varthabharthi


ಅಂತಾರಾಷ್ಟ್ರೀಯ

ಕೋವಿಡ್‌ ಸೋಂಕು ಹೆಚ್ಚಳ

ಉತ್ತರ ಕೊರಿಯಾ : 21 ಮಂದಿ ಜ್ವರಪೀಡಿತರು ಮೃತ್ಯು

ವಾರ್ತಾ ಭಾರತಿ : 14 May, 2022

ಸಾಂದರ್ಭಿಕ ಚಿತ್ರ

ಪ್ಯಾಂಗ್‍ಯಾಂಗ್: ಎರಡೂವರೆ ವರ್ಷದಿಂದ ಕೋವಿಡ್-19 ಸಾಂಕ್ರಾಮಿಕವನ್ನು ದೇಶದಿಂದ ಹೊರಗಿಟ್ಟಿದ್ದ ಉತ್ತರ ಕೊರಿಯಾದಲ್ಲಿ ಇದೀಗ ಸಾಂಕ್ರಾಮಿಕ ವ್ಯಾಪಕವಾಗಿ ಹಬ್ಬಿದ್ದು, ಪರಿಸ್ಥಿತಿ ನಿಭಾಯಿಸಲು ಆಡಳಿತ ಯಂತ್ರ ಹೆಣಗಾಡುತ್ತಿದೆ.

ದೇಶದಲ್ಲಿ ಶುಕ್ರವಾರ ಒಂದೇ ದಿನ 1,74,440 ಮಂದಿಗೆ ಜ್ವರಲಕ್ಷಣಗಳು ಕಂಡುಬಂದಿದ್ದು, ಸೋಂಕಿನಿಂದ 21 ಮಂದಿ ಮೃತಪಟ್ಟಿರುವುದನ್ನು ಸರ್ಕಾರ ದೃಢಪಡಿಸಿದೆ.

ದೇಶದಲ್ಲಿ ಲಸಿಕೆ ಪಡೆಯದ ಜನರಲ್ಲಿ ಕೋವಿಡ್-19 ಸೋಂಕು ಪ್ರಸರಣವನ್ನು ನಿಧಾನಗೊಳಿಸಲು ಸರ್ಕಾರ ಹರಸಾಹಸ ಮಾಡುತ್ತಿದೆ. ಎಪ್ರಿಲ್ ಕೊನೆಯ ವಾರದಿಂದ ವ್ಯಾಪಕವಾಗಿ ಹರಡುತ್ತಿರುವ ಜ್ವರದಿಂದಾಗಿ 5,24,440 ಮಂದಿ ಅಸ್ವಸ್ಥರಾಗಿದ್ದು, 27 ಮಂದಿ ಮೃತಪಟ್ಟಿದ್ದಾರೆ. 2,80,810 ಮಂದಿ ಕ್ವಾರಂಟೈನ್‍ನಲ್ಲಿದ್ದಾರೆ ಎಂದು ಸರ್ಕಾರ ಪ್ರಕಟಿಸಿದೆ. ಆದರೆ ಕೋವಿಡ್-19 ಸೋಂಕಿನಿಂದ ಎಷ್ಟು ಮಂದಿ ಬಳಲುತ್ತಿದ್ದಾರೆ ಮತ್ತು ಎಷ್ಟು ಮಂದಿ ಮೃತಪಟ್ಟಿದ್ದಾರೆ ಎನ್ನುವುದನ್ನು ಸರ್ಕಾರ ಬಹಿರಂಗಪಡಿಸಿಲ್ಲ.

ದೇಶದಲ್ಲಿ ಅಧಿಕೃತವಾಗಿ ಮೊಟ್ಟಮೊದಲ ಪ್ರಕರಣ ಪತ್ತೆಯಾದ ತಕ್ಷಣವೇ ಗುರುವಾರ ದೇಶವ್ಯಾಪಿ ಲಾಕ್‍ಡೌನ್ ಹೇರಲಾಗಿದೆ. ರಾಜಧಾನಿಯಲ್ಲಿ ಜ್ವರಪೀಡಿತರ ಪೈಕಿ ಹಲವು ಮಂದಿಯ ರಕ್ತಮಾದರಿ ಸಂಗ್ರಹಿಸಲಾಗಿದ್ದು, ಇವರಿಗೆ ಒಮೈಕ್ರಾನ್ ಪ್ರಬೇಧದ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಸರ್ಕಾರಿ ಮಾಧ್ಯಮ ಹೇಳಿದೆ. ಒಮೈಕ್ರಾನ್ ಸೋಂಕಿನಿಂದ ಇದುವರೆಗೆ ಒಬ್ಬ ಮೃತಪಟ್ಟಿರುವುದನ್ನು ಸರ್ಕಾರ ಬಹಿರಂಗಪಡಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)