varthabharthi


ಉಡುಪಿ

ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಗೆ ರಾಜೀನಾಮೆ

ವಾರ್ತಾ ಭಾರತಿ : 7 May, 2022

ಉಡುಪಿ : ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್‌ನ ಹಿರಿಯ ನಾಯಕ ಪ್ರಮೋದ್ ಮಧ್ವರಾಜ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ.

ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ರಾಜೀನಾಮೆ ಪತ್ರವನ್ನು ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.

ಕಳೆದ ಮೂರು ವರ್ಷಗಳಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ತನಗೆ ಅತ್ಯಂತ ಕೆಟ್ಟ ಅನುಭವಗಳಾಗುತಿದ್ದು, ಇದರಿಂದ ರಾಜಕೀಯವಾಗಿ ಉಸಿರುಗಟ್ಟಿಸುವ ವಾತಾವರಣ ಉಂಟಾಗಿತ್ತು. ಈ ವಿಷಯವನ್ನು ನಾನು ತಮ್ಮ ಹಾಗೂ ಪಕ್ಷದ ಇತರ ನಾಯಕರ ಗಮನಕ್ಕೆ ತಂದಿದ್ದರೂ ಪರಿಸ್ಥಿತಿಯನ್ನು ಸುಧಾರಿಸುವ ಯಾವುದೇ ವಿಶ್ವಾಸಾರ್ಹ ಹೆಜ್ಜೆಯನ್ನು ಇಟ್ಟಿರುವುದು ನನ್ನ ಗಮನಕ್ಕೆ ಬಂದಿಲ್ಲ.

ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಉಳಿಯುವುದು ಇನ್ನು ಅಸಾಧ್ಯ ಎನಿಸುವ ಹಂತಕ್ಕೆ ತಲುಪಿದ್ದು, ಪಕ್ಷ ಇತ್ತೀಚೆಗೆ ನೀಡಿರುವ ಉಪಾಧ್ಯಕ್ಷ ಹುದ್ದೆಗೂ ನ್ಯಾಯ ಸಲ್ಲಿಸುವ ವಿಶ್ವಾಸ ಉಳಿದಿಲ್ಲ. ಹೀಗಾಗಿ ನಾನು ಕೆಪಿಸಿಸಿ ಉಪಾಧ್ಯಕ್ಷ ಹುದ್ದೆಯನ್ನು ಸ್ವೀಕರಿಸದೇ ಇರಲು ನಿರ್ಧರಿಸಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಅವರು ರಾಜ್ಯಾಧ್ಯಕ್ಷರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ಕುರಿತಂತೆ ಬಲವಾದ ಊಹಾಪೋಹಗಳು ಕೇಳಿಬರುತಿದ್ದು, ಶುಕ್ರವಾರವಷ್ಟೇ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಅವರು ಪ್ರಮೋದ್ ಅವರ ಸೇರ್ಪಡೆ ಕುರಿತಂತೆ ಕಾರ್ಯಕರ್ತರ ಹಾಗೂ ಪದಾಧಿಕಾರಿಗಳ ಅಭಿಪ್ರಾಯವನ್ನು ರಾಜ್ಯ ನಾಯಕರುಗಳಿಗೆ ಕಳುಹಿಸಿಕೊಟ್ಟಿದ್ದು, ಮುಂದಿನ ತೀರ್ಮಾನವನ್ನು ಅವರು ತೆಗೆದುಕೊಳ್ಳಲಿದ್ದಾರೆ ಎಂದು ಪತ್ರಕರ್ತರಿಗೆ ತಿಳಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು