varthabharthi


ಕಾಲಂ 9

ಮನುಸ್ಮೃತಿಯ ಸಂಗ್ರಹರೂಪವೇ ಭಗವದ್ಗೀತೆ: ಅಂಬೇಡ್ಕರ್

ವಾರ್ತಾ ಭಾರತಿ : 30 Mar, 2022
ಶಿವಸುಂದರ್

ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆಯನ್ನು ಕಡ್ಡಾಯ ಮಾಡುವುದಕ್ಕಿಂತ ಅಂಬೇಡ್ಕರ್ ಅವರ ಬರಹಗಳ ಈ ಮೂರನೇ ಸಂಪುಟದ ಅಧ್ಯಯನವನ್ನು ಕಡ್ಡಾಯ ಮಾಡಬೇಕು. ಹಾಗಾಗದೆ, ಒಂದು ವೇಳೆ ಭಗವದ್ಗೀತೆಯನ್ನು ಶಾಲಾಕಾಲೇಜುಗಳಲ್ಲಿ ಪರಿಚಯಿಸುವುದೇ ಆದರೆ ಅದರ ಜೊತೆಗೆ ಕಡ್ಡಾಯವಾಗಿ ಅಂಬೇಡ್ಕರ್ ಅವರ 'ಕೃಷ್ಣ ಮತ್ತವನ ಗೀತೆ' ಲೇಖನದ ಓದನ್ನೂ ಕಡ್ಡಾಯಗೊಳಿಸಬೇಕೆಂದು ಜನ ಚಳವಳಿಗಳು ಆಗ್ರಹಿಸಬೇಕು.


ಶಾಲಾ- ಕಾಲೇಜುಗಳ ತರಗತಿಗಳ ಒಳಗೆ ಮುಸ್ಲಿಮ್ ವಿದ್ಯಾರ್ಥಿನಿಯರು ಸಮವಸ್ತ್ರದ ಮೇಲೆ ಅಂಗೈ ಅಗಲದ ಹಿಜಾಬ್ ಅನ್ನು ಧರಿಸುವುದು ದೇಶದ ಸರ್ವ ಧರ್ಮ ಸಮಭಾವದ ಸೆಕ್ಯುಲರಿಸಂಗೆ ವಿರುದ್ಧ ಎಂದು ಬಿಜೆಪಿ ಸರಕಾರ ಹಾಗೂ ಕೋರ್ಟುಗಳು ಮುಸ್ಲಿಮ್ ಹೆಣ್ಣು ಮಕ್ಕಳ ಮೇಲೆ ಯುದ್ಧವನ್ನೇ ಸಾರಿ ಗೆದ್ದುಬಿಟ್ಟವು. ಅದಾಗಿ ತಿಂಗಳು ಕಳೆಯುವ ಮುಂಚೆಯೇ ಬ್ರಾಹ್ಮಣ ಶ್ರೇಷ್ಠತೆಯನ್ನು ಪ್ರತಿಪಾದಿಸುವ, ಬ್ರಾಹ್ಮಣ ಪುರುಷರ ಸೇವೆಯನ್ನು ಮಾಡುವುದೇ ಉಳಿದ ಹಿಂದೂಗಳೆಲ್ಲರ ಪರಮ ಕರ್ತವ್ಯ ಎಂದು ಬೋಧಿಸುವ ಭಗವದ್ಗೀತೆಯನ್ನು 'ನೈತಿಕ ಪಾಠ'ದ ಹೆಸರಿನಲ್ಲಿ ಪಠ್ಯದ ಭಾಗ ಮಾಡುವ ಯೋಜನೆಯನ್ನು ಬೊಮ್ಮಾಯಿ ಸರಕಾರ ಘೋಷಿಸಿದೆ. ಹೀಗಾಗಿ ಹಿಜಾಬ್ ಬಗ್ಗೆ ಈ ಬ್ರಾಹ್ಮಣ ಶ್ರೇಷ್ಠತಾವಾದಿಗಳು ಮುಂದಿಟ್ಟ ಸೆಕ್ಯುಲರ್ ತರ್ಕಗಳೆಲ್ಲ ಎಷ್ಟು ಸೋಗಲಾಡಿತನದ್ದು ಎಂಬುದನ್ನು ಈ ಬೆಳವಣಿಗೆ ಸ್ಪಷ್ಟಪಡಿಸಿದೆ.

ವಾಸ್ತವವಾಗಿ ಭಗವದ್ಗೀತೆಯನ್ನು ಹಿಂದೂಗಳ ಧರ್ಮಗ್ರಂಥವೆಂದು ನೋಡಬಾರದೆಂದೂ, ಅದು ಎಲ್ಲಾ ಜಾತಿ-ಧರ್ಮಗಳಿಗೆ ಜನರಿಗೂ ನೈತಿಕ ಮೌಲ್ಯಗಳನ್ನು ಬೋಧಿಸುವ ಸಾರ್ವತ್ರಿಕ ನೀತಿಗ್ರಂಥ ಎಂದು ಬಿಜೆಪಿ ಸಮರ್ಥಿಸಿಕೊಳ್ಳುತ್ತಿದೆ ಹಾಗೂ ಆ ಮೂಲಕ ಬ್ರಾಹ್ಮಣ ಭಗವದ್ಗೀತೆಯನ್ನು ಅಬ್ರಾಹ್ಮಣ ಹಿಂದೂಗಳ ಮೇಲೂ, ಇತರ ಧರ್ಮೀಯರ ಮೇಲೂ ಹೇರಲು ಹೊರಟಿದೆ. ಈ ಪ್ರಯತ್ನಗಳನ್ನು ಮೋದಿ ಮೊದಲ ಬಾರಿ ಪ್ರಧಾನಿಯಾದಾಗಲೇ ಪ್ರಾರಂಭಿಸಿದ್ದರು. ಆಗ ಮೋದಿ ಕ್ಯಾಬಿನೆಟ್‌ನಲ್ಲಿ ಮಂತ್ರಿಯಾಗಿದ್ದ ಸುಶ್ಮಾ ಸ್ವರಾಜ್ ಅವರು ಗೀತೆಯನ್ನು ರಾಷ್ಟ್ರೀಯ ಗ್ರಂಥವೆಂದು ಘೋಷಿಸಬೇಕೆಂದು ಆಗ್ರಹಿಸಿದ್ದರು. ಮೋದಿಯವರಂತೂ ಅಮೆರಿಕದ ಅಧ್ಯಕ್ಷ ಒಬಾಮರಿಂದ ಹಿಡಿದು ಭಾರತಕ್ಕೆ ಅತಿಥಿಗಳಾಗಿ ಬರುತ್ತಿರುವ ಪ್ರತಿಯೊಬ್ಬರಿಗೂ ಭಗವದ್ಗೀತೆಯನ್ನು ಭಾರತದ ನೆನಪಿನಲ್ಲಿ ನೀಡಲು ಪ್ರಾರಂಭಿಸಿದ್ದಾರೆ. ವಿಶ್ವಗುರುವಾಗಲು ಭಗವದ್ಗೀತೆಯ ಮೇಲೆ ವಿಶ್ವಸಾರವನ್ನು ಆರೋಪಿಸುವ ಬಿಜೆಪಿ ಅದಕ್ಕಾಗಿ ತಿಲಕ್, ಗಾಂಧಿ ಮತ್ತು ವಿವೇಕಾನಂದ ರನ್ನು ಅತ್ಯಂತ ಅವಕಾಶವಾದಿಯಾಗಿ ಬಳಸಿಕೊಳ್ಳುತ್ತಿದೆ. ಆದರೂ ಭಗವದ್ಗೀತೆ, ಹಿಂದೂ ಪುರಾಣಗಳು, ಸ್ಮತಿ ಮತ್ತು ಶೃತಿ, ವೇದಗಳನ್ನು ಆಳವಾಗಿ ಅಧ್ಯಯನ ಮಾಡಿ ಅದರ ಹೂರಣವನ್ನು ಬಯಲು ಮಾಡಿರುವ ಅಂಬೇಡ್ಕರ್ ಅವರನ್ನು ಮಾತ್ರ ಈ ವಿಷಯದಲ್ಲಿ ನೆನೆಯಲೂ ಹೋಗುವುದಿಲ್ಲ. ಅದಕ್ಕೆ ಕಾರಣಗಳಿವೆ.

ಭಗವದ್ಗೀತೆಯ ಬ್ರಾಹ್ಮಣ್ಯವನ್ನು ಬಯಲು ಮಾಡುವ ಅಂಬೇಡ್ಕರ್ ಕೃತಿಗಳು
ವಾಸ್ತವದಲ್ಲಿ ಹಿಂದೂ ಎಂದು ಕರೆಯಲ್ಪಡುವ ಈ ಬ್ರಾಹ್ಮಣೀಯ ಗ್ರಂಥಗಳ ಅಸಲಿ ಸಾರವನ್ನು ಅರ್ಥಮಾಡಿಕೊಳ್ಳಲು ಭಾರತೀಯರೆಲ್ಲರೂ ಕಡ್ಡಾಯವಾಗಿ ಆ ಬಗ್ಗೆ ಅಂಬೇಡ್ಕರ್ ಬರೆದಿರುವ 'Philisophy Of Hinduism', 'Revolution and Counter Revolution in Ancient India' ಕೃತಿಗಳನ್ನು ಓದಲೇ ಬೇಕು. ಅದರ ಭಾಗವಾಗಿ ಅಂಬೇಡ್ಕರ್ ಬರೆದಿರುವ 'Krishna and his Geeta' ಲೇಖನದಲ್ಲಿ ನಿರ್ದಿಷ್ಟವಾಗಿ ಭಗವದ್ಗೀತೆಯನ್ನು ಬರೆದ ಕಾಲ, ಅದನ್ನು ಬರೆಯುವ ಹಿಂದಿನ ಉದ್ದೇಶ-ಅಗತ್ಯ ಹಾಗೂ ಅದರಲ್ಲಿರುವ ಬೋಧನೆಗಳ ಹಿಂದಿನ ಬ್ರಾಹ್ಮಣ ಶ್ರೇಷ್ಠತೆ ಮತ್ತು ವರ್ಣಾಶ್ರಮ ರಕ್ಷಣೆಯ ಹುನ್ನಾರಗಳನ್ನು ಅಂಬೇಡ್ಕರ್ ಎಳೆಎಳೆಯಾಗಿ ಬಿಚ್ಚಿಡುತ್ತಾರೆ. ಇವೆಲ್ಲವೂ ಅಂಬೇಡ್ಕರ್ ಅವರ ಸಮಗ್ರ ಬರಹ ಮತ್ತು ಭಾಷಣಗಳ 3ನೇ ಸಂಪುಟದಲ್ಲಿವೆ. ಅದರ ಕನ್ನಡಾನುವಾದವೂ ಕರ್ನಾಟಕ ಸರಕಾರದ ಕಣಜ ವೆಬ್‌ಸೈಟಿನ ಈ ವಿಳಾಸದಲ್ಲಿ ಸಿಗುತ್ತದೆ: https://kanaja.karnataka.gov.in/ebook/wp-content/uploads/2020/PDF/10.pdf

ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆಯನ್ನು ಕಡ್ಡಾಯ ಮಾಡುವು ದಕ್ಕಿಂತ ಅಂಬೇಡ್ಕರ್ ಅವರ ಬರಹಗಳ ಈ ಮೂರನೇ ಸಂಪುಟದ ಅಧ್ಯಯನವನ್ನು ಕಡ್ಡಾಯ ಮಾಡಬೇಕು. ಹಾಗಾಗದೆ, ಒಂದು ವೇಳೆ ಭಗವದ್ಗೀತೆಯನ್ನು ಶಾಲಾಕಾಲೇಜುಗಳಲ್ಲಿ ಪರಿಚಯಿಸುವುದೇ ಆದರೆ ಅದರ ಜೊತೆಗೆ ಕಡ್ಡಾಯವಾಗಿ ಅಂಬೇಡ್ಕರ್ ಅವರ 'ಕೃಷ್ಣ ಮತ್ತವನ ಗೀತೆ' ಲೇಖನದ ಓದನ್ನೂ ಕಡ್ಡಾಯಗೊಳಿಸಬೇಕೆಂದು ಜನಚಳವಳಿಗಳು ಆಗ್ರಹಿಸಬೇಕು. ಅದೇನೇ ಇರಲಿ. ಮನುಧರ್ಮ ಬೋಧಿಸುವ ಹಿಂದೂತ್ವ ಫ್ಯಾಶಿಸಂಗೆ ಪರ್ಯಾಯವಾಗಿ ಮಾನವೀಯ ಹಾಗೂ ಪ್ರಜಾತಾಂತ್ರಿಕ ಸಮಾಜವನ್ನು ಕಟ್ಟಲು ಹೋರಾಡುತ್ತಿರುವ ಜನಚಳವಳಿಗಳಂತೂ ಕಡ್ಡಾಯವಾಗಿ ಅದನ್ನು ಓದಲೇ ಬೇಕು. ಇದರ ಜೊತೆಗೆ ಡಿ.ಡಿ. ಕೋಸಂಬಿಯವರ ಲೇಖನಗಳನ್ನೂ ಕೂಡಿಸಿ ಓದಿದರೆ ಆಧುನಿಕ ಬ್ರಾಹ್ಮಣ್ಯದ ಹುನ್ನಾರಗಳು ಇನ್ನಷ್ಟು ಸ್ಪಷ್ಟವಾದೀತು.

