ಎರಡು ವರ್ಷಗಳ ಬಳಿಕ ಎಸ್ಪಿ ನಾಯಕ ಅಝಂ ಖಾನ್ ಜೈಲಿನಿಂದ ಬಿಡುಗಡೆ
AZAM KHAN| PHOTO:PTI
ಸೀತಾಪುರ (ಉ.ಪ್ರ),ಮೇ 20: ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಝಂ ಖಾನ್ ಅವರು ಶುಕ್ರವಾರ ಬೆಳಿಗ್ಗೆ ಸೀತಾಪುರ ಜೈಲಿನಿಂದ ಬಿಡುಗಡೆಗೊಂಡರು. ಸರ್ವೋಚ್ಚ ನ್ಯಾಯಾಲಯವು ಗುರುವಾರ ವಂಚನೆ ಪ್ರಕರಣವೊಂದರಲ್ಲಿ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಖಾನ್ ಪುತ್ರ ಹಾಗೂ ಶಾಸಕ ಅಬ್ದುಲ್ಲಾ ಅಝಂ, ಪ್ರಗತಿಶೀಲ ಸಮಾಜವಾದಿ ಪಾರ್ಟಿ (ಲೋಹಿಯಾ) ನಾಯಕ ಶಿವಪಾಲ್ ಸಿಂಗ್ ಯಾದವ್ ಹಾಗೂ ಭಾರೀ ಸಂಖ್ಯೆಯ ಬೆಂಬಲಿಗರು ಜೈಲಿನಿಂದ ಬಿಡುಗಡೆಗೊಂಡ ಹಿರಿಯ ಎಸ್ಪಿ ನಾಯಕನನ್ನು ಬರಮಾಡಿಕೊಂಡರು. ಬಿಡುಗಡೆಯ ಬಳಿಕ ಖಾನ್ ತನ್ನ ಹುಟ್ಟೂರು ರಾಮಪುರಕ್ಕೆ ತೆರಳಿದರು. ಗುರುವಾರ ರಾತ್ರಿ 11 ಗಂಟೆಯ ಸುಮಾರಿಗೆ ಸ್ಥಳೀಯ ಎಂಪಿ-ಎಂಎಲ್ಎ ನ್ಯಾಯಾಲಯದ ಬಿಡುಗಡೆ ಆದೇಶವು ತಮಗೆ ತಲುಪಿತ್ತು. ಎಲ್ಲ ಪ್ರಕ್ರಿಯೆಗಳ ಬಳಿಕ ಇಂದು ಬೆಳಿಗ್ಗೆ ಎಂಟು ಗಂಟೆಗೆ ಅಜಮ್ ಖಾನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಸೀತಾಪುರ ಜೈಲಿನ ಜೈಲರ್ ಆರ್.ಎಸ್.ಯಾದವ್ ತಿಳಿಸಿದರು.ಭೂ ಕಬಳಿಕೆ ಸೇರಿದಂತೆ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಖಾನ್ ಕಳೆದ 27 ತಿಂಗಳುಗಳಿಂದಲೂ ಜೈಲುವಾಸ ಅನುಭವಿಸುತ್ತಿದ್ದರು.