ಕೆಜಿಎಫ್ ನಿರ್ಮಾಣ ಸಂಸ್ಥೆ 'ಹೊಂಬಾಳೆ' ಫಿಲ್ಮ್ಸ್'ನಿಂದ ಹೊಸ ಸಿನೆಮಾ ಘೋಷಣೆ
ಬೆಂಗಳೂರು, ಎ.21: ಬ್ಲಾಕ್ ಬ್ಲಾಸ್ಟರ್ ಹಿಟ್ ಚಿತ್ರವಾದ ಕೆಜಿಎಫ್, ಕೆಜಿಎಫ್-2 ಸಿನೆಮಾವನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ತನ್ನ ಮುಂದಿನ ಚಿತ್ರವನ್ನು ಘೋಷಿಸಿದೆ.
ಖ್ಯಾತ ನಿರ್ದೇಶಕಿ ಸುಧಾ ಕೊಂಗಾರ ಅವರ ಜೊತೆ ತಮ್ಮ ಮುಂದಿನ ಸಿನೆಮಾ ಮಾಡುವ ಕುರಿತು ಹೊಂಬಾಳೆ 'ಕೂ' ಮಾಡಿದೆ.
ಸುಧಾ ಕೊಂಗಾರ ಅವರ ಜೊತೆ ನೈಜ ಘಟನೆ ಆಧಾರಿತ ಕುತೂಹಲಕಾರಿ ಕಥೆಯೊಂದಿಗೆ ಹೊಸ ಆರಂಭ. ಕೆಲವು ನೈಜ ಕಥೆಗಳನ್ನು ಹೇಳಲೇ ಬೇಕು. ಸುಧಾ ಕೊಂಗಾರ ಅವರ ಜೊತೆ ನಮ್ಮ ಸಿನಿಮಾ ಪ್ರಕಟಿಸುವುದಕ್ಕೆ ಹೆಮ್ಮೆ ಎನ್ನಿಸುತ್ತಿದೆ ಎಂದು ಹೊಂಬಾಳೆ ಫಿಲ್ಮ್ಸ್ 'ಕೂ' ಮಾಡಿದೆ.
ಸುಧಾ ಕೊಂಗಾರ ಈ ಹಿಂದೆ ತಮಿಳು ನಟ ಸೂರ್ಯ, ಅಪರ್ಣಾ ಬಾಲಮುರಳಿ ಅಭಿನಯದ ಯಶಸ್ವಿ ಚಿತ್ರ 'ಸೂರರೈ ಪೊಟ್ರು' ಗೆ ಆ್ಯಕ್ಷನ್ ಕಟ್ ಹೇಳಿದ್ದರು.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೆಜಿಎಫ್ ಚಾಪ್ಟರ್ -2 ಭಾರೀ ಯಶಸ್ವಿ ಕಂಡಿದ್ದು, ಗಲ್ಲಾಪೆಟ್ಟಗೆಯನ್ನು ಕೊಳ್ಳೆ ಹೊಡೆಯುತ್ತಿದೆ. ಇದಲ್ಲದೆ ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ ಸಿನಿಪ್ರಿಯರ ಬಹುನಿರೀಕ್ಷಿತ ಪಾನ್ ಇಂಡಿಯಾ ಸಿನೆಮಾ 'ಸಲಾರ್' ಅನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿದ್ದು, 2023ರಲ್ಲಿ ಇದು ತೆರೆ ಕಾಣುವ ಸಂಭವವಿದೆ. ಈ ನಡುವೆ ಸುಧಾ ಕೊಂಗಾರರೊಂದಿಗೆ ಹೊಸ ಸಿನೆಮಾ ಘೋಷಿಸುವ ಮೂಲಕ ಹೊಂಬಾಳೆ ಫಿಲ್ಮ್ಸ್ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಆದರೆ ಚಿತ್ರದ ತಾರಗಣ ಸೇರಿದಂತೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.