varthabharthi


ಪ್ರಚಲಿತ

ಭ್ರಷ್ಟಾಚಾರದ ಭಾರದಿಂದ ತತ್ತರಿಸಿದ ಆಡಳಿತ ಪಕ್ಷ

ವಾರ್ತಾ ಭಾರತಿ : 25 Apr, 2022
ಸನತ್ ಕುಮಾರ್ ಬೆಳಗಲಿ

ಮಾಧ್ಯಮಗಳು ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳ ಒಲವು ಬಿಜೆಪಿ ಪರವಾಗಿದ್ದರೂ ಅವುಗಳಿಂದಲೇ ಜನಾಭಿಪ್ರಾಯ ರೂಪುಗೊಳ್ಳುವುದಿಲ್ಲ. ಈಗಾಗಲೇ ಅವು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ. ಜನರು ಕನ್ನಡ ಸುದ್ದಿ ವಾಹಿನಿಗಳನ್ನು ನೋಡುವುದನ್ನು ಕಡಿಮೆ ಮಾಡಿದ್ದಾರೆ. ಟಿಆರ್‌ಪಿಯೂ ಕುಸಿಯುತ್ತಿದೆ. ಯಾವುದೇ ಒಂದು ಪಕ್ಷದ ತತ್ತೂರಿಯಾಗುವುದನ್ನು ಜನರು ಇಷ್ಟಪಡುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.


ಅತ್ಯುಗ್ರ ಹಿಂದುತ್ವದ ಅಲೆಯನ್ನೆಬ್ಬಿಸಿ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ತಂತ್ರ ರೂಪಿಸಿದ್ದ ಬಿಜೆಪಿ ಈಗ ಇಕ್ಕಟ್ಟಿಗೆ ಸಿಲುಕಿದೆ. ಒಂದೊಂದಾಗಿ ಬಯಲಿಗೆ ಬರುತ್ತಿರುವ ಭ್ರಷ್ಟಾಚಾರದ ಹಗರಣಗಳಿಂದ ಕೋಮು ಧ್ರುವೀಕರಣದ ಲೆಕ್ಕಾಚಾರ ಉಲ್ಟಾಪಲ್ಟಾ ಆಗುತ್ತಿದೆ.
ಇದು ಪಕ್ಷದ ರಾಷ್ಟ್ರೀಯ ವರಿಷ್ಠರನ್ನು ಚಿಂತೆಗೀಡು ಮಾಡಿದೆ. ಹೀಗಾಗಿ ಹೊಸ ತಂತ್ರವನ್ನು ರೂಪಿಸಿ ಚುನಾವಣೆಯನ್ನು ಎದುರಿಸಲು ಅದು ತಯಾರಿ ನಡೆಸಿದಂತೆ ಕಾಣುತ್ತಿದೆ.

ಬಹುಮತ ಇಲ್ಲದಿದ್ದರೂ ಆಪರೇಷನ್ ಕಮಲದ ಮೂಲಕ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಯಾವ ಲೆಕ್ಕಾಚಾರ ಇಟ್ಟುಕೊಂಡು ಯಡಿಯೂರಪ್ಪನವರ ನಾಯಕತ್ವವನ್ನು ಬದಲಾವಣೆ ಮಾಡಿತೋ ಗೊತ್ತಿಲ್ಲ. ಬಹುಶಃ ಯಡಿಯೂರಪ್ಪನವರ ಆಸರೆ ಇಲ್ಲದೇ ಹಿಂದುತ್ವದ ಭಾವಾವೇಶದ ಅಲೆಯನ್ನು ಎಬ್ಬಿಸಿ 150 ಸ್ಥಾನಗಳನ್ನು ಗೆಲ್ಲಲು ಅದು ರಣ ನೀತಿಯನ್ನು ರೂಪಿಸಿತ್ತು. ಅದೇ ಉದ್ದೇಶದಿಂದಲೇ ಹಿಜಾಬ್‌ನಂಥ ಸ್ಥಳೀಯ ಸಮಸ್ಯೆಗಳನ್ನು ದೊಡ್ಡದು ಮಾಡಿತು.

