varthabharthi


ನಿಮ್ಮ ಅಂಕಣ

ಗೊರೂರು ಪಂಕಜ ಮುಡಿಗೆ ಪ್ರತಿಷ್ಠಿತ ಅಂತರ್‌ರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಗರಿ

ವಾರ್ತಾ ಭಾರತಿ : 21 May, 2022
ಚಿಕ್ಕರಸು ಹುಲ್ಲೂರು

ಸಾಹಿತ್ಯ, ಸಮಾಜಸೇವೆ, ಪತ್ರಿಕೋದ್ಯಮದ ಅನುಪಮ ಸೇವೆಗಾಗಿ ಗೊರೂರು ಪಂಕಜ ಅವರು, ಪ್ರತಿಷ್ಠಿತ ಅಂತರ್‌ರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಭಾಜನರಾಗಿರುವುದು ಸವ್ಯಸಾಚಿತ್ವದ ಪ್ರತೀಕ.

ಗೊರೂರು ಪಂಕಜ ಅವರಿಗೆ ಈಗಾಗಲೇ ಬಿಎಂಶ್ರೀ ಕಾವ್ಯ ಪುರಸ್ಕಾರ, ಪ್ರೊ.ಡಿ.ಸಿ. ಅನಂತಸ್ವಾಮಿ ದತ್ತಿ ಪ್ರಶಸ್ತಿ, ರಾಜೀವ್ ಗಾಂಧಿ ರಾಷ್ಟ್ರೀಯ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಕರ್ನಾಟಕ ವಿಭೂಷಣ ಪ್ರಶಸ್ತಿ, ಕರ್ನಾಟಕ ಯುವರತ್ನ ಪ್ರಶಸ್ತಿ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ 18 ವಿವಿಧ ಪ್ರಶಸ್ತಿಗಳನ್ನು ಪಡೆದಿರುವ ಪಂಕಜ ಅವರ ಮುಕುಟಕ್ಕೆ ಪ್ರತಿಷ್ಠಿತ ಅಂತರ್‌ರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಮತ್ತೊಂದು ಗರಿ.

ಹೊಟ್ಟೆಪಾಡಿಗಾಗಿ ಹಳ್ಳಿಯಿಂದ ರಾಜಧಾನಿಗೆ ಬಂದ ಹಳ್ಳಿಯ ಹೆಣ್ಣುಮಗಳೊಬ್ಬಳು ಮಹಾನಗರದಲ್ಲಿ ಬದುಕುಕಟ್ಟಿಕೊಳ್ಳುವ ದುಸ್ಸಾಹಸದ ಜೊತೆಗೆ ಸಾಹಿತ್ಯ ಚಟುವಟಿಕೆ, ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡು, ಹಲವು ಪ್ರಶಸ್ತಿಗಳ ಒಡತಿಯಾಗಿ ಇಂದು ಅಂತರ್‌ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಗೆ ಭಾಜನರಾಗಿರುವುದು ಮಹಾ ಸಾಧನೆ.

ಬಡತನವೇ ವಿಜೃಂಭಿಸುತ್ತಿದ್ದ ಕುಟುಂಬದಲ್ಲಿ ಜನಿಸಿದ ಗೊರೂರು ಪಂಕಜ ಅವರ ಬಾಲ್ಯದ ಬದುಕು ಅತ್ಯಂತ ಶೋಚನೀಯವಾಗಿತ್ತು. ಹಳ್ಳಿಯಲ್ಲಿ ಕೂಲಿ-ನಾಲಿ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದ ಪುಟ್ಟ ಹುಡುಗಿ, ನಂತರ ಟೈಲರ್, ಶಿಕ್ಷಕಿ, ಟೈಪಿಸ್ಟ್, ಸಹಕಾರಿ ಬ್ಯಾಂಕ್‌ವೊಂದರ ಮುಖ್ಯಕಾರ್ಯದರ್ಶಿ, ವಿವಿಧ ಪತ್ರಿಕೆಗಳಲ್ಲಿ ಉಪಸಂಪಾದಕಿ, ಕವಯಿತ್ರಿ, ಕಾರ್ಯಕ್ರಮ ನಿರೂಪಕಿ. ಜೊತೆಗೆ ಶಕ್ತಿಕೇಂದ್ರ ವಿಧಾನಸೌಧ ಹಾಗೂ ಆಕಾಶವಾಣಿಯಲ್ಲಿ ಕೆಲಸ. ಹೀಗೆ ಭಿನ್ನವೃತ್ತಿ ಮಾಡುವ ಮೂಲಕ ಒಂದೊಂದೇ ಮೆಟ್ಟಿಲು ಹತ್ತಿದ ಅವರ ಪ್ರಯೋಗಶೀಲ ಮತ್ತು ಹೋರಾಟದ ಬದುಕು ವಿಭಿನ್ನವಾದದ್ದು.

