varthabharthi


ಪ್ರಚಲಿತ

ಈ ಯುದ್ಧೋನ್ಮಾದಕ್ಕೆ ಕೊನೆಯೆಂದು?

ವಾರ್ತಾ ಭಾರತಿ : 28 Feb, 2022
ಸನತ್ ಕುಮಾರ್ ಬೆಳಗಲಿ

ಯುದ್ಧ ಜನರ ಆಯ್ಕೆಯಲ್ಲ. ಪುಟಿನ್‌ನ ದುಡುಕಿನ ತೀರ್ಮಾನವನ್ನು ವಿರೋಧಿಸಿ ರಶ್ಯದ ಜನಸಾಮಾನ್ಯರು ಪ್ರತಿಭಟನೆ ನಡೆಸಿದ್ದಾರೆ. ಆದರೆ, ಶಸ್ತ್ರಾಸ್ತ್ರ ಉತ್ಪಾದಕರಿಗೆ, ಮಾರುಕಟ್ಟೆ ವಿಸ್ತರಿಸುವ ದಗಾಕೋರರಿಗೆ ಯುದ್ಧ ಬೇಕು.
ಯುದ್ಧ ಮುಗಿದ ನಂತರ ಪುಟಿನ್, ನ್ಯಾಟೊ ಸೂತ್ರಧಾರರು ಖುಷಿಯಿಂದ ಇರುತ್ತಾರೆ. ಆದರೆ ಮನೆಯನ್ನು ನಡೆಸುವ ಅಪ್ಪನನ್ನು ಕಳೆದುಕೊಂಡ ಮಕ್ಕಳ ಆಕ್ರಂದನ, ಪತಿಯನ್ನು ಕಳೆದುಕೊಂಡ ಹೆಣ್ಣು ಮಕ್ಕಳ ಸಂಕಟ, ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಂದಿರ ಶೋಕಗಳನ್ನು ಭರಿಸುವುದು ಯಾರಿಂದಲೂ ಸಾಧ್ಯವಿಲ್ಲ.


ಕೋವಿಡ್‌ನಂತಹ ಸಾಂಕ್ರಾಮಿಕಗಳು ಬಂದು ಸಾವಿರಾರು ಜನ ಸತ್ತರು. ಆಗಾಗ ಭೂಕಂಪ ಗಳು, ಪ್ರವಾಹಗಳು ಸಂಭವಿಸಿ ಲಕ್ಷಾಂತರ ಜನ ಅಸು ನೀಗುತ್ತಲೇ ಇರುತ್ತಾರೆ. ಭೂಗೋಳ ಬಿಸಿಯೇರಿ ವಾತಾವರಣ ಅಸಹನೀಯವಾಗುತ್ತಿದೆ. ಇದ್ಯಾವುದರಿಂದಲೂ ಮನುಷ್ಯ ಪಾಠ ಕಲಿಯಲಿಲ್ಲ. ಪರಸ್ಪರ ಹೊಡೆದಾಡುವುದನ್ನು ಬಿಡಲಿಲ್ಲ.
ಎಲ್ಲಿ ಮೂರನೇ ಮಹಾಯುದ್ಧಕ್ಕೆ ಕಾರಣವಾಗುವುದೋ ಎಂಬ ಭೀತಿಯನ್ನು ಮೂಡಿಸಿರುವ ಉಕ್ರೇನ್ ದುರಂತಕ್ಕೆ ದುರಹಂಕಾರಿ ಪುಟಿನ್ ಮಾತ್ರ ಕಾರಣವಲ್ಲ. ಆತನಷ್ಟೇ ಆಂಗ್ಲೋ ಅಮೆರಿಕ ಮತ್ತು ದುಷ್ಟ ನ್ಯಾಟೊ ಕೂಟವೂ ಕಾರಣ. ವಿಲಿವಿಲಿ ಒದ್ದಾಡಿ ಸಾಯುವವರು ಮಾತ್ರ ಉಕ್ರೇನ್‌ನ ಸಾಮಾನ್ಯ ಜನ. ಅಷ್ಟೇ ಅಲ್ಲ, ಅಲ್ಲಿ ವ್ಯಾಸಂಗಕ್ಕೆ ಹೋದ ಭಾರತ ದೇಶದ ಕರ್ನಾಟಕ ವಿದ್ಯಾರ್ಥಿಗಳು ಮತ್ತು ನಾನಾ ಕಾರಣಗಳಿಗಾಗಿ ಅಲ್ಲಿ ಹೋದ ಜಗತ್ತಿನ ಬೇರೆ ಬೇರೆ ದೇಶಗಳ ನಾಗರಿಕರು.
