375 ಮಿಲಿಯನ್ ಡಾಲರ್ ಮೊತ್ತದ ಬ್ರಹ್ಮೋಸ್ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಫಿಲಿಪ್ಪೀನ್ಸ್ ಸಹಿ
ಬ್ರಹ್ಮೋಸ್ ಕ್ಷಿಪಣಿ(file photo:PTI)
ಮನಿಲಾ, ಜ.28: ಭಾರತ-ರಶ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸುವ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಖರೀದಿಯ ನಿಟ್ಟಿನಲ್ಲಿ 374.96 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಫಿಲಿಪ್ಪೀನ್ಸ್ ಶುಕ್ರವಾರ ಸಹಿ ಹಾಕಿದೆ ಎಂದು ಮೂಲಗಳು ಹೇಳಿವೆ.
ವರ್ಚುವಲ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಿಲಿಪ್ಪೀನ್ಸ್ನ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಡೆಲ್ಫಿನ್ ಲೊರೆಂಝಾನ ಮತ್ತು ಬ್ರಹ್ಮೋಸ್ ಏರೋಸ್ಪೇಸ್ ಪ್ರೈ.ಲಿ.ನ ಪ್ರಧಾನ ನಿರ್ದೇಶಕ ಅತುಲ್ದಿನಕರ್ ರಾಣೆ ಒಪ್ಪಂದಕ್ಕೆ ಸಹಿ ಹಾಕಿದರು. 3 ಬ್ಯಾಟರಿಗಳ ಪೂರೈಕೆ(ಒಂದು ಬ್ಯಾಟರಿ ಎಂದರೆ 2 ಕ್ಷಿಪಣಿ ಉಡಾವಣಾ ವ್ಯವಸ್ಥೆ, 1 ರೇಡಾರ್, ನಿರ್ದೇಶ ಮತ್ತು ನಿಯಂತ್ರಣ ವ್ಯವಸ್ಥೆ ಇರುವ ಒಂದು ಘಟಕ. ಇದರಲ್ಲಿ 10 ಸೆಕೆಂಡ್ಗಳಲ್ಲಿ 2 ಕ್ಷಿಪಣಿ ಉಡಾಯಿಸಬಹುದು). ನಿರ್ವಹಣೆ ತರಬೇತಿ ಮತ್ತು ಅಗತ್ಯದ ಸಮಗ್ರ ಕಾರ್ಯತಂತ್ರದ ನೆರವು ಈ ಒಪ್ಪಂದದ ಪ್ಯಾಕೇಜ್ನಲ್ಲಿ ಸೇರಿದೆ. ಫಿಲಿಪ್ಪೀನ್ಸ್ನ ಸಾಗರ ವ್ಯವಹಾರ ವಿಭಾಗದ ತಟ ರಕ್ಷಣಾ ಪಡೆಯಲ್ಲಿ ಈ ಕ್ಷಿಪಣಿಗಳನ್ನು ನಿಯೋಜಿಸಲಾಗುವುದು.
ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಗಳನ್ನು ಹೊರಿಝಾನ್2 ಆದ್ಯತೆಯ ಯೋಜನೆಯಡಿ ಸೇರ್ಪಡೆಗೊಳಿಸುವ ಪ್ರಸ್ತಾವನೆಗೆ 2020ರಲ್ಲಿ ಫಿಲಿಪ್ಪೀನ್ಸ್ ಅಧ್ಯಕ್ಷರ ಕಚೇರಿಯಿಂದ ಅನುಮೋದನೆ ಲಭಿಸಿದ ಬಳಿಕ ಪೂರೈಕೆಯ ದಾಖಲೆ ಪತ್ರಕ್ಕೆ ಡಿಸೆಂಬರ್ 31ರಂದು ಸಹಿ ಹಾಕಲಾಗಿದೆ ಎಂದು ವರದಿಯಾಗಿದೆ. ಭಾರತದ ಡಿಆರ್ಡಿಒ(ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಮತ್ತು ರಶ್ಯಾದ ಎನ್ಪಿಒ ಮಶಿನೊಸ್ಟ್ರೊಯೆನಿಯಾ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಗೊಳಿಸುವ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿ ಖರೀದಿಗೆ ಹಲವು ದೇಶಗಳು ಆಸಕ್ತಿ ತೋರಿದ್ದು ಇಂಡೋನೇಶ್ಯಾ ಮತ್ತು ಥೈಲ್ಯಾಂಡ್ನೊಂದಿಗಿನ ಮಾತುಕತೆ ಮುಂದುವರಿದಿದೆ.
ಕ್ಷಿಪಣಿಯ ರಫ್ತಿಗೆ ಸಂಬಂಧಿಸಿ ಸಿದ್ಧಪಡಿಸಲಾದ ನಿಷೇಧಿತ ದೇಶಗಳ ಪಟ್ಟಿಗೆ ರಶ್ಯಾ ಮತ್ತು ಭಾರತ ಅನುಮೋದನೆ ನೀಡಿದೆ. ನೆಲದ ಮೇಲಿಂದ, ಸಮುದ್ರದ ಮೇಲಿಂದ, ಸಮುದ್ರದ ಒಳಗಿಂದ ಮತ್ತು ಆಗಸದಿಂದ ಈ ಕ್ಷಿಪಣಿಯನ್ನು ನೆಲದ ಮೇಲಿರುವ ಮತ್ತು ಸಮುದ್ರದಲ್ಲಿನ ಗುರಿಗೆ ಉಡಾಯಿಸಬಹುದಾಗಿದೆ. ಈ ಹಿಂದೆಯೇ ಈ ಕ್ಷಿಪಣಿಯನ್ನು ಭಾರತದ ಸಶಸ್ತ್ರ ಪಡೆಗೆ ಸೇರಿಸಿಕೊಳ್ಳಲಾಗಿದೆ.
ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯ ನಿಯಮದ ಅನುಸಾರ ಈ ಕ್ಷಿಪಣಿಯ ವ್ಯಾಪ್ತಿಯನ್ನು 290 ಕಿ.ಮೀಗೆ ಸೀಮಿತಗೊಳಿಸಲಾಗಿದೆ. ಮುಂದಿನ ಹಂತದಲ್ಲಿ ಇದನ್ನು 450 ಕಿ.ಮೀ ಯಿಂದ 600 ಕಿ.ಮೀವರೆಗೆ ವಿಸ್ತರಿಸಲಾಗುವುದು. ಹೆಚ್ಚುವರಿ ದೂರವ್ಯಾಪ್ತಿಯ ಕ್ಷಿಪಣಿಯನ್ನು ಒಡಿಶಾದ ಸೇನಾನೆಲೆಯಲ್ಲಿ ಜನವರಿ 11 ಮತ್ತು 20ರಂದು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.