varthabharthi


ದಕ್ಷಿಣ ಕನ್ನಡ

ರಾಜ್ಯದ ಐವರು ಹಿರಿಯ ವೈದ್ಯರಿಂದ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಪತ್ರ

ಹಿಪಾಕ್ರಟೀಸ್ ಶಪಥದ ಬದಲಿಗೆ ಚರಕ ಶಪಥ ನಿರ್ಧಾರಕ್ಕೆ ವಿರೋಧ

ವಾರ್ತಾ ಭಾರತಿ : 15 Feb, 2022

ಮಂಗಳೂರು: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ ಎಂ ಸಿ) ಅಡಿಯಲ್ಲಿರುವ ಸ್ನಾತಕ ಶಿಕ್ಷಣ ನಿಯಂತ್ರಣ ಸಮಿತಿಯು ಹಿಪಾಕ್ರಟೀಸ್ ಶಪಥದ ಬದಲಿಗೆ ಚರಕ ಶಪಥವನ್ನು ಬಳಸಬೇಕು ಸೇರಿದಂತೆ ಹಲವು ನಿರ್ಧಾರಗಳನ್ನು ಕೈಗೊಂಡಿರುವುದನ್ನು ಪ್ರಶ್ನಿಸಿ ಮತ್ತು ಈ ನಿರ್ಣಯಗಳನ್ನು ಈ ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿ ರಾಜ್ಯದ ಐವರು ಹಿರಿಯ ವೈದ್ಯರು ಎನ್ ಎಂಸಿಗೆ ಪತ್ರ ಬರೆದಿದ್ದಾರೆ.

ಫೆಬ್ರವರಿ 7ರಂದು ನಡೆಸಿದ ಸಭೆಯಲ್ಲಿ ಚರಕ ಶಪಥ ಬಳಕೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೂ, ಶಿಕ್ಷಕರೂ ಯೋಗಾಸನ ಮಾಡಬೇಕು, ವೈದ್ಯಕೀಯ ವಿದ್ಯಾರ್ಥಿಗಳು ಕಂಪ್ಯೂಟರ್ ಕಲಿಕೆಯ ಬದಲು ಪರಿಸರ ಪ್ರಜ್ಞೆಗಾಗಿ ಗಿಡಮೂಲಿಕೆ ನೆಡಬೇಕು ಎಂಬಿತ್ಯಾದಿಯಾಗಿ ನಿರ್ಧರಿಸಲಾಗಿದೆ. ಇದು ಸರಿಯಲ್ಲ ಎಂದು ಮಂಗಳೂರಿನ ಹಿರಿಯ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಬಳ್ಳಾರಿಯ ಹಿರಿಯ ವೈದ್ಯ ಡಾ. ಯೋಗಾನಂದ ರೆಡ್ಡಿ, ಉಡುಪಿಯ ಡಾ. ಪಿ. ವೆಂಕಟರಾಯ ಭಂಡಾರಿ, ಬೆಂಗಳೂರಿನ ಡಾ. ಶಶಿಧರ ಬಿಳಗಿ, ಡಾ. ಪ್ರಕಾಶ್ ಸಿ. ರಾವ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ

ಆಧುನಿಕ ವೈದ್ಯ ವಿಜ್ಞಾನವು ಭಾರತವೂ ಸೇರಿದಂತೆ ಇಡೀ ವಿಶ್ವಕ್ಕೇ ಸೇರಿರುವ ವಿಜ್ಞಾನವಾಗಿದ್ದು, ಆಯುರ್ವೇದ, ಗ್ರೀಕ್ ವೈದ್ಯಶಾಸ್ತ್ರ, ಚೀನಾ, ಪರ್ಶಿಯಾಗಳ ವೈದ್ಯಶಾಸ್ತ್ರ ಎಲ್ಲವನ್ನೂ ಬಳಸಿಕೊಂಡೇ ವಿಕಾಸಗೊಂಡಿದೆ. ಎನ್ ಎಂಸಿಯು ಈ ಆಧುನಿಕ ಸಾಕ್ಷ್ಯಾಧಾರಿತ ವೈದ್ಯ ವಿಜ್ಞಾನದ ಕಲಿಕೆ ಹಾಗೂ ಸೇವೆಯನ್ನು ನಿಯಂತ್ರಿಸುವುದರಿಂದ ಅದರೊಳಕ್ಕೆ ಮತ್ತೆ ಆಯುರ್ವೇದ, ಚರಕ ಶಪಥಗಳನ್ನು ತುರುಕಿಸುವ ಅಗತ್ಯವೂ ಇಲ್ಲ, ಅದರಿಂದ ಏನನ್ನೂ ಸಾಧಿಸಿದಂತೆಯೂ ಆಗುವುದಿಲ್ಲ. ವೈದ್ಯಕೀಯ ವಿಜ್ಞಾನವು ಹೀಗೆ ಬೆಳೆಯುತ್ತಾ ಬದಲಾಗುತ್ತಾ ಬಂದಂತೆ ವೈದ್ಯಕೀಯ ಶಪಥವೂ ಬದಲಾಗುತ್ತಲೇ ಬಂದಿದೆ. ಪ್ರಾಚೀನವಾದ ಮೂಲ ಚರಕ ಶಪಥದಲ್ಲಿ ವೈದ್ಯರು ತಲೆಕೂದಲು-ಗಡ್ಡ ಕತ್ತರಿಸಬಾರದು, ರಾಜನಿಗೆ ವಿರುದ್ಧವಾಗಿರುವವರಿಗೆ, ವೈದ್ಯರಿಗೂ, ಜನರಿಗೂ ಇಷ್ಟವಾಗದವರಿಗೆ, ಸಾವಿನ ಸನಿಹದಲ್ಲಿರುವವರಿಗೆ ಚಿಕಿತ್ಸೆ ನೀಡಬಾರದು ಎನ್ನಲಾಗಿದೆ.

