varthabharthi


ಅಂತಾರಾಷ್ಟ್ರೀಯ

ಹೊಂಡುರಾಸ್: ಪ್ರಥಮ ಮಹಿಳಾ ಅಧ್ಯಕ್ಷೆ ಪದಗ್ರಹಣ

ವಾರ್ತಾ ಭಾರತಿ : 28 Jan, 2022

ಕ್ಸಿಯೊಮರಾ ಕ್ಯಾಸ್ಟ್ರೋ(photo:twitter/@XiomaraCastroZ)

ತೆಗುಸಿಗಲ್ಪ, ಜ.28: ಹೊಂಡುರಾಸ್ ದೇಶದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಕ್ಸಿಯೊಮರಾ ಕ್ಯಾಸ್ಟ್ರೋ ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ ದೇಶದಲ್ಲಿ 8 ವರ್ಷದಿಂದ ಅಧಿಕಾರದಲ್ಲಿದ್ದ ಜುವಾನ್ ಒರ್ಲಾಂಡೊ ಹರ್ನಾಂಡೆರ್ ಅವರ ಆಡಳಿತ ಅಂತ್ಯವಾದಂತಾಗಿದೆ.

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಹಿತ ಹಲವು ಗಣ್ಯರು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಲಸಿಗರ ಸಮಸ್ಯೆ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ನೂತನ ಅಧ್ಯಕ್ಷೆಗೆ ಅಮೆರಿಕ ಸರಕಾರದ ನೆರವನ್ನು ಈ ಸಂದರ್ಭ ಹ್ಯಾರಿಸ್ ಖಾತರಿಪಡಿಸಿದರು ಎಂದು ಮೂಲಗಳು ಹೇಳಿವೆ.

ಮಾಜಿ ಅಧ್ಯಕ್ಷ ಮಾನುವೆಲ್ ಝೆಲಯಾ ಅವರ ಪತ್ನಿಯಾಗಿರುವ ಕ್ಯಾಸ್ಟ್ರೋ ಪ್ರಮಾಣವಚನ ಕಾರ್ಯಕ್ರಮ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದಾಗ ಬೃಹತ್ ಸಂಖ್ಯೆಯಲ್ಲಿ ಬೆಂಬಲಿಗರು ಹಾಜರಿದ್ದರು. ಉತ್ತರಾಧಿಕಾರಿಯಿಂದ ಪಡೆದಿರುವ ಆರ್ಥಿಕ ಸಮಸ್ಯೆ ನಮ್ಮ ದೇಶದ ಇತಿಹಾಸದಲ್ಲೇ ಅಸಾಮಾನ್ಯವಾಗಿದೆ ಎಂದು ಕ್ಯಾಸ್ಟ್ರೋ ಈ ಸಂದರ್ಭ ಹೇಳಿದರು.

ಭಾರೀ ಸಾಲದ ಹೊರೆ, ವಲಸಿಗರ ಸಮಸ್ಯೆ, ತೈವಾನ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರುವುದರಿಂದ ಚೀನಾದೊಂದಿಗಿನ ಸಂಬಂಧ ಹಳಸಿರುವುದು ಮುಂತಾದ ಸಮಸ್ಯೆಗಳನ್ನು ಕ್ಯಾಸ್ಟ್ರೋ ನಿಭಾಯಿಸಬೇಕಿದೆ. ಪ್ರಮಾಣವಚನ ಕಾರ್ಯಕ್ರಮದ ಬಳಿಕ ಕ್ಯಾಸ್ಟ್ರೋ ಜತೆ ಸಭೆ ನಡೆಸಿದ ಕಮಲಾ ಹ್ಯಾರಿಸ್, ಹೊಂಡುರಾಸ್‌ಗೆ ಇನ್ನಷ್ಟು ಕೋವಿಡ್ ಲಸಿಕೆ ಮತ್ತು ವೈದ್ಯಕೀಯ ನೆರವಿನ ಪೂರೈಕೆ ಜತೆಗೆ ದೇಶ ಎದುರಿಸುತ್ತಿರುವ ಹಲವು ಸಮಸ್ಯೆಗಳ ಸವಾಲನ್ನು ಎದುರಿಸುವಲ್ಲಿ ನೂತನ ಅಧ್ಯಕ್ಷೆಗೆ ಅಮೆರಿಕದ ಸರ್ವ ರೀತಿಯ ಸಹಕಾರ ಇರುವುದಾಗಿ ಭರವಸೆ ನೀಡಿದರು ಎಂದು ವರದಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು