varthabharthi


ಸಂಪಾದಕೀಯ

ಇದು ಕೋಮು ಧ್ರುವೀಕರಣದ ಮಸಲತ್ತು

ವಾರ್ತಾ ಭಾರತಿ : 21 May, 2022

ಸಂಘ ಪರಿವಾರದ ಒತ್ತಡಕ್ಕೆ ಮಣಿದು ಕಾರ್ಯ ನಿರ್ವಹಿಸುತ್ತಿರುವ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಇತ್ತೀಚೆಗೆ ಮತಾಂತರ ನಿಷೇಧದ ಉದ್ದೇಶದಿಂದ ಆತುರದಲ್ಲಿ ಸುಗ್ರೀವಾಜ್ಞೆಯೊಂದನ್ನು ತಂದಿದೆ. ಅದಕ್ಕೆ ‘ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ಮಸೂದೆ-2021’ ಎಂದು ಹೆಸರು. ಈ ಮಸೂದೆ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲೇ ವಿಧಾನ ಸಭೆಯ ಅಂಗೀಕಾರ ಪಡೆದಿತ್ತು. ಆದರೆ ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತವಿಲ್ಲ. ಹೀಗಾಗಿ ಆ ಸದನದ ಒಪ್ಪಿಗೆ ಪಡೆಯಲು ಸಾಧ್ಯವಾಗಿರಲಿಲ್ಲ. ಹಾಗೆಂದು ವಿಧಾನ ಮಂಡಲ ಅಧಿವೇಶನ ನಡೆಯದಿರುವ ಸಂದರ್ಭದಲ್ಲಿ ತರಾತುರಿಯಲ್ಲಿ ಈ ಸುಗ್ರೀವಾಜ್ಞೆ ಹೊರಡಿಸುವ ಅಗತ್ಯವೇನಿತ್ತು? ಅತ್ಯಂತ ತುರ್ತು ಸಂದರ್ಭಗಳಲ್ಲಿ ಮಂತ್ರಿ ಮಂಡಲದ ಶಿಫಾರಸಿನ ಅನ್ವಯ ಸುಗ್ರೀವಾಜ್ಞೆಯನ್ನು ಹೊರಡಿಸುವ ಅಧಿಕಾರವನ್ನು ಸಂವಿಧಾನದ 123ನೇ ವಿಧಿ ರಾಜ್ಯಪಾಲರಿಗೆ ನೀಡಿದೆ. ಇಂತಹ ಅಪರೂಪದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮತಾಂತರ ನಿಷೇಧಕ್ಕಾಗಿ ಈ ಸುಗ್ರೀವಾಜ್ಞೆ ತರುವ ಅನಿವಾರ್ಯವೇನಿತ್ತು. ಅಂತಹ ತುರ್ತುಪರಿಸ್ಥಿತಿ ಸೃಷ್ಟಿಯಾಗಿತ್ತೇ? ವಾಸ್ತವವಾಗಿ ಬಲವಂತದ ಮತಾಂತರದ ಯಾವ ಪ್ರಕರಣಗಳೂ ದಾಖಲಾಗಿಲ್ಲ. ಈ ಮಸೂದೆ ತರಲೇಬೇಕೆಂದಿದ್ದರೆ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದವರೆಗೆ ಕಾಯಬಹುದಾಗಿತ್ತು.

ಕಳೆದ ವರ್ಷ ಜುಲೈ ತಿಂಗಳಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಂಘ ಪರಿವಾರದ ಜನ ವಿಭಜಕ ಕೋಮು ಸಿದ್ಧಾಂತ ಮುಂಚೂಣಿಗೆ ಬಂದಿದೆ.ಮತಾಂತರ ನಿಷೇಧ ಕುರಿತ ಈ ಸುಗ್ರೀವಾಜ್ಞೆ ಕೂಡ ಅದರ ಮುಂದುವರಿದ ಭಾಗವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಹಿಜಾಬ್‌ನಿಂದ ಹಿಡಿದು ಆಝಾನ್‌ವರೆಗೆ ಈ ಸರಕಾರ ನಡೆದುಕೊಂಡು ಬಂದ ರೀತಿ ಅತ್ಯಂತ ವಿವಾದಾಸ್ಪದವಾದುದು. ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಂಡು ಮತ್ತೆ ಅಧಿಕಾರಕ್ಕೆ ಬರುವುದು ಸಂಘ ಪರಿವಾರ ನಿಯಂತ್ರಿತ ಬಿಜೆಪಿಯ ಉದ್ದೇಶವಾಗಿದೆ. ಅದಕ್ಕಾಗಿ ಕರ್ನಾಟಕದ ಜನರನ್ನು ಕೋಮು ಆಧಾರದಲ್ಲಿ ವಿಭಜಿಸಲು ಹೊರಟಿದೆ.

ಭಾರತದ ಪ್ರಜೆ ತನಗೆ ಇಷ್ಟವಾದ ಧರ್ಮವನ್ನು ಸೇರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಸಂವಿಧಾನದ 25ನೇ ವಿಧಿ ನೀಡಿದೆ. ಯಾವುದೇ ವ್ಯಕ್ತಿ ಕಾನೂನಿಗೆ ತೊಂದರೆಯಾಗದಂತೆ ತನಗೆ ಬೇಕಾದ ಧರ್ಮವನ್ನು ಅನುಸರಿಸುವ ಮತ್ತು ಅದರ ಬಗ್ಗೆ ಪ್ರಚಾರ ಮಾಡುವ ಅವಕಾಶವನ್ನು ಸಂವಿಧಾನ ನೀಡಿದೆ. ಆದರೆ ಕರ್ನಾಟಕ ಸರಕಾರ ತಂದಿರುವ ಸುಗ್ರೀವಾಜ್ಞೆ ಈ ಸಂವಿಧಾನಾತ್ಮಕ ಹಕ್ಕಿಗೆ ವ್ಯತಿರಿಕ್ತವಾಗಿದೆ. ಸ್ವಯಂ ಪ್ರೇರಣೆಯಿಂದ ಮತಾಂತರವಾಗುವವರಿಗೆ ವಿಶೇಷವಾಗಿ ಕ್ರೈಸ್ತ ಧರ್ಮೀಯರಿಗೆ ತೊಂದರೆ ಕೊಡುವುದು ಇದರ ಉದ್ದೇಶವಾಗಿದೆ ಎಂಬ ಭಾವನೆ ಸಹಜವಾಗಿ ಮೂಡುತ್ತದೆ.

   ಈ ಮತಾಂತರ ನಿಷೇಧ ಸುಗ್ರೀವಾಜ್ಞೆ ಪ್ರಕಾರ ಯಾವುದೇ ವ್ಯಕ್ತಿ ಮತಾಂತರವಾಗಲು ಬಯಸಿದರೆ ಕನಿಷ್ಠ ಮೂವತ್ತು ದಿನಗಳ ಮೊದಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಎದುರು ಘೋಷಣಾ ಪತ್ರ ಸಲ್ಲಿಸಬೇಕಂತೆ. ಇದು ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಅಂಶವಾಗಿದೆ. ಇಂತಹ ಪ್ರಕರಣಗಳಲ್ಲಿ ಸಂಘ ಪರಿವಾರದ ಸಂಘಟನೆಗಳಿಗೆ ಮುಂಚಿತವಾಗಿ ತಿಳಿದರೆ ಏನಾಗುತ್ತದೆ ಎಂಬುದನ್ನು ಊಹಿಸಬೇಕಾಗಿಲ್ಲ. ರಾಜ್ಯದ ಅನೇಕ ಕಡೆ ಮತಾಂತರ ತಡೆಯುವ ಹೆಸರಿನಲ್ಲಿ ಅದು ನಡೆಸಿದ ಪುಂಡಾಟಿಕೆ ಎಲ್ಲರಿಗೂ ಗೊತ್ತಿದೆ.

