varthabharthi


ಬೆಂಗಳೂರು

ಜೆಡಿಎಸ್ ಪಕ್ಷಕ್ಕೆ ನಿಖಿಲ್, ಪ್ರಜ್ವಲ್ ಜೋಡೆತ್ತುಗಳಾಗಲಿ: ನಂಜಾವಧೂತ ಶ್ರೀ

ವಾರ್ತಾ ಭಾರತಿ : 13 May, 2022

ಬೆಂಗಳೂರು, ಮೇ 13: ಉತ್ತರ ಪ್ರದೇಶದಲ್ಲಿ ಕೆಲ ಯುವ ನಾಯಕರಂತೆ ರಾಜ್ಯ ರಾಜಕಾರಣದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಜನಸೇವೆ ಮಾಡಬೇಕಿದೆ. ಜೆಡಿಎಸ್‍ಗೆ ಜೋಡೆತ್ತುಗಳಾಗಬೇಕಾಗಿದೆ ಎಂದು ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ.

ಶುಕ್ರವಾರ ನೆಲಮಂಗಲದಲ್ಲಿ ನಡೆದ ಜೆಡಿಎಸ್ ಜನತಾ ಜಲಧಾರೆ ಸಮಾವೇಶದಲ್ಲಿ ನಂಜಾವಧೂತ ಸ್ವಾಮೀಜಿ ಭಾಷಣ ಮಾಡಿದರು.
ನಿಖಿಲ್, ಪ್ರಜ್ವಲ್ ಇಬ್ಬರೂ ಜೋಡೆತ್ತುಗಳಾಗಿ ನಿಲ್ಲಬೇಕಿದೆ. ರೇವಣ್ಣ ಕುಮಾರಸ್ವಾಮಿಯವರಿಗಿಂತ ವಯಸ್ಸಿನಲ್ಲಿ ದೊಡ್ಡವರಿದ್ದಾರೆ. ಹೀಗಿದ್ದರೂ, ಕುಮಾರಸ್ವಾಮಿಯವರಿಗೆ ರೇವಣ್ಣ ರಾಜಕೀಯವಾಗಿ ಬಲವಾಗಿ ನಿಂತಿದ್ದಾರೆ. ಇದೇ ರೀತಿ ನಿಖಿಲ್, ಪ್ರಜ್ವಲ್ ಜೆಡಿಎಸ್ ಪಕ್ಷಕ್ಕಾಗಿ ನಿಲ್ಲಬೇಕಿದೆ ಎಂದರು.

ದೇವೇಗೌಡ ಕುಟುಂಬ ಜನರಿಗೆ ಎಲ್ಲವನ್ನೂ ನೀಡಿದೆ. ರಾಜ್ಯದ ಋಣ ತೀರಿಸುತ್ತಾ ಬರುತ್ತಿದೆ. ಕುಮಾರಸ್ವಾಮಿ ಅವಕಾಶವಾದಿ ಅಲ್ಲ. ಬದಲಾಗಿ ಸ್ವಾಭಿಮಾನಿಯಾಗಿ ಜನಪರ ಯೋಜನೆಗಳನ್ನು ಜಾರಿ ತಂದವರು ಎಂದು ನಂಜಾವಧೂತ ಸ್ವಾಮೀಜಿ ತಿಳಿಸಿದರು.

ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಎಚ್‍ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜಾರಿಗೆ ತಂದಿದ್ದಾರೆ. ಮುಂದೊಂದು ದಿನ ನಿಶ್ಚಿತವಾಗಿ ಇವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನಂಜಾವಧೂತ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ನದಿಯ ನೀರು ಬಳಕೆಮಾಡಿಕೊಳ್ಳಲು ನಮ್ಮ ವಿಫಲತೆ ಇದೆ. ಇದನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂಬುದರ ಬಗ್ಗೆ ಹೆಚ್ಚು ಅಧ್ಯಯನ ನಡೆಸಬೇಕಾಗಿದೆ. ಜೆಡಿಎಸ್ ಇದನ್ನು ಮಾಡುತ್ತದೆ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು