varthabharthi


ನಿಮ್ಮ ಅಂಕಣ

ತ್ರಿಶೂಲ ದೀಕ್ಷೆ ಮತ್ತು ಶಸ್ತ್ರಾಸ್ತ್ರ ತರಬೇತಿ ಯಾರ ವಿರುದ್ಧ?

ವಾರ್ತಾ ಭಾರತಿ : 23 May, 2022
ಪ್ರೊ. ಶಿವರಾಮಯ್ಯ, ಬೆಂಗಳೂರು

ದೇಶವಾಸಿ ಬಹುಸಂಖ್ಯಾತ ಶೂದ್ರ ವರ್ಗವು ಸವರ್ಣೀಯರ ಮಾತಿಗೆ ಮರುಳಾಗಿ ಬ್ರೈನ್‌ವಾಷ್ ಆಗದೆ ‘ದೇಶವು ನನ್ನದು, ನನ್ನದೀ ಭಾರತ’ ಎಂಬ ಎಚ್ಚರದ ಪ್ರಜ್ಞೆಯಿಂದ ದುಡಿಯಬೇಕು. ಆಗ ಕೈ ಜಾರುತ್ತಿರುವ ಪ್ರಜಾತಂತ್ರವನ್ನು ಸರ್ವಾಧಿಕಾರತ್ವದಿಂದ ತಪ್ಪಿಸಿ ಕಾಪಾಡಿಕೊಳ್ಳಬಹುದು ಮತ್ತು ಅಮಾಯಕರ ಅಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರ ಹಿಡಿಯುವವರ ಬಗ್ಗೆ ಸದಾ ಕಟ್ಟೆಚ್ಚರ ವಹಿಸಬೇಕು. ದೇವರು, ಧರ್ಮ, ಶಾಸ್ತ್ರ ಮುಂತಾಗಿ ಮೂಢನಂಬಿಕೆಗಳನ್ನು ಬಿತ್ತಿ ಜನರನ್ನು ದಿಕ್ಕು ತಪ್ಪಿಸುವವರಿಂದ ದೂರ ಇರಬೇಕು. ಆಗ ಮಾತ್ರ ರಾಷ್ಟ್ರೋತ್ಥಾನ ಸಾಧ್ಯ

ಕೊಡಗು ಜಿಲ್ಲೆ ಪೊನ್ನಂಪೇಟೆ ಶಾಲೆ ಒಂದರ ಆವರಣದಲ್ಲಿ ಬಜರಂಗದಳ ನಡೆಸಿದ ತ್ರಿಶೂಲ ದೀಕ್ಷೆ ಮತ್ತು ಬಂದೂಕು ತರಬೇತಿಯಂತಹ ಕಾನೂನು ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡಿರುವ ಬಗ್ಗೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ‘‘ಆ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಣ ಮಂತ್ರಿ ಬಿ.ಸಿ. ನಾಗೇಶ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’’ ಎಂದು ಆಗ್ರಹಿಸಿದ್ದಾರೆ; ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ‘‘ಆತ್ಮರಕ್ಷಣೆಗಾಗಿ ಏರ್ ಗನ್ ತರಬೇತಿ’’ ಎಂದಿದ್ದಾರೆ; ‘‘ತ್ರಿಶೂಲ ನೀಡುವ ಸಂಪ್ರದಾಯ

ವಿದೆ’’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಸಮರ್ಥಿಸಿಕೊಂಡಿದ್ದಾರೆ. ಕೊಡಗು ಜಿಲ್ಲೆ ಎಸ್ಪಿಎಂ.ಎ. ಅಯ್ಯಪ್ಪ ‘‘ತನಿಖೆ ನಡೆಯುತ್ತಿದೆ’’ ಎಂದಿದ್ದಾರೆ. ಜೆಡಿಎಸ್ ಪಕ್ಷ ‘‘ಇದು ಸರಿಯಾದ ಕ್ರಮವಲ್ಲ’’ ಎಂದರೆ; ಕಾಂಗ್ರೆಸ್ ಪಕ್ಷ ‘‘ಶಾಲೆಯಲ್ಲಿ ತ್ರಿಶೂಲ ದೀಕ್ಷೆ ಹಾಗೂ ಗನ್ ತರಬೇತಿಗೆ ಅನುಮತಿ ಕೊಟ್ಟವರಾರು?’’ ಎಂದು ಪ್ರಶ್ನಿಸಿದೆ. ಇನ್ನು ಸುದ್ದಿ ಮಾಧ್ಯಮಗಳಂತೂ ‘‘ಇಂದೆನಗೆ ಆಹಾರ ಸಿಕ್ಕಿತು’’ ಎಂದು ಬಾಯಿಗೆ ಬಂದಂತೆ ಪರ- ವಿರೋಧದ ಮಾತುಗಳನ್ನಾಡುತ್ತ ಶಂಖ ಊದುತ್ತಿವೆ.