ಜನಸಾಮಾನ್ಯರನ್ನು ಬಾಧಿಸುತ್ತಿರುವ ತುರ್ತು ಸಮಸ್ಯೆಗಳ ನಿವಾರಣೆಗಾಗಿ ಸರಕಾರ ಸುಗ್ರೀವಾಜ್ಞೆ ತಂದರೆ ಅಭ್ಯಂತರವಿಲ್ಲ. ಆದರೆ ಇಷ್ಟು ತರಾತುರಿಯಲ್ಲಿ ಮತಾಂತರ ನಿಷೇಧ ಮಸೂದೆಗಾಗಿ ಸುಗ್ರೀವಾಜ್ಞೆ ಹೊರಡಿಸುವ ಅಗತ್ಯವೇನಿತ್ತು? ಇದರಿಂದ ನಿರುದ್ಯೋಗ ನಿವಾರಣೆಯಾಗುವುದೇ? ಕೋವಿಡ್‌ನಿಂದ ಸಾವಿಗೀಡಾದವರ ಜೀವ ಇದರಿಂದ ಮರಳಿ ಬರುವುದೇ? ಈ ಸರಕಾರವನ್ನು ಯಾರು ನಿಯಂತ್ರಿಸುತ್ತಿದ್ದಾರೆ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಂವಿಧಾನೇತರ ಶಕ್ತಿಗಳ ಕೈಗೊಂಬೆ ಆಗಿದ್ದಾರೆಯೇ? ಇಂತಹ ಪ್ರಶ್ನೆಗಳು ರಾಜ್ಯದ ಪ್ರಜೆಗಳ ಮನಸ್ಸಿನಲ್ಲಿ ಸಹಜವಾಗಿ ಸುಳಿಯುತ್ತಿವೆ.

 ರಾಜ್ಯದಲ್ಲಿ ಮತಾಂತರ ವ್ಯಾಪಕವಾಗಿ ನಡೆಯುತ್ತಿದೆ ಎಂಬ ಕೋಮುವಾದಿ ಸಂಘಟನೆಗಳ ಆರೋಪದಲ್ಲಿ ಹುರುಳಿಲ್ಲ. ಕೆಲವು ತಿಂಗಳ ಹಿಂದೆ ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ತಮ್ಮ ತಾಯಿಯೂ ಸೇರಿದಂತೆ ಬಹುದೊಡ್ಡ ಸಂಖ್ಯೆಯ ಜನರನ್ನು ಬಲವಂತದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿದ್ದರು. ಆದರೆ ಸರಕಾರ ನಡೆಸಿದ ವಿಚಾರಣೆಯಿಂದ ಈ ಆರೋಪದಲ್ಲಿ ಹುರುಳಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ವಾಸ್ತವ ಹೀಗಿದ್ದರೂ ಈ ಸರಕಾರಕ್ಕೆ ಸಂಘಪರಿವಾರದ ಅಜೆಂಡಾ ಜಾರಿಗೆ ತರುವಲ್ಲಿ ವಿಶೇಷ ಆಸಕ್ತಿ.

ಮತಾಂತರ ನಿಷೇಧದಂತಹ ಸುಗ್ರೀವಾಜ್ಞೆ ತರಬೇಕಾದರೆ ಅದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳು ಸರಕಾರದ ಬಳಿ ಇರಬೇಕು. ಬಲವಂತದ ಮತಾಂತರದ ಬಗ್ಗೆ ಎಷ್ಟು ದೂರುಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ? ಬಲವಂತದ ಮತಾಂತರ ಮಿತಿ ಮೀರಿದೆ ಎನ್ನಲು ಸರಕಾರದ ಬಳಿ ಇರುವ ದಾಖಲೆಗಳೇನು? ಎಂಬುದಕ್ಕೆ ಉತ್ತರ ಬೇಕಾಗಿದೆ.

ಸರಕಾರ ಯಾವುದೇ ಪಕ್ಷದ್ದಾಗಿರಲಿ ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು.ಸಂವಿಧಾನವನ್ನು ಬದಿಗೊತ್ತಿ ಸಂವಿಧಾನೇತರ ಶಕ್ತಿ ಕೇಂದ್ರವೊಂದರ ನಿರ್ದೇಶನದಂತೆ ಸರಕಾರ ಕಾರ್ಯನಿರ್ವಹಿಸುವುದು ಸರಿಯಲ್ಲ. ಜನರು ಇದನ್ನೆಲ್ಲ ಗಮನಿಸುತ್ತಿರುತ್ತಾರೆ ಎಂಬ ಅರಿವು ಅಧಿಕಾರದಲ್ಲಿದ್ದವರಿಗೆ ಇರಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)