ಕರ್ನಾಟಕ
VIDEO- ವ್ಯವಸ್ಥೆಯೊಂದಿಗೆ ಹೊಂದಿಕೊಂಡು ಹೋಗಿದ್ದರೆ ಒಳ್ಳೆಯ ಸ್ಥಾನಮಾನಗಳು ಸಿಗುತ್ತಿದ್ದವು: ಡಾ.ಪಿ.ರವೀಂದ್ರನಾಥ್
ಬೆಂಗಳೂರು, ಮೇ: ‘ಇರುವ ಆಡಳಿತ ವ್ಯವಸ್ಥೆಯೊಂದಿಗೆ ಹೊಂದಿಕೊಂಡು ಹೋಗಿದಿದ್ದರೆ, ವ್ಯವಸ್ಥೆಯಲ್ಲಿರುವವರನ್ನು ಇಂದ್ರ, ಚಂದ್ರ ಎಂದು ಹೊಗಳಿದ್ದರೆ ಒಳ್ಳೆಯ ಸ್ಥಾನಮಾನಗಳು ಸಿಗುತ್ತಿದ್ದವು. ಆದರೆ, ನಾನು ನಿಷ್ಠಾವಂತನಾಗಿರುವುದೇ ನನ್ನ ವರ್ಗಾವಣೆಗೆ ಮೂಲ ಕಾರಣ. ನಾನು ಯಾವುದೇ ತಪ್ಪು ಮಾಡಿಲ್ಲ. ಈವರೆಗೂ ಕರ್ನಾಟಕ ರಾಜ್ಯದ ಜನತೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ಹೆಮ್ಮೆ ನನ್ನದು’ ಎಂದು ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿರುವ ಡಾ.ಪಿ.ರವೀಂದ್ರನಾಥ್ ಕಣ್ಣೀರಿಟ್ಟಿದ್ದಾರೆ.
ಬುಧವಾರ ‘ವಾರ್ತಾಭಾರತಿ’ ಯೂಟ್ಯೂಬ್ ಚಾನೆಲ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನಾನು ಮೂವತ್ತೊಂದು ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ. ಕೊನೆ ಹಂತದಲ್ಲಿ ನನಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ಎಸ್ಸಿ-ಎಸ್ಟಿ) ಪರವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಆದರೆ, ಕೆಲ ಸ್ಥಾಪಿತ ಹಿತಾಸಕ್ತಿಗಳೆಲ್ಲ ಸೇರಿ ನನ್ನನ್ನು ವರ್ಗಾವಣೆ ಮಾಡಿಸಲಾಗಿದೆ’ ಎಂದು ಆರೋಪಿಸಿದರು.
‘ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್ಟಿ)ಗಳ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಮೇಲ್ಜಾತಿಯವರನ್ನು ಪತ್ತೆ ಮಾಡಿ, ಆ ಕುರಿತು ರಾಜ್ಯಾದ್ಯಂತ ಪ್ರವಾಸ ಮಾಡಿ ತನಿಖೆಗೆ ಮುಂದಾಗಿದ್ದೆ. ಪರಿಶಿಷ್ಟರಿಗೆ ವಿವಿಧ ಜಿಲ್ಲೆಗಳಲ್ಲಿ ಕುಡಿಯಲು ಸೂಕ್ತ ನೀರಿನ ವ್ಯವಸ್ಥೆ ಇಲ್ಲ. ಹೀಗಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.
‘ನಾನು ಕಾನೂನು ಮತ್ತು ಸಂವಿಧಾನ ಜಾರಿಗೆ ಮುಂದಾದ ಕಾರಣಕ್ಕೆ ನನ್ನ ಕೆಲಸದ ಮೇಲೆ ಅಸಮಾಧಾನವಿದೆ. ಅಲ್ಲದೆ, ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಈ ಬಗ್ಗೆ ತೀವ್ರ ಸ್ವರೂಪದ ನಿರ್ಲಕ್ಷ ಎದ್ದು ಕಾಣುತ್ತಿದೆ. ದಲಿತರನ್ನು ದುರುಪಯೋಗ ಮಾಡಿಕೊಂಡ ಪ್ರಕರಣಗಳನ್ನು ತ್ವರಿತ ಇತ್ಯರ್ಥ ಮಾಡಲು ನಾನು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದು ಅವರು ತಿಳಿಸಿದರು.
‘2014ರಲ್ಲಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಾಗಿದ್ದ ಸಂದರ್ಭದಲ್ಲಿ ನನ್ನನ್ನು ಆಗಿನ ಹಿರಿಯ ಅಧಿಕಾರಿ ಎ.ಎನ್.ಪ್ರಸಾದ್ ಅವರು ದಲಿತರೆಂದು ಗುರುತಿಸಿದ್ದು ನನಗೆ ಬೇಸರ ತರಿಸಿದೆ. ಆ ವೇಳೆ ನಾನು ಸಿಎಂ ಭೇಟಿಗೆ ತೆರಳಿದ್ದ ವೇಳೆ ನೀವು ಅವರನ್ನೇಕೆ ಭೇಟಿ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು ಎಂದು ದೂರಿದ ಅವರು, ಅವರು ನನ್ನನ್ನು ದಲಿತ ಅಧಿಕಾರಿ ಎಂದು ನನ್ನ ಸಹೋದ್ಯೋಗಿಗಳೇ ಗುರುತಿಸುತ್ತಿದ್ದಾರೆ. ಸರಕಾರ ನನ್ನ ರಾಜೀನಾಮೆ ಅಂಗೀಕಾರ ಮಾಡುವವರೆಗೂ ಪೊಲೀಸ್ ಇಲಾಖೆಯಲ್ಲೇ ಕರ್ತವ್ಯ ನಿರ್ವಹಿಸಲಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
ನನಗೆ ತೃಪ್ತಿ ಇದೆ
ಮೂವತ್ತೊಂದು ವರ್ಷದಿಂದ ನಾನು ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯದಲ್ಲಿದ್ದು ಉತ್ತಮ ರೀತಿಯಲ್ಲಿ ರಾಜ್ಯದ ಜನತೆ ಸೇವೆ ಮಾಡಿದ ತೃಪ್ತಿ ಇದೆ. ಇಲಾಖೆಯಲ್ಲಿನ ಲೋಪಗಳನ್ನು ಸುಧಾರಣೆ ಮಾಡಲು ಕೆಲಸ ಮಾಡಿದ್ದೇನೆ. ರಾಜೀನಾಮೆ ಅಂಗೀಕಾರ ಮಾಡುವವರೆಗೆ ಯಾವುದೇ ಹುದ್ದೆ ನೀಡಿದರೂ ಕೆಲಸ ಮಾಡಲು ಸಿದ್ಧ.
-ಡಾ.ಪಿ.ರವೀಂದ್ರ ನಾಥ್ ಐಪಿಎಸ್ ಅಧಿಕಾರಿ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