varthabharthi


ನಿಮ್ಮ ಅಂಕಣ

‘ಬೇರಿಯಾಟ್ರಿಕ್ ಸರ್ಜರಿ’ಯ ಸುತ್ತಮುತ್ತ

ವಾರ್ತಾ ಭಾರತಿ : 20 May, 2022
ಡಾ. ಮುರಲೀ ಮೋಹನ್,ಚೂಂತಾರು

ಮೊನ್ನೆಯಿಂದ ಹೆಚ್ಚು ಸದ್ದು ಮಾಡುತ್ತಿರುವ ಸುದ್ದಿಯೆಂದರೆ ಬೊಜ್ಜು ಕರಗಿಸಲು ಸರ್ಜರಿ ಮಾಡಿಸಿಕೊಂಡು ಜೀವ ಕಳೆದುಕೊಂಡ ಕಿರುತೆರೆಯ ನಟಿ ಚೇತನಾ ರಾಜ್ (21 ವರ್ಷ)ರ ದಾರುಣ ಸಾವಿನದ್ದು. ಇತ್ತೀಚಿನ ದಿನಗಳಲ್ಲಿ ಯುವ ಜನರು ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುವುದು ಮತ್ತು ಜೀವಕ್ಕೆ ಕುತ್ತು ತರುವ ಸರ್ಜರಿಗಳಿಗೆ ಒಡ್ಡಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಬೊಜ್ಜು ಕರಗಿಸುವ ಬೇರಿಯಾಟ್ರಿಕ್ ಸರ್ಜರಿ ಹೊಸತೇನಲ್ಲ. ಸಾಕಷ್ಟು ಪೂರ್ವ ತಯಾರಿ, ಪೂರ್ವ ಸಿದ್ಧತೆ ಮಾಡಿಕೊಂಡು ರೋಗಿಯ ದೇಹದ ಗಾತ್ರ, ತೂಕ ಚರಿತ್ರೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಮಾಡಬೇಕಾದ ವಿಶೇಷ ಸರ್ಜರಿ ಇದಾಗಿರುತ್ತದೆ. ಮಾರಣಾಂತಿಕ ತೊಂದರೆಗಳಾದ ಪಲ್ಮನರಿ ಟ್ರೊಂಬೋಸಿಸ್ ಎಂಬ ಕಾರಣದಿಂದ ಸುಮಾರು 2 ರಿಂದ 3 ಶೇಕಡಾ ಮಂದಿ ಸರ್ಜರಿ ಸಮಯದಲ್ಲಿ ಅಥವಾ ಸರ್ಜರಿ ಮುಗಿದ ಬಳಿಕ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಅಂಕಿ- ಅಂಶಗಳಿಂದ ತಿಳಿದು ಬಂದಿದೆ. ಈ ತೊಂದರೆ ವಿರಳವಾದರೂ, ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು, ಸರ್ವಸಜ್ಜಿತ ಆಸ್ಪತ್ರೆಗಳಲ್ಲಿ ಬೇರಿಯಾಟ್ರಿಕ್ ಸರ್ಜರಿ ಮಾಡುವುದು ಸೂಕ್ತ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ಮುಂಜಾಗರೂಕತೆ ವಹಿಸದ ಹೊರರೋಗಿ ವಿಭಾಗದಲ್ಲಿ ಈ ರೀತಿಯ ಅಪಾಯಕಾರಿ ಸರ್ಜರಿ ಮಾಡುವುದು ಸರಿಯಲ್ಲ ಎಂಬುದು ತಜ್ಞ ವೈದ್ಯರ ಅಭಿಮತ. ಅತೀ ಹೆಚ್ಚು ಬೊಜ್ಜು ಇರುವ ರೋಗಿಗಳಲ್ಲಿ ಮತ್ತು ವಯಸ್ಸು ಹೆಚ್ಚಾದಂತೆ ಹಾಗೂ ಮೊದಲೇ ರಕ್ತನಾಳಕ್ಕೆ ಸಂಬಂಧಿಸಿದ ರೋಗದಿಂದ ಬಳಲುತ್ತಿರುವವರಲ್ಲಿ ಈ ರೀತಿಯ ಪಲ್ಮನರಿ ಟ್ರೊಂಬೋಸಿಸ್ ಎಂಬ ಮಾರಣಾಂತಿಕ ತೊಂದರೆ ಜಾಸ್ತಿ ಕಂಡು ಬರುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಇಂತಹ ರೋಗಿಗಳಲ್ಲಿ ಅತೀ ಹೆಚ್ಚು ಮುಂಜಾಗರೂಕತೆ ವಹಿಸಬೇಕಾದ ಅನಿವಾರ್ಯ ಇರುತ್ತದೆ.

‘‘ಬದುಕುವುದಕ್ಕಾಗಿ ತಿನ್ನಿ, ತಿನ್ನಲಿಕ್ಕಾಗಿ ಬದುಕಬೇಡಿ’’ ಎಂದು ನಮ್ಮ ಹಿರಿಯರು ಯಾವತ್ತೂ ಹೇಳುತ್ತಿದ್ದ ಕಿವಿಮಾತು. ಆದರೆ ನಮ್ಮ ಈಗಿನ ಯುವಜನತೆ ತಿನ್ನುವ ಪರಿ ನೋಡಿದರೆ ನಾಳೆ ಬದುಕುವುದೇ ಇಲ್ಲ ಎಂಬ ಭಾವನೆ ಉಂಟಾಗುತ್ತದೆ. ನಮ್ಮ ಇಂದಿನ ಹೆಚ್ಚಿನ ರೋಗಗಳಿಗೆ ನಮ್ಮ ಆಹಾರವೇ ಮೂಲ ಕಾರಣ ಎಂದರೂ ತಪ್ಪಲ್ಲ. ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ತಿನ್ನುತ್ತಿದ್ದ ಮೂಲಾಹಾರಗಳಾದ ಗಡ್ಡೆಗೆಣಸು, ಹಣ್ಣು, ತರಕಾರಿಗಳು ಈಗ ಯಾರಿಗೂ ಬೇಡ. ಈಗಿನ ಯುವಜನತೆಗೆ ಬೇಕಿರುವುದು ಹೆಚ್ಚು ಕ್ಯಾಲರಿ ಇರುವ, ಬಣ್ಣ, ರಾಸಾಯನಿಕ ಮಿಶ್ರಿತ ಬಾಯಿಗೆ ರುಚಿ ನೀಡುವ ವಿಷಕಾರಕ ಸಿದ್ಧ ಆಹಾರ. ಈ ಸಿದ್ಧ ಆಹಾರಗಳು ಮತ್ತು ಕರಿದ ತಿಂಡಿಗಳು ನಮ್ಮ ಆರೋಗ್ಯಕ್ಕೆ ಮಾರಕ ಎಂದು ತಿಳಿದಿದ್ದರೂ, ಜನ ಬಯಸುವುದು ಇದನ್ನೇ ಎಂಬುದು ಜೀರ್ಣಸಿಕೊಳ್ಳಲೇ ಬೇಕಾದ ಸತ್ಯ. ಈ ರೀತಿಯ ಹೆಚ್ಚು ಕ್ಯಾಲರಿ ಇರುವ ಸಿದ್ಧ ಆಹಾರವನ್ನು ಹೆಚ್ಚು ಹೆಚ್ಚು ಸೇವಿಸಿದಾಗ ದೇಹದಲ್ಲಿ ಅನಗತ್ಯವಾಗಿ ಹೆಚ್ಚಾಗಿ ಸೇವಿಸಲ್ಪಟ್ಟ ಕ್ಯಾಲರಿ ಬೊಜ್ಜಿನ ರೂಪದಲ್ಲಿ ಎಲ್ಲೆಂದರಲ್ಲಿ ಶೇಖರಣೆಯಾಗುತ್ತದೆ. ಹೊಟ್ಟೆ, ಸೊಂಟದ ಸುತ್ತ, ಕುತ್ತಿಗೆ, ಭುಜದ ಸುತ್ತ ಹಾಗೂ ರಕ್ತನಾಳಗಳು ಹೀಗೆ ಎಲ್ಲೆಂದರಲ್ಲಿ ಸೇರಿಕೊಂಡು ಹಲವಾರು ಅವಾಂತರಗಳಿಗೆ ಸದ್ದಿಲ್ಲದೆ ಮುನ್ನುಡಿ ಬರೆಯುತ್ತದೆ. ವ್ಯಾಯಾಮವಿಲ್ಲದ ಜೀವನ ಶೈಲಿ, ಸದಾ ಒತ್ತಡದ ಕೆಲಸ, ಎರ್ರಾಬಿರ್ರಿಯಾಗಿ ಆಹಾರ ಸೇವನೆ, ವಾರಾಂತ್ಯದ ಮೋಜಿನ ಪಾರ್ಟಿಗಳು ಇವೆಲ್ಲಾ ಮೇಳೈಸಿ ದೇಹ ರೋಗಗಳ ಹಂದರವಾಗಿ ಮನುಷ್ಯ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ, ಖಿನ್ನತೆ ಮುಂತಾದ ಜೀವನ ಶೈಲಿಗೆ ಸಂಬಂಧಿಸಿದ ರೋಗಗಳಿಗೆ ತುತ್ತಾಗುವುದು ಅರಗಿಸಿಕೊಳ್ಳಲೇ ಬೇಕಾದ ಕಟುಸತ್ಯ. ಈ ರೀತಿ ಅತಿಯಾಗಿ ಶೇಖರಣೆಗೊಂಡ ಬೊಜ್ಜನ್ನು (ಕೊಬ್ಬನ್ನು) ಕರಗಿಸಲು ಹುಟ್ಟಿಕೊಂಡ ಬ್ರಹ್ಮಾಸ್ತ್ರವೇ ಬೇರಿಯಾಟ್ರಿಕ್ ಸರ್ಜರಿ ಎಂಬ ನವ ನವೀನ ಶಸ್ತ್ರಚಿಕಿತ್ಸೆ.