   ಪಕೃತಿ ವಿಕೋಪಗೊಂಡಾಗ ಕಾಣದ ದೇವರಿಗೆ ಮೊರೆ ಹೋಗುವುದು, ಅಭಿಷೇಕ ಮಾಡಿಸುವುದು, ಹರಕೆ ಬೇಡಿಕೊಳ್ಳುವುದು, ಸಂಭಾವಿತನಂತೆ ವರ್ತಿಸುವುದು ಮನುಷ್ಯನ ಚಾಳಿ. ಎಲ್ಲ ಸರಿ ಹೋದಾಗ ಸಹಜೀವಿಗಳನ್ನೇ ಕತ್ತರಿಸಲು ಕತ್ತಿ ಹಿರಿದು ನಿಲ್ಲುವುದು, ಜೊತೆಗಿರುವವರನ್ನು ಕೊಲ್ಲ್ಲುವುದು, ಪ್ರೀತಿಯನ್ನು ಹಂಚುವ ತಾನೇ ಕಟ್ಟಿಕೊಂಡ ಸಹಬಾಳ್ವೆಯ ಸಮಾಜವನ್ನು ಹೊಸಕಿ ಹಾಕುವುದು ಮನುಷ್ಯನಿಗೆ ಹೊಸದಲ್ಲ. ಅದು ಶಿವಮೊಗ್ಗ ಆಗಿರಲಿ ಇಲ್ಲವೇ ಉಕ್ರೇನ್ ಆಗಿರಲಿ, ನೆಲದ ಮೇಲೆ ಬೀಳುವ ರಕ್ತ ಮನುಷ್ಯನದು.ಇದಕ್ಕೆ ಕಾರಣನೂ ಮನುಷ್ಯನೇ ಅಲ್ಲವೇ?.
ತೊಂಭತ್ತರ ದಶಕದ ಆರಂಭದ ಸಮಾಜವಾದಿ ಸೋವಿಯತ್ ರಶ್ಯ ಪತನಗೊಂಡ ನಂತರ ಸೋವಿಯತ್ ಒಕ್ಕೂಟ ಒಡೆದು ಚೂರು ಚೂರಾಯಿತು. ಜೊತೆಗೆ ಜಗತ್ತಿನ ಚಿತ್ರವೇ ಬದಲಾಯಿತು. ಸಂಪತ್ತಿನ ಸಮಾನ ಹಂಚಿಕೆಯ ಸಮತೆಯ ಕನಸು ಭಗ್ನಗೊಂಡು ಮುಕ್ತ ಆರ್ಥಿಕತೆಯ ಹೆಸರಿನಲ್ಲಿ ಮಾರುಕಟ್ಟೆ ಆರ್ಥಿಕತೆಯ ಭ್ರಮಾಲೋಕ ಸೃಷ್ಟಿ ಯಾಯಿತು.
ಸೋವಿಯತ್ ಸಮಾಜವಾದಿ ಕ್ರಾಂತಿಯ ನಾಯಕ ವ್ಲಾದಿಮಿರ್ ಲೆನಿನ್ ವಿಭಿನ್ನ ಜನ ಸಮುದಾಯಗಳು, ಭಾಷೆಗಳು, ಧರ್ಮಗಳು ಮತ್ತು ರಾಷ್ಟ್ರೀಯತೆಗಳ ಜನರನ್ನು ಕೂಡಿಸಿ ಸಮಾಜವಾದಿ ವ್ಯವಸ್ಥೆ ಯನ್ನು ನಿರ್ಮಿಸಿದ್ದರು.
ಆಗ ಉಕ್ರೇನ್ ಕೂಡ ರಶ್ಯದ ಭಾಗವಾಗಿತ್ತು. ರಶ್ಯದೊಂದಿಗೆ ಸಮ್ಮಿಳಿತಗೊಂಡ ವಿಭಿನ್ನ ರಾಷ್ಟ್ರೀಯತೆಗಳ ಜನರಿಗೆ ಮತ್ತು ಆ ಜನ ನೆಲೆಸಿದ ಪ್ರದೇಶಗಳಿಗೆ ಸ್ವಾಯತ್ತ ಅಧಿಕಾರದ ಖಾತರಿಯನ್ನು ಲೆನಿನ್ ನೀಡಿದ್ದರು. ಲಿಪಿಯಿಲ್ಲದ ಬುಡಕಟ್ಟುಗಳ ಜನರ ಭಾಷೆಗೆ ಲಿಪಿಯನ್ನು ಒದಗಿಸಿದ್ದರು.ಲೆನಿನ್ ಆಗ ಉಕ್ರೇನ್‌ನಂತಹ ಪ್ರದೇಶಗಳ ಜನರ ರಾಷ್ಟ್ರೀಯತೆಯನ್ನು ಗೌರವಿಸಿ ಸ್ವಾಯತ್ತತೆ ನೀಡಿದ್ದೇ ತಪ್ಪು ಎಂದು ರಶ್ಯದ ಈಗಿನ ನಿರಂಕುಶ ಅಧ್ಯಕ್ಷ ಪುಟಿನ್ ಹೇಳುತ್ತಿದ್ದಾರೆ.
