varthabharthi


ನಿಮ್ಮ ಅಂಕಣ

ವ್ಯಾಪಾರದ ಮಳಿಗೆಗಳಾಗಿರುವ ಶಿಕ್ಷಣ ಸಂಸ್ಥೆಗಳು

ವಾರ್ತಾ ಭಾರತಿ : 18 May, 2022
-ಕೆ.ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೇ,

ಹಿಂದೆ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣವನ್ನು ಮಾತ್ರ ಮಾರಾಟ ಮಾಡುತ್ತಿದ್ದರು. ಇತ್ತೀಚಿನ ದಶಕಗಳಲ್ಲಿ ಶಿಕ್ಷಣ ಸಂಸ್ಥೆಗಳು ವ್ಯಾಪಾರದ ಮಳಿಗೆಗಳಂತಿವೆ. ಶಾಲೆಯ ಸಮವಸ್ತ್ರ ಮತ್ತು ಶೂಗಳನ್ನು ಕೂಡಾ ಅವರು ಹೇಳುವ ಕಡೆಯಲ್ಲಿ, ಅವರು ನಿಗದಿಪಡಿಸಿರುವಷ್ಟು ಹಣವನ್ನು ಕೊಟ್ಟು ಖರೀದಿಸಬೇಕು. ಪಠ್ಯ, ನೋಟ್ ಪುಸ್ತಕಗಳನ್ನು ಮಾರಾಟ ಮಾಡುವವರೂ ಇವರೇ. ಜೊತೆಗೆ ಟ್ರ್ಯಾಕ್ ಶೂಟ್‌ಗಳನ್ನು ಖರೀದಿಸಬೇಕು. ಮುಂದೊಂದು ದಿನ ಮನೆಯಲ್ಲಿ ಮಕ್ಕಳಿಗೆ ನೀವು ನೀಡುತ್ತಿರುವ ಆಹಾರ ಪೌಷ್ಟಿಕಾಂಶ ಕೊರತೆಯಿಂದ ತುಂಬಿದೆ ಅದಕ್ಕಾಗಿ ನಾವೇ ಇನ್ನು ಮುಂದೆ ಶಾಲೆಯಲ್ಲಿ ಮಕ್ಕಳಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ಸಂಜೆಯ ಲಘು ಆಹಾರ ನೀಡುತ್ತೇವೆ ಎಂದು ಇದಕ್ಕೂ ಸಾವಿರಾರು ರೂ.ಯನ್ನು ಕೇಳುವಂತಹ ಕಾಲವು ಬರುತ್ತದೆ. ಈಗಾಗಲೇ ಪೋಷಕರು ಆರ್ಥಿಕ ಸಂಕಷ್ಟಗಳಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಶುಲ್ಕವನ್ನು ಕಟ್ಟುವುದರಲ್ಲಿ ಹೈರಾಣಾಗಿರುತ್ತಾರೆ. ಇನ್ನು ಇಂತಹ ಷರತ್ತುಗಳನ್ನು ವಿಧಿಸುವುದರಿಂದ ಮತ್ತಷ್ಟು ಸಾಲಗಾರರಾಗುತ್ತಾರೆ. ರಾಜ್ಯ ಸರಕಾರ ಅನೇಕ ಬಾರಿ ಆದೇಶಗಳನ್ನು ಹೊರಡಿಸುತ್ತಲೇ ಇರುತ್ತದೆ. ಆದರೆ ಶಾಲೆಗಳ ಸಿಬ್ಬಂದಿಯ ದಬ್ಬಾಳಿಕೆಗಳು ಮಾತ್ರ ಹಾಗೆಯೇ ಮುಂದುವರಿದಿದೆ. ಮಾರುಕಟ್ಟೆಯಲ್ಲಿ ನೂರು ರೂ. ಇರುವ ಬಟ್ಟೆಯ ನಾಲ್ಕು ಪಟ್ಟು ಹೆಚ್ಚು ದರವನ್ನು ಶಾಲೆಯವರು ನಿಗದಿಪಡಿಸುತ್ತಾರೆ. ಇದು ಎಲ್ಲ ವಸ್ತುಗಳಿಗೂ ಅನ್ವಯಿಸುತ್ತದೆ. ಹೆಚ್ಚಿನ ಕಡೆಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುವವರೆಲ್ಲರೂ ಶಿಕ್ಷಣ ಸಂಸ್ಥೆಯ ಹತ್ತಿರದ ಸಂಬಂಧಿಕರು ಅಥವಾ ಪಾಲುದಾರರಾಗಿರುತ್ತಾರೆ. ಮಕ್ಕಳಿಗೆ ಬೇಕಿರುವುದು ಶಾಲೆಯವರು ನಿಗದಿಪಡಿಸಿದ ರೀತಿಯ ಸಮವಸ್ತ್ರವೇ ಹೊರತು ಇಂತಹದೇ ಅಂಗಡಿಯ ವಸ್ತುಗಳಲ್ಲ. ಪೋಷಕರು ತಮ್ಮ ಮಕ್ಕಳಿಗೆ ಚಿತ್ರಹಿಂಸೆ ಕೊಡುತ್ತಾರೆ ಎಂದು ಹೆದರಿ, ಪ್ರತಿಭಟಿಸದೆ ಶಾಲೆಯವರ ಎಲ್ಲಾ ಮಾತುಗಳನ್ನು ಕೋಲೆ ಬಸವನಂತೆ ತಲೆಯಲ್ಲಾಡಿಸುತ್ತಾ ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)