varthabharthi


ರಾಷ್ಟ್ರೀಯ

ಭಾರತದೊಂದಿಗೆ ಫಲಪ್ರದ ಮಾತುಕತೆಗೆ ಸೂಕ್ತ ವಾತಾವರಣವಿಲ್ಲ: ಪಾಕಿಸ್ತಾನ

ವಾರ್ತಾ ಭಾರತಿ : 13 May, 2022

NAWAZ SHARIF

ಇಸ್ಲಮಾಬಾದ್, ಮೇ 13: ಫಲಪ್ರದ, ರಚನಾತ್ಮಕ ಮಾತುಕತೆಗೆ ಸೂಕ್ತ ವಾತಾವರಣ ಇಲ್ಲದಿರುವುದರಿಂದ ಭಾರತದೊಂದಿಗೆ ತಕ್ಷಣ ಮಾತುಕತೆ ನಡೆಯುವ ಸಾಧ್ಯತೆಯಿಲ್ಲ ಎಂದು ಪಾಕಿಸ್ತಾನ ಹೇಳಿದೆ. ಪಾಕಿಸ್ತಾನದಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಭಾರತದೊಂದಿಗೆ ಮಾತುಕತೆ ಪುನರಾರಂಭವಾಗಲಿದೆಯೇ ಎಂಬ ಕುರಿತ ಪ್ರಶ್ನೆಗೆ ಉತ್ತರಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಆಸಿಮ್ ಇಫ್ತಿಕಾರ್, ಭಾರತದೊಂದಿಗಿನ ವಿವಾದಗಳನ್ನು ಶಾಂತರೀತಿಯಲ್ಲಿ ಇತ್ಯರ್ಥಪಡಿಸುವ ವಿಷಯಕ್ಕೆ ಸಂಬಂಧಿಸಿ ರಾಷ್ಟ್ರೀಯ ಒಮ್ಮತವಿದೆ ಮತ್ತು ಪಾಕಿಸ್ತಾನದ ಎಲ್ಲಾ ಸರಕಾರಗಳೂ ಇದನ್ನು ಅನುಸರಿಸುತ್ತವೆ ಎಂದರು. ರಾಜತಂತ್ರದ ಉಪಕ್ರಮಗಳಿಗೆ ಎಂದಿಗೂ ಬಾಗಿಲು ಮುಚ್ಚಲಾಗದು. ವಿವಾದಕ್ಕೆ ಶಾಂತರೀತಿಯ ಇತ್ಯರ್ಥದ ಬಗ್ಗೆ ಪಾಕಿಸ್ತಾನಕ್ಕೆ ಇಚ್ಛೆಯಿದ್ದರೂ ಈಗ ಫಲಪ್ರದ, ರಚನಾತ್ಮಕ ಮಾತುಕತೆಯ ಪರಿಸ್ಥಿತಿಯಿಲ್ಲ ಎಂದವರು ಹೇಳಿದರು.

ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸಿ, ದ್ವೇಷ ಮತ್ತು ಹಿಂಸಾಚಾರ ರಹಿತ ವಾತಾವರಣಕ್ಕೆ ಅನುವು ಮಾಡಿಕೊಟ್ಟರೆ ಮಾತ್ರ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಸಹಜ ಸ್ಥಿತಿಗೆ ಮರಳಬಹುದು ಎಂದು ಭಾರತ ನಿರಂತರವಾಗಿ ಹೇಳುತ್ತಿದೆ. ಈ ಮಧ್ಯೆ, ಭಾರತದಲ್ಲಿರುವ ತನ್ನ ಹೈಕಮಿಷನ್‌ನಲ್ಲಿ ವ್ಯಾಪಾರ ಸಚಿವರನ್ನು ನೇಮಿಸುವುದಾಗಿ ಪಾಕಿಸ್ತಾನದ ನೂತನ ಸರಕಾರ ಘೋಷಿಸಿರುವುದು ಉಭಯ ದೇಶಗಳ ನಡುವಿನ ಶಾಂತಿ ಮಾತುಕತೆ ಪುನರಾರಂಭದ ನಿರೀಕ್ಷೆ ಮೂಡಿಸಿದೆ. ಶರೀಫ್ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಯ್ಕೆಗೊಂಡ ತಕ್ಷಣ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿ ಸಂದೇಶ ರವಾನಿಸಿದ್ದು ಈ ನಿರೀಕ್ಷೆಗೆ ಪೂರಕವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಶರೀಫ್, ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕೆಂಬುದು ತಮ್ಮ ಸರಕಾರದ ಆಶಯವಾಗಿದೆ. ಆದರೆ ಕಾಶ್ಮೀರ ವಿವಾದ ಇತ್ಯರ್ಥಗೊಳ್ಳುವ ತನಕ ಶಾಶ್ವತ ಶಾಂತಿ ಸ್ಥಾಪನೆಯಾಗದು ಎಂದಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)