varthabharthi


ಬೆಂಗಳೂರು

ಭ್ರಷ್ಟ ಬಿಜೆಪಿ ಸರಕಾರ ವಜಾಗೊಳಿಸಿ, ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಿ: ರಾಜ್ಯಪಾಲರಿಗೆ ಎಸ್‍ಡಿಪಿಐ ಮನವಿ

ವಾರ್ತಾ ಭಾರತಿ : 16 May, 2022

ಬೆಂಗಳೂರು, ಮೇ 16: ರಾಜ್ಯದ ಜನರ ಯೋಗಕ್ಷೇಮಕ್ಕಾಗಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಬಿಜೆಪಿ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸುವಂತೆ ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ರಾಜ್ಯಪಾಲರಿಗೆ ಮನವಿ ಮಾಡಿದೆ. 

ಸೋಮವಾರ ರಾಜ್ಯಪಾಲರನ್ನು ಪಕ್ಷದ ನಿಯೋಗವು ಭೇಟಿ ಮಾಡಿ, ಬಿಜೆಪಿ ಸರಕಾರದ ಜನಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅಭಿವೃದ್ಧಿ ಯೋಜನೆಗಳ ಅನುದಾನವನ್ನು ಕಬಳಿಸುತ್ತಿದ್ದಾರೆ. ಅನಗತ್ಯವಾಗಿ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆಯನ್ನು ನಡೆಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಅಶಾಂತಿ ಉಂಟಾಗಿ, ಜನರ ನೆಮ್ಮದಿಗೆ ಭಂಗವಾಗಿದೆ. ಕೋಮುಗಲಭೆಗಳನ್ನು ನಿಯಂತ್ರಿಸಲು ಆಗದೆ ಜನರನ್ನು ಬಲಿ ಕೊಡಲಾಗುತ್ತಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಬಿಜೆಪಿ ಜನಪ್ರತಿನಿಧಿಗಳು ಶೇ.40 ಕಮಿಷನ್ ವ್ಯವಹಾರದಲ್ಲಿ ತೊಡಗಿದ್ದರೆ, ಬಿಜೆಪಿ ಕಾರ್ಯಕರ್ತರು ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಶಾಮೀಲಾಗಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಮುಖ್ಯಮಂತ್ರಿ ಸ್ಥಾನಕ್ಕೆ 2,500 ಕೋಟಿ ರೂ. ಲಂಚ ಕೇಳಲಾಗುತ್ತಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಹೀಗೆ ವ್ಯಾಪಕ ಭ್ರಷ್ಟಾಚಾರದಲ್ಲೇ ಮುಳುಗಿರುವ ಬಿಜೆಪಿ ಸರಕಾರವನ್ನು ಕಿತ್ತೊಗೆದು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಬೇಕು ಎಂದು ಅವರು ಹೇಳಿದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)