ಅಮಾನವೀಯ ಮನುಧರ್ಮದ ಸಾರಸಂಗ್ರಹವೇ ಭಗವದ್ಗೀತೆ

ಅಂಬೇಡ್ಕರ್ ಅವರ ಪ್ರಕಾರ ಭಗವದ್ಗೀತೆಯಲ್ಲಿ ನೀತಿಯೂ ಇಲ್ಲ, ಧರ್ಮವೂ ಇಲ್ಲ. ಅದು ಮನುಸ್ಮತಿಯ ಸಾರಸಂಗ್ರಹ ರೂಪ ಮಾತ್ರ. ಅಂಬೇಡ್ಕರ್ ಅವರು ಮಹಾಭಾರತ ಹಾಗೂ ಭಗವದ್ಗೀತೆಯನ್ನು ಆಮೂ ಲಾಗ್ರವಾಗಿ ಅಧ್ಯಯನ ಮಾಡಿದ ನಂತರ ಈ ನಿಲುವಿಗೆ ಬರುತ್ತಾರೆ. ಹಿಂದಿನ ಕಾಲದಲ್ಲಿ ಯಾವುದಾದರೂ ಧರ್ಮಶಾಸ್ತ್ರದ ಹಾಗೂ ನೀತಿಗ್ರಂಥದ ಮಹತ್ವವನ್ನು ಹಾಗೂ ಅದರಲ್ಲಿ ಬೋಧಿಸಿರುವ ಒಳಿತು-ಕೆಡುಕುಗಳ ನೀತಿ ಸಂಹಿತೆಯ ಮಹತ್ವವನ್ನು ಅರಿಯಲು ಅದರ ಸಾಮಾಜಿಕ ಉಪಯುಕ್ತತೆ ಏನು ಎಂಬ ಮಾನದಂಡವನ್ನು ಮಾತ್ರ ಅನುಸರಿಸುತ್ತಿದ್ದರು. ಆದರೆ ಆಧುನಿಕ ಪ್ರಜಾತಂತ್ರದ ಕಾಲದಲ್ಲಿ ಯಾವುದೇ ಸಿದ್ಧಾಂತ, ಧರ್ಮ ಅಥವಾ ಶಾಸ್ತ್ರಗಳ ಮಹತ್ವವನ್ನು 'ನ್ಯಾಯ'ದ ಒರೆಗಲ್ಲಿನಲ್ಲಿ ಪರಿಶೀಲಿಸಿ ತೀರ್ಮಾನಿಸಬೇಕು ಎಂದು ಅಂಬೇಡ್ಕರ್ ಘೋಷಿಸುತ್ತಾರೆ. ಇಂದಿನ ಕಾಲಘಟ್ಟದಲ್ಲಿ ನ್ಯಾಯವು ಅಮೂರ್ತವೇನಲ್ಲ. ಅದು ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವಗಳೆಂಬ ಮೌಲ್ಯಗಳಲ್ಲಿ ಅಡಕವಾಗಿರುತ್ತದೆ. ಆ ಮೂರು ಮೌಲ್ಯಗಳಲ್ಲೂ ಪ್ರಧಾನವಾದದ್ದು ಸಮಾನತೆ, ಉಳಿದೆರಡು ಮೌಲ್ಯಗಳೂ ಅದರ ಉಪ ಉತ್ಪತ್ತಿ ಎಂದು ವಿಶ್ಲೇಷಿಸುವ ಅಂಬೇಡ್ಕರ್ ಭಗವದ್ಗೀತೆಯನ್ನು ಈ ಸಮಾನತೆಯ ಮೌಲ್ಯದ ಮೂಸೆಯಲ್ಲಿಟ್ಟು ಪರಿಶೀಲಿಸಿದಾಗ ಅದರ ಅಸಲಿ ಹೂರಣ ಬಯಲಾಗುತ್ತದೆ ಎಂದು ಹೇಳುತ್ತಾರೆ. ಈ ನ್ಯಾಯ ಮತ್ತು ಸಮಾನತೆಯ ನಿಕಷದಲ್ಲಿಟ್ಟು ಗೀತೆಯನ್ನು ಅಧ್ಯಯನ ಮಾಡಿದರೆ ಅದು ಯಾವುದೇ ಸಾರ್ವತ್ರಿಕವಾದ, ಎಲ್ಲಾ ಕಾಲಕ್ಕೂ ಸಲ್ಲುವ ಮಾನವೀಯ ಬದುಕಿನ ಮೌಲ್ಯಗಳನ್ನು ಹೇಳುವುದಿಲ್ಲ. ಬದಲಿಗೆ ಸಮಾಜದಲ್ಲಿ ಮತ್ತೊಮ್ಮೆ ಮೇಲುಕೀಳಿನ ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆಯನ್ನು ಪುನರ್‌ಸ್ಥಾಪಿಸುವ ಉದ್ದೇಶವನ್ನು ಹೊಂದಿದೆಯೆಂದು ಅಂಬೇಡ್ಕರ್ ಸಾಬೀತುಪಡಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅದರಲ್ಲಿನ ಪ್ರತಿ ಬೋಧನೆ ಹಾಗೂ ಸಾಮಾಜಿಕವಾಗಿ ಅನುಸರಿಸಬೇಕೆಂದು ಹೇಳಲಾಗುವ ತತ್ವಗಳು ಇಡೀ ಸಮಾಜಕ್ಕೆ ಉಪಯುಕ್ತವಾಗುವ ಬದಲಿಗೆ ಅದು ದೈವಪುರುಷರೆಂದು ಭಾವಿಸುವ ಬ್ರಾಹ್ಮಣರ ಹಿತವನ್ನು ಮಾತ್ರ ಎತ್ತಿಹಿಡಿಯುತ್ತದೆ. ಏಕೆಂದರೆ ಮನುಸ್ಮತಿ, ಉಪನಿಷತ್ತುಗಳನ್ನು ಹೊರತುಪಡಿಸಿದ ವೇದಗಳು, ಅದರಲ್ಲೂ ಪುರುಷ ಸೂಕ್ತ ಇತ್ಯಾದಿಗಳು, ಪುರಾಣಗಳು ಮತ್ತು ಭಗವದ್ಗೀತೆಯಲ್ಲಿ ಹರಿಯುವುದು ಒಂದೇ ಧಾರೆ. ಅದು ವರ್ಣಾಶ್ರಮ ಧರ್ಮದ ಪ್ರತಿಪಾದನೆ. ಆದ್ದರಿಂದ ಸಾಮಾಜಿಕ ಉಪಯುಕ್ತತೆ ಹಾಗೂ ನ್ಯಾಯ-ಸಮಾನತೆ ಎರಡೂ ಮಾನದಂಡಗಳಿಂದಲೂ ಭಗವದ್ಗೀತೆಯು ಒಂದು ಆಧುನಿಕ ಕಾಲದ ನೀತಿ ಸಂಹಿತೆಯಾಗಲು ನಾಲಾಯಕ್ಕಾಗಿದೆ ಎಂದು ಅಂಬೇಡ್ಕರ್ ಅಭಿಪ್ರಾಯ ಪಡುತ್ತಾರೆ. ಭಗವದ್ಗೀತೆಯು ಹೇಗೆ ಮನಸ್ಮತಿಯ ಸಾರಸಂಗ್ರಹವಷ್ಟೇ ಆಗಿದೆ ಎಂದು ಸಾಬೀತು ಪಡಿಸಲು ಅಂಬೇಡ್ಕರ್ ಕೊಟ್ಟಿರುವ ಹತ್ತಾರು ಪುರಾವೆಗಳಲ್ಲಿ ಈ ಕೆಳಗಿನ ಅಂಶಗಳು ಅತ್ಯಂತ ಮುಖ್ಯವಾಗಿವೆ:

