ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಮೂರು ವರ್ಷಗಳ ಬಳಿಕ ಟಿಎಂಸಿಗೆ ‘ಘರ್ ವಾಪ್ಸಿ’
ಕೋಲ್ಕತಾ,ಮೇ 22: ಪ.ಬಂಗಾಳದ ಬರಾಕ್ಪೋರ್ನ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರು ರವಿವಾರ ಪಕ್ಷವನ್ನು ತೊರೆದು ಟಿಎಂಸಿಗೆ ಮರಳಿದ್ದಾರೆ. ಅವರು ಬಿಜೆಪಿಯ ಪ.ಬಂಗಾಳ ಘಟಕದ ಉಪಾಧ್ಯಕ್ಷರೂ ಆಗಿದ್ದರು. ಮೂರು ವರ್ಷಗಳ ಹಿಂದೆ ಟಿಎಂಸಿ ತೊರೆದಿದ್ದ ಅವರು 2019ರ ಲೋಕಸಭಾ ಚುನಾವಣೆಗಳ ಮುನ್ನ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.ಟಿಎಂಸಿ ಕಚೇರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ ಬ್ಯಾನರ್ಜಿಯವರು ಸಿಂಗ್ರನ್ನು ಪಕ್ಷಕ್ಕೆ ಬರಮಾಡಿಕೊಂಡರು.ಸಿಂಗ್ ಮತ್ತು ಕಳೆದ ವರ್ಷದ ಸೆಪ್ಟಂಬರ್ನಲ್ಲಿ ಬಾಬುಲ್ ಸುಪ್ರಿಯೊ ಅವರ ಟಿಎಂಸಿ ಸೇರ್ಪಡೆಯ ಬಳಿಕ ಪ.ಬಂಗಾಳದಿಂದ ಬಿಜೆಪಿ ಸಂಸದರ ಸಂಖ್ಯೆ 18ರಿಂದ 16ಕ್ಕೆ ಇಳಿದಿದೆ.ಸಂಘಟನೆಯಲ್ಲಿ ತಾನು ಹಿರಿಯ ಸ್ಥಾನವನ್ನು ಹೊಂದಿದ್ದರೂ ಪಕ್ಷದ ರಾಜ್ಯ ನಾಯಕತ್ವವು ತನಗೆ ಸೂಕ್ತವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡುತ್ತಿಲ್ಲ ಎಂದು ಸಿಂಗ್ ಇತ್ತೀಚಿಗೆ ಆರೋಪಿಸಿದ್ದರು.
Next Story