ಇದನ್ನು ಪಾಲಿಸಿದರೆ ಯಾವ ಮಹಿಳಾ ವೈದ್ಯೆಯೂ ವೈದ್ಯವೃತ್ತಿ ನಡೆಸಲು ಸಾಧ್ಯವಾಗದು, ಹಲವರಿಗೆ ಚಿಕಿತ್ಸೆ ನೀಡಲೂ ಆಗದು. ಹಿಪಾಕ್ರಟೀಸ್ ಶಪಥದಲ್ಲಿ ಎಲ್ಲ ರೋಗಿಗಳ ಆರೈಕೆಯೇ ವೈದ್ಯನ ನಿಷ್ಠೆಯಾಗಿರಬೇಕು ಎನ್ನಲಾಗಿದ್ದು, ಲಿಂಗಬೇಧ ಅದರಲ್ಲಿಲ್ಲ, ಆದರೆ ಗರ್ಭಪಾತಕ್ಕೆ ನೆರವಾಗುವುದಿಲ್ಲ ಎಂದಿದೆ. ವಿಶ್ವ ವೈದ್ಯಕೀಯ ಸಂಘಟನೆಯು 2017ರಲ್ಲಿ ಅನುಮೋದಿಸಿದ, ಹಾಗೂ ಜಗತ್ತಿನಾದ್ಯಂತ ವೈದ್ಯರು ಪಾಲಿಸಬೇಕಾಗಿರುವ ಆಧುನಿಕ ಶಪಥದಲ್ಲಿ ಲಿಂಗ, ರಾಜಕೀಯ, ಮತ, ಬಣ್ಣಗಳ ತಾರತಮ್ಯವಿಲ್ಲದೆ ಎಲ್ಲರಿಗೂ ಅತ್ಯುತ್ತಮ ಚಿಕಿತ್ಸೆ ನೀಡುವ ಬದ್ಧತೆಯ ಬಗ್ಗೆ ಹೇಳಲಾಗಿದೆ. ಆದ್ದರಿಂದ ಈಗ ಮೂಲ ಚರಕ ಶಪಥಕ್ಕೆ ಮರಳುವುದೆಂದರೆ ಸಾಧ್ಯವಾಗದ ಕೆಲಸವಷ್ಟೇ ಅಲ್ಲ, ಅನೇಕ ಆಭಾಸಗಳಿಗೂ ಕಾರಣವಾಗಬಹುದು.ರಾಷ್ಟ್ರೀಯ ವೈದ್ಯಕೀಯ ಸಂಘವೆಂಬುದರ ಹೆಸರಲ್ಲಿ ಚರಕ ಶಪಥವನ್ನು ಮೊಟಕುಗೊಳಿಸಿ ಎನ್ ಎಂಸಿ ಹೆಸರಲ್ಲಿ ಸಾಮಾಜಿಕ ಜಾಲದಲ್ಲಿ ಹರಡಿರುವುದನ್ನು ಮತ್ತು ಈ ಸಂಘವು ತನ್ನ ಸೂಚನೆಯನ್ನು ಜಾರಿಗೊಳಿಸಿದ್ದಕ್ಕೆ ಎನ್ ಎಂ ಸಿಗೆ ಕೃತಜ್ಞತೆ ಸಲ್ಲಿಸಿರುವುದನ್ನು ಎನ್ ಎಂಸಿ ಗಮನಕ್ಕೆ ತಂದಿರುವ ಈ ವೈದ್ಯರು, ಈ ಬಗ್ಗೆ ಎನ್ ಎಂಸಿ ಸ್ಪಷ್ಟೀಕರಣ ನೀಡಬೇಕೆಂದು ಆಗ್ರಹಿಸಿದ್ದಾರೆ.