1. ಚಾತುರ್ವರ್ಣ್ಯಂ ಮಯಾ ಸೃಷ್ಟ್ಯಂ- ಗುಣಕರ್ಮ ವಿಭಾಗಶಃ 
''ಚಾತುರ್ವರ್ಣ್ಯವೆಂದು ಹೆಸರಾಗಿರುವ ಗೊತ್ತುಪಾಡನ್ನು (ಅಂದರೆ ಸಮಾಜವನ್ನು ಬಾಹ್ಮಣ, ಕ್ಷತಿಯ, ವೈಶ್ಯ, ಶೂದ್ರವೆಂದು ನಾಲ್ಕು ಭಾಗಗಳನ್ನಾಗಿ ವಿಂಗಡಿಸುವುದು) ನಾನೇ ಸೃಷ್ಟಿಸಿದವನು ಮತ್ತು ನಾನೇ ಅವರವರ ಜಾಯಮಾನಕ್ಕನುಗುಣವಾಗಿ ವಿವಿಧ ಕಸುಬುಗಳನ್ನು ಅವರಿಗೆ ವಹಿಸಿದವನು. ಈ ಚಾತುರ್ವರ್ಣ್ಯವನ್ನೂ ನಾನೇ ಸೃಷ್ಟಿಸಿದವನು.'' (ಗೀತೆ ಅಧ್ಯಾಯ IV. ಶ್ಲೋಕ 13)
ಈ ಶ್ಲೋಕದ ಅಗತ್ಯ ಹಾಗೂ ಪರಿಣಾಮಗಳ ಬಗ್ಗೆ ಅಂಬೇಡ್ಕರ್ ಹೀಗೆ ವಿವರಿಸುತ್ತಾರೆ:

ಭಗವದ್ಗೀತೆ ಮತ್ತು ಮಹಾಭಾರತಗಳ ಹುಟ್ಟಿನ ಪೂರ್ವದಲ್ಲಿ ಸಮಾಜವು ಅಪ್ಪಿಕೊಂಡಿದ್ದ ಬೌದ್ಧ ಧರ್ಮ ಬ್ರಾಹ್ಮಣ್ಯವನ್ನು ಮತ್ತದರ ಮೇಲುಕೀಳು ಸಿದ್ಧಾಂತವನ್ನು ಆಧ್ಯಾತ್ಮಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಸೋಲಿಸಿ, ಸಮಾನತೆಯ ಆಶಯ ಮತ್ತು ಬದುಕನ್ನು ಸೃಷ್ಟಿಸಿತ್ತು. ಪುಷ್ಯಮಿತ್ರನ ನೇತೃತ್ವದಲ್ಲಿ ಬ್ರಾಹ್ಮಣ್ಯದ ದಿಗ್ವಿಜಯವು ನಡೆದ ಮೇಲೆ ತತ್ವಶಾಸ್ತ್ರದಲ್ಲಿದ್ದ ಬುದ್ಧಪೂರ್ವದ ಜೈಮುನಿಯ ಪೂರ್ವ ಮೀಮಾಂಸೆ ಹಾಗೂ ಸಾಂಖ್ಯ ದರ್ಶನದಲ್ಲಿದ್ದ ಗುಣಾಧಾರಿತ ಸಮಾಜ ವಿಭಜನೆ, ದೇಹ-ಆತ್ಮಗಳ ಪ್ರತ್ಯೇಕತೆಗಳನ್ನು ಭಗದ್ಗೀತೆಯು ಮತ್ತೆ ಬಳಸಿಕೊಂಡು ಮೇಲು ಕೀಳನ್ನು ಪುನರ್ ಸ್ಥಾಪಿಸಿತು. ಮತ್ತು ಈ ಕ್ರೂರ ವರ್ಣ ವಿಭಜನೆಗೆ ಬೌದ್ಧ ಪೂರ್ವದಲ್ಲಿ ಇಲ್ಲದಿದ್ದ ದೈವಿಕ ಒಪ್ಪಿಗೆಯನ್ನು ಭಗವದ್ಗೀತೆಯ ಮುಖಾಂತರ ಒದಗಿಸಿ ಅದರ ವಿರುದ್ಧ ಧ್ವನಿ ಎತ್ತದಂತೆ ಮಾಡಲಾಯಿತು. ಹಾಗೆಯೇ ಅದರ ಜೊತೆಜೊತೆಗೆ ಕರ್ಮ ಸಿದ್ಧಾಂತ ಹಾಗೂ ಕರ್ಮಾಧಾರಿತ ಪುನರ್ಜನ್ಮ ಸಿದ್ಧಾಂತಗಳನ್ನು ಭಗವದ್ಗೀತೆ ಬಳಸಿಕೊಂಡು ಕರ್ಮಫಲದಂತೆ ಬದುಕು ಎಂಬ ಸಮ್ಮತಿಯನ್ನು ರೂಢಿಸಿತು ಎಂದು ಅಂಬೇಡ್ಕರ್ ತೋರಿಸಿಕೊಡುತ್ತಾರೆ.