ಬೇರಿಯಾಟ್ರಿಕ್ ಸರ್ಜರಿ ಎಂದರೇನು?

ನಾವು ಸೇವಿಸಿದ ಊಟ ಅನ್ನನಾಳದ ಮುಖಾಂತರ ಸಾಗಿ, ಹೊಟ್ಟೆಯನ್ನು ಸೇರುತ್ತದೆ. ಹೊಟ್ಟೆಯಲ್ಲಿ ಸ್ರವಿಸಲ್ಪಡುವ ದ್ರವದ ಜೊತೆ ಈ ಆಹಾರ ಬೆರೆಯುತ್ತದೆ. ಸ್ನಾಯು ಖಂಡಗಳಿಂದ ಕೂಡಿದ ಈ ಹೊಟ್ಟೆಯ ಭಾಗದಲ್ಲಿ ನಾವು ತಿಂದ ಆಹಾರ ಸುಮಾರು 3 ರಿಂದ 4 ತಾಸು ಜೀರ್ಣಕ್ರಿಯೆಗೆ ಒಳಪಡುತ್ತದೆ. ನಾವು ತಿಂದ ಆಹಾರದಿಂದ ಹೊಟ್ಟೆಯ ಸ್ನಾಯುಗಳು ಹಿಗ್ಗುತ್ತವೆ ಮತ್ತು ಆ ಮೂಲಕ ಹಿಗ್ಗಿದ ಹೊಟ್ಟೆಯ ಮೂಲಕ ನರವ್ಯೆಹದ ಮುಖಾಂತರ ಮೆದುಳಿಗೆ ಸಂಕೇತವು ರವಾನೆಯಾಗುತ್ತದೆ. ನಾವು ಹೆಚ್ಚು ಆಹಾರ ತಿಂದಾಗ ಹೊಟ್ಟೆ ಹೆಚ್ಚು ಹಿಗ್ಗುವುದು ಮತ್ತು ಹೊಟ್ಟೆ ತುಂಬಿದ ಸಂತೃಪ್ತಿ ಉಂಟಾಗುತ್ತದೆ. ಹೊಟ್ಟೆ ತುಂಬಿದ ಕೂಡಲೇ ಮೆದುಳಿನಿಂದ ಇನ್ನು ತಿನ್ನುವುದು ಬೇಡ ಎಂಬ ಪ್ರತಿ ಸಂದೇಶವನ್ನು ಮೆದುಳು ನೀಡುತ್ತದೆ. ಆಗ ತಿನ್ನುವುದು ಬೇಡ ಎಂದು ಮನಸ್ಸು ಹೇಳುತ್ತದೆ ಮತ್ತು ದೇಹಕ್ಕೆ ಊಟ ಹಿಡಿಸುವುದಿಲ್ಲ. ಇದೇ ಪ್ರಕ್ರಿಯೆಯನ್ನು ಬಳಸಿ, ಹೆಚ್ಚು ಬೊಜ್ಜು ಇರುವ ವ್ಯಕ್ತಿಗಳಿಗೆ ಸ್ವಲ್ಪತಿಂದರೂ ಸಾಕು ಎಂದೆನಿಸುವಂತೆ ಮಾಡುವ ವಿಧಾನವೇ ಬೇರಿಯಾಟ್ರಿಕ್ ಸರ್ಜರಿ.