ನಂತರ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್, ಜಟ್ಕಾ ಮಾಂಸದ ವಿವಾದ ಹೀಗೆ ಕೋಮು ಧ್ರುವೀಕರಣದ ಸುತ್ತ ಚರ್ಚೆ ನಡೆಯುವಂತೆ ಮಾಡಲು ಯತ್ನಿಸುತ್ತ ಬಂತು. ಪ್ರಚೋದನಾಕಾರಿಯಾಗಿ ಮಾತಾಡಲು ಸಿ.ಟಿ.ರವಿ, ಪ್ರತಾಪ ಸಿಂಹ ಮುಂತಾದ ಕೆಲವರನ್ನು ಬಳಸಿಕೊಂಡಿತು. ಹೊರಗಿನಿಂದ ಮುತಾಲಿಕ್, ಚೈತ್ರಾ ಕುಂದಾಪುರ ಅಂಥವರ ನೆರವನ್ನು ಪಡೆಯಲು ಮುಂದಾಯಿತು. ಈಗಲೂ ಅದೇ ಲೆಕ್ಕಾಚಾರ ನಡೆಸಿದೆ. ಆದರೆ, ಬರೀ ಹಿಂದುತ್ವದ ಧ್ರುವೀಕರಣದ ನೆರವಿನಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ಖಾತ್ರಿಯಾಗಿದೆ.

ಕಾರಣ ಸರಕಾರದಲ್ಲಿ ಅಂದರೆ ಸಚಿವ ಸಂಪುಟದಲ್ಲಿ ಮತ್ತು ಪಕ್ಷದಲ್ಲಿ ಪರಿಣಾಮಕಾರಿ ಸರ್ಜರಿ (ಶಸ್ತ್ರ ಚಿಕಿತ್ಸೆ) ಮಾಡಲು ಪಕ್ಷದ ರಾಷ್ಟ್ರೀಯ ನಾಯಕತ್ವ ತೀರ್ಮಾನಿಸಿದಂತೆ ಕಾಣುತ್ತದೆ. ಪಕ್ಷದ ಒಳ ವಲಯಗಳಲ್ಲಿ ಈ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿದೆ.

