varthabharthi


ತುಂಬಿ ತಂದ ಗಂಧ

ಕಥಾಚಿತ್ರದ ಜನಕ ಗ್ರಿಫಿತ್ ಎಂಬ ಸಿನೆಮಾದ ಆದಿಗುರು

ವಾರ್ತಾ ಭಾರತಿ : 24 Apr, 2022
ಕೆ. ಪುಟ್ಟಸ್ವಾಮಿ

'ಬರ್ತ್ ಆಫ್ ಎ ನೇಷನ್' ಚಲನಚಿತ್ರವು ಕಥಾಚಿತ್ರದ ನಿರೂಪಣೆಯ ಮಾದರಿಯೊಂದನ್ನು ಹಾಕಿದ ಯುಗಪ್ರವರ್ತಕ ಸಿನೆಮಾ ಎನಿಸಿಕೊಳ್ಳಲು ಕಥಾವಸ್ತುವಿನ ಆಚೆಗಿನ ಕಾರಣಗಳು ಬಹಳಷ್ಟಿವೆ. ಮುಂದೆ ಕಥಾಚಿತ್ರಗಳು ಇದೇ ಮಾದರಿಯನ್ನು ಅನುಸರಿಸಿದ್ದು ಆ ಚಿತ್ರದ ಹೆಗ್ಗಳಿಕೆ. ಆದುದರಿಂದಲೇ ಇಂದಿಗೂ ಅದು ಅಧ್ಯಯನಯೋಗ್ಯ ಸಿನೆಮಾ ಆಗಿ ಉಳಿದಿದೆ. ಅದು ಪರಿಚಯಿಸಿದ ಅನುಕರಣೀಯ ಸಿನೆಮಾ ತಾಂತ್ರಿಕತೆಗಳು ಹಲವಾರು.ಇಪ್ಪತ್ತನೇ ಶತಮಾನ ಆರಂಭವಾಗಿ ಕೆಲವು ವರ್ಷಗಳಷ್ಟೆ ಆಗಿತ್ತು. ಲ್ಯೂಮಿಯೇರ್ ಸೋದರರು ಕಂಡುಹಿಡಿದ ಚಲನಚಿತ್ರ ಮಾಧ್ಯಮ ಇಪ್ಪತ್ತರ ದಶಕದ ಆದಿಯಲ್ಲಿ ಬಹುದೊಡ್ಡ ಆಕರ್ಷಣೆಯಾಯಿತು. ಹೊಸ ಹುಮ್ಮಸ್ಸಿನಲ್ಲಿದ್ದ ಅಮೆರಿಕ ಸಂಸ್ಥಾನದಲ್ಲಿ ಚಲನಚಿತ್ರವು ರಂಜನೆಯ ಹೊಸ ಮಾಧ್ಯಮವಾಗಿ ಆಗಮಿಸಿತು. ಜೀವಂತ ಚಿತ್ರಗಳನ್ನು ನೋಡುವ ಸಾಮೂಹಿಕ ಹುಚ್ಚಿಗೆ ಅಮೆರಿಕ ಬಲಿಯಾಯಿತು. ಈ ಹುಚ್ಚನ್ನು ಲಾಭವಾಗಿ ಪರಿವರ್ತಿಸಿಕೊಳ್ಳಲು ಅಲ್ಲಿನ ವಣಿಕರು ಖಾಲಿಯಾಗಿದ್ದ ಅಂಗಡಿಗಳು, ಮಳಿಗೆಗಳನ್ನು ಬಾಡಿಗೆಗೆ ಪಡೆದು ಪ್ರದರ್ಶನಾಲಯಗಳನ್ನಾಗಿ ಪರಿವರ್ತಿಸಿದರು. ಅಮೆರಿಕದ ಆರ್ಥಿಕತೆಯ ಆಧಾರವಾಗಿದ್ದ ಮಧ್ಯಮವರ್ಗ ಈ ಅಗ್ಗದ ಮನರಂಜನೆಯನ್ನು ತನ್ನ ತೆಕ್ಕೆಗೆ ಸ್ವೀಕರಿಸಿತು. ಕೆಲವರು ಅದನ್ನು ಬೆಳಕಿನ ಪರದೆಯಲ್ಲಿ ನಡೆಯುವ ವಿಕೃತ ನರ್ತನ ಎಂದು ಅಸಹ್ಯಪಟ್ಟುಕೊಂಡರೂ ಈ ಹುಚ್ಚನ್ನೇ ಬಂಡವಾಳ ಮಾಡಿಕೊಂಡ ಚಿತ್ರ ನಿರ್ಮಾಪಕರು ದೃಶ್ಯಾವಳಿಗಳನ್ನು ಚಿತ್ರಿಸಿ ಅಡಿಗಳ ಲೆಕ್ಕದಲ್ಲಿ ಮಾರುತ್ತಿದ್ದರು. ಆ ಕಾಲದ ಚಲನಚಿತ್ರಗಳಿಗೆ ಕತೆಯೆಂಬುದಿರಲಿಲ್ಲ. ವಸ್ತುವಿನ್ಯಾಸವಿರಲಿಲ್ಲ. ಬಸ್‌ಸ್ಟಾಂಡ್‌ನ ದೃಶ್ಯ, ಚಲಿಸುವ ರೈಲು, ಹೋಟೆಲ್‌ನ ಒಳಾಂಗಣ ದೃಶ್ಯಗಳೂ ಮನರಂಜನೆ ನೀಡುತ್ತಿದ್ದವು. ಚಲನಚಿತ್ರದ ಸೆಳೆತದಿಂದ ಉದ್ಯಮದಲ್ಲಿ ತೊಡಗಿದ ಕೆಲವು ಪ್ರತಿಭಾವಂತರು ಉದ್ಯಮವನ್ನು ಕಲೆಯಾಗಿ ಪರಿವರ್ತಿಸುವತ್ತ ಪ್ರಯತ್ನಿಸಿದರು. ಆ ಮೂಲಕ ಚಲನಚಿತ್ರ ಸಂಸ್ಕೃತಿಯೊಂದರ ಅರಳುವಿಕೆಗೆ ಕಾರಣವಾಯಿತು. 1910ರ ದಶಕದಿಂದ ಆರಂಭವಾದ ಈ ಹೊರಳುದಾರಿಯ ಪಯಣ ಅನೇಕ ರೂಪಾಂತರಗಳಲ್ಲಿ ಸಾಗಿತು. ಬಿಂಬ ದರ್ಶನವೇ ಗುರಿಯಾಗಿ ಕಂಬಳಿ ಹುಳುವಿನಂತೆ ತೆವಳುತ್ತಿದ್ದ ಚಿತ್ರ ಮಾಧ್ಯಮವು ಬಣ್ಣದ ಬಟ್ಟೆಯಾಗಿ ಪರಿವರ್ತನೆಯಾಗಲು ಮೂಲ ಕಾರಣ ಒಬ್ಬ ವ್ಯಕ್ತಿ. ಆ ವ್ಯಕ್ತಿಯ ಪರಿಶ್ರಮ, ದಾರ್ಶನಿಕ ಪ್ರತಿಭೆ ಮತ್ತು ನಿರಂತರ ಕ್ರಿಯಾಶೀಲತೆಯ ಪ್ರಯೋಗಗಳು ಸಿನೆಮಾ ಕಲೆಗೆ ಒಂದು ಗಟ್ಟಿಯಾದ, ಶಾಶ್ವತವಾದ ಅಸ್ತಿಭಾರ ಹಾಕಿತು. ನಿಜವಾದ ಅರ್ಥದಲ್ಲಿ ಆತ ಜಗತ್ತು ಕಂಡ ಮೊಟ್ಟ ಮೊದಲ ಸಿನೆಮಾ ನಿರ್ಮಾಪಕ. ಚಲನಚಿತ್ರದ ಪಿತಾಮಹ. ಆತನೇ ಡೇವಿಡ್ ವಾರ್ಕ್ ಗ್ರಿಫಿತ್ ಅಥವಾ ಡಿ.ಡಬ್ಲ್ಯು. ಗ್ರಿಫಿತ್.

