ಸಿನಿಮಾ
ಸಾಮಾಜಿಕ ತಾಣಗಳಲ್ಲಿ ಅಲೆಯೆಬ್ಬಿಸಿದ ಕಮಲ್ ಹಾಸನ್ ಅಭಿನಯದ ʼವಿಕ್ರಮ್ʼ ಸಿನಿಮಾ ಟ್ರೇಲರ್

Photo: Vikram
ಚೆನ್ನೈ: ಖ್ಯಾತ ನಟ, ಉಲಗನಾಯಗನ್ ಖ್ಯಾತಿಯ ಕಮಲ್ ಹಾಸನ್ ಅಭಿನಯದ ʼವಿಕ್ರಮ್ʼ ಚಿತ್ರದ ಟ್ರೇಲರ್ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿದೆ. ಇದುವರೆಗೂ ಫಹದ್ ಫಾಸಿಲ್, ವಿಜಯ್ ಸೇತುಪತಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿಗಳನ್ನು ಚಿತ್ರಕ್ಕಾಗಿ ತುದಿಗಾಲಲ್ಲಿ ನಿಲ್ಲಿಸಿದ್ದರೆ, ಇದೀಗ ನಟ ಸೂರ್ಯ ಕೂಡಾ ಈ ಚಿತ್ರದಲ್ಲಿ ಒಂದು ಪಾತ್ರವನ್ನು ನಿರ್ವಹಿಸಿದ್ದಾರೆ ಎಂಬ ಸುದ್ದಿ ಚಿತ್ರ ಪ್ರೇಮಿಗಳ ಪಾಲಿಗೆ ಸುಗ್ಗಿಯಂತಾಗಿದೆ.
ನಟರನ್ನು ಹೊರತು ಪಡಿಸಿ, ನಿರ್ದೇಶ ಲೋಕೆಶ್ ಕನಗರಾಜನ್ ಅವರಿಗೆ ಒಂದು ವಿಶೇಷ ಅಭಿಮಾನಿ ಬಳಗವಿದೆ. ʼಕೈದಿʼ ʼಮಾಸ್ಟರ್ʼ ನಂತಹ ಚಿತ್ರಗಳನ್ನು ನಿರ್ದೇಶಿಸಿರುವ ಲೋಕೇಶ್ ಕನಗರಾಜನ್ ಕಮಲ್ ಅಭಿಮಾನಿಯೂ ಹೌದು. ಈ ಹಿನ್ನೆಲೆಯಲ್ಲಿ ಈ ಚಿತ್ರದ ಮೇಲಿನ ನಿರೀಕ್ಷೆಗಳು ಹೆಚ್ಚಾಗಿದ್ದವು. ಇದೀಗ ಸೂರ್ಯ ಕೂಡಾ ಈ ಚಿತ್ರದ ಭಾಗ ಎಂಬ ಸುದ್ದಿಯನ್ನು ಚಿತ್ರತಂಡದ ಮೂಲಗಳೇ ಒಪ್ಪಿಕೊಂಡಿರುವುದು ಆ ನಿರೀಕ್ಷೆಗೆ ಇನ್ನಷ್ಟು ಗರಿ ಮೂಡಿಸಿವೆ.
ಕಮಲ್, ಫಹದ್, ಸೇತುಪತಿ, ಸೂರ್ಯ ಮಾತ್ರವಲ್ಲದೆ ಈ ಚಿತ್ರದಲ್ಲಿ ಇನ್ನೂ ಘಟಾನುಘಟಿ ನಟರಿದ್ದಾರೆ. ವಿನೋದ್ ಚೆಂಬನ್ ಜೋಸ್, ನರೈನ್, ಅಂಗಮಾಲಿ ಡೈರೀಸ್ ಖ್ಯಾತಿಯ ಆಂಟೋನಿ ವರ್ಗೀಸ್ (ಪೆಪ್ಪೆ), ಕಾಳಿದಾಸ್ ಜಯರಾಮ್, ಅರ್ಜುನ್ ದಾಸ್, ಸಾನ್ವಿ ಶ್ರೀವಾಸ್ತವ್, ದರ್ಶನ ಮೊದಲಾದ ತಾರೆಗಳು ಈ ಚಿತ್ರದ ಭಾಗವಾಗಿದ್ದಾರೆ.
ಸದ್ಯ ಈ ಚಿತ್ರದ ಟ್ರೇಲರ್ ಅನ್ನು 17.5 ಮಿಲಿಯನ್ ಗೂ ಅಧಿಕ ಬಾರಿ ವೀಕ್ಷಿಸಲಾಗಿದ್ದು, ಚಿತ್ರ ಜೂನ್ 3 ಕ್ಕೆ ತೆರೆ ಕಾಣಲಿದೆ. ಅನಿರುದ್ಧ ಸಂಗೀತ ನಿರ್ದೇಶನವಿದ್ದರೆ, ಸ್ವತಃ ಕಮಲ್ ಹಾಸನ್ ಅವರೂ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