ಬೇರಿಯಾಟ್ರಿಕ್ ಸರ್ಜರಿಯಲ್ಲಿ ಜಠರ ಅಥವಾ ಹೊಟ್ಟೆಯ ಉದ್ದವನ್ನು ಶಸ್ತ್ರಚಿಕಿತ್ಸೆಯ ಮುಖಾಂತರ ಕಡಿಮೆ ಮಾಡುತ್ತಾರೆ. ಹೊಟ್ಟೆಯ ಹೆಚ್ಚಿನ ಭಾಗವನ್ನು ಹೊಲಿಗೆ ಮುಖಾಂತರ ಅಥವಾ ಸ್ಟೇಪಲ್‌ಗಳ ಮುಖಾಂತರ ಮುಚ್ಚಿ ಹಾಕಿ, ಆ ಮೂಲಕ ಹೊಟ್ಟೆಯಲ್ಲಿ ಸೇರಿಕೊಳ್ಳುವ ಆಹಾರದ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುತ್ತಾರೆ. ಕೆಲವೊಮ್ಮೆ ಜಠರದ ಒಳಗೆ ಬಲೂನನ್ನು ಇಟ್ಟು, ಅದನ್ನು ಗಾಳಿಯಿಂದ ಹಿಗ್ಗಿಸಿ ಜಠರದಲ್ಲಿ ಹಿಡಿಯುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡಲಾಗುತ್ತದೆ. ತೂಕ ಇಳಿದ ಬಳಿಕ ಈ ಬಲೂನನ್ನು ಕುಗ್ಗಿಸಿ ಜಠರದಿಂದ ತೆಗೆಯಲಾಗುತ್ತದೆ. ಬೇರಿಯಾಟ್ರಿಕ್ ಸರ್ಜರಿ ಮಾಡಿದ ಬಳಿಕ, ರೋಗಿ ಎಂದಿನಂತೆ ಆಹಾರ ಸೇವಿಸಲು ಆರಂಭಿಸಿದಾಗ, ಬಹಳ ಬೇಗ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ ಮತ್ತು ಊಟ ಮಾಡುವುದು ಬೇಡ ಎಂದೆನಿಸುತ್ತದೆ. ಈ ಮೂಲಕ ರೋಗಿ ಸೇವಿಸುವ ಆಹಾರದ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ರೋಗಿ ಸೇವಿಸುವ ಕ್ಯಾಲರಿಗಳ ಅಂಶವೂ ಗಣನೀಯವಾಗಿ ಕಡಿಮೆಯಾಗುತ್ತದೆ. ಹೀಗೆ ಕ್ಯಾಲರಿಗಳ ಅಂಶ ಕಡಿಮೆಯಾದಾಗ ದೇಹದಲ್ಲಿ ಬೊಜ್ಜು ಶೇಖರಣೆಯಾಗಲು ಆಸ್ಪದವೇ ಇರುವುದಿಲ್ಲ. ಮತ್ತು ಕ್ಯಾಲರಿಗಳ ಬಳಕೆ ಕಡಿಮೆಯಾದಾಗ, ದೇಹದಲ್ಲಿ ಮೊದಲು ಶೇಖರಣೆಗೊಂಡ ಕೊಬ್ಬು ಕರಗಿಸಲ್ಪಟ್ಟು ದೇಹಕ್ಕೆ ಅಗತ್ಯವಾದ ಶಕ್ತಿ ದೊರಕುತ್ತದೆ ಮತ್ತು ಸ್ಥೂಲಕಾಯ ಕರಗಲಾರಂಭಿಸುತ್ತದೆ. ಒಂದೆರಡು ತಿಂಗಳುಗಳಲ್ಲಿ ದೇಹದ ತೂಕ ಇಳಿದು ವ್ಯಕ್ತಿಯು ಗುರುತಿಸಲಾರದಷ್ಟು ಬದಲಾಗುತ್ತಾನೆ.

