ರಾಷ್ಟ್ರೀಯ
ಬಿಹಾರ ಬಂದ್: ಆರ್‌ಆರ್‌ಬಿ-ಎನ್‌ಟಿಪಿಸಿ ಪರೀಕ್ಷೆಯಲ್ಲಿ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

photo:PTI
ಹೊಸದಿಲ್ಲಿ,ಜ.28: 2021ನೇ ಸಾಲಿನ ರೈಲ್ವೆ ನೇಮಕಾತಿ ಮಂಡಳಿಯ ತಾಂತ್ರಿಕೇತರ ಜನಪ್ರಿಯ ವರ್ಗಗಳ (ಆರ್‌ಆರ್‌ಬಿ-ಎನ್‌ಟಿಪಿಸಿ) ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಹಲವಾರು ಪ್ರತಿಭಟನಾಕಾರರು ಶುಕ್ರವಾರ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ರಸ್ತೆತಡೆಗಳನ್ನು ಒಡ್ಡಿದರು. ಹಲವೆಡೆ ಟೈರ್ ಗಳಿಗೆ ಬೆಂಕಿ ಹಚ್ಚಲಾಗಿತ್ತು. ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ ಸೇರಿದಂತೆ ಹಲವಾರು ವಿದ್ಯಾರ್ಥಿ ಸಂಘಟನೆಗಳು ಬಿಹಾರ ಬಂದ್ ಗೆ ಕರೆ ನೀಡಿದ್ದವು.
ಬಿಹಾರ ಬಂದ್ ನ ಅಂಗವಾಗಿ ರಾಮಶೀಷ್ ಚೌಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಆರ್‌ಜೆಡಿ ಶಾಸಕ ಡಾ.ಮುಕೇಶ್ ರೌಶನ್ ಅವರು ತನ್ನ ಬೆಂಬಲಿಗರೊಂದಿಗೆ ಪಾಲ್ಗೊಂಡಿದ್ದರು. ಇಂದು ಬಿಹಾರ ಬಂದ್ ಗಾಗಿ ವಿದ್ಯಾರ್ಥಿ ಸಂಘಟನೆಗಳ ಕರೆಯನ್ನು ಬೆಂಬಲಿಸುವಂತೆ ಆರ್‌ಜೆಡಿ ಗುರುವಾರ ತನ್ನ ನಾಯಕರಿಗೆ ಸೂಚಿಸಿತ್ತು.
ಆರ್‌ಆರ್‌ಬಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಸಮಂಜಸತೆಗಳ ಬಗ್ಗೆ ಹಲವಾರು ವಿದ್ಯಾರ್ಥಿಗಳು ದೂರಿಕೊಂಡ ಬಳಿಕ ರಾಜ್ಯದಲ್ಲಿ ಪ್ರತಿಭಟನೆಗಳು ಆರಂಭಗೊಂಡಿವೆ. ಆರ್‌ಆರ್‌ಬಿ-ಎನ್‌ಟಿಪಿಸಿಗಾಗಿ ಎರಡು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ)ಗಳನ್ನು ನಡೆಸುವ ಸರಕಾರದ ನಿರ್ಧಾರವು ಒಂದೇ ಪರೀಕ್ಷೆಯನ್ನು ಬಯಸಿದ್ದ ಸಾವಿರಾರು ವಿದ್ಯಾರ್ಥಿಗಳನ್ನು ಕೆರಳಿಸಿತ್ತು.
ಗ್ರೂಪ್-ಡಿ ಹುದ್ದೆಗಳಿಗಾಗಿ ಸಿಬಿಟಿ-1ರ ಫಲಿತಾಂಶಗಳನ್ನು ಜ.14ರಂದು ಪ್ರಕಟಿಸಲಾಗಿದ್ದು,ಸಿಬಿಟಿ-2ಕ್ಕಾಗಿ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿ ಆರ್‌ಆರ್‌ಬಿ ಹೊರಡಿಸಿದ್ದ ನೋಟಿಸ್ ನಲ್ಲಿ ಒಂದೇ ಪರೀಕ್ಷೆಯನ್ನು ಉಲ್ಲೇಖಿಸಲಾಗಿತ್ತು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಕಾಂಗ್ರೆಸ್, ಸಿಪಿಐ ಮತ್ತು ಸಿಪಿಎಂ ಸಹ ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿವೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