varthabharthi


ನಿಮ್ಮ ಅಂಕಣ

ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಎನ್ನುವ ಸ್ವಯಂ ಉದ್ಯೋಗ..!

ವಾರ್ತಾ ಭಾರತಿ : 21 May, 2022
ಡಾ. ಡಿ.ಸಿ. ನಂಜುಂಡ

ಇತ್ತೀಚೆಗೆ ಅನೇಕ ಜನರು ಕಿರುಕುಳ ನೀಡಲು ಸುಳ್ಳು ಪ್ರಕರಣಗಳನ್ನು ದಾಖಲಿಸುವ ಸಲುವಾಗಿ ಪಿಐಎಲ್ ಅನ್ನು ಸಾಧನವಾಗಿ ಬಳಸಲಾರಂಭಿಸಿದ್ದಾರೆ. ಖಾಸಗಿ ದಾವೆಗಳಿಗೆ ವಿರುದ್ಧವಾಗಿ ಇಂತಹ ಅರ್ಜಿಗಳನ್ನು ಸಲ್ಲಿಸುವುದು ಅಗ್ಗವಾಗಿರುವುದರಿಂದ ಇಂದು ಎಲ್ಲರಿಗೂ ಪಿಐಎಲ್ ಒಂದು ಅಸ್ತ್ರವಾಗಿದೆ. ತಮ್ಮ ಖಾಸಗಿ ಹಿತಾಸಕ್ತಿಗಳನ್ನು ಸಾರ್ವಜನಿಕ ಹಿತಾಸಕ್ತಿಗಳಾಗಿ ಬಿಂಬಿಸಲು ಕಾರಣವಾಗಿದೆ. ಜನರು ವೈಯಕ್ತಿಕ ದ್ವೇಷ, ರಾಜಕೀಯ ಅಥವಾ ವ್ಯಾಪಾರ ಹಿತಾಸಕ್ತಿಗಳನ್ನು ಪೂರೈಸಲು ಇದನ್ನು ಕೆಲವರು ದುರುಪಯೋಗಪಡಿಸಿಕೊಳ್ಳಲು ಪ್ರಾರಂಭಿಸಿದ್ದಾರೆ ಎನ್ನುವ ಸಾರ್ವಕಾಲಿಕ ಆರೋಪವಿದೆ.

ಒಂದು ಅದ್ಭುತವಾದ ಉದ್ದೇಶದಿಂದ ಆರಂಭವಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಥವಾ ಪಿಐಎಲ್ ಎನ್ನುವ ಪರಿಕಲ್ಪನೆ ಇದೀಗ ಒಂದು ವೈಯಕ್ತಿಕ, ಹಾಸ್ಯಾಸ್ಪದ, ಧಾರ್ಮಿಕ, ರಾಜಕೀಯ ಹಿತಾಸಕ್ತಿಗಳಿಗೆ ಕಾರಣವಾಗುತ್ತಿರುವುದನ್ನು ಸಾರ್ವಜನಿಕರು ಹಾಗೂ ನ್ಯಾಯಾಲಯಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ. ಅಂದಿನ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಪಿ.ಎಂ. ಭಗವತಿ ಮತ್ತು ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲ ರೂವಾರಿಗಳು. ಇತ್ತೀಚೆಗೆ ತಾಜ್‌ಮಹಲ್ ವಿಚಾರದಲ್ಲಿ ವಾರಣಾಸಿ ನ್ಯಾಯಾಲಯ ನೀಡಿರುವ ಹೇಳಿಕೆ ಇದಕ್ಕೆ ಸಾಕ್ಷಿ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಭಾರತದಲ್ಲಿ ಹಿಂದುಳಿದ ಮತ್ತು ಅಂಚಿನಲ್ಲಿರುವ ಗುಂಪುಗಳ ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳನ್ನು ಹೆಚ್ಚಿಸಲು ಒಂದು ನವೀನ ನ್ಯಾಯಾಂಗ ಕಾರ್ಯವಿಧಾನ. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ಬಗ್ಗೆ ಹಲವಾರು ಟೀಕೆಗಳು ನಿರಂತರವಾಗಿ ಹೊರಹೊಮ್ಮಿವೆ. ಇದರಲ್ಲಿ ವ್ಯವಸ್ಥೆಯ ಸಾಮರ್ಥ್ಯ ಮತ್ತು ಅಸಹಾಯಕತೆಗೆ ಸಂಬಂಧಿಸಿದ ಕಾಳಜಿಗಳು ಹೆಚ್ಚಾಗಿ ಸೇರಿವೆ. ಇತ್ತೀಚೆಗೆ ಹೆಚ್ಚುತ್ತಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಸಂಖ್ಯೆಯು ಅವುಗಳ ಹಿಂದಿನ ಉದ್ದೇಶಗಳ ಮೌಲ್ಯಮಾಪನಗಳನ್ನು ಸಂಕೀರ್ಣಗೊಳಿಸಿವೆ. ಕೆಲವೊಂದು ಸಂಶೋಧನಾ ವರದಿಯ ಪ್ರಕಾರ ಇತರ ಹಿತಾಸಕ್ತಿ ಅರ್ಜಿಯ ಹಿಂದೆ ಕೋಟಿಕೋಟಿ ಹಣ ಕೈ ಬದಲಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇಂದು ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಪ್ರತ್ಯಕ್ಷ-ಪರೋಕ್ಷವಾಗಿ ರಾಜಕೀಯ ಪಕ್ಷಗಳ ಒಂದು ಅಳಿವು-ಉಳಿವಿನ ಪ್ರಶ್ನೆಯಾಗಿ ಹೆಚ್ಚಿನ ಸಂದರ್ಭಗಳಲ್ಲಿ ಮಾರ್ಪಟ್ಟಿರುತ್ತದೆ. ಇಂತಹ ಅರ್ಜಿಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಬಿಟ್ಟು ಬಾಕಿ ಎಲ್ಲವೂ ಇರುತ್ತದೆ. ವರದಿಗಳ ಪ್ರಕಾರ ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ವ್ಯಕ್ತಿಗತವಾಗಿದ್ದು ದುರುಪಯೋಗ ಆಗುತ್ತಿವೆ ಎಂದು ಹಲವಾರು ನ್ಯಾಯಾಲಯಗಳು ಹಲವಾರು ಬಾರಿ ಹೇಳಿವೆ.

ಮಾಜಿ ಅಟಾರ್ನಿಜನರಲ್ ಸೋಲಿ ಸೊರಾಬ್ಜಿ ಅವರು ‘‘ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ನ್ಯಾಯ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ’’ ಎನ್ನುತ್ತಾರೆ. ಅವರು ಇದರ ದುರುಪಯೋಗವನ್ನು ನಿಯಂತ್ರಿಸಲು ನ್ಯಾಯಾಲಯವು ಕ್ರಿಯಾಶೀಲವಾಗಬೇಕು ಎನ್ನುತ್ತಾರೆ. ಸಂಶಯಾಸ್ಪದ ಅರ್ಜಿಗಳನ್ನು ತಕ್ಷಣವೇ ನ್ಯಾಯಾಲಯಗಳು ತಿರಸ್ಕರಿಸಬೇಕು. ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಅರ್ಜಿಗಳು ಬಂದರೆ ಮತ್ತು ಜನಪ್ರಿಯತೆಗಾಗಿ ಹಾಕುವ ಅರ್ಜಿಗಳನ್ನು ಹಿಂದು ಮುಂದು ನೋಡದೆ ಹೊರಹಾಕಬೇಕು ಎನ್ನುತ್ತಾರೆ ಸೋಲಿ ಸೊರಾಬ್ಜಿ. ಅರ್ಜಿಯನ್ನು ಪಿಐಎಲ್ ಎಂದು ಕರೆಯುವುದರಿಂದ ಇತರ ವ್ಯಾಜ್ಯಕ್ಕೆ ಅನ್ವಯವಾಗುವ ಸಾಮಾನ್ಯ ತತ್ವಗಳನ್ನು ಅನ್ವಯಿಸಬಾರದು. ಅಂತಿಮವಾಗಿ ನ್ಯಾಯಾಲಯಗಳು ಸೂಕ್ತ ಕಾರಣಗಳನ್ನು ನೀಡಿ ಅರ್ಜಿಯ ಹಿಂದೆ ಯಾವುದೋ ದುರುದ್ದೇಶ ಇರುವಂತೆ ಕಂಡುಬಂದರೆ ಅಂತಹ ಅರ್ಜಿಗಳನ್ನು ಹಾಕುವವರೇ ನ್ಯಾಯಾಲಯಕ್ಕೆ ಪರಿಹಾರವನ್ನು ಒದಗಿಸುವಂತೆ ಮಾಡಬೇಕು. ಅರ್ಜಿದಾರರೇ ಜವಾಬ್ದಾರಿಯನ್ನು ಹೊರುವಂತಹ ಕಟ್ಟುನಿಟ್ಟಾದ ನಿಯಮಗಳಿರಬೇಕು ಎನ್ನುವ ಅಭಿಪ್ರಾಯ ಸೋಲಿ ಸೊರಾಬ್ಜಿ ಅವರದು. ಅಲ್ಲದೆ ಇನ್ನೊಂದು ಮುಖ್ಯ ಕಾರಣವೆಂದರೆ ನ್ಯಾಯಾಲಯಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೆಚ್ಚು ಹೆಚ್ಚಾಗಿ ಪುರಸ್ಕರಿಸುತ್ತಾ ಹೋದರೆ ನ್ಯಾಯಾಲಯದ ಅಮೂಲ್ಯ ಸಮಯ ಹಾಳಾಗುತ್ತದೆ. ಜನರಿಗೆ ನ್ಯಾಯಾಲಯದ ಮೇಲೆ ಇರುವ ನಂಬಿಕೆ ಹಾಳಾಗುತ್ತದೆ ಮತ್ತು ಹಿತಾಸಕ್ತಿ ಅರ್ಜಿ ತನ್ನ ಮೌಲ್ಯ ಕಳೆದುಕೊಳ್ಳುತ್ತದೆ ಎನ್ನುತ್ತಾರೆ ಕೆಲವು ನ್ಯಾಯಾಂಗ ತಜ್ಞರು

ಇತ್ತೀಚೆಗೆ ಅನೇಕ ಜನರು ಕಿರುಕುಳ ನೀಡಲು ಸುಳ್ಳು ಪ್ರಕರಣಗಳನ್ನು ದಾಖಲಿಸುವ ಸಲುವಾಗಿ ಪಿಐಎಲ್ ಅನ್ನು ಸಾಧನವಾಗಿ ಬಳಸಲಾರಂಭಿಸಿದ್ದಾರೆ. ಖಾಸಗಿ ದಾವೆಗಳಿಗೆ ವಿರುದ್ಧವಾಗಿ ಇಂತಹ ಅರ್ಜಿಗಳನ್ನು ಸಲ್ಲಿಸುವುದು ಅಗ್ಗವಾಗಿರುವುದರಿಂದ ಇಂದು ಎಲ್ಲರಿಗೂ ಪಿಐಎಲ್ ಒಂದು ಅಸ್ತ್ರವಾಗಿದೆ. ತಮ್ಮ ಖಾಸಗಿ ಹಿತಾಸಕ್ತಿಗಳನ್ನು ಸಾರ್ವಜನಿಕ ಹಿತಾಸಕ್ತಿಗಳಾಗಿ ಬಿಂಬಿಸಲು ಕಾರಣವಾಗಿದೆ. ಜನರು ವೈಯಕ್ತಿಕ ದ್ವೇಷ, ರಾಜಕೀಯ ಅಥವಾ ವ್ಯಾಪಾರ ಹಿತಾಸಕ್ತಿಗಳನ್ನು ಪೂರೈಸಲು ಇದನ್ನು ಕೆಲವರು ದುರುಪಯೋಗಪಡಿಸಿಕೊಳ್ಳಲು ಪ್ರಾರಂಭಿಸಿದ್ದಾರೆ ಎನ್ನುವ ಸಾರ್ವಕಾಲಿಕ ಆರೋಪವಿದೆ. ಪಿಐಎಲ್ ಅನ್ನು ಸಾರ್ವಜನಿಕ ಹಿತಾಸಕ್ತಿ ದಾವೆ ಎಂದು ಪರಿಗಣಿಸಬೇಕು ಮತ್ತು ಖಾಸಗಿ ಹಿತಾಸಕ್ತಿ ದಾವೆ ಎಂದು ಪರಿಗಣಿಸಬಾರದು ಎಂದು ನ್ಯಾಯಾಲಯದ ಎಚ್ಚರಿಕೆಯನ್ನು