2. ಸ್ವಧರ್ಮೇ ನಿಧನಂ ಶ್ರೇಯಃ- ತಮ್ಮ ತಮ್ಮ ಧರ್ಮವನ್ನು ಅನುಸರಿಸುತ್ತಾ ಸಾಯುವುದೇ ಲೇಸು 

 ''ಬೇರೆ ವರ್ಣದವರ ಕಸುಬನ್ನು ಅನುಸರಿಸುವುದು ಸುಲಭವಾಗಿದ್ದರೂ ತನ್ನದೇ ವರ್ಣದ ಕಸುಬನ್ನು ಅನುಸರಿಸುವುದೇ ಜಾಣತನ. ಸಾಕಷ್ಟು ದಕ್ಷತೆಯಿಂದ ಅದನ್ನು ಒಬ್ಬನು ನಿರ್ವಹಿಸಲಾಗದಿದ್ದರೂ ತನ್ನ ವರ್ಣದ ಕಸುಬೇ ಶೇಯಸ್ಕರವಾದುದು. ಒಬ್ಬನು ತನ್ನ ವರ್ಣದ ಕಸುಬನ್ನು ಅನುಸರಿಸುವುದರಲ್ಲಿ ಆನಂದವಿದೆ. ಇದರ ಪಲವಾಗಿ ಅವನಿಗೆ ಸಾವು ಸಂಭವಿಸಿದರೂ ಚಿಂತೆಯಿಲ್ಲ. ಆದರೆ ಬೇರೆ ವರ್ಣದವರ ಕಸುಬನ್ನು ಅನುಸರಿಸುವುದು ಮಾತ್ರ ಅಪಾಯಕಾರಿ.'' (ಅಧ್ಯಾಯ-III, ಶ್ಲೋಕ 35)

ಒಂದೆಡೆ ವರ್ಣಾಶ್ರಮವೆಂದರೆ ಜಾತಿಪದ್ಧತಿಯಂತೆ ಜಡವಲ್ಲ. ಯಾರು ಬೇಕಾದರೂ ಯಾವವರ್ಣಕ್ಕೆ ಬೇಕಾದರೂ ಸೇರಿಕೊಳ್ಳಬಹುದು. ಆದರೆ ಅದಕ್ಕೆ ಬೇಕಾದಂತಹ ''ಗುಣವನ್ನು'' ರೂಢಿಸಿಕೊಳ್ಳಬೇಕಷ್ಟೆ ಎಂದು ಭಗವದ್ಗೀತೆಯನ್ನು ಮತ್ತು ಹಿಂದೂ ಧರ್ಮದ ತತ್ವಶಾಸ್ತ್ರವನ್ನು ಸಮರ್ಥಿಸಿಕೊಳ್ಳುತ್ತಿದ್ದ ಗಾಂಧಿ, ತಿಲಕರಿಗೆ ಈ ಶ್ಲೋಕವನ್ನು ಉದ್ಧರಿಸಿ ಅಂಬೇಡ್ಕರ್ ಪಾಟೀ ಸವಾಲು ಹಾಕುತ್ತಾರೆ. ಯಾರು ಯಾವ ವರ್ಣವನ್ನು ಬೇಕಾದರೂ ಸೇರಬಹುದಾಗಿದ್ದರೆ, ಆಯಾ ಧರ್ಮಗಳಲ್ಲೇ ಇದ್ದು ಸಾಯಬೇಕೆಂದು ಹೇಳುವ ಅಗತ್ಯವೇನಿತ್ತು. ಇಲ್ಲಿ ಧರ್ಮವೆಂದರೆ ಕುಲಧರ್ಮವೇ ಹೊರತು ವಿಶಾಲಾರ್ಥದಲ್ಲಿ ಬಳಸಿಲ್ಲ ಎಂದು ಅಂಬೇಡ್ಕರ್ ಇತರ ಹಲವಾರು ಶ್ಲೋಕಗಳನ್ನು ಉದ್ಧರಿಸಿ ಸಾಬೀತು ಪಡಿಸುತ್ತಾರೆ. ಏಕೆಂದರೆ ಭಗವದ್ಗೀತೆ ಇದ್ದಕ್ಕಿದ್ದಂತೆ ಶೂನ್ಯದಲ್ಲಿ ಉದ್ಭವಿಸಿದ್ದಲ್ಲ. ಅದು ನಿರ್ದಿಷ್ಟ ಕಾಲಸಂದರ್ಭದಲ್ಲಿ ಹುಟ್ಟಿಕೊಂಡಿತು ಮತ್ತು ಆ ಸಂದರ್ಭ ಬುದ್ಧಕಾಲದಲ್ಲಿ ಸಂಭವಿಸಿದ್ದ ವರ್ಣಸಂಕರಗಳು ಮತ್ತೆ ಆಗದಂತೆ ತಡೆಯುವುದಕ್ಕೆ ಬ್ರಾಹ್ಮಣ್ಯವು ದಾರಿಗಳನ್ನು ಹುಡುಕುತ್ತಿದ್ದ ಕಾಲ. ಅದಕ್ಕೆ ಬೇಕಾದ ಕಟ್ಟುಪಾಡುಗಳನ್ನು ದೈವಿಕ ನಿರ್ಣಯವೆಂದು ಸ್ಥಾಪಿಸುತ್ತಿದ್ದ ಬ್ರಾಹ್ಮಣ್ಯದ ಪುನರುತ್ಥಾನದ ಕಾಲ ಸಂದರ್ಭವೆಂದು ಅಂಬೇಡ್ಕರ್ ಹೇಳುತ್ತಾರೆ.

3. ''ತಮ್ಮ ಕಸುಬುಗಳಿಗೆ ಚೆನ್ನಾಗಿ ಹೊಂದಿಕೊಂಡಿರುವ ಅವಿದ್ಯಾವಂತರ ನಂಬಿಕೆಗಳನ್ನು ವಿದ್ಯಾವಂತರು ಅಭದ್ರಗೊಳಿಸಬಾರದು. ಅವನ ವರ್ಣಕ್ಕನುಸಾರವಾದ ಕಸುಬಿನಲ್ಲಿ ಅವನೇ ಮೊದಲು ತೊಡಗಬೇಕು.''

