varthabharthi


ಬೆಂಗಳೂರು

ಹೊರಗುತ್ತಿಗೆ ಹುದ್ದೆಗಳಲ್ಲಿ ಮೀಸಲಾತಿ ಮರೆಮಾಚಲಾಗುತ್ತಿದೆ: ನ್ಯಾ.ನಾಗಮೋಹನ್ ದಾಸ್

ವಾರ್ತಾ ಭಾರತಿ : 22 May, 2022

ಬೆಂಗಳೂರು, ಮೇ 22: ಸರಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಮೀಸಲಾತಿಯನ್ನು ಮರೆಮಾಚುವ ಹುನ್ನಾರ ನಡೆಯುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ದೂರಿದ್ದಾರೆ. 

ರವಿವಾರ ನಗರದ ಯುವನಿಕ ಸಭಾಂಗಣದಲ್ಲಿ ಅಬಕಾರಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ 37 ಇಲಾಖೆಗಳಲ್ಲೂ ಹೊರಗುತ್ತಿಗೆ ಆಧಾರದಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹೀಗೆ ಹುದ್ದೆಗಳನ್ನು ತುಂಬುವಾಗ ಮೀಸಲಾತಿಯನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಇದರಿಂದ ಮೀಸಲಾತಿಯನ್ನು ಅಪ್ರಸ್ತುತಗೊಳಿಸಲಾಗುತ್ತಿದೆ ಎಂದು ಹೇಳಿದರು. 

ರಾಜ್ಯದಲ್ಲಿ ಇಂದು ಚರ್ಚೆ ಆಗಬೇಕಾದ ವಿಷಯಗಳು ಸರಿಯಾಗಿ ಚರ್ಚೆಯಾಗುತ್ತಿಲ್ಲ, ಬದಲಾಗಿ ಅನಗತ್ಯವಾಗಿ, ಧರ್ಮ, ಜಾತಿ ಮುಂತಾದ ವಿಷಯಗಳ ಬಗ್ಗೆ ಚರ್ಚೆ ಆಗುತ್ತಿದೆ. ರಾಜಕೀಯ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಕುರಿತು ಚರ್ಚೆ ಆಗಬೇಕಾದ ಅನಿವಾರ್ಯತೆ ಇದೆ ಎಂದು ಅವರು ಪ್ರತಿಪಾದಿಸಿದರು.

ಸಂವಿಧಾನವನ್ನು ಸರಿಯಾಗಿ ಓದಿ ಸಮರ್ಪಕವಾಗಿ ಅಳವಡಿಕೊಂಡಿಲ್ಲ. ಒಂದು ವೇಳೆ ಸಂವಿಧಾನವನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಲ್ಲಿ, ನಾಲ್ಕೈದು ವರ್ಷಗಳಲ್ಲಿ ಮೂಲಭೂತ ಸಮಸ್ಯೆಗಳು ಬಗೆಹರಿಸಬಹುದಾಗಿದೆ. ಹಾಗಾಗಿ ದೋಷ ಇರುವುದು ಸಂವಿಧಾನದಲ್ಲಿ ಅಲ್ಲ, ನಮ್ಮಲ್ಲಿ ಎಂದು ಅವರು ಸ್ಪಷ್ಟಪಡಿಸಿದರು. 

ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ 2,500 ಕೋಟಿ ರೂ.ಲಂಚವನ್ನು ನೀಡುವ ಸ್ಥಿತಿಗೆ ಬಂದಿದ್ದೇವೆ. ಇದಲ್ಲದೆ, ಶೇ.97ರಷ್ಟು ಜನರು ಏನನ್ನು ಓದಬೇಕು ಎಂದು ಶೇ.3ರಷ್ಟು ಜನರು ನಿರ್ಧಾರ ಮಾಡುತ್ತಿರುವುದು ವಿಪರ್ಯಾಸ ಎಂದು ಇದೇ ವೇಳೆ ಟೀಕಿಸಿದರು. ಕಾರ್ಯಕ್ರಮದಲ್ಲಿ ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

‘ದೇಶದಲ್ಲಿ ಶೇ.60ರಷ್ಟು ಸಂಪತ್ತು ಶೇ.1ರಷ್ಟು ಜನರಲ್ಲಿ, ಶೇ.20ರಷ್ಟು ಸಂಪತ್ತು ಶೇ.9ರಷ್ಟು ಜನರಲ್ಲಿ ಹಾಗೂ ಶೇ.20ರಷ್ಟು ಸಂಪತ್ತು ಶೇ.90ರಷ್ಟು ಜನರಲ್ಲಿ ಹಂಚಿಕೆಯಾಗಿದ್ದು, ಅಸಮಾನತೆ ಭಾರತವನ್ನು ನಿರ್ಮಾಣ ಮಾಡಿದ್ದಾರೆ. ಆದರೆ, ದೇಶದಲ್ಲಿ ಇನ್ನೂ ಶೇ.22ರಷ್ಟು ಜನರು ನಿರಾಶ್ರಿತರು ಇದ್ದಾರೆಂಬುದು ಸರಕಾರಗಳಿಗೆ ಮನವರಿಕೆ ಆಗಬೇಕು' 

-ನಾಗಮೋಹನ್ ದಾಸ್, ನಿವೃತ್ತ ನ್ಯಾಯಮೂರ್ತಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)