ತಾವು ಆರ್ಥಿಕವಾಗಿ ಸಬಲರಾಗದಿದ್ದಾಗಲೂ ಇತರರ ವಿದ್ಯಾಭ್ಯಾಸಕ್ಕೆ ನೆರವಾದವರು. ಅನಾಥ, ನಿರ್ಗತಿಕ ಹೆಣ್ಣುಮಕ್ಕಳ ಶ್ರೇಯೋಭಿವೃದ್ಧಿಗೆ ಸದ್ದಿಲ್ಲದೆ ಶ್ರಮಿಸಿದವರು. ಬಡತನ, ಹಸಿವನ್ನು ಅರಿತಿದ್ದರಿಂದ ವಲಸೆ ಮಕ್ಕಳ ಓದಿಗೆ ಅತ್ಯಂತ ಕಾಳಜಿವಹಿಸಿ ನೂರಾರು ಮಕ್ಕಳನ್ನು ಶಾಲೆಗೆ ಸೇರಿಸಿರುವ ಅವರ ಗುಣ ಶ್ಲಾಘನೀಯವಾದುದು.

ಹೆಣ್ಣು ಮಕ್ಕಳು ಶಾಲೆಗೆ ಹೋಗಬಾರದು, ಸಾಮಾಜಿಕವಾಗಿ ಕಾಣಿಸಿಕೊಳ್ಳಬಾರದು, ನಾಲ್ಕು ಗೋಡೆಗಳ ಮಧ್ಯೆ ಅಡುಗೆ ಮಾಡಿಕೊಂಡು, ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವುದಕ್ಕಷ್ಟೇ ಸಿಮೀತವಾಗಿರಬೇಕು ಎಂಬಂತಹ ಮನಸ್ಥಿತಿ ಪೋಷಕರದ್ದು. ಆದರೆ ಇಂತಹ ಅಡೆ-ತಡೆಗಳನ್ನು ಮೆಟ್ಟಿನಿಂತು ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಎತ್ತರಕ್ಕೆ ಬೆಳೆದು ಸ್ವ-ಸಾಮರ್ಥ್ಯದಿಂದಲೇ ಒಬ್ಬ ಗಣ್ಯವ್ಯಕ್ತಿಯಾಗಿ ಗುರುತಿಸಿಕೊಂಡವರು. ಓದಿ ವಿದ್ಯಾವಂತರಾಗುವ ಮೂಲಕವೇ ಹೆಣ್ಣು ಮಕ್ಕಳು ಕಟ್ಟುಪಾಡುಗಳಿಂದ ಬಿಡುಗಡೆ ಹೊಂದಬೇಕು, ಸ್ವಾವಲಂಬಿಯಾಗಬೇಕು ಎಂಬ ಅಚಲ ನಿರ್ಧಾರವನ್ನು ಇಟ್ಟುಕೊಂಡೇ ನೂರಾರು ನಿರ್ಗತಿಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಲ್ಲುವ ಮೂಲಕ ಮಹಿಳಾ ಸಬಲೀಕರಣಕ್ಕೆ ಹೋರಾಡಿ ಹೆಣ್ಣು ಮಕ್ಕಳಿಗೆ ಮಾದರಿಯಾದವರು. ವಿವಿಧ ಕ್ಷೇತ್ರಗಳಲ್ಲಿ ಪ್ರಾಮಾಣಿಕ ಮತ್ತು ದಕ್ಷ ‘ಕಾಯಕ’ಗಳಿಂದಾಗಿ ಇವರನ್ನರಸಿಕೊಂಡು ಬಂದ ಪ್ರಶಸ್ತಿ-ಪುರಸ್ಕಾರ, ಗೌರವಗಳಿಗೆ ಲೆಕ್ಕವಿಲ್ಲ.