ಚಲನಚಿತ್ರವನ್ನು ಕಲೆಯಾಗಿ ಮಾರ್ಪಡಿಸಿದ ಏಕೈಕ ವ್ಯಕ್ತಿಯೆಂದೇ ಜಗತ್ತು ಅಂಗೀಕರಿಸಿರುವ ಗ್ರಿಫಿತ್ ಹುಟ್ಟಿದ್ದು 1875ರ ಜನವರಿ 22ರಂದು, ಅಮೆರಿಕ ಸಂಸ್ಥಾನದ ದಕ್ಷಿಣ ಪ್ರಾಂತದ ಕೆಂಟುಕಿ ರಾಜ್ಯದ ಕ್ರೆಸ್ಟ್‌ವುಡ್‌ನಲ್ಲಿ. ತಂದೆ ಕರ್ನಲ್ ಯಾಕೂಬ್ ಗ್ರಿಫಿತ್ ಅವರು ದಕ್ಷಿಣ ಗುಲಾಮಗಿರಿ ನಿಷೇಧದ ವಿರುದ್ಧವಿದ್ದವರು. ಯುದ್ಧ ಪೂರ್ವದಲ್ಲಿ ವೈಭವದಿಂದ ಮೆರೆದಾಡಿದ ಕರ್ನಲ್ ಸಂಸಾರವು ಡೇವಿಡ್ ಗ್ರಿಫಿತ್ ಹುಟ್ಟುವ ವೇಳೆಗೆ ಬಡವಾಗಿತ್ತು. ಆದರೆ ಕಿರಿಯ ಗ್ರಿಫಿತ್ ತನ್ನ ಮನೆತನದ ಘನತೆಯನ್ನು, ಸಾಹಸಕ್ಕೆಳೆಯುವ ಪ್ರವೃತ್ತಿಯನ್ನೂ ಮೈಗೂಡಿಸಿಕೊಂಡಿದ್ದ. ಆದರೆ ಬಡತನ ಅವನನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಯಿತು. ವ್ಯಾಸಂಗವನ್ನು ಅರ್ಧಕ್ಕೆ ತೊರೆದು ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಿದ ಗ್ರಿಫಿತ್ ಪುಸ್ತಕಗಳ ಓದಿನಿಂದ ತಿಳಿವು ಹೆಚ್ಚಿಸಿಕೊಂಡ ಪ್ರತಿಭಾವಂತ. ಇಪ್ಪತ್ತನೆಯ ವಯಸ್ಸಿಗೆ ನಾಟಕಕಾರನಾದ, ನಟನಾದ, ರಂಗಭೂಮಿಯ ಎಲ್ಲ ಕೆಲಸಗಳಲ್ಲಿ ತೊಡಗಿಸಿಕೊಂಡ. ಚಲನಚಿತ್ರದಲ್ಲಿ ಕೆಲಸ ಮಾಡಿದರೆ ದಿನಗೂಲಿ ಹೆಚ್ಚು ಸಿಗುವ ಕಾರಣಕ್ಕೆ ನ್ಯೂಯಾರ್ಕ್‌ಗೆ ಬಂದು ಬಯೋಗ್ರಾಫ್ ಕಂಪೆನಿ ಸೇರಿದ. ಒಂದೆರಡು ರೀಲಿನ ಚಿತ್ರಗಳಲ್ಲಿ ದುಡಿಯುತ್ತಿದ್ದ ಗ್ರಿಫಿತ್‌ಗೆ ಆಕಸ್ಮಿಕವಾಗಿ ಚಿತ್ರ ನಿರ್ದೇಶಿಸುವ ಅವಕಾಶ ದೊರೆಯಿತು. ಒಂದೆರಡು ರೀಲಿನ ನೂರಾರು ಚಿತ್ರಗಳನ್ನು ತೆಗೆದು ಅದರಲ್ಲಿಯೇ ಪ್ರಯೋಗ ಮಾಡಿಕೊಂಡಿದ್ದ ಗ್ರಿಫಿತ್‌ಗೆ ದೀರ್ಘಾವಧಿಯ ಕಥಾಚಿತ್ರ ರೂಪಿಸುವ ಹಂಬಲ ಬೆಳೆಯಿತು. ಬಯೋಗ್ರಾಫ್ ಸಂಸ್ಥೆಯನ್ನು ತೊರೆದು ಹಾಲಿವುಡ್‌ನ ಮ್ಯೂಚುವಲ್ ಸಂಸ್ಥೆಯ ಪಾಲುದಾರನೊಬ್ಬನ ಜೊತೆ ಚಿತ್ರನಿರ್ಮಾಣ ಸಂಸ್ಥೆ ಆರಂಭಿಸಿ ತನ್ನ ಸಾಹಸಕ್ಕೆ ಅಣಿಯಾದ. ಆದರೆ ಅವರ ಸಾಹಸವನ್ನು ಕಂಡು ಹಣ ಹೂಡುವವರು ಹಿಂಜರಿದರು. ಆದರೆ ದೀರ್ಘಾವಧಿಯ ಚಿತ್ರ ನಿರ್ಮಿಸಲೇಬೇಕೆಂಬ ಸಂಕಲ್ಪದಿಂದ ಗ್ರಿಫಿತ್ ವಿಚಲಿತರಾಗಲಿಲ್ಲ. ಪರಿಣಾಮ-ಸಿನೆಮಾ ಎಂಬ ಆಟಿಕೆಯು ಇಪ್ಪತ್ತನೇ ಶತಮಾನದ ಒಂದು ಪ್ರಬಲ ನಿರೂಪಣಾ ಮಾಧ್ಯಮವಾಗಿ ಅರಳಲು ಅಡಿಗಲ್ಲು ಹಾಕಿದ ಚಿತ್ರವು ನಿರ್ಮಾಣವಾಯಿತು. ಅದುವೇ 'ದಿ ಬರ್ತ್ ಆಫ್ ಎ ನೇಷನ್'(1915).

