varthabharthi


ಅಂತಾರಾಷ್ಟ್ರೀಯ

ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ ಕರ್ನಾಟಕ ಮೂಲದ ಸಂಸದ ಚಂದ್ರ ಆರ್ಯ

ವಾರ್ತಾ ಭಾರತಿ : 20 May, 2022

Photo: Twitter/@AryaCanada

ಹೊಸದಿಲ್ಲಿ,ಮೇ 20: ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಗುರುವಾರ ಅಲ್ಲಿನ ಸಂಸತ್ತಿನಲ್ಲಿ ತನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡುವ ಮೂಲಕ ಇತಿಹಾಸವೊಂದನ್ನು ಸೃಷ್ಟಿಸಿದ್ದಾರೆ. ಭಾರತದ ಹೊರಗೆ ವಿಶ್ವದ ಯಾವುದೇ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ಅವರು ಹೇಳಿದ್ದಾರೆ. ಆರ್ಯ ಭಾಷಣದ ವೀಡಿಯೊ ವೈರಲ್ ಆಗಿದೆ.

ಕೆನಡಾದ ಕೆಳಮನೆ ಹೌಸ್ ಆಫ್ ಕಾಮನ್ಸ್‌ನಲ್ಲಿ  ಒಂಟಾರಿಯೊದ ನೇಪಿಯನ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಆರ್ಯ ತನ್ನ ಭಾಷಣದ ವೀಡಿಯೊವನ್ನು ಟ್ವೀಟಿಸಿದ್ದು,‘ನಾನು ಕೆನಡಾ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿದ್ದೇನೆ. ಈ ಸುಂದರ ಭಾಷೆಯು ಸುದೀರ್ಘ ಇತಿಹಾಸವನ್ನು ಹೊಂದಿದ್ದು, ಸುಮಾರು ಐದು ಕೋಟಿ ಜನರು ಅದನ್ನು ಮಾತನಾಡುತ್ತಾರೆ. ಭಾರತದ ಹೊರಗೆ ವಿಶ್ವದ ಯಾವುದೇ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿರುವುದು ಇದೇ ಮೊದಲ ಬಾರಿಯಾಗಿದೆ’ ಎಂದು ಹೇಳಿದ್ದಾರೆ.

‘ಸಭಾಪತಿಗಳೇ,ಕೆನಡಾ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ದ್ವಾರಾಳು ಗ್ರಾಮದ ವ್ಯಕ್ತಿಯೋರ್ವ ಕೆನಡಾದ ಸಂಸತ್ತಿಗೆ ಆಯ್ಕೆಯಾಗಿ ಕನ್ನಡದಲ್ಲಿ ಮಾತನಾಡುತ್ತಿರುವುದು ಐದು ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ. ಕೆನಡಾದಲ್ಲಿಯ ಕನ್ನಡಿಗರು 2018ರಲ್ಲಿ ಈ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದರು. ಇದೀಗ ನಾನು ಕನ್ನಡದಲ್ಲಿ ಮಾತನಾಡುತ್ತಿದ್ದೇನೆ. ರಾಷ್ಟ್ರಕವಿ ಕುವೆಂಪು ಬರೆದಿರುವ ಮತ್ತು ನಟ ಸಾರ್ವಭೌಮ ಡಾ.ರಾಜಕುಮಾರ್ ಅವರು ಹಾಡಿರುವ ಭಾವಗೀತೆಯ ಕೆಲವು ಪದಗಳೊಂದಿಗೆ ನನ್ನ ಹೇಳಿಕೆಯನ್ನು ಮುಗಿಸುತ್ತಿದ್ದೇನೆ. ಎಲ್ಲಾದರೂ ಇರು...ಎಂತಾದರೂ ಇರು...ಎಂದೆಂದಿಗೂ ನೀ ಕನ್ನಡವಾಗಿರು. ಧನ್ಯವಾದಗಳು ಸಭಾಪತಿಗಳೇ ಎಂದು ಆರ್ಯ ತನ್ನ ಭಾಷಣವನ್ನು ಮುಗಿಸಿದಾಗ ಇತರ ಸದಸ್ಯರು ಭಾರೀ ಕರತಾಡನದೊಂದಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಆರ್ಯ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಲಿಬರಲ್ ಪಾರ್ಟಿ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ಕೆನಡಾ ಸಂಸತ್ತಿಗೆ ಆಯ್ಕೆಯಾಗಿದ್ದರು. ದ್ವಾರಾಳು ಗ್ರಾಮದ ಕೆ.ಗೋವಿಂದಯ್ಯ ಮತ್ತು ಜಯಂತಿ ದಂಪತಿಯ ಪುತ್ರರಾಗಿರುವ ಆರ್ಯ ರಾಮನಗರದ ಗೌಸಿಯಾ ಕಾಲೇಜಿನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಬಳಿಕ ಧಾರವಾಡದಲ್ಲಿ ಎಂಬಿಎ ಪೂರೈಸಿದ್ದರು. ಅವರು ಉನ್ನತ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.ಆರ್ಯ ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡಿರುವುದಕ್ಕೆ ನೆಟ್ಟಿಗರಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ.

ಒಟ್ಟಾವಾ ಕಮ್ಯುನಿಟಿ ಇಮಿಗ್ರಂಟ್ಸ್ ಸರ್ವಿಸಸ್ ಆರ್ಗನೈಜೇಷನ್‌ನ ಉಪಾಧ್ಯಕ್ಷರಾಗಿದ್ದ ಆರ್ಯ ಹಾಲಿ ಇಂಡೋ-ಕೆನಡಾ ಒಟ್ಟಾವಾ ಬಿಸಿನೆಸ್ ಚೇಂಬರ್‌ನ  ಅಧ್ಯಕ್ಷರಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)