ಪಂಕಜ ಅವರದು ಬಹುಮುಖ ಪ್ರತಿಭೆ ಅಂದರೆ ಸಾಕಾಗದೇನೋ. ಹಾಗಾಗಿಯೇ ನಾನಿಲ್ಲಿ ಅವರನ್ನು ಅನಂತ ಮುಖಿ ಪ್ರತಿಭೆ ಎಂದು ಕರೆಯಬಯಸುತ್ತೇನೆ. ಸಾಹಿತ್ಯ, ಸಾಂಸ್ಕೃತಿಕ, ಕರಕುಶಲ ಕಲೆ, ಸ್ಕ್ರೀನ್ ಪ್ರಿಂಟಿಂಗ್, ಛಾಯಾಗ್ರಹಣ, ವಸ್ತ್ರವಿನ್ಯಾಸ (ಫ್ಯಾಷನ್ ಡಿಸೈನ್) ಅಂಚೆಚೀಟಿ ಸಂಗ್ರಹ, ಪ್ರಾಚೀನ ನಾಣ್ಯಗಳ ಸಂಗ್ರಹ ಹೀಗೆ ಬರೆದರೆ ಪುಟಗಟ್ಟಲೆ. ಇವರು ನಾಡಿನ ವಿವಿಧ ಪತ್ರಿಕೆಗಳಿಗೆ, ಬಾನುಲಿ ಕಾರ್ಯಕ್ರಮಗಳಿಗೆ ನಡೆಸಿಕೊಟ್ಟ ಸಂದರ್ಶನಗಳಂತೂ ಅತ್ಯಂತ ಆತ್ಮೀಯತೆಯಿಂದ ಕೂಡಿವೆ. ಇವರು ನಡೆಸಿಕೊಟ್ಟ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ, ಹಿರಿಯ ಕವಿ ಚೆನ್ನವೀರ ಕಣವಿ, ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್, ಅಪರೂಪದ ಗಾಂಧಿವಾದಿ ಹೊ.ಶ್ರೀನಿವಾಸಯ್ಯ ಮುಂತಾದ ಘಟಾನುಘಟಿಗಳ ಸಂದರ್ಶನಗಳು ಕರ್ನಾಟಕದಾದ್ಯಂತ ಮನೆಮಾತಾಗಿವೆ. ಇವರ ಸಂದರ್ಶನಗಳ ಮಾತುಕತೆಯಲ್ಲಿ ಹೊಮ್ಮುವ ಹೃತ್ಪೂರ್ವಕವಾದ ಆಪ್ಯಾಯೆ ಎಂಥವರನ್ನೂ ಕರಗಿಸಿಬಿಡುತ್ತದೆ.

ಇವರ ಅನೇಕ ಕವನ, ಕಥೆ, ಪ್ರಬಂಧ, ಸಾಮಾಜಿಕ ಹಾಗೂ ಸ್ರೀ ಸಂವೇದನೆಯ ಲೇಖನಗಳು, ಜೀವಪರವಾದ ಬರಹಗಳು ರಾಜ್ಯದ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಕೆಲವು ಕವನಗಳು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನಕ್ಕೆ ಭಾಜನವಾಗಿವೆ. ಕೆಲವು ಪದ್ಯಗಳು ಇಂಗ್ಲಿಷ್, ಹಿಂದಿ, ತಮಿಳಿಗೆ ತರ್ಜುಮೆಗೊಂಡಿವೆ. ಈ ಎಲ್ಲ ಅವಿರತ ಸಾಧನೆಯಿಂದಾಗಿ ಪಂಕಜ ಅವರಿಗೆ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಅರಸಿ ಬಂದಿರುವುದು ಅವರ ಸಾಧನೆಯ ದ್ಯೋತಕ.