ಥಾಮಸ್ ಡಿಕ್ಸನ್‌ನ 'ದಿ ಕ್ಲಾನ್ಸ್‌ಮನ್' ಕಾದಂಬರಿಯನ್ನು ಅನೇಕ ಬದಲಾವಣೆಗಳೊಡನೆ ಸಿನೆಮಾಗೆ ಅಣಿಗೊಳಿಸಿ ರೂಪಿಸಿದ ಕಥಾಚಿತ್ರ 'ದಿ ಬರ್ತ್ ಆಫ್ ಎ ನೇಷನ್' ಒಮ್ಮೆಲೆ ಸಿನೆಮಾ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿತು. ಒಂದೆರಡು ರೀಲುಗಳ ಚಿತ್ರ ನೋಡಿ ಅಭ್ಯಾಸವಾಗಿದ್ದ ಜನರಿಗೆ ಮೂರು ಗಂಟೆಯಷ್ಟು ದೀರ್ಘವಾದ ಚಿತ್ರ ಹೊಸ ಅನುಭವವೊಂದನ್ನು ನೀಡಿತು. ಅಮೆರಿಕದ ಗುಲಾಮಗಿರಿಯ ಇತಿಹಾಸ, ಅದರ ನಿಷೇಧಕ್ಕೆ ಹೋರಾಡುವ ಅಬಾಲಿಷನಿಸ್ಟ್ ಚಳವಳಿಗಾರರು, ಅಬ್ರಹಾಂ ಲಿಂಕನ್ ಗುಲಾಮಗಿರಿಯನ್ನು ನಿಷೇಧಿಸುವ ಕಟ್ಟಳೆಗೆ ಸಹಿ ಮಾಡಿದ ನಂತರ ಆರಂಭವಾಗುವ ಸಿವಿಲ್‌ವಾರ್‌ನ ಕಥಾನಕ ಚಿತ್ರದ ಮೊದಲ ಭಾಗವನ್ನು ಆವರಿಸಿಕೊಂಡಿತ್ತು. ಎರಡನೆಯ ಭಾಗದಲ್ಲಿ ಸಿವಿಲ್‌ವಾರ್‌ನಲ್ಲಿ ಉತ್ತರ ಪ್ರಾಂತದವರು ವಿಜಯಿಗಳಾಗಿ ಅಮೆರಿಕ ಸಂಸ್ಥಾನ ಮತ್ತೆ ಒಟ್ಟಾದ ನಂತರ ಜಾರಿಯಾಗುವ ಕರಿಯರ ಪುನರ್ನಿರ್ಮಾಣ (ರೀಕನ್ಸ್ ಟ್ರಕ್ಷನ್) ಯುಗಕ್ಕೆ ಸಂಬಂಧಿಸಿದ್ದು. ಈ ಯುಗದಲ್ಲಿ ಹೊಸದಾಗಿ ಸ್ವಾತಂತ್ರ್ಯ ಪಡೆದ ಕರಿಯರ ಅತಿರೇಕಗಳ ಚಿತ್ರಣವಿದೆ. ಗುಲಾಮಗಿರಿ ನಿಷೇಧಕ್ಕೆ ಸಂಬಂಧಿಸಿದಂತೆ ಅಮೆರಿಕದ ಉತ್ತರ-ದಕ್ಷಿಣ ಪ್ರಾಂತಗಳ ನಡುವೆ ಆರಂಭವಾದ ಅಂತರ್ಯುದ್ಧ ಮತ್ತು ತದನಂತರದ ದಿನಗಳಲ್ಲಿ ದಕ್ಷಿಣ ಪ್ರಾಂತದ ಬಿಳಿಯರ ಕುಟುಂಬಗಳ ಯಾತನೆ ಮತ್ತು ಬಿಳಿಯರ ರಕ್ಷಣೆಗಾಗಿಯೇ ಹುಟ್ಟಿಕೊಂಡ ಕ್ಲಾನ್ಸ್‌ಮನ್‌ಗಳ ಕಾರ್ಯಾಚರಣೆಯಂಥ ಸ್ಫೋಟಕ ವಸ್ತುವನ್ನು ಸಿನೆಮಾದಲ್ಲಿ ಅವರು ಅಳವಡಿಸಿದರು. ಅಮೆರಿಕ ಚರಿತ್ರೆಯಲ್ಲೇ ಮಹಾ ಘಟನೆಯೆನಿಸಿದ ಸಿವಿಲ್‌ವಾರ್ ಅನ್ನು ಅದರ ಎಲ್ಲ ಆಯಾಮಗಳಿಂದ ಗ್ರಿಫಿತ್ ಮೂಡಿಸಿದ್ದು ಅಚ್ಚರಿಯೆನಿಸಿತು. 1915ರವರೆಗೆ ಅಂಥದೊಂದು ಕ್ರಾಂತಿಕಾರಕ ಬದಲಾವಣೆಯು ಸಿನೆಮಾ ಜಗತ್ತಿನಲ್ಲಿ ಘಟಿಸಿರಲಿಲ್ಲ. ಗ್ರಿಫಿತ್‌ರವರ ನಿರ್ದೇಶನ ಯಾರ ಊಹೆಗೂ ನಿಲುಕದಷ್ಟು ನವನವೀನವಾಗಿತ್ತು.

ಉತ್ತರ ಪ್ರಾಂತದ ಸ್ಟೋನ್‌ಮನ್ ಮತ್ತು ದಕ್ಷಿಣ ಪ್ರಾಂತದ ಕ್ಯಾಮೆರನ್ ಕುಟುಂಬಗಳು ಸಿವಿಲ್‌ವಾರ್ ಎಂಬ ಅರ್ಥಹೀನ ಯುದ್ಧದಿಂದಾಗಿ ಪಡುವ ಯಾತನೆ; ಬಿಳಿಯರು ಮತ್ತು ಕರಿಯರ ನಡುವಿನ ಸಂಬಂಧಗಳು, ಸಂಘರ್ಷಗಳು; ಗುಲಾಮಗಿರಿಯನ್ನು ಉಳಿಸಿ ಬಿಳಿಯರ ಹಿರಿಮೆಯನ್ನು ಸಂರಕ್ಷಿಸಲು ಹಠತೊಟ್ಟ 'ಕ್ಲು ಕ್ಲಕ್ಸ್ ಕ್ಲಾನ್'(ಕೆಕೆಕೆ) ಸಂಘಟನೆಯ ಹುರಿಯಾಳುಗಳ ಸಾಹಸ; ಕರಿಯರು ಬಿಳಿಯರ ಮೇಲೆ ಮಾಡುವ ಆಕ್ರಮಣ; ಬಲಾತ್ಕಾರ; ಮುಗ್ಧ ಬಿಳಿಯರು ಪಡುವ ಸಂಕಷ್ಟಗಳನ್ನು ಗ್ರಿಫಿತ್ ತಮ್ಮ ವಿಶಿಷ್ಟ ನಿರೂಪಣಾ ಶೈಲಿಯಿಂದ ಬೆರಗುಗೊಳಿಸುವಂತೆ ರೂಪಿಸಿದ್ದರು. ಅಲ್ಲದೆ ಯುದ್ಧದ ದೃಶ್ಯಗಳನ್ನು ಚಿತ್ರೀಕರಿಸಲು ಸಾವಿರಾರು ಸಹ ನಟರನ್ನು ಬಳಸಿ ಯುದ್ಧದ ಘೋರತೆಯನ್ನು ಕಣ್ಣಿಗೆ ಕಟ್ಟುವಂತೆ ಮಾಡಿದ್ದರು. ಚಿತ್ರದ ಆರಂಭದಲ್ಲಿಯೇ ಈ ಚಿತ್ರವು ಯುದ್ಧದ ಅನಾಹುತಗಳು ನಿಮ್ಮ ಮನಕ್ಕೆ ತಾಕುವಂತಾಗಿ ಯುದ್ಧದ ಬಗ್ಗೆ ಅಸಹ್ಯ ಹುಟ್ಟಿದರೆ ನಮ್ಮ ಪ್ರಯತ್ನ ಸಾರ್ಥಕ ಎಂಬ ಉಪ ಶೀರ್ಷಿಕೆಯನ್ನು ಬಳಸಿದ್ದರು. ಚಿತ್ರದ ಕಥೆಯನ್ನು ಸುಲಭವಾಗಿ ಅರಿಯಲು ಉಪ ಶೀರ್ಷಿಕೆಗಳಲ್ಲಿ(ಸಬ್ ಟೈಟಲ್ಸ್) ಪೂರಕ ಮಾಹಿತಿಗಳು ಮೂಡಿ ಬರುತ್ತಿದ್ದರೂ ಚಿತ್ರದ ಓಟಕ್ಕೆ ಧಕ್ಕೆಯಾಗುತ್ತಿರಲಿಲ್ಲ. ಚಿತ್ರದಲ್ಲಿ ನಟಿಸಿದ ಕಲಾವಿದರ ಅಭಿನಯವಂತೂ ನಟನೆಯ ಮೂಲಭೂತ ಪಾಠಗಳನ್ನು ಮುಂದಿನ ಜನಾಂಗಕ್ಕೆ ಹೇಳಿಕೊಡುವಷ್ಟು ಶಕ್ತವಾಗಿತ್ತು.