 ಸೋವಿಯತ್ ಸಮಾಜವಾದಿ ಕ್ರಾಂತಿಯ ಕಾಲದಲ್ಲಿ (1917 ) ರಶ್ಯವನ್ನು ಆಳುತ್ತಿದ್ದ ಝಾರ್ ದೊರೆಯನ್ನು ಎದುರಿಸಿ ಉಕ್ರೇನ್ ಮಾತ್ರವಲ್ಲ ಉಜ್ಬೆಕಿಸ್ತಾನ್, ಜಾರ್ಜಿಯಾ ಮತ್ತು ರಶ್ಯದ ದುಡಿಯುವ ಜನ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದರು. ಈಗ ಪುಟಿನ್ ಕೈಯಲ್ಲಿ ಸಿಕ್ಕ ರಶ್ಯ ಉಕ್ರೇನ್ ಮೇಲೆ ಭಯಾನಕ ದಾಳಿ ನಡೆಸಿದೆ.
ದಾಳಿಗೆ ಪುಟಿನ್ ಮಾತ್ರ ಕಾರಣವಲ್ಲ, ಸೋವಿಯತ್ ಪತನದ ನಂತರ ಯುರೋಪಿನಲ್ಲಿ ಕೈಯಾಡಿಸಲು ಮುಂದಾದ ಅಮೆರಿಕ ನೇತೃತ್ವದ ನ್ಯಾಟೊ ಕೂಡ ಕಾರಣ. ಹಿಂದೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಉಕ್ರೇನ್‌ನಂತಹ ದೇಶಗಳನ್ನು ನ್ಯಾಟೊ ಕೂಟಕ್ಕೆ ಸೇರಿಸಿಕೊಳ್ಳಲು ಮುಂದಾದ ಅಮೆರಿಕದ ಹುನ್ನಾರ ರಶ್ಯದ ಅಸಮಾಧಾನ ಕ್ಕೆ ಕಾರಣ. ಈಗ ಅಮೆರಿಕ ಹಾಗೂ ನ್ಯಾಟೊ ಪಡೆಗಳು ರಶ್ಯದ ಸುತ್ತುವರಿದಿರುವುದು ಮತ್ತು ಉಕ್ರೇನ್ ಮುಂತಾದ ದೇಶಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸುತ್ತಿರುವುದು ಪರಿಸ್ಥಿತಿ ಬಿಗಡಾಯಿಸಲು ಕಾರಣ.
 ನ್ಯಾಟೊ ಕೂಟವೆಂದರೆ ಎರಡನೇ ಮಹಾಯುದ್ಧದ ಮುಕ್ತಾಯದ ನಂತರ ಅಮೆರಿಕ, ಬ್ರಿಟನ್,ಕೆನಡ ಮತ್ತು ಫ್ರಾನ್ಸ್ ಸೇರಿದಂತೆ ಹನ್ನೆರಡು ಬಂಡವಾಳಶಾಹಿ ದೇಶಗಳು ಜೊತೆ ಸೇರಿ ಮಾಡಿಕೊಂಡ ಸೇನಾ ಮೈತ್ರಿಕೂಟ (ನ್ಯಾಟೊ ಅಂದರೆ ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್). ಪ್ರಸ್ತುತ ಇದರಲ್ಲಿ 30 ದೇಶಗಳು ಸದಸ್ಯತ್ವ ಹೊಂದಿವೆ. ಇದರ ಸದಸ್ಯ ರಾಷ್ಟ್ರಗಳ ಮೇಲೆ ವೈರಿ ದೇಶಗಳು ದಾಳಿ ಮಾಡಿದರೆ ಪರಸ್ಪರ ನೆರವಿಗೆ ಬರುತ್ತವೆ. ಇದು ಮೇಲ್ನೋಟದ ಸರಳ ವ್ಯಾಖ್ಯಾನ. ಇದರಾಚೆ ನ್ಯಾಟೊ ಕೂಟದ ನಿಜವಾದ ಉದ್ದೇಶ ಅಂದಿನ ಸೋವಿಯತ್ ರಶ್ಯದ ಮತ್ತು ಪೂರ್ವ ಯುರೋಪಿನ ಸಮಾಜವಾದಿ ದೇಶಗಳನ್ನು ಮತ್ತು ಅವುಗಳ ಜೊತೆ ಸ್ನೇಹ ಹೊಂದಿರುವ ದೇಶಗಳನ್ನು ಹೊಸಕಿ ಹಾಕುವುದಾಗಿತ್ತು. ಇದು ಜಗತ್ತಿನ ಅಭಿವೃದ್ಧಿಶೀಲ ದೇಶಗಳ ಮೇಲೆ ಹಿಡಿತ ಸಾಧಿಸಿ ಅಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆಯುವುದಾಗಿತ್ತು. ಇದಕ್ಕೆ ಪ್ರತಿಯಾಗಿ ಸೋವಿಯತ್ ರಶ್ಯ ಮತ್ತು ಪೂರ್ವ ಯುರೋಪಿನ ಕಮ್ಯುನಿಸ್ಟ್ ದೇಶಗಳು ವಾರ್ಸಾ ಮೈತ್ರಿ ಕೂಟ ರಚಿಸಿದವು. ಆದರೆ ಸೋವಿಯತ್ ಸಮಾಜವಾದಿ ವ್ಯವಸ್ಥೆಯ ಪತನದೊಂದಿಗೆ ವಾರ್ಸಾ ಕೂಟ ದಿಕ್ಕಾಪಾಲಾಯಿತು.ವಾರ್ಸಾ ಕೂಟದಲ್ಲಿ ಇದ್ದ ಅನೇಕ ದೇಶಗಳು ನ್ಯಾಟೊ ಕೂಟಕ್ಕೆ ಶರಣಾದವು.
  ಸೋವಿಯತ್ ಪತನದ ನಂತರ ಜಗತ್ತನ್ನು ಆಳಲು ಹೊರಟ ಅಮೆರಿಕದ ಸಾಮ್ರಾಜ್ಯಶಾಹಿ ಇರಾಕ್ ಮತ್ತು ಲಿಬಿಯಾಗಳಂತಹ ಸ್ವತಂತ್ರ ದೇಶಗಳನ್ನು ಹೇಗೆ ನಾಶ ಮಾಡಿತೆಂದು ಎಲ್ಲರಿಗೂ ಗೊತ್ತಿದೆ. ಆ ದೇಶಗಳ ತೈಲ ಸಂಪತ್ತನ್ನು ದೋಚಲು ಅಡ್ಡಿಯಾಗಿದ್ದ ಇರಾಕಿನ ಸದ್ದಾಮ ಹುಸೇನ್ ಮತ್ತು ಲಿಬಿಯಾದ ಕರ್ನಲ್ ಗದ್ದಾಫಿಯವರನ್ನು ಮುಗಿಸಿತು.
 ಮುಸ್ಲಿಮ್ ಸಮುದಾಯದಲ್ಲಿ ಆಧುನಿಕತೆಯಿಲ್ಲ, ಸುಧಾರಣೆಯಿಲ್ಲ ಎಂದು ವಾದಿಸುವ ಆ ಸಮುದಾಯದ ಮಹಿಳೆಯರ ಪರಿಸ್ಥಿತಿ ಬಗ್ಗೆ ಒಣ ಅನುಕಂಪದ ಮಾತುಗಳನ್ನಾಡುವ ಜನ ನಮ್ಮಲ್ಲೂ ಇದ್ದಾರೆ. ಅಮೆರಿಕ ಕೂಡ ಅದೇ ಮಾತನ್ನು ಆಡುತ್ತದೆ. ಆದರೆ ಇರಾಕ್ ಮತ್ತು ಲಿಬಿಯಾಗಳಲ್ಲಿ ಸದ್ದಾಮ್ ಹುಸೇನ್ ಮತ್ತು ಕರ್ನಲ್ ಗದ್ದಾಫಿ ಮಹಿಳೆಯರಿಗೆ ಎಲ್ಲ ಸ್ವಾತಂತ್ರವನ್ನು ನೀಡಿದ್ದರು. ಅಲ್ಲಿ ಮಹಿಳೆಯರು ವೈದ್ಯರಾಗಿ, ವಿಜ್ಞಾನಿಗಳಾಗಿ, ವಿಮಾನ ಚಾಲಕರಾಗಿ, ಉಪನ್ಯಾಸಕರಾಗಿ ಹೀಗೆ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೂ ಆ ದೇಶಗಳನ್ನು ತೈಲ ಸಂಪತ್ತಿಗಾಗಿ ಧ್ವಂಸಗೊಳಿಸಿದ ವಾಶಿಂಗ್ಟನ್ ಈಗ ಉಕ್ರೇನ್ ಪ್ರಜೆಗಳಿಗೆ ನ್ಯಾಯ ಒದಗಿಸುವ ಹೆಸರಿನಲ್ಲಿ ಯುದ್ಧಕ್ಕೆ ಕಾರಣವಾಗಿದೆ. ರಶ್ಯದ ಮತ್ತೊಬ್ಬ ಝಾರ್ ದೊರೆಯಾಗಲು ಹೊರಟ ಪುಟಿನ್ ಇದನ್ನೇ ನೆಪ ಮಾಡಿಕೊಂಡು ಉಕ್ರೇನ್ ಮೇಲೆ ದಾಳಿ ನಡೆಸಿದ್ದಾನೆ.
