ಸಿನಿಮಾ
ಕಾರಣ ಏನು ಗೊತ್ತೇ?
'ಹೆಡ್ಬುಷ್ ಸಿನೆಮಾ ಬಿಡುಗಡೆ ಬೇಡ': ವಾಣಿಜ್ಯ ಮಂಡಳಿಗೆ ದೂರು

(ನಟ ‘ಡಾಲಿ’ ಧನಂಜಯ್ ) photo- twitter@Dhananjayaka
ಬೆಂಗಳೂರು, ಮೇ 4: ಭೂಗತ ದೊರೆ ಎಂ.ಪಿ.ಜಯರಾಜ್ ಅವರ ಜೀವನ ಚರಿತ್ರೆ ಎನ್ನಲಾದ ನಟ ‘ಡಾಲಿ’ ಧನಂಜಯ್ ಅಭಿನಯದ ‘ಹೆಡ್ ಬುಷ್’ (Head Bush) ಸಿನೆಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕೋರಿ ಎಂ.ಪಿ.ಜಯರಾಜ್ ಪುತ್ರ, ನಟ ಅಜಿತ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ.
ಬುಧವಾರ ಈ ಕುರಿತು ಪ್ರತಿಕ್ರಿಯಿಸಿದ ಅಜಿತ್, ‘ಹೆಡ್ಬುಷ್' ಸಿನೆಮಾ ನನ್ನ ತಂದೆಯವರ ಕುರಿತಂತೇ ಇದೆ. ಈಗಾಗಲೇ ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ನೀಡಿದ್ದೇನೆ. ಜತೆಗೆ, ಈ ಕುರಿತು ಚಿತ್ರತಂಡದ ಜೊತೆಗೂ ಮಾತನಾಡಿದ್ದೇನೆ. ಆದರೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಅವರು ನೀಡಿರಲಿಲ್ಲ ಎಂದರು.
ನಮ್ಮ ತಂದೆಯ ಮುಂದೆ ನಿಲ್ಲದೇ ಇರುವವರೆಲ್ಲಾ, ಅವರನ್ನು ನೋಡದೇ ಇರುವವರೆಲ್ಲಾ ಇಂದು ಏಕವಚನದಲ್ಲಿ ಮಾತನಾಡುತ್ತಾರೆ. ಇದು ಸರಿಯಲ್ಲ ಎಂದ ಅವರು, ಕುಟುಂಬದ ಅನುಮತಿಯನ್ನು ಪಡೆಯದೇ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವುದು ಸೂಕ್ತವಲ್ಲ. ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.
ಕಾಣದ ಕೈ: ನಟ ಧನಂಜಯ್ ಮಾತನಾಡಿ, ಇದರ ಹಿಂದೆ ಕಾಣದ ಕೈಗಳಿವೆ. ಏಕೆಂದರೆ, ಅಜಿತ್ ನನಗೆ ಚೆನ್ನಾಗಿ ಪರಿಚಯವಿದೆ. ಹೆಡ್ಬುಷ್ಗೂ ಅವರು ಶುಭಾಶಯ ಕೋರಿದ್ದರು. ನಾವು ಸ್ಪಷ್ಟವಾಗಿ ಇದು ಅಗ್ನಿ ಶ್ರೀಧರ್ ಅವರ ಕೃತಿ ಆಧಾರಿತ ಸಿನೆಮಾ ಎಂದು ಉಲ್ಲೇಖಿಸಿದ್ದೇವೆ. ಆದರೆ ಈಗ ಅಜಿತ್ ಅವರು ಏಕಾಏಕಿ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ಅಲ್ಲದೆ, ಸಿನೆಮಾ ಘೋಷಣೆ ಮಾಡಿದಾಗ ದೂರು ನೀಡಬಹುದಿತ್ತು. ಆದರೆ ಚಿತ್ರೀಕರಣ ಪೂರ್ಣಗೊಂಡ ನಂತರ ಈ ರೀತಿ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಸಿನೆಮಾ ಮಾಡುತ್ತಿರುವುದು ಅಗ್ನಿ ಶ್ರೀಧರ್ ಅವರ ಪುಸ್ತಕದ ಮೇಲೆ. ಏನೇ ಸಮಸ್ಯೆ ಇದ್ದರೂ, ಅಗ್ನಿ ಶ್ರೀಧರ್ ಜೊತೆ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು. ಸಿನಿಮಾಗೂ ಅಜಿತ್ ದೂರಿಗೂ ಸಂಬಂಧವಿಲ್ಲ. ಶ್ರೀಧರ್ ಅವರ ಪುಸ್ತಕದ ಹಕ್ಕು ತೆಗೆದುಕೊಂಡು ನಾವು ಸಿನಿಮಾ ಮಾಡುತ್ತಿದ್ದೇವೆ ಎಂದು ನುಡಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