 ಮಹಿಳೆಯರ ಮೇಲಿನ ದೌರ್ಜನ್ಯಗಳ ಸಂದರ್ಭಗಳಲ್ಲಿ ಸರಕಾರ, ಸಂಬಂಧಪಟ್ಟ ಇಲಾಖೆಗಳನ್ನು ಎಚ್ಚರಿಸಲು ಧರಣಿ, ಸತ್ಯಾಗ್ರಹ, ಪ್ರತಿಭಟನೆಗಳನ್ನು ಸಂಘಟಿಸಿ ಹೋರಾಡಿದ್ದಾರೆ. ಸಾಮಾಜಿಕವಾಗಿ, ರಾಜಕೀಯವಾಗಿ ಹೋರಾಡಿ, ಗಟ್ಟಿಧ್ವನಿ ಎತ್ತಿ ಬಡವರಿಗೆ ನ್ಯಾಯ ಒದಗಿಸಿ, ನೊಂದವರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ.

ಗೊರೂರು ಪಂಕಜ ಅವರು ಆಕಾಶವಾಣಿ ಕಲಾವಿದೆಯಾಗಿಯೂ ಕಳೆದ 20 ವರ್ಷಗಳಿಂದ ನಿಯಮಿತವಾಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ದೂರದರ್ಶನ ಮತ್ತು ಸ್ಥಳೀಯ ಚಾನಲ್‌ಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಇವರು ಪ್ರಸ್ತುತ ತಿಳಿಬೆಳಕು ಟ್ರಸ್ಟ್ ರಾಜ್ಯಾಧ್ಯಕ್ಷೆಯಾಗಿ, ಲೇಖಕಿಯರ ಬಳಗದ ಕಾರ್ಯದರ್ಶಿಯಾಗಿ, ಹಾಸನ ತಾಲೂಕು ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಹಾಸನ ಜಿಲ್ಲಾ ಗ್ರಂಥಾಲಯ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕಿಯಾಗಿ ಇನ್ನೂ ಹತ್ತು ಹಲವು ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಮಹತ್ವದ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ತಮ್ಮ ವ್ಯಕ್ತಿತ್ವದ ‘‘ಸವ್ಯಸಾಚಿತ್ವ’’ವನ್ನು ರುಜುವಾತು ಪಡಿಸಿದ್ದಾರೆ.

ತಮ್ಮ ಕಾರ್ಯಚಟುವಟಿಕೆಗಳಿಗೆ ಪೂರಕವಾಗಿ ಮಾಹಿತಿ, ಅನುಭವ ಪಡೆಯುವುದಕ್ಕಾಗಿ ಪಂಕಜ ಅವರು ಕರ್ನಾಟಕದ ಮೂಲೆ ಮೂಲೆಗಳನ್ನು ಸುತ್ತಿದ್ದಾರೆ. ಅಲ್ಲದೆ ಮಹಾರಾಷ್ಟ್ರ ದಿಲ್ಲಿ, ಪಂಜಾಬ್, ಪಾಕಿಸ್ತಾನದ ಗಡಿಭಾಗವಾದ ವಾಘಾಗಡಿ, ಪುದುಚೇರಿ, ಅಂಡಮಾನ್-ನಿಕೋಬಾರ್ ಗಳಿಗೆ ಭೇಟಿ ನೀಡಿ, ಅಲ್ಲಿಯ ಜನರ ಬದುಕು-ಬವಣೆ ಕುರಿತಾಗಿ ಅಧ್ಯಯನ ಮಾಡಿದ್ದಾರೆ. ಪ್ರತಿಷ್ಠಿತ ಅಂತರ್‌ರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಸ್ವೀಕರಿಸುತ್ತಿರುವ ಪಂಕಜ ಅವರ ಸೇವೆ ಮುಂದುವರಿಯಲಿ, ಇನ್ನಷ್ಟು ವ್ಯಾಪ್ತಿ ಪಡೆದುಕೊಳ್ಳಲಿ, ಇನ್ನೂ ಎತ್ತರಕ್ಕೆ ಬೆಳೆಯಲಿ. ಆದರೆ ಅವರ ಸ್ನೇಹಮಯಿ ಭಾವ ಮಾತ್ರ ಮಾಸದಿರಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)