ಇರಾಕಿನಲ್ಲಿ ಸದ್ದಾಂ ಹುಸೇನ್ ಪರಮಾಣು ಅಸ್ತ್ರಗಳನ್ನು ಅಡಗಿಸಿಟ್ಟಿದ್ದಾರೆಂಬ ಸುಳ್ಳು ಆರೋಪಗಳನ್ನು ಹೊರಿಸಿ ಆ ದೇಶದ ಮೇಲೆ ಬಾಂಬ್ ದಾಳಿ ಮಾಡಿ ಸರ್ವನಾಶ ಮಾಡಿತು. ಆದರೆ ಇರಾಕ್ ಅಣ್ವಸ್ತ್ರಗಳನ್ನು ಅಡಗಿಸಿಟ್ಟಿರಲಿಲ್ಲ ಎಂಬ ಸಂಗತಿ ನಂತರ ಜಗತ್ತಿಗೆ ಗೊತ್ತಾಯಿತು. ಲಿಬಿಯಾದಲ್ಲೂ ತೈಲ ಸಂಪತ್ತನ್ನು ತನ್ನ ಪ್ರಜೆಗಳ ಏಳಿಗೆಗೆ ಬಳಸಿದ ಗದ್ದಾಫಿಯನ್ನು ಹತ್ಯೆ ಮಾಡಲಾಯಿತು. ಅಲ್ಲಿ ಮುಂದೇನಾಯುತೆಂಬುದು ಎಲ್ಲರಿಗೂ ಗೊತ್ತಿದೆ.
         
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಚರ್ಚಿಲ್, ಸ್ಟಾಲಿನ್, ರೂಸ್ವೆಲ್ಟ್ ಅವರಂತಹ ಜಾಗತಿಕ ನಾಯಕರಿದ್ದರು. ಆಗ ಅನೇಕ ಸಾವು ನೋವುಗಳಾದರೂ ಅಪಾಯ ತಪ್ಪಿತು. ಆದರೆ ಈಗ ಉಕ್ರೇನ್-ರಶ್ಯ ಸಮರದಲ್ಲಿ ಇಡೀ ವಿಶ್ವ ನಾಯಕರಿಲ್ಲದೆ ಕಂಗಾಲಾಗಿದೆ. ಪರಮಾಣು ಅಸ್ತ್ರಗಳ ಜಮಾವಣೆ, ಪುಟಿನ್ ಆಟಾಟೋಪ, ನ್ಯಾಟೊ ಕೂಟದ ಯುದ್ಧೋನ್ಮಾದ, ದಿಗಿಲುಗೊಂಡ ಉಕ್ರೇನ್, ಮುಂದೇನು ಗೊತ್ತಿಲ್ಲ. ಯುದ್ಧದ ಪರಿಣಾಮ ಜಗತ್ತಿನ ಎಲ್ಲ ದೇಶಗಳ ಮೇಲೂ ಆಗಬಹುದು.ಸದ್ಯಕ್ಕಂತೂ ಒಳ್ಳೆಯ ದಿನಗಳಿಲ್ಲ. ಈ ಪುಟಿನ್ ಸಂಪನ್ನನೇನಲ್ಲ. ಆತ ತನಗೆ ಪ್ರತಿರೋಧವೇ ಇಲ್ಲದ ಗುಲಾಮಗಿರಿ ವ್ಯವಸ್ಥೆ ಯನ್ನು ಬಯಸುತ್ತಾನೆ. ಇದಕ್ಕೆ ಉಕ್ರೇನ್ ಮೇಲೆ ದಿಢೀರ್ ಆರಂಭಿಸಿರುವ ಬಾಂಬ್ ದಾಳಿಯೇ ಒಂದು ಉದಾಹರಣೆ. ಆದರೆ, ಇದಕ್ಕೆ ಕಾರಣವಾಗಿದ್ದು ಉಕ್ರೇನ್‌ನನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಅಲ್ಲಿ ಮಿಲಿಟರಿ ನೆಲೆಯನ್ನು ಭದ್ರಗೊಳಿಸಲು ಹೊರಟ ಅಮೆರಿಕ ನೇತೃತ್ವದ ನ್ಯಾಟೊ ಕೂಟ ಎಂಬುದನ್ನು ಮರೆಯಲಾಗದು.
ಈ ಯುದ್ಧ ಮುಂದುವರಿದರೆ ಅದರ ಪರಿಣಾಮ ರಶ್ಯ, ಉಕ್ರೇನ್‌ಗಳಿಗೆ ಮಾತ್ರ ಸೀಮಿತವಾಗಿ ಉಳಿಯುವುದಿಲ್ಲ. ಇದರಿಂದ ಜಗತ್ತಿನ ಸಾಂಪತ್ತಿಕ ಸ್ಥಿತಿ ಹದಗೆಡುತ್ತದೆ. ಜಗತ್ತು ಈಗಾಗಲೇ ಕೋವಿಡ್ ಹೊಡೆತದಿಂದ ತತ್ತರಿಸಿದೆ. ಈ ಯುದ್ಧದ ಪರಿಣಾಮವಾಗಿ ಹಣದುಬ್ಬರ ಹೆಚ್ಚಾಗುತ್ತದೆ.ಎಲ್ಲ ದೇಶಗಳಲ್ಲಿ ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆಯಾಗುತ್ತದೆ. ಭಾರತದಲ್ಲೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಗಗನಕ್ಕೇರಲಿವೆ. ಇದರ ಪರಿಣಾಮ ಎಲ್ಲಾ ಪದಾರ್ಥಗಳ ಬೆಲೆಗಳಲ್ಲಿ ಹೆಚ್ಚಳವಾಗಲಿದೆ.
 ಇನ್ನು ಭಾರತದ ಪಾತ್ರ. ಉಕ್ರೇನ್ ಮೇಲೆ ದಾಳಿ ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ದೂರವಾಣಿ ಮೂಲಕ ಮನವಿ ಮಾಡಿದ್ದಾರೆ. ಇದಕ್ಕಿಂತ ಹೆಚ್ಚಿಗೆ ಇನ್ನೇನನ್ನೂ ಮಾಡುವ ಸ್ಥಿತಿಯಲ್ಲಿ ಅವರೂ ಇಲ್ಲ. ಬಿಜೆಪಿ ಒಕ್ಕೂಟ ಸರಕಾರದ ಅಧಿಕಾರ ಸೂತ್ರ ಹಿಡಿದಾಗಲೇ( 2014) ಭಾರತದ ವಿದೇಶಾಂಗ ನೀತಿ ಹಳ್ಳ ಹಿಡಿದಿದೆ. ದೇಶದೊಳಗಿನ ಹಿಂದೂ-ಮುಸ್ಲಿಮ್ ರಾಜಕೀಯದಲ್ಲೇ ಮುಳುಗಿದ ಸರಕಾರ ನೆಹರೂ ಕಾಲದ ಅಲಿಪ್ತ ವಿದೇಶಾಂಗ ನೀತಿಗೆ ಬಹುತೇಕ ಎಳ್ಳುನೀರು ಬಿಟ್ಟಿದೆ. ಹೀಗಾಗಿ ಹೆಚ್ಚಿನ ಪ್ರಭಾವ ಬೀರುವ ಸ್ಥಿತಿಯಲ್ಲಿ ಇಲ್ಲ.
ವಿಶ್ವಸಂಸ್ಥೆ ಎಂದು ಕರೆಯಲ್ಪಡುವ ಸಂಯುಕ್ತ ರಾಷ್ಟ್ರ ಸಂಸ್ಥೆ ಈಗ ಹೆಸರಿಗೆ ಮಾತ್ರ ಇದೆ.ಇರಾಕ್ ಮತ್ತು ಲಿಬಿಯಾದ ಮೇಲೆ ಅಮೆರಿಕ ದುರಾಕ್ರಮಣ ನಡೆಸಿದಾಗ ಅದು ಶ್ವೇತಭವನದ ಕಣ್ಸನ್ನೆಯಂತೆ ಕಣ್ಣು ಮುಚ್ಚಿಕೊಂಡು, ಕಿವಿಯಲ್ಲಿ ಅರಳೆ ಇಟ್ಟುಕೊಂಡು, ಬಾಯಿಯಲ್ಲಿ ಬೆಣ್ಣೆ ಬಡಿದುಕೊಂಡು ಕುಳಿತಿತ್ತು.
 ಉಕ್ರೇನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಭಾರತದ ಸುಮಾರು 20 ಸಾವಿರ ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ ಕರ್ನಾಟಕದ ಅನೇಕ ವಿದ್ಯಾರ್ಥಿಗಳು ಸೇರಿದ್ದಾರೆ. ಯುದ್ಧ ಆರಂಭ ಆಗಿರುವುದರಿಂದ ಸ್ವದೇಶಕ್ಕೆ ವಾಪಸಾಗಲು ಅವರು ಹಾತೊರೆಯುತ್ತಿದ್ದಾರೆ. ಅಲ್ಲಿ ವ್ಯಾಸಂಗ ಮಾಡುವ ಅಮೆರಿಕ, ಬ್ರಿಟನ್, ಫ್ರಾನ್ಸ್, ನೆದರ್‌ಲ್ಯಾಂಡ್ ಮುಂತಾದ ದೇಶಗಳ ಸಾವಿರಾರು ವಿದ್ಯಾರ್ಥಿಗಳನ್ನು ಆ ದೇಶಗಳ ಸರಕಾರಗಳು ಅಪಾಯದ ಸುಳಿವು ಸಿಕ್ಕು ಜನವರಿ 24ರಂದೇ ವಾಪಸ್ ಕರೆಸಿಕೊಂಡವು. ಆದರೆ ಭಾರತ ಸರಕಾರ ಸಕಾಲದಲ್ಲಿ ಕ್ರಮ ಕೈಗೊಳ್ಳಲಿಲ್ಲ. ಸರಕಾರಿ ವಿಮಾನ ಸಂಸ್ಥೆಯನ್ನು ಈಗಾಗಲೇ ಖಾಸಗಿಯವರಿಗೆ ಮಾರಾಟ ಮಾಡಿರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಯುದ್ಧ ನಡೆದಿರುವುದು ಗೊತ್ತಿದ್ದರೂ ಉಕ್ರೇನ್ ನಿಂದ ಭಾರತದ ವಿಮಾನ ಪ್ರಯಾಣ ದರವನ್ನು ಒಮ್ಮಿಂದೊಮ್ಮೆಲೇ ರೂ. ಒಂದೂವರೆ ಲಕ್ಷಕ್ಕಿಂತ ಜಾಸ್ತಿ ಮಾಡಲಾಗಿದೆ. ಇದಲ್ಲದೆ ನಿರಂತರ ಬಾಂಬ್ ದಾಳಿ. ಹೀಗಾಗಿ ನಮ್ಮ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಅಲ್ಲಿ ಕಾಲ ನೂಕುತ್ತಿದ್ದಾರೆ.
 ಜಗತ್ತಿನಲ್ಲಿ ನೈಸರ್ಗಿಕ ವಿಕೋಪಕ್ಕಿಂತ ಹೆಚ್ಚು ಜನ ಸತ್ತಿದ್ದು ಯುದ್ಧ ಮತ್ತು ಪರಸ್ಪರ ಹೊಡೆದಾಟದಿಂದ. ಸಂಪತ್ತಿನ ಸಂಗ್ರಹದ ಬಂಡವಾಳಶಾಹಿ ದುರಾಸೆ ಮತ್ತು ಲಾಭಕೋರ ಮಾರುಕಟ್ಟೆಯ ವಿಸ್ತರಣಾವಾದ ಯುದ್ಧ ಮತ್ತು ಅಶಾಂತಿಗೆ ಕಾರಣ. ಎಂಭತ್ತರ ದಶಕದ ಕೊನೆಯವರೆಗೆ ವಿಶ್ವದಾದ್ಯಂತ ಪ್ರಬಲವಾಗಿದ್ದ ಶಾಂತಿ ಆಂದೋಲನವೂ ಈಗ ದುರ್ಬಲವಾಗಿದೆ. ಇಂತಹ ಸನ್ನಿವೇಶದಲ್ಲಿ ಉಕ್ರೇನ್ ಮತ್ತು ರಶ್ಯದ ನಡುವಿನ ಯುದ್ಧ ಜಾಗತಿಕ ಯುದ್ಧವಾಗದಂತೆ, ಮೂರನೇ ಮಹಾಯುದ್ಧವಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಉಕ್ರೇನ್ ವಿದ್ಯಮಾನಗಳಿಂದ ಭಾರತದ ನಾವು ಪಾಠ ಕಲಿಯಬೇಕಾಗಿದೆ. ವಿಭಿನ್ನ ಭಾಷೆ. ಸಂಸ್ಕೃತಿಗಳ ಜನರನ್ನು, ಪ್ರದೇಶಗಳನ್ನು ಕೂಡಿಸಿ ಲೆನಿನ್ ಸೋವಿಯತ್ ಒಕ್ಕೂಟ ರಚಿಸಿದರು. ಆದರೆ ಅಲ್ಲಿ ಸಮಾಜವಾದಿ ವ್ಯವಸ್ಥೆ ಕುಸಿತದ ನಂತರ ಪುಟಿನ್‌ರಂತಹವರು ಅಧಿಕಾರಕ್ಕೆ ಬಂದರು. ರಶ್ಯದ ಅಂಧ ರಾಷ್ಟ್ರೀಯ ವಾದದ ದುರಭಿಮಾನಿಯಾದ ಇವರು ಉಕ್ರೇನ್‌ನಂತಹ ದೇಶಗಳ ಅಸ್ಮಿತೆಯನ್ನು ನಾಶ ಮಾಡಲು ಹೊರಟರು. ಹೀಗಾಗಿ ಉಕ್ರೇನ್ ತಿರುಗಿ ಬಿತ್ತು. ನಮ್ಮದು ಕೂಡ ಒಕ್ಕೂಟ ವ್ಯವಸ್ಥೆ. ಒಂದೇ ಧರ್ಮ, ಒಂದೇ ಭಾಷೆ, ಒಂದೇ ಸಂಸ್ಕೃತಿ ಹೆಸರಿನಲ್ಲಿ ವಿಭಿನ್ನ ರಾಜ್ಯಗಳ ಅಸ್ಮಿತೆಯನ್ನು ಹಾಳು ಮಾಡುವ ತಪ್ಪನ್ನು ಮಾಡಬಾರದು.
