‌ಡೌನ್ ನಂತರ ಉತ್ತುಂಗಕ್ಕೇರಿದೆ. ಸಿಎಂ ಆಗಿ ಅರ್ಧ ವರ್ಷ ಅಧಿಕಾರ ಪೂರೈಸಿದ ಬಸವರಾಜ ಬೊಮ್ಮಾಯಿ ಅವರೇ, ಉದ್ಯೋಗ ಸೃಷ್ಟಿಗೆ ತಾವು ಕೈಗೊಂಡ ಕ್ರಮಗಳೇನು? ರೂಪಿಸಿದ ಯೋಜನೆಗಳೇನು? ಎಷ್ಟು ಉದ್ಯೋಗ ಸೃಷ್ಟಿಯಾಗಿದೆ?" ಎಂದು ಪ್ರಶ್ನಿಸಿದೆ.

"ಮುಖ್ಯಮಂತ್ರಿಯಾಗಿ ಹಣಕಾಸು ಖಾತೆಯನ್ನು ಖಾತೆಯನ್ನು ನಿಭಾಯಿಸುತ್ತಿರುವ ಬಸವರಾಜ ಬೊಮ್ಮಾಯಿ ಅವರೇ, ತಮ್ಮ ಅಧಿಕಾರದ 6 ತಿಂಗಳಲ್ಲಿ ಹಾಗೂ ನಿಮ್ಮ ಡಬಲ್ ಇಂಜಿನ್ ಸರಕಾರದಲ್ಲಿ ಕೇಂದ್ರದಿಂದ ಯಾವ್ಯಾವ ಯೋಜನೆಗೆ ಎಷ್ಟು ಅನುದಾನ ತಂದಿದ್ದೀರಿ? ಜಿಎಸ್ಟಿ ಬಾಕಿ, ನೆರೆ ಪರಿಹಾರ ಸೇರಿದಂತೆ ಎಷ್ಟು ನೆರವನ್ನು ತಂದಿದ್ದೀರಿ?" ಎಂದು ಕಾಂಗ್ರೆಸ್ ಕೇಳಿದೆ.

ಇದನ್ನೂ ಓದಿ: 'ಸಮೀರ್‌ ಹತ್ಯೆ, ಶಂಶೀರ್ ಮೇಲಿನ ದಾಳಿ ಹಿಂದೆ ದ್ವೇಷ ಭಾಷಣ, ಪೊಲೀಸ್ ನಿಷ್ಕ್ರಿಯತೆ'

"ಬಿಬಿಎಂಪಿಯಲ್ಲಿ ಭ್ರಷ್ಟಾಚಾರ, ಬಿಡಿಎಯಲ್ಲಿ ಭ್ರಷ್ಟಾಚಾರ, ನೇಮಕಾತಿಯಲ್ಲಿ ಭ್ರಷ್ಟಾಚಾರ, ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಗುತ್ತಿಗೆಯಲ್ಲಿ ಶೇ.40ರಷ್ಟು ಕಮಿಷನ್ ಭ್ರಷ್ಟಾಚಾರ. ಈ ಸರಕಾರದಲ್ಲಿ ಎಲ್ಲೆಲ್ಲೂ ಭ್ರಷ್ಟಾಚಾರವೇ. ಬಸವರಾಜ ಬೊಮ್ಮಾಯಿ ಅವರೇ, ಈ 6 ತಿಂಗಳಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಕೈಗೊಂಡ ಕ್ರಮಗಳೇನು?" ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

"ಸಿಗದ ನೆರೆ ಪರಿಹಾರ, ದೊರಕದ ಕೊರೋನ ಪರಿಹಾರ, ಕುಂಟುವ ಅಡಳಿತಯಂತ್ರ, ಇಲ್ಲದ ವಸತಿ ಯೋಜನೆಗಳು. ಜನರ ಸಮಸ್ಯೆ ಹಲವಾರಿದ್ದರೂ ಒಂದೇ ಒಂದು ಜನತಾ ದರ್ಶನ ಕಾರ್ಯಕ್ರಮ ಮಾಡಿಲ್ಲವೇಕೆ? ಉಪಯೋಗವಿಲ್ಲದ ದೆಹಲಿ ದರ್ಶನಕ್ಕೆ ಹೋಗುವ ತಮಗೆ ಜನತಾ ದರ್ಶನಕ್ಕೆ ಸಮಯವಿರಲಿಲ್ಲವೇ?" ಎಂದು ಕಾಂಗ್ರೆಸ್, ಮುಖ್ಯಮಂತ್ರಿ ವಿರುದ್ದ ವಾಗ್ದಾಳಿ ನಡೆಸಿದೆ.

"ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವ ಬಸವರಾಜ ಬೊಮ್ಮಾಯಿ ಅವರು, ರಾಜ್ಯದ ಹಣಕಾಸು ಸ್ಥಿತಿಯನ್ನು ವೃದ್ಧಿಸುವಲ್ಲಿ ಕೈಗೊಂಡ ಕ್ರಮಗಳೇನು? ಆರ್ಥಿಕ ಶಿಸ್ತು ಕಾಪಾಡಲು ರೂಪಿಸಿದ ಯೋಜನೆಗಳೇನು? ತೆರಿಗೆ ಪಾಲು, ಅನುದಾನ, ಪರಿಹಾರ ಮುಂತಾದವುಗಳನ್ನು ಕೇಂದ್ರದಿಂದ ತರುವಲ್ಲಿ ಮಾಡಿದ ಪ್ರಯತ್ನಗಳೇನು?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)