varthabharthi


ರಾಷ್ಟ್ರೀಯ

ಕಾಶ್ಮೀರಿ ಪಂಡಿತನ ಹತ್ಯೆ ಪ್ರಕರಣ

ಜಮ್ಮು-ಕಾಶ್ಮೀರದಲ್ಲಿ ಭುಗಿಲೆದ್ದ ಪ್ರತಿಭಟನೆ:ಪಂಡಿತ ಸಮುದಾಯದಿಂದ ಸಾಮೂಹಿಕ ರಾಜೀನಾಮೆಯ ಬೆದರಿಕೆ

ವಾರ್ತಾ ಭಾರತಿ : 13 May, 2022

PHOTO:TWITTER

ಶ್ರೀನಗರ,ಮೇ 13: ಕಾಶ್ಮೀರದ ಬುಡ್ಗಾಮ್‌ನಲ್ಲಿ ಗುರುವಾರ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ಸರಕಾರಿ ನೌಕರನ ಹತ್ಯೆಯ ಬಳಿಕ ಜಮ್ಮು-ಕಾಶ್ಮೀರದ ವಿವಿಧೆಡೆಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಕಣಿವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಂಡಿತ ಸಮುದಾಯದವರು ತಮ್ಮ ಸುರಕ್ಷತೆಗೆ ಆಗ್ರಹಿಸಿದ್ದಾರೆ. ಜಮ್ಮುವಿಗೆ ತೆರಳಲು ತಮಗೆ ಸುರಕ್ಷಿತ ಮಾರ್ಗವನ್ನು ಕಲ್ಪಿಸದಿದ್ದರೆ ಸಾಮೂಹಿಕ ರಾಜೀನಾಮೆಯನ್ನು ನೀಡುವುದಾಗಿಯೂ ಅವರು ಬೆದರಿಕೆಯೊಡ್ಡಿದ್ದಾರೆ. ಶ್ರೀನಗರ ವಿಮಾನ ನಿಲ್ದಾಣದತ್ತ ಸಾಗುತ್ತಿದ್ದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು,ಪಿಡಿಪಿ ಅಧ್ಯಕ್ಷೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರನ್ನು ಅವರ ಗುಪ್ಕರ್ ನಿವಾಸದಲ್ಲಿ ಗೃಹಬಂಧನದಲ್ಲಿರಿಸಲಾಗಿದೆ.

ಹತ ರಾಹುಲ್ ಭಟ್ ಅವರ ಅಂತ್ಯಸಂಸ್ಕಾರ ಶುಕ್ರವಾರ ಜಮ್ಮುವಿನ ಬಂತಾಲಬ್‌ನಲ್ಲಿ ನೆರವೇರಿದೆ.

2010-11ರಲ್ಲಿ ವಲಸಿಗರಿಗಾಗಿ ವಿಶೇಷ ಉದ್ಯೋಗ ಯೋಜನೆಯಡಿ ಉದ್ಯೋಗವನ್ನು ಪಡೆದಿದ್ದ ರಾಹುಲ್ ಭಟ್ ಅವರನ್ನು ಗುರುವಾರ ಚಂದೂರಾ ಪಟ್ಟಣದ ತಾಲೂಕು ಕಚೇರಿಯಲ್ಲಿ ಭಯೋತ್ಪಾದಕರು ಗುಂಡಿಟ್ಟು ಹತ್ಯೆ ಮಾಡಿದ್ದರು.

ಈ ನಡುವೆ ಭಟ್ ಅವರ ಬಂಧುಗಳನ್ನು ಶುಕ್ರವಾರ ಭೇಟಿಯಾದ ಜಮ್ಮು-ಕಾಶ್ಮೀರದ ಉಪ ರಾಜ್ಯಪಾಲ ಮನೋಜ ಸಿನ್ಹಾ ಅವರು ಕುಟುಂಬಕ್ಕೆ ನ್ಯಾಯವೊದಗಿಸುವ ಭರವಸೆ ನೀಡಿದ್ದಾರೆ.

ಕಣಿವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಶ್ಮೀರಿ ಪಂಡಿತ ನೌಕರರು ಭಟ್ ಹತ್ಯೆಯನ್ನು ವಿರೋಧಿಸಿ ಬುಡ್ಗಾಮ್‌ನ ಶೇಖಪೋರಾದಲ್ಲಿ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಆಡಳಿತದ ವಿರುದ್ಧ ಘೋಷಣೆಗಳನ್ನೂ ಕೂಗಿದರು.

ಜಮ್ಮುವಿನ ರೂಪನಗರ ಮತ್ತು ಬಂತಾಲಬ್ ಪ್ರದೇಶಗಳಲ್ಲಿಯೂ ಕಾಶ್ಮೀರಿ ಪಂಡಿತರು ಪ್ರತಿಭಟನೆಗಳನ್ನು ನಡೆಸಿದರು.

‘ಅವರು ಪ್ರಧಾನಿ ಉದ್ಯೋಗ ಪ್ಯಾಕೇಜ್‌ನಡಿ ನಮ್ಮ ಯುವಜನರನ್ನು ಕಣಿವೆಯಲ್ಲಿ ಬಲವಂತದಿಂದ ಸೇವೆಗೆ ತೊಡಗಿಸಿದ್ದಾರೆ. ಸರಕಾರವು ಗಂಭೀರವಾಗಿದ್ದರೆ ಅದು ಕೇಂದ್ರ ಸರಕಾರದಲ್ಲಿ ಉದ್ಯೋಗಗಳನ್ನು ನೀಡಬಹುದಿತ್ತು. ಕಾಶ್ಮೀರಿ ಪಂಡಿತರ ವಾಪಸಾತಿಗೆ ಕಣಿವೆಯಲ್ಲಿನ ಸ್ಥಿತಿ ಪೂರಕವಾಗಿದೆಯೇ ಮತ್ತು ಅವರ ಸುರಕ್ಷತೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ ಎನ್ನುವುದನ್ನು ಪರಿಶೀಲಿಸದೆ ಅವರನ್ನು ಕಣಿವೆಗೆ ವಾಪಸ್ ತಳ್ಳಲು ಸರಕಾರವು ಬಯಸಿದೆ. ಆಡಳಿತವು ಸಂಪೂರ್ಣವಾಗಿ ವಿಫಲಗೊಂಡಿದೆ ಮತ್ತು 1990ರಲ್ಲಿ ಇದ್ದಂತಹ ಸ್ಥಿತಿ ಮರಳಿದೆ ಎಂದು ಹೇಳಿದ ಪ್ರತಿಭಟನಾಕಾರರು,ದೂರದ ಸ್ಥಳಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಿರುವ ಎಲ್ಲ ವಲಸಿಗ ಪಂಡಿತ ನೌಕರರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಪಾಕಿಸ್ತಾನವು ಭಯೋತ್ಪಾದನೆಯ ಮೂಲ ಕಾರಣವಾಗಿದೆ. ಕಾಶ್ಮೀರಿ ಪಂಡಿತರು ಮತ್ತೆ ಮತ್ತೆ ಬಲಿಪಶುಗಳಾಗದಿರಲು ಅದರ ಮೇಲೆ ನಿರ್ಣಾಯಕ ದಾಳಿಯನ್ನು ನಡೆಸಬೇಕು ಮತ್ತು ಪಾಕ್ ಆಕ್ರಮಿತ ಕಾಶ್ಮೀರವನ್ನು ಮರುಸ್ವಾಧೀನ ಪಡಿಸಿಕೊಳ್ಳಬೇಕು ಎಂದೂ ಪ್ರತಿಭಟನಾಕಾರರು ಕಿಡಿಕಾರಿದರು.

ಗುರುವಾರ ರಾತ್ರಿ ವೆಸ್ಸು ಮತ್ತು ಅನಂತನಾಗ್‌ನಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದ ವಲಸಿಗ ಕಾಶ್ಮೀರಿ ಪಂಡಿತ ನೌಕರರು ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದ್ದರು.

‘ತಮ್ಮನ್ನು ರಕ್ಷಿಸಲು ಭಾರತ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಶ್ಮೀರಿ ಪಂಡಿತರೊಂದಿಗೆ ಏಕತೆಯನ್ನು ವ್ಯಕ್ತಪಡಿಸಲು ಬಡ್ಗಾಮ್‌ಗೆ ಭೇಟಿ ನೀಡಲು ಬಯಸಿದ್ದೆ. ಆದರೆ ಕಾಶ್ಮೀರಿ ಮುಸ್ಲಿಮರು ಮತ್ತು ಪಂಡಿತರು ಪರಸ್ಪರರ ನೋವಿಗೆ ಸಹಾನುಭೂತಿ ವ್ಯಕ್ತಪಡಿಸುವುದು ಸರಕಾರದ ದುಷ್ಟ ಕೋಮು ನಿಲುವಿಗೆ ಹೊಂದಿಕೆಯಾಗುವುದಿಲ್ಲ,ಹೀಗಾಗಿ ನನ್ನನ್ನು ಗೃಹಬಂಧನದಲ್ಲಿ ಇಡಲಾಗಿದೆ ’ಎಂದು ಮೆಹಬೂಬ ಟ್ವೀಟಿಸಿದ್ದಾರೆ.

ಜಮ್ಮು-ಕಾಶ್ಮೀರದ ಎಲ್ಲ ಮುಖ್ಯವಾಹಿನಿ ರಾಜಕೀಯ ಪಕ್ಷಗಳು ಭಟ್ ಹತ್ಯೆಯನ್ನು ಖಂಡಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)