 ಅದೇನೇ ಇರಲಿ, ಉಕ್ರೇನ್ ಮೇಲೆ ರಶ್ಯದ ಸರ್ವಾಧಿಕಾರಿ ಪುಟಿನ್ ನಡೆಸಿದ ದಾಳಿ ಯನ್ನು ಸಮರ್ಥಿಸಲು ಸಾಧ್ಯವೇ ಇಲ್ಲ. ಈ ದುರಾಕ್ರಮಣದ ಪರಿಣಾಮವಾಗಿ ಉಕ್ರೇನ್‌ನ ಸುಮಾರು 50 ಸಾವಿರ ಜನ ದೇಶ ತೊರೆದು ಪೋಲ್ಯಾಂಡ್, ರೊಮೇನಿಯಾ, ಸ್ಲೋವಾಕಿಯಾ ಮುಂತಾದ ದೇಶಗಳಿಗೆ ಪಲಾಯನ ಮಾಡಿದ್ದಾರೆ.ಮನುಕುಲದ ಉಳಿವಿಗಾಗಿ ತಕ್ಷಣ ಈ ಯುದ್ಧ ನಿಲ್ಲಬೇಕಾಗಿದೆ.
ಉಕ್ರೇನ್‌ನ ಪ್ರಕ್ಷುಬ್ಧ ಪರಿಸ್ಥಿತಿಯನ್ನು ತಿಳಿಗೊಳಿಸಲು ರಶ್ಯ ತುರ್ತಾಗಿ ದಾಳಿಯನ್ನು ನಿಲ್ಲಿಸಬೇಕು. ಅದಕ್ಕಿಂತ ಮೊದಲು ರಶ್ಯದ ಭದ್ರತೆಗೆ ಗಂಡಾಂತರಕಾರಿಯಾದ ನ್ಯಾಟೊ ಪಡೆಗಳು ಆ ಪ್ರದೇಶದಿಂದ ತೊಲಗಬೇಕು.
ಯುದ್ಧ ಜನರ ಆಯ್ಕೆಯಲ್ಲ. ಪುಟಿನ್‌ನ ದುಡುಕಿನ ತೀರ್ಮಾನವನ್ನು ವಿರೋಧಿಸಿ ರಶ್ಯದ ಜನಸಾಮಾನ್ಯರು ಪ್ರತಿಭಟನೆ ನಡೆಸಿದ್ದಾರೆ. ಆದರೆ, ಶಸ್ತ್ರಾಸ್ತ್ರ ಉತ್ಪಾದಕರಿಗೆ, ಮಾರುಕಟ್ಟೆ ವಿಸ್ತರಿಸುವ ದಗಾಕೋರರಿಗೆ ಯುದ್ಧ ಬೇಕು.
ಯುದ್ಧ ಮುಗಿದ ನಂತರ ಪುಟಿನ್, ನ್ಯಾಟೊ ಸೂತ್ರಧಾರರು ಖುಷಿಯಿಂದ ಇರುತ್ತಾರೆ. ಆದರೆ ಮನೆಯನ್ನು ನಡೆಸುವ ಅಪ್ಪನನ್ನು ಕಳೆದುಕೊಂಡ ಮಕ್ಕಳ ಆಕ್ರಂದನ, ಪತಿಯನ್ನು ಕಳೆದುಕೊಂಡ ಹೆಣ್ಣು ಮಕ್ಕಳ ಸಂಕಟ, ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಂದಿರ ಶೋಕಗಳನ್ನು ಭರಿಸುವುದು ಯಾರಿಂದಲೂ ಸಾಧ್ಯವಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)