ಚರಕ ಶಪಥವನ್ನು ಬದಲಿಸಿ ಅದರ ಪಾವಿತ್ರ್ಯತೆಗೆ ಧಕ್ಕೆ ತರಲು ಆ ಸಂಘಕ್ಕಾಗಲೀ, ಇತರರಿಗಾಗಲೀ ಅಧಿಕಾರವಿದೆಯೇ ಎಂದೂ ಅವರು  ಪ್ರಶ್ನಿಸಿದ್ದಾರೆ. ಚರಕ ಶಪಥವನ್ನು ಬದಲಿಸುವುದಾಗಲೀ ಅಥವಾ ಈಗ ಬಳಸುವ ಶಪಥಕ್ಕೆ ಚರಕ ಶಪಥವೆಂದು ಮರುನಾಮಕರಣ ಮಾಡುವುದಾಗಲೀ ಚರಕ ಶಪಥಕ್ಕೆ ಮಾಡುವ ಅಪಚಾರವಾಗುತ್ತದೆ. ಮೂಲ ಶಪಥವನ್ನು ಇದ್ದಂತೆಯೇ ಪಾಲಿಸುವುದೂ ಸಾಧ್ಯವಿಲ್ಲ, ಆದ್ದರಿಂದ ಶಪಥ ಬದಲಿಸುವ ನಿರ್ಧಾರವನ್ನು ಕೈಬಿಡುವುದೇ ಒಳ್ಳೆಯದು ಎಂದು ಪತ್ರದಲ್ಲಿ ಹೇಳಲಾಗಿದೆ.

ವೈದ್ಯಕೀಯ ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ, ಪ್ರಾಣಾಯಾಮ ಮಾಡಬೇಕು, ಇದರಿಂದ ಖಿನ್ನತೆ, ಆತಂಕ, ಮಾನಸಿಕ ಒತ್ತಡ ಹಾಗೂ ರ‍್ಯಾಗಿಂಗ್‌ ನಿಭಾಯಿಸಲು ಸಾಧ್ಯ ಎಂದು ಹೇಳಿರುವುದು ಆಧಾರರಹಿತವೂ, ಹಾಸ್ಯಾಸ್ಪದವೂ, ಅಪಾಯಕಾರಿಯೂ ಆಗಿದೆ. ಮಾನಸಿಕ ಸಮಸ್ಯೆಗಳಿಗೆ ತಜ್ಞ ಮನೋವೈದ್ಯರ ಚಿಕಿತ್ಸೆಯೇ ಬೇಕಲ್ಲದೆ ಯೋಗದಿಂದ ಯಾವುದೇ ಪ್ರಯೋಜನವಿಲ್ಲವೆಂದು ಅನೇಕ ಅಧ್ಯಯನಗಳು ದೃಢಪಡಿಸಿವೆ. ರ‍್ಯಾಗಿಂಗ್‌ ನಿಭಾಯಿಸಲು ಕಾನೂನಿನ ನಿಗಾವಣೆಯೇ ಬೇಕು. ಆದ್ದರಿಂದ ವೈದ್ಯಕೀಯ ಕಾಲೇಜುಗಳಲ್ಲಿ ಯೋಗ ದಿನಾಚರಣೆಯಂದು ಪ್ರದರ್ಶನಕ್ಕಾಗಿ ಯೋಗ ಮಾಡಿಸುವುದು ಸರಿಯಲ್ಲ, ಆ ನೆಪದಲ್ಲಿ ಆಯುಷ್ ಬೋಧಕರನ್ನು ಆಧುನಿಕ ವೈದ್ಯಕೀಯ ಕಾಲೇಜುಗಳೊಳಕ್ಕೆ ನೇಮಿಸುವ ಪ್ರಯತ್ನವೂ ಸರಿಯಲ್ಲ.

ಕಂಪ್ಯೂಟರ್ ಶಿಕ್ಷಣ ಹಾಗೂ ಆರಂಭದ ಹಂತದಿಂದಲೇ ವೈದ್ಯಕೀಯ ವಿದ್ಯಾರ್ಥಿಗಳಿಗೆ ರೋಗಿಗಳ ಪರೀಕ್ಷೆಯ ಕೌಶಲಗಳನ್ನು ಕಲಿಸುವ ವ್ಯವಸ್ಥೆಯನ್ನು ತೆಗೆದು ಹಾಕಿ, ಅದರ ಬದಲಿಗೆ ಪರಿಸರ ಪ್ರಜ್ಞೆಯ ಹೆಸರಲ್ಲಿ ಗಿಡಮೂಲಿಕೆ ನೆಡಲು ಹೇಳುವುದು ಸರಿಯಲ್ಲ. ಭಾರತದ ವೈದ್ಯರು ಅಂತರರಾಷ್ಟ್ರೀಯ ಮಟ್ಟದ ಕೌಶಲಗಳನ್ನು ಬೆಳೆಸಿಕೊಳ್ಳಬೇಕಾದರೆ ಜಾಗತಿಕ ಮಟ್ಟದ ಶಿಕ್ಷಣವನ್ನು ಪಡೆಯಬೇಕಾಗುತ್ತದೆ, ಈಗ ಸೂ ಹಿಸಿರುವ ಬದಲಾವಣೆಗಳು ಅವನ್ನು ಹಿಮ್ಮುಖವಾಗಿಸುತ್ತವೆ ಎಂದು ಪತ್ರದಲ್ಲಿ ಈಹಿರಿಯ ವೈದ್ಯರು ಎನ್ ಎಂಸಿ ಗಮನ ಸೆಳೆದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)