ಆದರೆ ರಾತ್ರಿ ಕಳೆಯುವುದರೊಳಗೆ ಅಪಾರ ಪ್ರಸಿದ್ಧಿಯ ಕಿರೀಟವನ್ನು ಧರಿಸಿದ ಗ್ರಿಫಿತ್ ಅಷ್ಟೇ ಪ್ರಮಾಣದ ವಿರೋಧವನ್ನು ಎದುರಿಸಬೇಕಾಯಿತು. ಅವರ ಸಿನೆಮಾ ತಂತ್ರಜ್ಞಾನದ ಉತ್ಕೃಷ್ಟತೆಯ ಬಗ್ಗೆ ಎಲ್ಲರ ಮೆಚ್ಚುಗೆಯಿತ್ತು. ಆದರೆ ನಿರ್ವಹಿಸಿದ ವಸ್ತು ಸಾಕಷ್ಟು ವಿವಾದ ಸೃಷ್ಟಿಸಿತು. ಅಮೆರಿಕದ ಕರಿಯರು ಮತ್ತು ಪ್ರಗತಿಶೀಲರು ಅದನ್ನು ಕಚಡಾ ಚಿತ್ರ ಎಂದು ಕರೆದರು. ಕರಿಯರ ಅವಹೇಳನಕ್ಕಾಗಿಯೇ ಚಿತ್ರವನ್ನು ತಯಾರಿಸುವ ಗ್ರಿಫಿತ್ ಒಬ್ಬ ಜನಾಂಗೀಯ ವಾದಿ(ರೇಸಿಸ್ಟ್) ಎಂದು ಜರೆದರು. ಕರಿಯರ ಹಕ್ಕುಗಳು ಮತ್ತು ಕಲ್ಯಾಣಕ್ಕೆ ಕಟಿಬದ್ಧವಾದ ಎಎಎಸಿಪಿ(ಕರಿಯರ ಕಲ್ಯಾಣದ ರಾಷ್ಟ್ರೀಯ ಸಂಸ್ಥೆ) ಸಂಘಟನೆಯು ಪ್ರತಿಭಟನೆಯನ್ನು ಹಮ್ಮಿಕೊಂಡಿತು. ಅದರ ನಿಷೇಧಕ್ಕೆ ಆಗ್ರಹಿಸಿತು. ಆದರೆ ಸಿವಿಲ್ ವಾರ್‌ನ ನೇರ ಪರಿಣಾಮಗಳನ್ನು ಅನುಭವಿಸಿದ ಕುಟುಂಬದಿಂದ ಬಂದ ಗ್ರಿಫಿತ್‌ಗೆ ತಾವು ನಿಜವಾದ ಚರಿತ್ರೆಯನ್ನೇ ತೆರೆಗೆ ತಂದಿದ್ದೇವೆಂದು ಕೊನೆಯವರೆಗೂ ಸಮರ್ಥಿಸಿಕೊಳ್ಳುತ್ತಿದ್ದರು. ಆದರೆ ಗುಲಾಮರ ಸ್ವಾತಂತ್ರ್ಯದ ಪರ ಹೋರಾಡಿದ ತಂದೆಯ ಮಗನಾಗಿ ಕರಿಯರ ವಿರುದ್ಧದ ನಿಲುವಿನ ಚಿತ್ರವನ್ನು ರೂಪಿಸಲು ಗ್ರಿಫಿತ್‌ಗೆ ಇದ್ದ ಬಲವಾದ ಕಾರಣಗಳು ಜಗತ್ತಿಗೆ ತಿಳಿಯಲಿಲ್ಲ.