ಕೊನೆ ಮಾತು ದೇಹದಲ್ಲಿ ಅತಿಯಾಗಿ ಶೇಖರಣೆಗೊಂಡ ಬೊಜ್ಜನ್ನು ಕರಗಿಸಲು ಅತ್ಯಂತ ಸುರಕ್ಷಿತವಾದ ಉಪಾಯವೆಂದರೆ ನಿಯಮಿತವಾಗಿ ದೈಹಿಕ ವ್ಯಾಯಾಮ ಮತ್ತು ಆಹಾರದಲ್ಲಿನ ಕ್ಯಾಲರಿಗಳನ್ನು ನಿಯಂತ್ರಿಸುವುದು. ನಿಯಮಿತವಾದ ದೈಹಿಕ ವ್ಯಾಯಾಮಗಳಾದ ಬಿರುಸು ನಡಿಗೆ, ಸೈಕ್ಲಿಂಗ್, ಸ್ವಿಮ್ಮಿಂಗ್, ವಾಕಿಂಗ್ ಮುಂತಾದವುಗಳು ಅತ್ಯಂತ ಸೂಕ್ತ ಮತ್ತು ಸುರಕ್ಷಿತವಾದ ಬೊಜ್ಜು ಕರಗಿಸುವ ವಿಧಾನ. ಅಲ್ಲದೆ ಹೆಚ್ಚು ಕ್ಯಾಲರಿ ಇರುವ ಸಿದ್ಧ ಆಹಾರ ಮತ್ತು ಕರಿದ ತಿಂಡಿಗಳನ್ನು ತಿನ್ನುವುದಕ್ಕೆ ತಿಲಾಂಜಲಿ ಇಟ್ಟು ಕಡಿಮೆ ಕ್ಯಾಲರಿ ಮತ್ತು ಹೆಚ್ಚು ನಾರುಯುಕ್ತ ಆಹಾರಗಳಾದ ಹಸಿ ತರಕಾರಿ, ಹಣ್ಣು, ಸೊಪ್ಪು, ಕಾಯಿ ಪಲ್ಲೆಗಳನ್ನು ಬಳಸಬೇಕು. ನಮ್ಮ ದೇಹಕ್ಕೆ ಬೇಕಾದ ಕ್ಯಾಲರಿಗಳಿಗಿಂತ ಜಾಸ್ತಿ ಆಹಾರ ಸೇವನೆ ಮಾಡಲೇಬಾರದು. ಅಗತ್ಯಕ್ಕಿಂತ ಹೆಚ್ಚು ಸೇವನೆ ಮಾಡಿದಲ್ಲಿ ಹೆಚ್ಚಾದ ಕ್ಯಾಲರಿ ಕೊಬ್ಬಿನ ರೂಪದಲ್ಲಿ ಶೇಖರಣೆಯಾಗಿ ಹತ್ತು ಹಲವಾರು ತೊಂದರೆಗಳಿಗೆ ಕಾರಣವಾಗುತ್ತದೆ.

ಬೇರಿಯಾಟ್ರಿಕ್ ಸರ್ಜರಿ ಯಾವ ರೋಗಿಗೆ ಯಾವಾಗ ಅಗತ್ಯವಿದೆ ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ ಮತ್ತು ನುರಿತ ವೈದ್ಯರಿಂದಲೇ ಈ ರೀತಿಯ ಶಸ್ತ್ರಚಿಕಿತ್ಸೆ ಮಾಡಿಸತಕ್ಕದ್ದು. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಸರ್ಜರಿಯಿಂದ ಆಗಬಹುದಾದ ತೊಂದರೆಗಳು

* ಹಸಿವಿಲ್ಲದಿರುವುದು, ಎದೆ ಉರಿ ಮತ್ತು ಹೊಟ್ಟೆ ನೋವು ಸಾಮಾನ್ಯವಾಗಿ ಕಂಡುಬರಬಹುದು.

* ಶೇ. 1-2 ರೋಗಿಗಳಲ್ಲಿ ಪಲ್ಮನೋರಿ ಎಂಬೋಲಿಸಂ ಎಂಬ ಶ್ವಾಸಕೋಶಗಳ ಆಘಾತ ಉಂಟಾಗುವ ಸಾಧ್ಯತೆ ಇರುತ್ತದೆ.

* ಶಸ್ತ್ರಚಿಕಿತ್ಸೆ ಬಳಿಕ ಪಿತ್ತಕೋಶದಲ್ಲಿ ಕಲ್ಲುಗಳು ಬೆಳೆಯುವ ಸಾಧ್ಯತೆ ಶೇಕಡಾ 30ರಷ್ಟು ಇರುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

* ಅತಿಯಾದ ರಕ್ತಸ್ರಾವ ಮತ್ತು ಕರುಳಿನ ಸೋಂಕು ಉಂಟಾಗುವ ಸಾಧ್ಯತೆ ಇರುವುದರಿಂದ ಶಸ್ತ್ರಚಿಕಿತ್ಸೆ ಬಳಿಕ ರೋಗಿಯನ್ನು ಹಲವು ದಿನಗಳ ಕಾಲ ಒಳರೋಗಿಯಾಗಿ ದಾಖಲಿಸಿ ತೀವ್ರ ನಿಗಾ ವಹಿಸಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)