''ಬಳಿಕ ಇತರರೂ ಅವರವರ ವರ್ಣಾನುಸಾರವಾದ ಕಸುಬನ್ನು ಅಂಗೀಕರಿಸುವಂತೆ ಮಾಡಬೇಕು. ಒಬ್ಬ ವಿದ್ಯಾವಂತನು ತನ್ನ ಉದ್ಯೋಗಕ್ಕೆ ಅಂಟಿಕೊಳ್ಳದೆ ಇರಬಹುದು. ಆದರೆ ಅವಿದ್ಯಾವಂತರೂ ಮಂದಮತಿಗಳೂ ಆದವರು ತಮ್ಮ ಕಸುಬಿಗೆ ಅಂಟಿಕೊಂಡಿರುತ್ತಾರೆ. ವಿದ್ಯಾವಂತರು ಅವರನ್ನು ಕೆಡಿಸಬಾರದು. ಅವರ ಕಸುಬನ್ನು ತ್ಯಜಿಸಿ ಅಡ್ಡಹಾದಿ ಹಿಡಿಯುವಂತೆ ಅವರನ್ನು ಪೇರೇಪಿಸಬಾರದು.'' (ಅಧ್ಯಾಯ III, ಶ್ಲೋಕ 26, 29)

ಭಗವದ್ಗೀತೆಯಲ್ಲಿ ಹೇಗೆ ಯಾವುದೇ ನೀತಿಯಾಗಲೀ, ನ್ಯಾಯವಾಗಲೀ ಇಲ್ಲ, ಅದರಲ್ಲಿರುವುದು ಕೇವಲ ಬ್ರಾಹ್ಮಣ ಶ್ರೇಷ್ಠತೆಯನ್ನು ಸ್ಥಾಪಿಸುವ ಹುನ್ನಾರ ಮಾತ್ರ ಎಂಬುದಕ್ಕೆ ಈ ಶ್ಲೋಕವನ್ನು ಉದಾಹರಿಸುತ್ತಾ ಅಂಬೇಡ್ಕರ್ ಅವರು ವಿವರವಾದ ವಿಶ್ಲೇಷಣೆಯನ್ನು ಕೊಡುತ್ತಾರೆ. ಜಗತ್ತಿನಲ್ಲಿ ಧರ್ಮ ಎಂದು ಕರೆಸಿಕೊಳ್ಳುವ ಇತರ ಯಾವುದೇ ಧರ್ಮಗಳು ತಮ್ಮ ಧರ್ಮಶಾಸ್ತ್ರದ ಭಾಗವಾಗಿಯೇ ಸಮಾಜದ ಇತರರಿಗೆ ತಾನು ಪಡೆದ ಜ್ಞಾನವನ್ನು ವಿಸ್ತರಿಸಿಕೊಳ್ಳಬಾರದು ಎಂದು ಬೋಧಿಸುವುದಿಲ್ಲ. ಅಷ್ಟು ಮಾತ್ರವಲ್ಲ. ತನ್ನ ಪ್ರತಿಭೆಯನ್ನು ಬಳಸಿಕೊಂಡೂ ಕೂಡ ಒಬ್ಬ ಅಬ್ರಾಹ್ಮಣನು ಮೇಲಕ್ಕೇರುವುದನ್ನು ಅಡ್ಡಹಾದಿ, ಪಾಪ ಎಂದು ಭಗವದ್ಗೀತೆಯೆಂಬ ದೈವವಾಣಿಯ ಮೂಲಕ ಬ್ರಾಹ್ಮಣರು ಸ್ಥಾಪಿಸುತ್ತಾರೆ ಎಂದು ಅಂಬೇಡ್ಕರ್ ಗೀತೆಯ ಅಸಲಿ ಹುನ್ನಾರವನ್ನು ಬಯಲು ಮಾಡುತ್ತಾರೆ.

 4. ''ಅಯ್ಯ, ಅರ್ಜುನ! ಕರ್ತವ್ಯ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಈ ಧರ್ಮ (ಅಂದರೆ ಚಾತುರ್ವರ್ಣ್ಯನುಸಾರಿಯಾದ ಧರ್ಮ) ಅವನತಿ ಹೊಂದಿದಾಗಲೆಲ್ಲಾ ನಾನೇ ಭೂಮಿಯಲ್ಲಿ ಅವತರಿಸಿ ಈ ಅವನತಿಗೆ ಕಾರಣರಾದವರನ್ನು ಶಿಕ್ಷಿಸಿ ಮತ್ತೆ ಅದನ್ನು ಸುಸಿತ್ಥಿಗೆ ತರುತ್ತೇನೆ.'' (ಅಧ್ಯಾಯ IV. ಶ್ಲೋಕ 8) 