ಆದರೆ 'ಬರ್ತ್ ಆಫ್ ಎ ನೇಷನ್' ಚಲನಚಿತ್ರವು ಕಥಾಚಿತ್ರದ ನಿರೂಪಣೆಯ ಮಾದರಿಯೊಂದನ್ನು ಹಾಕಿದ ಯುಗಪ್ರವರ್ತಕ ಸಿನೆಮಾ ಎನಿಸಿಕೊಳ್ಳಲು ಕಥಾವಸ್ತುವಿನ ಆಚೆಗಿನ ಕಾರಣಗಳು ಬಹಳಷ್ಟಿವೆ. ಮುಂದೆ ಕಥಾಚಿತ್ರಗಳು ಇದೇ ಮಾದರಿಯನ್ನು ಅನುಸರಿಸಿದ್ದು ಆ ಚಿತ್ರದ ಹೆಗ್ಗಳಿಕೆ. ಆದುದರಿಂದಲೇ ಇಂದಿಗೂ ಅದು ಅಭ್ಯಾಸಯೋಗ್ಯ ಸಿನೆಮಾ ಆಗಿ ಉಳಿದಿದೆ. ಅದು ಪರಿಚಯಿಸಿದ ಅನುಕರಣೀಯ ಸಿನೆಮಾ ತಾಂತ್ರಿಕತೆಗಳು ಹಲವಾರು. ಇದೊಂದು ಮೂರುಗಂಟೆಗಳ ಕಾಲ ಕಥೆಯೊಂದನ್ನು ಹೇಳುವ ಮೊದಲ ಕಥಾಚಿತ್ರ. ಹೊರಾಂಗಣಗಳಲ್ಲಿ ಮೊದಲಬಾರಿಗೆ ಮೈನವಿರೇಳಿಸುವ ಯುದ್ಧದ ದೃಶ್ಯಗಳನ್ನು ಚಿತ್ರೀಕರಿಸಿದ ವಿಧಾನ; ಚಲನಚಿತ್ರದ ತೆರೆಯಷ್ಟೇ ದೊಡ್ಡದಾಗಿ ಮುಖವು ಮೂಡುವ ಹಾಗೆ ಕ್ಲೋಸ್ ಅಪ್ ಶಾಟ್‌ಗಳನ್ನು ಅಳವಡಿಸಿ ಮಾಡಿದ ಪ್ರಯೋಗ ಮುಂದೆ ಅನುಕರಣೀಯ ತಂತ್ರವಾಯಿತು; ಮೊದಲಬಾರಿಗೆ ರಾತ್ರಿಯಲ್ಲಿ ಕಡಿಮೆ ಬೆಳಕು ಬಳಸಿ ಚಿತ್ರಿಸಿ ಕಥೆಯನ್ನು ಪರಿಣಾಮಕಾರಿಯಾಗಿ ಹೇಳಿದ ವಿಧಾನ; ಯುದ್ಧದ ದೃಶ್ಯಗಳು ನೈಜವಾಗಿ ಮೂಡಿಬರಲು ನೂರಾರು ಸಹಕಲಾವಿದರನ್ನು ಚಿತ್ರದ ಕತೆ ಮತ್ತು ಕಾಲಕ್ಕೆ ತಕ್ಕ ಉಡುಪು ಮತ್ತು ಪ್ರಸಾಧನ ಬಳಸಿ ಚಿತ್ರಿಸಿದ ಪ್ರಯೋಗ; ಕಥೆಯಲ್ಲಿ ಕುತೂಹಲ ಮತ್ತು ನಾಟಕೀಯ ತಿರುವುಗಳನ್ನು ಅಳವಡಿಸಲು ಎರಡು ಬೇರೆ ಬೇರೆ ದೃಶ್ಯಗಳನ್ನು ಸಮಾನಾಂತರವಾಗಿ ಬೆರೆಸಿ ಹೇಳುವ ಕಥಾವಿಧಾನ- ಇವೆಲ್ಲವೂ ಈ ಚಿತ್ರವನ್ನು ಒಂದು ಅನನ್ಯ ಅನುಭವವಾಗಿಸಿದವು. ಅದಕ್ಕಾಗಿ ಗ್ರಿಫಿತ್ ತಮ್ಮೆಲ್ಲ ಸಂಪನ್ಮೂಲವನ್ನು ಪಣವಾಗಿಟ್ಟು ಬಹುದೊಡ್ಡ ಜೂಜನ್ನು ಅಡಿದ್ದರು
ಚಿತ್ರದ ಪ್ರಸಿದ್ಧಿ ಮತ್ತು ವಿವಾದದಿಂದ ನಿಜವಾದ ಲಾಭ ಆಗಿದ್ದು ಗ್ರಿಫಿತ್‌ಗೆ. ಈ ಚಿತ್ರದಿಂದಾಗಿ ಗ್ರಿಫಿತ್ ಜಗತ್ತಿನ ಶ್ರೇಷ್ಠ ನಿರ್ದೇಶಕ; ಆಧುನಿಕ ಚಿತ್ರ ನಿರೂಪಣೆಯ ಪಿತಾಮಹ ಎಂಬ ಬಿರುದಿಗೆ ಪಾತ್ರರಾದರು. ವೀಕ್ಷಕರ ಸಂಖ್ಯೆ ಜಾಸ್ತಿಯಾಯಿತು. ವಿವಾದದಿಂದ ಅನೇಕರಿಗೆ ಸಿನೆಮಾ ಬಗ್ಗೆ ಕುತೂಹಲ ಮೂಡಿತು. ಪರಿಣಾಮ ಬಾಕ್ಸ್ ಆಫೀಸ್ ತುಂಬಿ ತುಳುಕಾಡಿತು.

ಆದರೂ ಇಂದಿನವರೆಗೂ ದಿ ಬರ್ತ್ ಆಫ್ ಎ ನೇಷನ್‌ಗೆ ಜನಾಂಗೀಯವಾದಿ ಸಿನೆಮಾ ಎಂಬ ಕಳಂಕವನ್ನು ತೊಡೆದುಕೊಳ್ಳಲಾಗಿಲ್ಲ. ಸಿವಿಲ್‌ವಾರ್ ನಂತರದಲ್ಲಿ ಹುಟ್ಟಿಕೊಂಡ ಕೆಕೆಕೆ 1915ರ ವೇಳೆಗೆ ಕ್ಷೀಣವಾಗಿತ್ತು. ಆದರೆ ಬರ್ತ್ ಆಫ್ ಎ ನೇಷನ್ -ಆ ಸಂಘಟನೆಯ ಪುನರುತ್ಥಾನಕ್ಕೆ ಕಾರಣವಾಯಿತು. ಬಿಳಿಯರ ಜನಾಂಗದ ರಕ್ಷಣೆಯ ಹಠತೊಟ್ಟ ಫ್ಯಾಶಿಸ್ಟ್ ಸಂಘಟನೆ(ಕೆಕೆಕೆ)ಗೆ ಸದಸ್ಯಬಲ ವೃದ್ಧಿಸಿತು. ಬಹಿರಂಗವಾಗಿಯೇ ಈ ಸಂಘಟನೆ ಸಭೆಗಳನ್ನು ನಡೆಸಿ ಕರಿಯರ ಮೇಲಿನ ತಮ್ಮ ಅಸಹನೆಯನ್ನು ಹೊರಹಾಕಿತು. ಕರಿಯರನ್ನು ಕಂಡಲ್ಲಿ ಹಿಡಿದು ದಂಡಿಸುವ ಘಟನೆಗಳು ಹೆಚ್ಚಾಗುತ್ತಾ ಹೋದವು. ಒಂದು ಸಿನೆಮಾ, ಸಾಮಾಜಿಕವಾಗಿ ಬೀರಬಹುದಾದ ಪ್ರಭಾವಕ್ಕೆ ದಿ ಬರ್ತ್ ಆಫ್ ಎ ನೇಷನ್ ಮೊದಲ ಬಾರಿಗೆ ಪುರಾವೆ ಒದಗಿಸಿತು.