ಹಿಂದುತ್ವದ ಅಲೆಯನ್ನೆಬ್ಬಿಸಿ ಚುನಾವಣೆ ಗೆಲ್ಲಲು ಹೊರಟಿದ್ದ ಬಿಜೆಪಿ ಭ್ರಷ್ಟಾಚಾರದ ಹಗರಣಗಳ ಭಾರದಿಂದ ತತ್ತರಿಸಿ ಹೋಗಿದೆ. ಗುತ್ತಿಗೆದಾರರ ಸಂಘ ಆರೋಪ ಮಾಡಿರುವ ಶೇ.40 ಕಮಿಶನ್ ಹಗರಣ, ಹಿರಿಯ ಮಂತ್ರಿಯಾಗಿದ್ದ ಕೆ.ಎಸ್.ಈಶ್ವರಪ್ಪನವರ ಹೆಸರನ್ನು ಬರೆದಿಟ್ಟು ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ, ನಂತರ ಈಶ್ವರಪ್ಪನವರ ರಾಜೀನಾಮೆ, 'ಲಿಂಗಾಯತ ಮಠಗಳಿಗೆ ಸರಕಾರದ ಅನುದಾನ ಪಡೆಯಲು ಶೇ.30ರಷ್ಟು ಕಮಿಶನ್ ನೀಡಬೇಕಾಗಿದೆ' ಎಂದು ಗದಗ ಜಿಲ್ಲೆಯ ಬಾಳೆ ಹೊಸೂರು ಲಿಂಗಾಯತ ಮಠದ ದಿಂಗಾಲೇಶ್ವರ ಸ್ವಾಮಿ ಮಾಡಿರುವ ಆರೋಪ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಹಗರಣದಲ್ಲಿ ಕಲಬುರಗಿಯ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ತಲೆಮರೆಸಿಕೊಂಡು ನಾಪತ್ತೆಯಾಗಿರುವುದು ಇವೆಲ್ಲ ಹಗರಣಗಳು ಬಿಜೆಪಿ ಮತ್ತು ಸಂಘಪರಿವಾರದ ಪಾಲಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿವೆ.
ದಿವ್ಯಾ ಹಾಗರಗಿ ಅಂತಿಂಥ ಬಿಜೆಪಿ ನಾಯಕಿಯಲ್ಲ. ಆಕೆ ಬಾಯಿ ಬಿಟ್ಟರೆ ಬಾಂಬುಗಳೇ ಹೊರಗೆ ಬರುತ್ತಿದ್ದವು. ಯಾವಾಗಲೂ ಮುಸಲ್ಮಾನ, ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಾಕಾರಿ ಮಾತುಗಳನ್ನು ಆಡುತ್ತ ಬಂದವಳು. ಅವಳಿಗೆ ಮುಸ್ಲಿಮರ ಮೇಲೆ ಯಾಕೆ ಕೋಪವಿತ್ತು ಎಂದು ಹುಡುಕಲು ಹೊರಟರೆ ಕಾರಣವೇ ಸಿಗುವುದಿಲ್ಲ. ಆದರೆ, ಬಿಜೆಪಿಯಲ್ಲಿ ನಾನಾ ಹಗರಣಗಳನ್ನು ಮಾಡಿ ಕೋಟ್ಯಂತರ ರೂಪಾಯಿ ಲಪಟಾಯಿಸಿ ದಕ್ಕಿಸಿಕೊಳ್ಳಬೇಕೆಂದರೆ, ನಾಯಕತ್ವ ಉಳಿಸಿಕೊಳ್ಳಬೇಕೆಂದರೆ ಬೆಂಕಿ ಉಗುಳುವ ಭಾಷಣಗಳನ್ನು ಮಾಡಲೇಬೇಕು. ಕಟ್ಟಾ ಆರೆಸ್ಸೆಸ್ ಅಲ್ಲದ ಬಿಜಾಪುರದ ಬಸನಗೌಡ ಪಾಟೀಲ್ ಯತ್ನಾಳರಂಥವರು ಪ್ರಚೋದನಾಕಾರಿಯಾಗಿ ಮಾತಾಡುವುದು ಪಕ್ಷದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು. ಆದರೆ ದಿವ್ಯಾ ಹಾಗರಗಿ ಅಂಥವರು ಮಾತಾಡುವುದು ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳಲು ಎಂದು ಬಿಜೆಪಿ ಕಾರ್ಯಕರ್ತರೇ ಆಡಿಕೊಳ್ಳುತ್ತಾರೆ.

ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವ ಅಥವಾ ಭ್ರಷ್ಟಾಚಾರ ಇವೆರಡರಲ್ಲಿ ಯಾವುದು ಮುಖ್ಯ ವಿಷಯವಾಗುತ್ತದೆ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಜಿಜ್ಞಾಸೆ ನಡೆದಿದೆ. ಅದರಲ್ಲೂ ಬಿಜೆಪಿಯ ಆಂತರಿಕ ವಲಯಗಳಲ್ಲಿ ಇದು ಸಾಕಷ್ಟು ತಲೆ ಬಿಸಿ ಮಾಡಿದೆ. ಹೀಗಾಗಿ ಹತಾಶರಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಪ್ರತಾಪ ಸಿಂಹ ಮತ್ತು ಶಾಸಕ ಸಿ.ಟಿ.ರವಿಯಂಥವರು ಕರ್ನಾಟಕದಲ್ಲೂ ಮಧ್ಯಪ್ರದೇಶ ಮತ್ತು ದಿಲ್ಲಿ ಮಾದರಿಯಲ್ಲಿ ಬುಲ್ಡೋಜರ್ ಸಂಸ್ಕೃತಿ ಬರಲಿದೆ ಎಂದು ಬೆದರಿಕೆಯ ಮಾತುಗಳನ್ನು ಆಡುತ್ತಿದ್ದಾರೆ.