ಯಾರೂ ಪಾಲಿಸುತ್ತಿಲ್ಲ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ‘‘ಇಂತಹವರನ್ನು ವೃತ್ತಿಪರ ಪಿಐಎಲ್ ಅಂಗಡಿಗಳ ಮಾಲಕರು ಎಂದು ಕರೆಯಬೇಕು’’ ಎನ್ನುತ್ತಾರೆ ಮತ್ತು ಅವುಗಳನ್ನು ರದ್ದುಗೊಳಿಸುವಂತೆ ಕರೆ ನೀಡುತ್ತಾರೆ. ಸಾರ್ವಜನಿಕ ಉಪಯೋಗವಿಲ್ಲದ ಪಿಐಎಲ್‌ಗಳಿಗೆ ಉತ್ತರಗಳನ್ನು ಒದಗಿಸುವ ಸಲುವಾಗಿ, ಸರಕಾರಿ ಅಧಿಕಾರಿಗಳು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಾರೆ ಮತ್ತು ಇದು ದೇಶಕ್ಕೆ ಹಾನಿಕಾರಕವಾಗಿದೆ ಎಂದು ಅವರು ಹೇಳಿದರು. ಅವರು ಸ್ವಯಂ ಉದ್ಯೋಗವನ್ನು ಸೃಷ್ಟಿಸುವ ಅರ್ಜಿಗಳು ಎಂದು ಕರೆದರು, ಅದರ ಮೇಲೆ ನ್ಯಾಯಾಲಯವು ಸಮಯವನ್ನು ವ್ಯರ್ಥ ಮಾಡಬಾರದು. ಇನ್ನು ಕೆಲವರ ಪ್ರಕಾರ ಬಹಳಷ್ಟು ಬಾರಿ, ವಕೀಲರು ಮತ್ತು ಇತ್ತೀಚೆಗೆ ಕಾನೂನು ವಿದ್ಯಾರ್ಥಿಗಳು ಪ್ರಚಾರವನ್ನು ತಡೆಯಲು ಪಿಐಎಲ್ ಅನ್ನು ಬಳಸಲು ಪ್ರಯತ್ನಿಸಿದ್ದಾರೆ. ಪಿಐಎಲ್‌ಗಳ ಉದ್ದೇಶವನ್ನು ಈಡೇರಿಸುವ ಬದಲು ಇಂತಹ ಅರ್ಜಿಗಳು ಸಾರ್ವಜನಿಕ ಒಳಿತನ್ನು ಹೇಗೆ ಹಾಳುಮಾಡುತ್ತವೆ ಎಂಬುದನ್ನು ನ್ಯಾಯಾಲಯ ವಿವಿಧ ತೀರ್ಪಿನಲ್ಲಿ ಒತ್ತಿಹೇಳಿದೆ. ಆದರೂ ಯಾರಿಗೂ ಇದರ ಬಗ್ಗೆ ಗಮನವಿಲ್ಲ.

ಈ ಸಂಬಂಧ ಇಲ್ಲಿ ಕೆಲವು ಉದಾಹರಣೆಗಳಿವೆ 1. ಪೌಲ್‌ರಾಜ್ ಮತ್ತು ಭಾರತದ ಚುನಾವಣಾಧಿಕಾರಿಯ ಸಾರ್ವಜನಿಕ ಹಿತಾಸಕ್ತಿ ಪ್ರಕರಣದಲ್ಲಿ ಅರ್ಜಿಯನ್ನು ಅರ್ಜಿದಾರರು ಭಾರತೀಯ ಸಂವಿಧಾನದ 226ನೇ ವಿಧಿಯಡಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಕಡ್ಡಾಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ಪ್ರತಿವಾದಿಗಳಿಗೆ ನಿರ್ದೇಶಿಸುವ ಆದೇಶವನ್ನು ಹೊರಡಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರ್ಟಿನಲ್ಲಿ ಕೇಳಿದ್ದರು. ಆಗ ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಕ್ರಿಯೆಯಲ್ಲಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಅಂತಹ ಅರ್ಜಿಗೆ ಯಾವುದೇ ಆಧಾರವಿಲ್ಲ ಮತ್ತು ಇದು ಸಂಪೂರ್ಣವಾಗಿ ಕ್ಷುಲ್ಲಕವಾಗಿದೆ ಎಂದು ಅಭಿಪ್ರಾಯಪಟ್ಟಿತು. ನ್ಯಾಯಾಲಯದಲ್ಲಿ ಅಂತಹ ಅರ್ಜಿಗಳನ್ನು ಸಲ್ಲಿಸುವ ಮೊದಲು ಅರ್ಜಿದಾರರು ಹೆಚ್ಚು ಜವಾಬ್ದಾರರಾಗಿರಬೇಕು ಎಂದು ಹೇಳಿತ್ತು. ವೆಚ್ಚದೊಂದಿಗೆ ಅರ್ಜಿಯನ್ನು ವಜಾಗೊಳಿಸಲಾಯಿತು ಮತ್ತು ಅರ್ಜಿದಾರರು ಪೀಠದ ಪೂರ್ವಾನುಮತಿ ಪಡೆಯದೆ ಒಂದು ವರ್ಷದ ಅವಧಿಗೆ ಹೊಸ ಸಾರ್ವಜನಿಕ ಅರ್ಜಿಗಳನ್ನು ಸಲ್ಲಿಸದಂತೆ ನ್ಯಾಯಾಲಯವು ನಿಷೇಧಿಸಿತು. 2. ಪ್ರತ್ಯೂಷ್ ಪ್ರಸನ್ನ ಮತ್ತು ದಿಲ್ಲಿಯ ರಾಜ್ಯ ಪಿಐಎಲ್ ಪ್ರಕರಣದಲ್ಲಿ ಸರಕಾರವು ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಮತ್ತು ಈ ಸಂಬಂಧ ಕೋವಿಡ್-19 ಪರಿಹಾರಕ್ಕಾಗಿ ದಿಲ್ಲಿ ಸರಕಾರ ಸಂಗ್ರಹಿಸಿದ ಹಣದ ಬಗ್ಗೆ ತನಿಖೆ ನಡೆಸುವಂತೆ ಕೋರ್ಟಿನಲ್ಲಿ ಮೇಲ್ಕಂಡವರು ಪಿಐಎಲ್ ಅರ್ಜಿ ಹಾಕಿದ್ದರು. ಅರ್ಜಿಯನ್ನು ಪರಿಶೀಲಿಸಿದ ಕೋರ್ಟ್ ಈ ಅರ್ಜಿದಾರರು ಸತ್ಯವನ್ನು ಕಂಡುಹಿಡಿಯಲು ಯಾವುದೇ ಪ್ರಯತ್ನ ಮಾಡಲಿಲ್ಲ ಮತ್ತು ಕೇವಲ ಬೇರೊಬ್ಬರು ಪೋಸ್ಟ್ ಮಾಡಿದ ಟ್ವೀಟ್ ಅನ್ನು ಅವಲಂಬಿಸಿದ್ದಾರೆ. ಅರ್ಜಿ ಸಲ್ಲಿಸುವ ಮೊದಲು ಯಾವುದೇ ಹೋಮ್‌ವರ್ಕ್ ಮಾಡದಿದ್ದಕ್ಕಾಗಿ ನ್ಯಾಯಾಲಯ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ಪಿಐಎಲ್‌ನ ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ 50,000ರೂ. ದಂಡ ವಿಧಿಸಿತು.

 ಕೆಲವು ನ್ಯಾಯಾಂಗ ಪರಿಣಿತರ ಪ್ರಕಾರ ಪಿಐಎಲ್‌ನ ಪರಿಕಲ್ಪನೆ ಮತ್ತು ಅದರ ಯಶಸ್ಸನ್ನು ವೈಭವೀಕರಿಸುವಂತೆಯೇ ಮಾಧ್ಯಮಗಳು ಇದರ ದುರ್ಬಳಕೆಯ ಪ್ರಕರಣಗಳನ್ನು ಹೈಲೈಟ್ ಮಾಡಬೇಕು. ಪಿಐಎಲ್ ನಿಂದನೆ ಮತ್ತು ಅಂತಹ ಅರ್ಜಿದಾರರಿಗೆ ನೀಡಿದ ಶಿಕ್ಷೆಯ ಬಗ್ಗೆ ಇತರರಲ್ಲಿ ಜಾಗೃತಿ ಮೂಡಿಸಬೇಕು. ಅಂತಹ ದುರುದ್ದೇಶಪೂರಿತ ಅರ್ಜಿದಾರರನ್ನು ಪ್ರತಿನಿಧಿಸಲು ವಕೀಲರು ಸಂಪೂರ್ಣವಾಗಿ ನಿರಾಕರಿಸಬೇಕು. ವೃತ್ತಿಯಲ್ಲಿ ಶಿಸ್ತು ಮತ್ತು ನೈತಿಕತೆಗೆ ಬಲವಾಗಿ ಒತ್ತು ನೀಡಬೇಕು. ಅರ್ಜಿದಾರರಿಗೆ ಪಿಐಎಲ್ ದುರುಪಯೋಗಪಡಿಸಿಕೊಳ್ಳದಂತೆ ತಿಳಿ ಹೇಳಬೇಕು. ಕೆಲವು ತಜ್ಞರು ಹೇಳುವಂತೆ ಪಿಐಎಲ್ ಅರ್ಜಿಯನ್ನು ಸಲ್ಲಿಸಲು ಕಾರಣವು ಪ್ರಾಮಾಣಿಕವಾಗಿದೆ ಮತ್ತು ಖಾಸಗಿ ಹಿತಾಸಕ್ತಿಗಳಿಂದ ಬೆಂಬಲಿತವಾಗಿಲ್ಲ ಎಂದು ಸರಿಯಾಗಿ ಪರಿಶೀಲಿಸಬೇಕು. ಮಾಧ್ಯಮಗಳು ಸಹ ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪಿಐಎಲ್ ದುರುಪಯೋಗದ ಪರಿಣಾಮವನ್ನು ಪರಿಣಾಮಕಾರಿಯಾಗಿ ವಿಶ್ಲೇಷಿಸಬೇಕು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವಾಗ ಅರ್ಜಿದಾರರೂ ಸಾಕಷ್ಟು ಅಂಶಗಳನ್ನು ಗಮನಿಸಿಕೊಳ್ಳಬೇಕು. ಸಂಪೂರ್ಣ ಅರ್ಜಿಯ ಉದ್ದೇಶ ಸಾರ್ವಜನಿಕ ಹಿತಾಸಕ್ತಿಗೆ ಮಾತ್ರ ಸೀಮಿತವಾಗಿರಬೇಕು. ಯಾವುದೇ ವೈಯಕ್ತಿಕ, ರಾಜಕೀಯ ಅಥವಾ ಸಾಮಾಜಿಕ ಅಂಶಗಳು ಇರಬಾರದು. ಅರ್ಜಿ ಸಲ್ಲಿಸುವಾಗ ನ್ಯಾಯಾಲಯದ ಮತ್ತು ವ್ಯವಸ್ಥೆಯ ಅಮೂಲ್ಯ ಸಮಯವನ್ನು ಸಹ ಅರ್ಜಿದಾರರು ಸದಾ ನೆನಪಿಟ್ಟುಕೊಳ್ಳಬೇಕು. ಹಣಕ್ಕಾಗಿ, ಯಾವುದೋ ರಾಜಕೀಯ ಪಕ್ಷಗಳ ಒತ್ತಡಕ್ಕೆ, ಪ್ರಚಾರಕ್ಕಾಗಿ ಇಂತಹ ಅರ್ಜಿಗಳನ್ನು ಸಲ್ಲಿಸಬಾರದು. ಕೆಲವು ತಜ್ಞರ ಪ್ರಕಾರ ಇಂತಹ ನಕಲಿ ಅರ್ಜಿಗಳನ್ನು ತಡೆಯುವ ಶಕ್ತಿ ನ್ಯಾಯಾಲಯಗಳಿಗೆ ಇದ್ದೇ ಇರುತ್ತವೆ. ಇಂತಹ ಅರ್ಜಿಗಳನ್ನು ಮೊದಲ ಹಂತದಲ್ಲೇ ಸಂಪೂರ್ಣವಾಗಿ ತಡೆಗಟ್ಟುವುದೇ ಇದಕ್ಕಿರುವ ಸೂಕ್ತ ಉಪಾಯ. ನಕಲಿ ಉದ್ದೇಶವಿರುವ ಅರ್ಜಿಗಳಿಗೆ ಹೆಚ್ಚಿನ ದಂಡ ವಿಧಿಸಬೇಕು. ಅದೇ ರೀತಿ ನಿಜವಾಗಿಯೂ ಸಾರ್ವಜನಿಕರ ಹಿತಾಸಕ್ತಿ ಇರುವಂತಹ ಅರ್ಜಿಗಳನ್ನು ಆದಷ್ಟು ಬೇಗ ವಿಚಾರಣೆ ನಡೆಸಿ ತೀರ್ಪನ್ನು ನ್ಯಾಯಾಲಯ ನೀಡಬೇಕು. ಇದರಿಂದ ಪಿಐಎಲ್ ಅರ್ಜಿಗಳಿಗೆ ಮತ್ತಷ್ಟು ಮೌಲ್ಯ ಬರುತ್ತದೆ ಮತ್ತು ಜನರಿಗೆ ಪಿಐಎಲ್ ಮೇಲೆ ಮತ್ತಷ್ಟು ಗೌರವ ಮೂಡುತ್ತದೆ.

(ಆಧಾರ: ವಿವಿಧ ಮೂಲಗಳಿಂದ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)