ತಮ್ಮನ್ನು ರೇಸಿಸ್ಟ್ ಎಂದು ಕರೆದ ವಿಮರ್ಶಕರಿಗೆ ಉತ್ತರ ನೀಡಲು ಯಶಸ್ಸಿನ ಶೃಂಗದಲ್ಲಿದ್ದ ಗ್ರಿಫಿತ್ ಮತ್ತೊಂದು ಸಾಹಸಕ್ಕೆ ಸಿದ್ಧರಾದರು. ತಮಗಂಟಿದ ಕಳಂಕವನ್ನು ತೊಡೆದುಹಾಕಲು ಸಂಕಲ್ಪಿಸಿದರು. ಸಿನೆಮಾ ನಿರೂಪಣೆಯ ವಿಧಾನದಲ್ಲೇ ಅಮೋಘ ಅಧ್ಯಾಯವೊಂದನ್ನು ಬರೆದ ಚಿತ್ರ ನಿರ್ದೇಶಿಸಲು ಅಣಿಯಾದರು. ತಮ್ಮ ಚಿತ್ರಕ್ಕೆ ಈ ಬಾರಿ ಚರಿತ್ರೆಯ ಬೇರೆ ಬೇರೆ ಘಟ್ಟಗಳಲ್ಲಿ ಪ್ರೀತಿ, ಅನುಕಂಪಗಳ ವಿರುದ್ಧ ಮನುಕುಲ ತೋರುವ ಅಸಹಿಷ್ಣುತೆಯ ವಸ್ತುವನ್ನು ಆರಿಸಿಕೊಂಡರು.

ಗ್ರಿಫಿತ್ ನಿರ್ದೇಶಿಸಿದ ಇಂಟಾಲರೆನ್ಸ್ ಚಿತ್ರವು 2500 ವರ್ಷಗಳ ಮಾನವ ಚರಿತ್ರೆಯಲ್ಲಿ ಘಟಿಸಿದ ನಾಲ್ಕು ಘಟನೆಗಳನ್ನು ಸಮಾನಾಂತರದಲ್ಲಿ ನಿರೂಪಿಸುವ ಚಿತ್ರ. ಚರಿತ್ರೆಯ ವಿವಿಧ ಘಟ್ಟಗಳಲ್ಲಿ ಅಸಹಿಷ್ಣುತೆಯು ತಲೆಯೆತ್ತಿ ಮನುಕುಲದ ನಾಶಕ್ಕೆ ಕಾರಣವಾದ ಕಥಾನಕ ಆ ನಾಲ್ಕು ಘಟನೆಗಳ ಸಮಾನ ವಸ್ತು. ಹೊಸದಾಗಿ ಆಚರಣೆಗೆ ಬಂದ ಧರ್ಮವೊಂದು ಪ್ರಬಲವಾಗಿ ಇತರರನ್ನು ಸಹಿಸಲಾರದೆ ಬ್ಯಾಬಿಲೋನಿಯಾ ಪತನಕ್ಕೆ(ಕ್ರಿ.ಪೂ. 530) ಕಾರಣವಾದ ಹಿನ್ನೆಲೆ ಮೊದಲನೆಯ ಭಾಗ. ಮನುಕುಲಕ್ಕೆ ಸಹಿಷ್ಣುತೆಯ ಪಾಠವನ್ನು ಹೇಳಿಕೊಟ್ಟ ಏಸುಕ್ರಿಸ್ತನನ್ನು ಶಿಲುಬೆಗೇರಿಸುವ(ಕ್ರಿ.ಶ. 27) ಕಥಾನಕ ಎರಡನೆಯ ಭಾಗ. ಸೈಂಟ್ ಬಾರ್ತಲ್‌ಮೋನಲ್ಲಿ ಹಗಲಿನಲ್ಲೇ ನಡೆದ ಸಾಮೂಹಿಕ ಹತ್ಯಾಕಾಂಡ(ಕ್ರಿ.ಶ. 1572 ಫ್ರಾನ್ಸ್) ಮೂರನೆಯ ಭಾಗವಾದರೆ ಆಧುನಿಕ ಕಾಲದ ಅಸಹಿಷ್ಣುತೆಯ ನಾನಾ ರೂಪಗಳು ನಾಲ್ಕನೆಯ ಭಾಗವಾಗಿ ಸೇರಿಕೊಂಡಿವೆ. ಇಪ್ಪತ್ತನೇ ಶತಮಾನದ ಆದಿಯಲ್ಲಿ ಅಸಹಿಷ್ಣುತೆಯು ಅಮೆರಿಕದ ಜನಜೀವನವನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಾಳುಗೆಡವಿದ ಚರಿತ್ರೆ ಇಲ್ಲಿ ದಾಖಲಾಗಿದೆ. ಈ ನಾಲ್ಕು ಭಾಗಗಳನ್ನು ಜೋಡಿಸುವಂತೆ ಹಾಗೂ ಮನುಕುಲದ ಆಶಾಭಾವನೆಯನ್ನು ಪ್ರತಿಬಿಂಬಿಸುವಂತೆ ಕಾಣುವ ತೊಟ್ಟಿಲು ತೂಗುವ ತಾಯೊಬ್ಬಳ ದೃಶ್ಯ ಆಗಾಗ ಮೂಡಿ ಬರುತ್ತದೆ.

