varthabharthi


ರಾಷ್ಟ್ರೀಯ

"ಚೀನಾ ಆಕ್ರಮಿಸಿರುವ ಭಾರತದ ಭೂಪ್ರದೇಶವನ್ನು ಯಾವಾಗ ಹಿಂದಿರುಗಿಸುತ್ತೀರಿ?" ಪ್ರಧಾನಿ ಮೋದಿಗೆ ರಾಹುಲ್ ಪ್ರಶ್ನೆ

ವಾರ್ತಾ ಭಾರತಿ : 28 Jan, 2022

ಹೊಸದಿಲ್ಲಿ: ಚೀನಾ ಅಕ್ರಮಿಸಿಕೊಂಡ ಭಾರತ ಭೂಭಾಗವನ್ನು ಎಂದು ಮರಳಿಸಲಿದ್ದೀರಿ ಎಂದು ಪ್ರಧಾನಿ ಮೋದಿಯನ್ನು ಉದ್ದೇಶಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

ಚೀನಾ ಸೇನೆಯಿಂದ ಅರುಣಾಚಲ ಪ್ರದೇಶದ ಬಾಲಕನ ಅಪಹರಣದ ಬಳಿಕ,  ಆತನನ್ನು ಚೀನಾ ಸೇನೆ ಮರಳಿಸಿರುವುದಕ್ಕೆ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

ಮಿರಾಮ್‌ ತಾರೊನ್‌ ಅವರನ್ನು ಮರಳಿಸಿದ್ದು ನನಗೆ ಸಮಾಧಾನ ತಂದಿದೆ. ಆದರೆ, ಚೀನಾ ಆಕ್ರಮಿಸಿಕೊಂಡಿರುವ ಭಾರತದ ಭೂಪ್ರದೇಶವನ್ನು ನಾವು ಎಂದು ಪಡೆದುಕೊಳ್ಳಲಿದ್ದೇವೆ, ಪ್ರಧಾನಮಂತ್ರಿಯವರೇ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ ಪ್ರಶ್ನಿಸಿದ್ದಾರೆ.

17 ರ ಹರೆಯದ ಮಿರಾಮ್‌ ತಾರೊನ್‌ ಅವರನ್ನು ಚೀನಾ ಸೇನೆ ಅಪಹರಿಸಿದೆ ಎಂದು ಅರುಣಾಚಲ ಪ್ರದೇಶದ ಸಂಸದ ತಾಪಿರ್‌ ಗಾವ್‌ ಹೇಳಿದ್ದರು. ಅದಾಗಿ ಒಂದು ವಾರದ ಬಳಿಕ ಅಪಹರಣಕ್ಕೊಳಗಾಗಿದ್ದ ಬಾಲಕನನ್ನು ಮರಳಿ ಕರೆತರಲಾಗಿತ್ತು.

ತಾರೊನ್‌ ನಾಪತ್ತೆಯಾಗಿರುವ ಬಗ್ಗೆ ವರದಿಗಳು ಹೊರಬಂದ ನಂತರ, ಅವರನ್ನು ಮರಳಿ ಕರೆತರುವ ಜವಾಬ್ದಾರಿಯನ್ನು ಸರ್ಕಾರವು ಪೂರೈಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದರು.

“ಸರ್ಕಾರ ಇದ್ದರೆ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಿ. ಮಿರಾಮ್ ತಾರೊನ್‌ ಅನ್ನು ಮರಳಿ ತನ್ನಿ! ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದರು.

ಗುರುವಾರ ಅರುಣಾಚಲ ಪ್ರದೇಶದ ವಾಚಾ-ದಮೈ ಸಂವಾದ ಕೇಂದ್ರದಲ್ಲಿ ತಾರೊನ್‌ ಅವರನ್ನು ಭಾರತೀಯ ಸೇನೆಗೆ ಹಸ್ತಾಂತರಿಸಲಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)