ಕಾಕತಾಳೀಯವೊ ಎಂಬಂತೆ ಮೇ 16, 2022ರಂದು ‘ವೈಶಾಖ ಬುದ್ಧ ಪೂರ್ಣಿಮೆ’ ಆಗಿದ್ದು ಬೆಂಗಳೂರು ಗಾಂಧಿನಗರದ ಮಹಾ ಬೋಧಿ ಸೊಸೈಟಿಯಲ್ಲಿ ಬುದ್ಧಪೂರ್ಣಿಮೆ ಅಂಗವಾಗಿ ಬೌದ್ಧಭಿಕ್ಷು ಗಳು ಕಾವಿ ನಿಲುವಂಗಿಯುಟ್ಟು ಬುದ್ಧಮೂರ್ತಿ ಹಾಗೂ ಬೋಧಿ ವೃಕ್ಷಕ್ಕೆ ಪಾರ್ಥನೆ ಸಲ್ಲಿಸುವ ದೃಶ್ಯ ಕಣ್ಣು ತುಂಬುತ್ತದೆ. ಇದು ಇಂಥ ದುರಿತ ಕಾಲಕ್ಕೆ ಬುದ್ಧಮಾರ್ಗವೊಂದೇ ಶರಣು ಎಂಬಂತಿದೆ.

ಆದರೆ, ಶಾಲಾ ಮಕ್ಕಳಿಗೆ ಈ ತ್ರಿಶೂಲ ದೀಕ್ಷೆ ಮತ್ತು ಶಸ್ತ್ರಾಸ್ತ್ರ ತರಬೇತಿ ನೀಡುವುದರ ಹಿಂದಿರುವ ಉದ್ದೇಶವೇನು? ಯಾರ ವಿರುದ್ಧ ಈ ತರಬೇತಿ ಮತ್ತು ದೀಕ್ಷೆ? ಇದಕ್ಕೆ ನಿರ್ದೇಶನ ಕೊಟ್ಟವರು ಯಾರು? ಯಾವ ಕಾಣದ ಕೈ ಕೆಲಸ ಮಾಡುತ್ತಿದೆ? ಮುಂತಾಗಿ ದೇಶವಾಸಿ ಪ್ರಜೆಗಳಲ್ಲಿ ಆತಂಕ ಮೂಡುವಂತಾಗಿದೆ. ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಪ್ರಭುತ್ವ ಈ ಬಗ್ಗೆ ತ್ವರಿತ ಕ್ರಮ ಕೈೊಳ್ಳದೆ ಮೀನ ಮೇಷ ಎಣಿಸುತ್ತಿದೆ.

ಇಂಥ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನೋಡಿದರೆ, ಈ ಬಗೆಯ ಚಟುವಟಿಕೆಗಳನ್ನು ಹಮ್ಮಿಕೊಂಡು ಜನರ ಗಮನ ಸೆಳೆಯುವುದು ಸಂಘಪರಿವಾರದ ಕಾರ್ಯಕರ್ತರಿಗೆ ಹೊಸದೇನಲ್ಲ. ಹಿಂದೆ ಕೇಂದ್ರ ದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಆಳ್ವಿಕೆ ಇದ್ದಾಗಲೇ ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ಇಂಥ ಚಟುವಟಿಕೆಗಳು ಕಂಡು ಬಂದವು-ಎರಡು ದಶಕಗಳ ಹಿಂದೆಯೇ. ಆಗ ಬಜರಂಗದಳ ದ ಕಾರ್ಯಕರ್ತರಿಗೆ ಲಕ್ಷಾಂತರ ತ್ರಿಶೂಲಗಳನ್ನು ಹಂಚಿ ದೀಕ್ಷೆ ಕೊಡಲಾಯಿತು. ರಾಮಾಯಣವಲ್ಲ, ಭಗವದ್ಗೀತೆಯಲ್ಲ, ಮಹಾ ಭಾರತವಲ್ಲ; ಈ ತ್ರಿಶೂಲ ಹಂಚಿಕೆ ಯಾವ ಪುರುಷಾರ್ಥಕ್ಕೆ ಎಂದು ಸುದ್ದಿ ಮಾಧ್ಯಮಗಳು ಪ್ರಶ್ನಿಸಿದ್ದವು. ಆಗ ಆರೆಸ್ಸೆಸ್ ನೇತಾರ ಬೆಂಗಳೂರಿನ ‘ಸಮರಸತಾ ಸಂಗಮ’ದ ವೇಳೆ ಹೇಳಿದ ಮಾತೆಂದರೆ ‘‘ಆತ್ಮರಕ್ಷಣೆಗೆ ನಾವು ಇನ್ನಷ್ಟು ಅಗ್ರೆಸೀವ್ ಆಗಬೇಕು; ಎಂದರೆ ಆಕ್ರಮಣ ಶೀಲರಾಗಬೇಕು’’ ಎಂದು. ಅಂದು ಉದ್ಭವವಾದ ಬೇತಾಳ ಪ್ರಶ್ನೆ ಇಂದಿಗೂ ಉಳಿದಿದೆ. ಎಂದರೆ ದಕ್ಷಿಣ ಒಳನಾಡಿನ ಜನರಾದ ನಾವು ಯಾರ ವಿರುದ್ಧ ಅಗ್ರೆಸೀವ್ ಆಗಬೇಕು? ನಮ್ಮ ಆತ್ಮರಕ್ಷಣೆಗೆ ಯಾರಿಂದ ಅಪಾಯ ಬಂದಿದೆ? ಎಲ್ಲಿ ಬಂದಿದೆ? ಯಾಕಾಗಿ ತೋಳ ಬಂತು ತೋಳ ಎಂಬ ಭಯವನ್ನು ಬಿತ್ತುತ್ತಿದ್ದಾರೆ ಎಂದೆಲ್ಲ ಪ್ರಶ್ನಿಸಲಾಯಿತು. ಆದರೆ ಈ ಬಗ್ಗೆ ಸಂವಾದ-ಚರ್ಚೆಗೆ ಯಾರೂ ಮುಂದಾಗಲಿಲ್ಲ. ಇದನ್ನು ಹೆಚ್ಚು ಬೆಳೆಸಬೇಕಾದ ಅಗತ್ಯವಿಲ್ಲ. ಭಯೋತ್ಪಾದಕರ ಗನ್ನುಗಳು ಯಾವತ್ತೂ ಗಾಂಧಿಯಂಥ ಅಹಿಂಸಾ ಮೂರ್ತಿಯತ್ತಲೇ ಗುರಿಯಿಟ್ಟಿರುತ್ತವೆ; ಲಿಬರ್ಟಿ ಸ್ಟಾಚ್ಯು ಕಡೆಗೇ ಮುಂದುವರಿಯುತ್ತಿರುತ್ತವೆ.

ಪ್ರಸ್ತುತ ರಾಷ್ಟ್ರ ವ್ಯಾಪಿ ಇರುವ ಮಸೀದಿಗಳೆಲ್ಲಾ ಹಿಂದೆ ಹಿಂದೂ ದೇವಾಲಯಗಳೇ ಆಗಿದ್ದುವು-ಜಗದ್ವಿಖ್ಯಾತ ತಾಜ್ ಮಹಲ್ ಕೂಡ ಸೇರಿ ಎಂಬುದು ಹಿಂದುತ್ವ ವಾದಿಗಳ ಅಂಬೋಣ. ಈ ನಿಟ್ಟಿನಲ್ಲಿ ಕೋರ್ಟುಗಳ ಕಣ್ಗಾವಲಿನಲ್ಲಿ ಸದ್ಯ ಜ್ಞಾನವಾಪಿ ಸೇರಿದಂತೆ ಕೆಲ ಮಸೀದಿಗಳ ಸರ್ವೇ ನಡೆಯುತ್ತಿದೆಯಷ್ಟೆ. ಇತಿಹಾಸದಲ್ಲಿ ಆದದ್ದು ಆಗಿಹೋಗಿದೆ. ಇದನ್ನು ಕೆದಕುವುದು, ಸಮಾಜದ ಸಾಮರಸ್ಯ ಕದಡುವುದು ಬೇಡ ಎನ್ನುವಂತೆಯೇ ಇಲ್ಲ. ಬರ್ಲಿನ್ ಗೋಡೆ ಉರುಳಿದರೂ ಭಾರತದಲ್ಲಿ ಮಾತ್ರ ಕೋಮುವಾದದ ಗೋಡೆಗಳು ಏಳುತ್ತಲೇ ಇವೆ.