ಎಲ್ಲಾ ದೃಷ್ಟಿಯಿಂದಲೂ ಇಂಟಾಲರೆನ್ಸ್ ಮಹತ್ವದ ಚಿತ್ರವೆನಿಸಿತ್ತು. ಬೃಹತ್ ಸೆಟ್‌ಗಳು... ಸಾವಿರಾರು ಕಲಾವಿದರು... ಕಣ್ಣು ಕೋರೈಸುವ ವಸ್ತ್ರಗಳು... ಕಲಾವಿದರ ನುರಿತ ಅಭಿನಯ... ಅಮೋಘವೆನಿಸಿದ ಛಾಯಾಗ್ರಹಣ... ಅದೊಂದು ಅದ್ಭುತ ಸಿನೆಮಾ ಆಗಿ ಮೂಡಿ ಬಂದಿತ್ತು.

ಬ್ಯಾಬಿಲೋನಿಯಾದ ಅರಮನೆಯ ಸೆಟ್‌ಗಳಂತೂ ಊಹೆಗೆ ನಿಲುಕದಷ್ಟು ಭವ್ಯವಾಗಿದ್ದವು. ಅದರ ಭವ್ಯತೆಯನ್ನು ಮೇಲಿನಿಂದ ಸೆರೆಹಿಡಿಯಲು ಗ್ರಿಫಿತ್ ಕ್ಯಾಮರಾ ಒಯ್ಯುವ ವಿಶೇಷ ಲಿಫ್ಟ್‌ಗಳನ್ನು ಮಾಡಿಸಿದ್ದರು. ಸಹಸ್ರಾರು ಕಲಾವಿದರು ಒಮ್ಮೆಲೆ ಕಾಣಿಸಿಕೊಳ್ಳುವ ದೃಶ್ಯ ವೈಭವ, ಸಾಮೂಹಿಕ ಹತ್ಯಾಕಾಂಡ, ಶಿಲುಬೆಗೇರುವ ಏಸು -ಎಲ್ಲವೂ ಚಿತ್ತಾಕರ್ಷಕವಾಗಿ ಮೂಡಿಬಂದಿದ್ದವು. ಮನುಕುಲಕ್ಕೆ ಸಹಿಷ್ಣುತೆಯ ಅಮೋಘ ಸಂದೇಶವೊಂದನ್ನು ಚಿತ್ರದ ಮೂಲಕ ಹೇಳುವ ಆಶಯವಿತ್ತು. ಎ ಬರ್ತ್ ಆಫ್ ಎ ನೇಷನ್ ಚಿತ್ರಕ್ಕಿಂತಲೂ ಇಂಟಾಲರೆನ್ಸ್ ಕಲಾತ್ಮಕವಾಗಿ ಮೇಲ್ಮಟ್ಟದ್ದಾಗಿತ್ತು. ...........ನೇಷನ್ ಚಿತ್ರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಕೆಲವು ನಿರೂಪಣಾ ತೊಡಕುಗಳು ಇಲ್ಲಿರಲಿಲ್ಲ. ಕಲಾವಿದರ ಅಭಿನಯವೂ ನಿರ್ದೇಶಕರ ಆಶಯಕ್ಕೆ ಸ್ಪಂದಿಸುವಂತಿತ್ತು. ಸಿನೆಮಾ ಚರಿತ್ರೆಯಲ್ಲಿ ಎಲ್ಲ ದೃಷ್ಟಿಯಿಂದಲೂ ಅದೊಂದು ಅದ್ಭುತ ಪ್ರಯೋಗವೇ ಆಗಿತ್ತು. ಕ್ಲಾಸಿಕ್ ಎಂದು ಮುಂದೆ ಪರಿಗಣಿತವಾದ ಈ ಚಿತ್ರ ಪ್ರತಿಭಾವಂತ ನಿರ್ದೇಶಕರಾದ ಪುಡೋವ್‌ಕಿನ್ ಮತ್ತು ಸೆರ್ಗಿ ಐಸೆನ್‌ಸ್ಟೀನ್ ಅವರಿಗೆ ಪಠ್ಯವೆನಿಸಿತ್ತು. ಅವರ ಕೃತಿಗಳ ಮೇಲೆ ಈ ಚಿತ್ರ ಅಚ್ಚಳಿಯದ ಪ್ರಭಾವ ಬೀರಿದೆ.

ಆದರೆ ಇಂಟಾಲರೆನ್ಸ್ ನಿರೀಕ್ಷಿಸಿದ ಪ್ರಮಾಣದಲ್ಲಿ ಯಶಸ್ವಿಯಾಗಲಿಲ್ಲ. ಆ ಕಾಲಕ್ಕೆ 70,000 ಡಾಲರ್ ವೆಚ್ಚದಲ್ಲಿ ನಿರ್ಮಾಣ ಮಾಡಿದ ಈ ಚಿತ್ರ ಅನೇಕ ಕಾರಣಗಳಿಂದ ಮುಗ್ಗರಿಸಿತು. ಬಿಡುಗಡೆಯಾದಾಗ ಮೊದಲನೇ ಮಹಾಯುದ್ಧ ನಡೆಯುತ್ತಿತ್ತು. ಹೊಸ ಬಗೆಯ ನಿರೂಪಣಾ ವಿಧಾನ ಪ್ರೇಕ್ಷಕರಿಗೆ ಹಿತವೆನಿಸಲಿಲ್ಲ. ಆಗಷ್ಟೇ ರೇಸಿಸ್ಟ್ ಬಿರುದು ಹೊತ್ತ ಗ್ರಿಫಿತ್ ಬಗ್ಗೆ ಪ್ರಗತಿಶೀಲರು ಆಸಕ್ತಿ ತೋರಲಿಲ್ಲ. ಪರಿಣಾಮ ಇಂಟಾಲರೆನ್ಸ್ ಗ್ರಿಫಿತ್‌ನನ್ನು ಮುಳುಗಿಸಿಬಿಟ್ಟಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)