varthabharthi


ದಕ್ಷಿಣ ಕನ್ನಡ

ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜನಪ್ರತಿನಿಧಿ, ಅಧಿಕಾರಿಗಳ ಸಭೆ

ಆದೇಶ ಪಾಲಿಸುವಂತೆ ಪದೇ ಪದೇ ನೆನಪಿಸುವ ಅಭ್ಯಾಸ ನನಗಿಲ್ಲ: ಉಸ್ತುವಾರಿ ಸಚಿವ ಸುನೀಲ್ ಕುಮಾರ್

ವಾರ್ತಾ ಭಾರತಿ : 28 Jan, 2022

ಮಂಗಳೂರು, ಜ.28: ಒಂದು ಕೆಲಸವನ್ನು ಮಾಡುವಂತೆ ಅಥವಾ ಆದೇಶವನ್ನು ಪಾಲಿಸುವಂತೆ ಒಂದು ಬಾರಿ ಮಾತ್ರ ಹೇಳುವ ಸ್ವಭಾವ ನನ್ನದು. ಅದೇ ಕೆಲಸವನ್ನು ಮಾಡುವಂತೆ ಅಥವಾ ಆದೇಶವನ್ನು ಪಾಲಿಸುವಂತೆ ಎರಡನೇ ಬಾರಿ ನೆನಪಿಸುವ ಅಭ್ಯಾಸ ನನಗಿಲ್ಲ. ಹಾಗಾಗಿ ಅಧಿಕಾರಿ, ಸಿಬ್ಬಂದಿಗಳೆಲ್ಲರೂ ಕಾಲಮಿತಿಯೊಳಗೆ ಕೆಲಸ ಮಾಡಬೇಕು ಎಂದು ದ.ಕ. ಜಿಲ್ಲಾ ನೂತನ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದರು.

ದ.ಕ. ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಡಳಿತದಲ್ಲಿ ಚುರುಕುತನ ಇರಬೇಕು. ನೋಡೋಣ, ಮಾಡೋಣ ಎಂದರೆ ಆಗದು. ನಿರ್ಲಕ್ಷ್ಯ ತಾಳಿದರೆ ಅಥವಾ ಪಾಲಿಸಿಗಳು ಕಡತಗಳನ್ನು ತಳ್ಳಿ ಹಾಕಿದರೆ ನಾನು ಎಂದಿಗೂ ಸಹಿಸುವುದಿಲ್ಲ. ಇಲಾಖೆಗಳು ಹಾಗೂ ಅಧಿಕಾರಿಗಳ ನಡುವೆ ಪರಸ್ಪರ ಸಮನ್ವಯತೆ ಹಾಗೂ ಹೊಂದಾಣಿಕೆ ಇರಬೇಕು. ಕಾಲಮಿತಿ ಹಾಗೂ ಸ್ಪಷ್ಟತೆಯಿಂದ ಆಯಾ ಕೆಲಸಗಳನ್ನು ಪೂರ್ಣಗೊಳಿಸಲು ಗಮನಹರಿಸಬೇಕು ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.

ಫೆಬ್ರುವರಿಯಲ್ಲಿ ತಾಲೂಕು ಮಟ್ಟದಲ್ಲೂ ಕೆಡಿಪಿ ಸಭೆಗಳನ್ನು ನಡೆಸಲಾಗುವುದು. ಸಾರ್ವಜನಿಕರು ಸರಕಾರಿ ಕೆಲಸಗಳಿಗೆ ಪುನಃ ಯಾವುದೇ ದೂರನ್ನು ನೀಡಲು ಆಸ್ಪದ ಕೊಡಬಾರದು. ಒಂದು ವೇಳೆ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯಮಟ್ಟದಲ್ಲಿ ಬಗೆಹರಿಸುವ ಸಮಸ್ಯೆಗಳಿದ್ದರೆ ಅಧಿಕಾರಿಗಳು ಅದನ್ನು ನನ್ನ ಗಮನಕ್ಕೆ ತರಬಹುದು. ಸರಕಾರದಿಂದ ಹೊರಡಿಸಲಾದ ಸುತ್ತೋಲೆಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಅವುಗಳ ಬದಲಾವಣೆಗಳಿದ್ದಲ್ಲಿ ಅವುಗಳನ್ನು ಸಹ ನನ್ನ ಗಮನಕ್ಕೆ ತರಬಹುದಾಗಿದೆ ಎಂದು ಸೂಚಿಸಿದರು.

ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ ಆರು ತಿಂಗಳು ಪೂರ್ಣಗೊಂಡಿವೆ. ಇನ್ನೂ ಬಾಕಿ ಉಳಿದಿರುವ ಒಂದೂವರೆ ವರ್ಷಗಳ ಅವಧಿಯಲ್ಲಿ ರಾಜ್ಯ ಸರಕಾರವು ಜನರ ಕಲ್ಯಾಣಕ್ಕಾಗಿ ರೂಪಿಸಿರುವ ಹಲವು ಜನಪರ ಹಾಗೂ ಜನಪ್ರಿಯ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಲು ಸಿದ್ಧರಾಗುವಂತೆ ಅವರು ತಾಕೀತು ಮಾಡಿದರು.

ಶಾಸಕನಾಗಿ ಮೂರನೇ ಬಾರಿ ಆಯ್ಕೆಯಾಗಿರುವ ನನಗೆ ಜಿಲ್ಲೆಯ ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಆಳವಾದ ಅರಿವಿದೆ. ಜಿಲ್ಲೆಯ ಸಮಸ್ಯೆಗಳು ಮುಂದಿನ ಒಂದೂವರೆ ವಷರ್ದಲ್ಲಿ ಬಗೆಹರಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಂಡದಂತೆ ಸರಕಾರಕ್ಕೆ ಗೌರವ ತರುವ ರೀತಿಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.

ಮುಂದಿನ ಕೆಲವೇ ದಿನಗಳಲ್ಲಿ ಕಡತ ವಿಲೇವಾರಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಭ್ರಷ್ಟಾಚಾರ, ಅಶಿಸ್ತು, ಉದಾಸೀನತೆ, ಉಡಾಫೆಯನ್ನು ಸಹಿಸುವುದಿಲ್ಲ. ಎಲ್ಲರೂ ಒಂದೇ ಮನೋಭಾವದಿಂದ ಕೆಲಸ ಮಾಡಿ ಸರಕಾರಕ್ಕೆ ಒಳ್ಳೆಯ ಹೆಸರು ತಂದುಕೊಡಬೇಕು ಎಂದು ಸಚಿವ ಸುನೀಲ್ ಕುಮಾರ್ ಕರೆ ನೀಡಿದರು.

ರಾಜ್ಯ ಸರಕಾರವು ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿದೆ. ಫೆಬ್ರವರಿ ಅಂತ್ಯದೊಳಗೆ ಬಗೆಹರಿಯುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ಕುಮ್ಕ್ಕಿ, ಡಿಸಿ ಮನ್ನಾ ಜಾಗದ ಸಮಸ್ಯೆಗಳನ್ನು ಬಗೆಹರಿಸಲಾಗುವುದು, ಜಿಲ್ಲೆಯಲ್ಲಿರುವ 94-ಸಿ, 94-ಸಿಸಿ .ಸಮಸ್ಯೆಗಳಿಗೆ ಪರಿಹಾರ ಸಿಗಲಿವೆ ಎಂದರು.

ಸಭೆಯಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿ, ಪ್ರತಾಪ್ ಸಿಂಹ ನಾಯಕ್, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿಪಂ ಸಿಇಒ ಡಾ. ಕುಮಾರ್, ಮಂಗಳೂರು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನಾವಣೆ, ಡಿಸಿಪಿ ಹರಿರಾಮ್ ಶಂಕರ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)