ಆದರೆ ದಿಲ್ಲಿಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಬಡವರ ಮನೆಗಳು ಮತ್ತು ಗುಡಿಸಲುಗಳ ಮೇಲೆ ಬುಲ್ಡೋಜರ್ ಬಿಟ್ಟ ನಂತರ ಏನಾಯಿತು ಎಂಬುದು ಜಗತ್ತಿಗೆ ಗೊತ್ತಿದ್ದರೂ ಇವರು ಮಾತಾಡಲು ವಿಷಯಗಳಿಲ್ಲದೇ ಇಂಥ ಪ್ರಚೋದನಾಕಾರಿ ಮಾತುಗಳನ್ನು ಆಡುತ್ತಿದ್ದಾರೆ.
ಮಾಧ್ಯಮಗಳು ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳ ಒಲವು ಬಿಜೆಪಿ ಪರವಾಗಿದ್ದರೂ ಅವುಗಳಿಂದಲೇ ಜನಾಭಿಪ್ರಾಯ ರೂಪುಗೊಳ್ಳುವುದಿಲ್ಲ. ಈಗಾಗಲೇ ಅವು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ. ಜನರು ಕನ್ನಡ ಸುದ್ದಿ ವಾಹಿನಿಗಳನ್ನು ನೋಡುವುದನ್ನು ಕಡಿಮೆ ಮಾಡಿದ್ದಾರೆ. ಟಿಆರ್‌ಪಿಯೂ ಕುಸಿಯುತ್ತಿದೆ. ಯಾವುದೇ ಒಂದು ಪಕ್ಷದ ತತ್ತೂರಿಯಾಗುವುದನ್ನು ಜನರು ಇಷ್ಟಪಡುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಅದೇನೇ ಇರಲಿ ಬಯಲಿಗೆ ಬರುತ್ತಿರುವ ಭ್ರಷ್ಟಾಚಾರದ ಹಗರಣಗಳ ಮೇಲೆ ಮುಸುಕೆಳೆಯಲು ಹಿಂದುತ್ವ ಎಂಬ ಹೊದಿಕೆಯಿಂದಲೂ ಸಾಧ್ಯವಾಗುತ್ತಿಲ್ಲ.ಜನಸಾಮಾನ್ಯರಾದರೂ ಎಷ್ಟು ಕಾಲ ಭಾವನಾತ್ಮಕ ವಿಷಯಗಳ ಬಗ್ಗೆ ಮಾತಾಡುತ್ತಾರೆ? ಕಣ್ಣೆದುರಿಗೆ ಭ್ರಷ್ಟಾಚಾರದ ಹಗರಣಗಳ ದುರ್ವಾಸನೆ ಹರಡಿರುವಾಗ ಸಹಜವಾಗಿ ಜನರ ಮಾತುಗಳು ಆ ದಿಕ್ಕಿನತ್ತಲೂ ತಿರುಗುತ್ತವೆ.

ಅಂತಲೇ ಬಿಜೆಪಿಯ ರಾಷ್ಟ್ರೀಯ ನಾಯಕತ್ವ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಬಿಜೆಪಿ ಮತ್ತು ಸರಕಾರದಲ್ಲಿ ಕಳಂಕಿತ ಮುಖಗಳನ್ನು ಹೊರದಬ್ಬಿ ಹೊಸ ಕಳಂಕ ರಹಿತರ ತಂಡ ಕಟ್ಟಲು ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಅದು ಅಷ್ಟು ಸುಲಭವಲ್ಲ. ಕಟ್ಟಾ ಆರೆಸ್ಸೆಸ್ ಹಿನ್ನೆಲೆಯಿಂದ ಬಂದವರ ಮೇಲೂ ಲಂಚದ ಆರೋಪಗಳು ಇರುವುದರಿಂದ ಈ ಬಿಕ್ಕಟ್ಟಿನಿಂದ ಹೊರಗೆ ಬರುವುದು ಅಷ್ಟು ಸುಲಭದ ಮಾತಲ್ಲ.