]ಅಂದರೆ ಹಿಂದೂ ಧರ್ಮದಲ್ಲಿ ದೈವ ಮತ್ತು ಧರ್ಮಗಳಿರುವುದೇ ಬ್ರಾಹ್ಮಣ್ಯಕ್ಕೆ ಆಪತ್ತು ಬರದಂತೆ ತಡೆಯುವುದಕ್ಕೆ! ಹೀಗಾಗಿ ನ್ಯಾಯ ಮತ್ತು ಸಾಮಾಜಿಕ ಉಪಯುಕ್ತತೆ ಎರಡರ ಮಾನದಂಡಗಳಿಂದಲೂ ನೋಡಿದರೂ ಭಗವದ್ಗೀತೆ ಕೇವಲ ಬ್ರಾಹ್ಮಣ್ಯ ಶೇಷ್ಠತೆಯನ್ನೂ ಮತ್ತು ಬ್ರಾಹ್ಮಣೀಯ ಸಮಾಜಿಕ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಲು ರಚಿಸಲಾದ ಅನೈತಿಕ, ಅನ್ಯಾಯಯುತ ಗ್ರಂಥವಾಗಿದೆ ಎಂದು ಅಂಬೇಡ್ಕರ್ ಘೋಷಿಸುತ್ತಾರೆ. ಹಿಂದೂ ಧರ್ಮದೊಳಗಿನ ಬ್ರಾಹ್ಮಣೀಯ ಕಟ್ಟುಪಾಡುಗಳಿಗೆ ತಾತ್ವಿಕ ಸಮರ್ಥನೆ ಒದಗಿಸುವುದೇ ಇದರ ಉದ್ದೇಶವಾಗಿದೆ ವಿನಾ ಇದರಲ್ಲಿ ಧರ್ಮ ಅಥವಾ ನೀತಿಯನ್ನು ಹುಡುಕುವುದು ವ್ಯರ್ಥ ಸಾಹಸ ಎಂದು ಅಂಬೇಡ್ಕರ್ ಘೋಷಿಸುತ್ತಾರೆ. ಹಿಂಸೆಗೆ ಪ್ರೋತ್ಸಾಹ, ಕರ್ಮ ಸಿದ್ಧಾಂತದ ಕಾಲ್ಕಟ್ಟು  ಇದಲ್ಲದೆ, ಭಗವದ್ಗೀತೆಯ ಮತ್ತೊಂದು ಉದ್ದೇಶ ಕರ್ಮ ಸಿದ್ಧಾಂತದ ಪ್ರತಿಪಾದನೆ ಮತ್ತು ಹಿಂಸೆಯ ಆರಾಧನೆಯಾಗಿದೆ ಎಂದು ಅಂಬೇಡ್ಕರ್ ವಿವರಿಸುತ್ತಾರೆ.(ಕರ್ಮಣ್ಯೇವಾಧಿಕರಸ್ತೆ ಮಾ ಫಲೇಶು ಕದಾಚನ- ಫಲಾಫಲಗಳ ಅಪೇಕ್ಷೆಯಿಲ್ಲದೆ ನಿನ್ನ ಧರ್ಮ ಹೇಳುವ ಕರ್ಮ ಮಾಡು). ಬೌದ್ಧರು ಬ್ರಾಹ್ಮಣ್ಯವನ್ನು ವಿರೋಧಿಸಲು ಹಲವು ಪ್ರಮುಖ ಕಾರಣಗಳಲ್ಲಿ ಅದರಲ್ಲಿ ಅಡಕವಾಗಿದ್ದ ಹಿಂಸಾಚಾರವೂ ಒಂದು. ಆದರೆ ಗೀತೆಯು ಹಿಂಸೆಯನ್ನು ಸಮರ್ಥಿಸಿಕೊಳ್ಳಲು ಹಲವು ಕಸರತ್ತುಗಳನ್ನು ಮಾಡುತ್ತದೆ. ಅದರಲ್ಲಿ ಒಂದು ಪ್ರತಿಪಾದನೆ ಆತ್ಮ ಅವಿನಾಶಿ ಎಂಬುದು. ಕೊಂದಾಗ ಸಾಯುವುದು ದೇಹವೇ ಹೊರತು ಆತ್ಮವಲ್ಲ ಹಾಗೂ ಕೊಂದವರು ಮತ್ತು ಕೊಲ್ಲಲ್ಪಟ್ಟವರು ಎಲ್ಲರೂ ಅಂತಿಮವಾಗಿ ನನ್ನನ್ನೇ ಸೇರುವರು..ಆದ್ದರಿಂದ ನನ್ನವರು, ತಮ್ಮವರು ಎಂಬುದೆಲ್ಲಾ ಭ್ರಮೆ ..ಕರ್ಮ ಮಾತ್ರ ಸತ್ಯ ಎಂದು ಗೀತೆ ಹಿಂಸೆಯನ್ನು ಸಮರ್ಥಿಸಿಕೊಳ್ಳುತ್ತದೆ. ಬೌದ್ಧರ ಮೇಲೆ ಹಾಗೂ ಬ್ರಾಹ್ಮಣವನ್ನು ಒಪ್ಪದವರ ಮೇಲೆ ಆಗಿನ ಬ್ರಾಹ್ಮಣೀಯ ಸಾಮ್ರಾಟರು ನಡೆಸುತ್ತಿದ್ದ ಹಿಂಸೆಯನ್ನು ಸಮರ್ಥಿಸಿಕೊಳ್ಳುವುದೇ ಇದರ ಉದ್ದೇಶ. ಅಷ್ಟು ಮಾತ್ರವಲ್ಲದೆ ಮುಂದೆಯೂ ಕನಿಕರ ಹಾಗೂ ಭ್ರಾತೃತ್ವ ಇಲ್ಲದ ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳಲು ಬೇಕಾಗುವ ಹಿಂಸೆಯನ್ನು ಸರ್ವಸಹಜವಾಗಿಸಲೆಂದೇ ಭಗವದ್ಗೀತೆಯ ಸೃಷ್ಟಿಯಾಗಿದೆ ಎಂದು ಅಂಬೇಡ್ಕರ್ ಸಾಬೀತು ಪಡಿಸುತ್ತಾರೆ.

ಮೋಕ್ಷದಲ್ಲೂ ಚಾತುವರ್ಣ್ಯ!

ಇತರ ಧರ್ಮಗಳಂತಲ್ಲದೆ ಹಿಂದೂ ಧರ್ಮವು ನೀನು ಯಾವುದೇ ಧರ್ಮವನ್ನು ಅನುಸರಿಸಿದರೂ ಅಂತಿಮವಾಗಿ ನನ್ನನ್ನೇ ಸೇರುವೆ ಎಂದು ಒಳಗೊಳ್ಳುವ ಹಿರಿಮೆಯನ್ನು ಹೊಂದಿದೆ ಎಂಬ ಸೋಗಲಾಡಿ ವಾದದ ಬಗ್ಗೆಯೂ ಅಂಬೇಡ್ಕರ್ ಅತ್ಯಂತ ಪ್ರಖರವಾಗಿ ಕೌಂಟರ್ ಕೊಡುತ್ತಾರೆ. ಬ್ರಾಹ್ಮಣ್ಯ ಅವನತಿ ಹೊಂದಿ ಬೌದ್ಧವು ಪ್ರವರ್ಧಮಾನಕ್ಕೆ ಬಂದಿದ್ದ ಕಾಲಘಟ್ಟದಲ್ಲಿ ಹಲವು ಜನಧರ್ಮಗಳು ಸಮಾಜದಲ್ಲಿ ತಲೆ ಎತ್ತಿದ್ದವು. ಅವೆಲ್ಲವನ್ನೂ ಏಕಕಾಲದಲ್ಲಿ ನಾಶಮಾಡಲಾಗದ ಸಂದರ್ಭದಲ್ಲಿ ಬ್ರಾಹ್ಮಣ್ಯವು ಅವೆಲ್ಲವೂ ತನ್ನನ್ನೇ ಸೇರುವ ವಿವಿಧ ರೂಪಗಳಷ್ಟೆ ಎಂದು ಅರಗಿಸಿಕೊಳ್ಳುವ ಪ್ರಯತ್ನ ಮಾಡಿತು ಎಂದು ಅಂಬೇಡ್ಕರ್ ವಿವರಿಸುತ್ತಾರೆ. ಆದರೆ ಆ ಅರಗಿಸಿಕೊಳ್ಳುವ ಪ್ರಕ್ರಿಯೆಯಲ್ಲೂ ದೇವರುಗಳನ್ನು ಮೇಲುಕೀಳಿನ ಸ್ಥರಗಳಲ್ಲಿ ಸ್ಥಾಪಿಸುತ್ತಲೇ ಒಳಗೊಂಡಿತು ಎಂದು ಅಂಬೇಡ್ಕರ್ ವಿವರಿಸುತ್ತಾರೆ. ಉದಾಹರಣೆಗೆ ಗೀತೆಯ ಪ್ರಕಾರ ಮನುಷ್ಯರಲ್ಲಿ ಉತ್ತಮವಾದ ಸಾತ್ವಿಕ ಗುಣವಿರುವವರು ಬ್ರಾಹ್ಮಣ ಜಾತಿಯಲ್ಲಿರುತ್ತಾರೆ. ಅವರು ಜ್ಞಾನ ಮಾರ್ಗದ ಮೂಲಕ ಪರಿಶುದ್ಧರಾಗಿ ದೇವರನ್ನು ಅರಸುತ್ತಾರೆ. ಅವರ ದೈವಗಳಿಂದ ಅವರು ಮೋಕ್ಷವನ್ನು ಮತ್ತು ಜ್ಞಾನವನ್ನು ಮಾತ್ರ ಅರಸುತ್ತಾರೆ. ನಂತರದವರು ರಜೋ ಗುಣದವರು. ಇವರು ಕ್ಷಾತ್ರ ಗುಣದವರಾಗಿರುತ್ತಾರೆ. ಅವರು ತಮ್ಮ ದೈವಗಳಿಂದ ಇಹಲೋಕದಲ್ಲಿ ಸಂಪತ್ತು ಮತ್ತು ಅಧಿಕಾರದ ಅನುಗ್ರಹ ಕೇಳುತ್ತಾರೆ. ನಂತರದವರು ತಮಸ್ ಗುಣವುಳ್ಳ ಸಮಾಜದ ಕೆಳಸ್ಥರದ ಶೂದ್ರರು. ಅವರು ಮತಿಹೀನರು, ಮೂಢರೂ ಅಗಿರುತ್ತಾರೆ ಎಂದು ಗೀತೆ ವಿವರಿಸುತ್ತದೆ.

ಅಂದರೆ ಎಲ್ಲರೂ ನನ್ನನ್ನೇ ಸೇರುವರು ಎಂದಾಗ ಪುರುಷ ಸೂಕ್ತ ಹೇಳುವಂತೆ ಸತ್ತ ಮೇಲೂ ಅಬ್ರಾಹ್ಮಣರು ಮತ್ತವರ ದೇವರುಗಳು ಬ್ರಾಹ್ಮಣ ಶ್ರೇಷ್ಠತೆಯ ಪಾರಮಾರ್ಥಿಕ ವ್ಯವಸ್ಥೆಯ ಭಾಗವಾಗಿಯೇ ಇರುತ್ತಾರೆ. ಇದು ತಾನು ಒಪ್ಪದ ಧರ್ಮದವನನ್ನು ಕೊಲ್ಲುವುದಕ್ಕಿಂತಲೂ ಹೀನಾತಿ ಹೀನವಾದದ್ದು. ಭಗವದ್ಗೀತೆ ನೀತಿ ಪಾಠ- ದಲಿತ, ಶೂದ್ರ ಪ್ರಜ್ಞೆಯನ್ನು ಬಲಿಹಾಕುವ ಪೀಠ ಹೀಗೆ ಭಗವದ್ಗೀತೆಯಲ್ಲಿ ಯಾವ ಧರ್ಮವೂ ಇಲ್ಲ. ನೀತಿಯೂ ಇಲ್ಲ. ಅದು ಹಿಂಸೆಯನ್ನು ಸಮರ್ಥಿಸುವ, ವರ್ಣಾಶ್ರಮವನ್ನು ಪ್ರತಿಪಾದಿಸುವ, ಸಮಾಜದಲ್ಲಿ ಶಾಶ್ವತ ಭೇದಭಾವಗಳನ್ನು ಹುಟ್ಟಿಹಾಕುವ ಬ್ರಾಹ್ಮಣ್ಯದ ಕುತಂತ್ರವಾಗಿದೆ. ಈ ಕಾಲದಲ್ಲಿ ಬಿಜೆಪಿ ಸರಕಾರಗಳು ಗೀತೆಯನ್ನು ಶಾಲಾ ಕಾಲೇಜುಗಳಲ್ಲಿ ನೀತಿ ಪಾಠವಾಗಿ ಸೇರಿಸುವ ಉದ್ದೇಶವೇ ಎಚ್ಚೆತ್ತ ದಲಿತ-ಶೂದ್ರ-ಮಹಿಳಾ ಪ್ರಜ್ಞೆಯನ್ನು ಮೊಂಡು ಮಾಡಿ, ಅಳಿಸಿ ಹಾಕಿ, ಮತ್ತೊಮ್ಮೆ ಹಿಂದುತ್ವದ ಹೆಸರಲ್ಲಿ ಬ್ರಾಹ್ಮಣ್ಯದ ದಾಸ್ಯಕ್ಕೆ ಎಳೆತರುವುದೇ ಆಗಿದೆ. ಆದ್ದರಿಂದ ನೈತಿಕ ಪಾಠದ ಭಾಗವಾಗಿ ಭಗವದ್ಗೀತೆಯನ್ನು ಸೇರಿಸಬೇಕೆಂಬ ಹುನ್ನಾರವನ್ನು ಇತರ ಧರ್ಮೀಯರಿಗಿಂತ ಹೆಚ್ಚಾಗಿ ಹಿಂದೂಗಳಲ್ಲಿನ ಅಬ್ರಾಹ್ಮಣ ಕುಲವರ್ಗಗಳೇ ವಿರೋಧಿಸಬೇಕಿದೆ. ಭಗವದ್ಗೀತೆಯ ಬದಲಿಗೆ ಶಾಲಾ ಕಾಲೇಜುಗಳಲ್ಲಿ ಅಂಬೇಡ್ಕರ್ ಅವರ 'ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ' ಗ್ರಂಥವನ್ನೋ ಅಥವಾ 'ಕೃಷ್ಣ ಮತ್ತವನ ಗೀತೆ' ಎಂಬ ಅಂಬೇಡ್ಕರ್ ಲೇಖನವನ್ನೋ ಕಡ್ಡಾಯಗೊಳಿಸಬೇಕೆಂದು ಹೋರಾಡಬೇಕಿದೆ. ಅಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)