ಮುಖ್ಯ ಪ್ರತಿಪಕ್ಷವಾಗಿ ಕಾಂಗ್ರೆಸ್ ಇತ್ತೀಚೆಗೆ ನಡೆಸಿದ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಜನಪ್ರಿಯತೆಯಲ್ಲಿ ಸಿದ್ದರಾಮಯ್ಯನವರನ್ನು ಸರಿಗಟ್ಟುವ ನಾಯಕರು ಬಿಜೆಪಿಯಲ್ಲಿ ಯಾರೂ ಇಲ್ಲ. ಇದ್ದೊಬ್ಬ ಯಡಿಯೂರಪ್ಪನವರನ್ನು ಪಕ್ಷವೇ ಕಡೆಗಣಿಸಿದ ಪರಿಣಾಮವಾಗಿ ರಾಜ್ಯದ ಆಡಳಿತ ಪಕ್ಷ ಇಕ್ಕಟ್ಟಿಗೆ ಸಿಲುಕಿದೆ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದರೂ ಸಂಪುಟದ ಮೇಲೆ ಇಲ್ಲವೇ ಪಕ್ಷದ ಮೇಲೆ ಅವರ ಸಂಪೂರ್ಣ ನಿಯಂತ್ರಣ ಇದ್ದಂತಿಲ್ಲ. ಇನ್ನು ಭಾರೀ ನಿರೀಕ್ಷೆ ಇಟ್ಟುಕೊಂಡ ಅರವಿಂದ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ಕೂಡ ಕರ್ನಾಟಕದಲ್ಲಿ ಕ್ರಿಯಾಶೀಲವಾಗಿರುವುದರಿಂದ ಬಿಜೆಪಿಯನ್ನೇ ಆಶ್ರಯಿಸಬೇಕೆಂಬ ಅನಿವಾರ್ಯತೆ ಕರ್ನಾಟಕದ ಮತದಾರರಿಗಿಲ್ಲ.

ಕರ್ನಾಟಕ ಬಿಜೆಪಿ ಸರಕಾರದ ಭ್ರಷ್ಟಾಚಾರದ ಹಗರಣಗಳನ್ನು ಮಾಧ್ಯಮಗಳೇನೂ ಬಯಲಿಗೆಳೆಯಲಿಲ್ಲ. ಪ್ರತಿಪಕ್ಷಗಳೂ ಪತ್ತೆ ಹಚ್ಚಿ ಹೊರತೆಗೆಯಲಿಲ್ಲ. ಬದಲಿಗೆ ತನ್ನಿಂದ ತಾನೇ ಹೊರಗೆ ಬಂದು ಜನರ ಗಮನ ಸೆಳೆದ ಪ್ರಕರಣಗಳಿವು. ಭ್ರಷ್ಟಾಚಾರದ ಆರೋಪವನ್ನು ಹೊತ್ತು ರಾಜೀನಾಮೆ ಕೊಟ್ಟಿರುವವರಲ್ಲಿ ಈಶ್ವರಪ್ಪನವರು ಮೊದಲಿಗರೇನಲ್ಲ. 2021ರ ಜನವರಿಯಲ್ಲಿ ಅಬಕಾರಿ ಮಂತ್ರಿಯಾಗಿದ್ದ ಎಚ್.ನಾಗೇಶ್ ಹಗರಣಗಳಲ್ಲಿ ಸಿಲುಕಿ ರಾಜೀನಾಮೆ ನೀಡಿದರು. ನಂತರ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣದಲ್ಲಿ ಸಿಲುಕಿ 2021 ಮಾರ್ಚ್ 3ರಂದು ಪದತ್ಯಾಗ ಮಾಡಿದರು. ಇವಲ್ಲದೆ ನಲವತ್ತು ಪರ್ಸೆಂಟ್ ಕಮಿಶನ್ ಹಗರಣಗಳು. ಯಾವ ಮುಖವನ್ನು ಇಟ್ಟುಕೊಂಡು ಇವರು ಜನರ ಮನೆ ಬಾಗಿಲಿಗೆ ಮತ ಕೇಳಲು ಹೋಗುತ್ತಾರೆ?

ಈಗ ಹೇಗಾದರೂ ಮಾಡಿ ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ. ಆ ಮೂಲಕ ದಕ್ಷಿಣ ಭಾರತದ ಒಂದಾದರೂ ರಾಜ್ಯವನ್ನು ಗೆಲ್ಲುವ ಗುರಿ ಅವರು ಹೊಂದಿದ್ದಾರೆ. ಅದಕ್ಕಾಗಿ ಅಮಿತ್ ಶಾ ಮತ್ತೆ ಬೇರೆ ಪಕ್ಷಗಳ ಪ್ರಭಾವಿ ನಾಯಕರನ್ನು ಬುಟ್ಟಿಗೆ ಹಾಕಿಕೊಳ್ಳಲು ಕಾರ್ಯತಂತ್ರ ರೂಪಿಸಿದ್ದಾರಂತೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನ ತಲಾ ನಾಲ್ವರು ಶಾಸಕರು ಬಿಜೆಪಿಯನ್ನು ಸೇರುತ್ತಾರೆಂಬ ವದಂತಿ ಹರಡಿದೆ. ಆದರೆ, ಉಗ್ರ ಹಿಂದುತ್ವದ ಅಸ್ತ್ರ ಪ್ರಯೋಗಿಸಲು ಬುಲ್ಡೋಜರ್ ಸಂಸ್ಕೃತಿ ತಂದು ಅಲ್ಪಸಂಖ್ಯಾತ ಮತ್ತು ಇತರ ಸಮುದಾಯಗಳನ್ನು ಬೆದರಿಸುವ ತಂತ್ರ ರೂಪಿಸಬೇಕೆಂದು ಬಿಜೆಪಿಯೊಳಗಿನ ಇನ್ನೊಂದು ಗುಂಪು ಒತ್ತಡ ಹೇರುತ್ತಿದೆ ಎನ್ನಲಾಗುತ್ತದೆ.

ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಖರೀದಿ ಮಾಡಿ ಮುಂಬೈಗೆ ಕರೆದುಕೊಂಡು ಹೋಗಿ ಬಚ್ಚಿಟ್ಟು ಸರಕಾರ ರಚಿಸಿ ಅವರನ್ನು ಮಂತ್ರಿ ಮಾಡಿರುವಾಗ ಅಂಥವರನ್ನು ಹೊರಗೆ ಹಾಕಲು ಹೇಗೆ ಸಾಧ್ಯ? ಅಂಥವರ ನೆರವಿನಿಂದ ಸರಕಾರ ರಚನೆ ಮಾಡಿದ್ದು ತಪ್ಪೆಂದು ಬಿಜೆಪಿ ರಾಷ್ಟ್ರೀಯ ವರಿಷ್ಠ ನಾಯಕರಿಗೆ ಅನಿಸಲಿಲ್ಲವೇ?

ಒಟ್ಟಾರೆ ಬರಲಿರುವ ವಿಧಾನಸಭಾ ಚುನಾವಣೆ ಅತ್ಯಂತ ನಿರ್ಣಾಯಕವಾಗಿದೆ. ಭ್ರಷ್ಟಾಚಾರದ ಹಗರಣಗಳನ್ನು ಹಿಂದುತ್ವದ ಮುಸುಕಿನಲ್ಲಿ ಬಚ್ಚಿಟ್ಟು ಕೋಮು ಧ್ರುವೀಕರಣದ ಮೂಲಕ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದೇ? ಅಸಮಾಧಾನಗೊಂಡ ಯಡಿಯೂರಪ್ಪನವರನ್ನು ಅವರ ಹಳೆಯ ಪ್ರಕರಣಗಳನ್ನು ತೆಗೆದು ಬಾಯಿ ಮುಚ್ಚಿಸಲಾಗುವುದೇ? ಕಾಂಗ್ರೆಸ್ ಮುಂದಿನ ಮುಖ್ಯಮಂತ್ರಿ ಯಾರೆಂದು ಚುನಾವಣೆಗೆ ಮುಂಚೆ ಘೋಷಿಸುತ್ತದೆಯೇ? ಇವೆಲ್ಲ ಅಂಶಗಳು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)