ಸ್ವಾತಂತ್ರ್ಯದ ಅಮೃತ ವರ್ಷ ಹಬ್ಬವನ್ನು ಆಚರಿಸುವ ಸಂದರ್ಭ ದಲ್ಲೂ ಯಾಕಿಂತಹ ಕಿರಿಕಿರಿ ಎಂಬುದೇ ತಿಳಿಯದಾಗಿದೆ. ದೇಶದಲ್ಲಿ ಬಹುಸಂಖ್ಯಾತ ಪ್ರಜೆಗಳು ಹಿಂದೂಗಳೇ ಆಗಿರುವಾಗ ಆತ್ಮರಕ್ಷಣೆಯ ಮಾತೆಲ್ಲಿ ಬಂತು? ವಿದೇಶಿ ಆಕ್ರಮಣಕಾರರನ್ನು ಎದುರಿಸಲು ನಮ್ಮ ಚತುರಂಗಬಲ ಸದಾ ಸಿದ್ಧವಿದೆ. ಹಾಗಿರುವಾಗ ಶಾಲಾ ಕಾಲೇಜುಗಳಲ್ಲಿ ತ್ರಿಶೂಲದೀಕ್ಷೆ ಮತ್ತು ಬಂದೂಕು ತರಬೇತಿ ನೀಡುವುದು ಎಷ್ಟರ ಮಟ್ಟಿಗೆ ಸರಿ? ಇದು ಕಾನೂನು ಬಾಹಿರವಲ್ಲವೇ?

ದಶಕಗಳ ಹಿಂದೆ ಜಾಗತೀಕರಣದಿಂದ ಕೋಟ್ಯಂತರ ಯುವಜನ ನಿರುದ್ಯೋಗಿಗಳಾದರು. ದೇಶದ ಆರ್ಥಿಕತೆ ಇನ್ನೇನು ಸುಧಾರಿಸಿಕೊಳ್ಳುತ್ತದೆ ಎನ್ನುವಷ್ಟರಲ್ಲಿ ಕೊರೋನ ಸಾಂಕ್ರಾಮಿಕ ಬಂದು ತಲ್ಲಣಗೊಳಿಸಿತು. ಕಳೆದ ಎರಡು ವರ್ಷದಿಂದ ನಿರುದ್ಯೋಗ ಗರಿಷ್ಠ ಮಟ್ಟಕ್ಕೇರಿದೆ. ಹಣದುಬ್ಬರ, ಬೆಲೆ ಏರಿಕೆ, ಶಿಕ್ಷಣ, ಆರೋಗ್ಯ, ಸಾರಿಗೆ ಮುಂತಾದ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಅತ್ತ ಉಕ್ರೇನ್-ರಶ್ಯ ಸಮರ ನಡೆಯುತ್ತಿರುವುದರಿಂದ ತೈಲ ಬೆಲೆ ಗಗನಕ್ಕೇರುತ್ತಿದೆ. ಇಂಥ ಹೊತ್ತಿನಲ್ಲಿ ದೇಶವಾಸಿಗಳ ಗಮನವನ್ನು ಧಾರ್ಮಿಕ ಕಾರ್ಯ ಚಟುವಟಿಕೆಗಳತ್ತ ತಿರುಗಿಸಿ ಅದರ ಲಾಭ ಪಡೆಯಲು ಆಳುವ ಪಕ್ಷ ಯತ್ನಿಸುವಂತೆ ಕಾಣುತ್ತಿದೆ. ಇದನ್ನರಿಯದ ಅಮಾಯಕ ಶೂದ್ರ ವರ್ಗದ ಯುವಜನರಿಗೆ ತ್ರಿಶೂಲ, ತಲವಾರ್, ಸಿಡಿಮದ್ದುಗಳನ್ನು ನೀಡಿ ಅನ್ಯ ಕೋಮುಗಳತ್ತ ಎತ್ತಿ ಕಟ್ಟಲು ನೋಡುತ್ತಿದ್ದಾರೆ. ಇಷ್ಟಕ್ಕೂ ಅನ್ಯಕೋಮಿನ ಜನರೇನು ಇಲ್ಲಿಗೆ ವಲಸೆ ಬಂದವರಲ್ಲವಲ್ಲ. ಅವರೂ ಭಾರತೀಯ ಪ್ರಜೆಗಳೇ. ಅವರಿಗೂ ಸಂವಿಧಾನ ಬದ್ಧ ಸಾಮಾಜಿಕ ಸ್ಥಾನ ಮಾನ ಹಕ್ಕು ಬಾಧ್ಯತೆ ಉಂಟು. ದ್ವೇಷ ರಾಜಕಾರಣದಿಂದ ಯಾವ ಅಭಿವೃದ್ಧಿಯೂ ಸಾಧ್ಯವಿಲ್ಲ. ಇದಕ್ಕಿಂತ ಬೇರೆ ರೀತಿಯ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸೂಕ್ತ.

ಮೊದಲನೆಯದಾಗಿ, ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ತತ್ತರಿಸುತ್ತಿರುವ ಪ್ರದೇಶಗಳಲ್ಲಿ ಚೆಕ್ ಡ್ಯಾಮ್, ಕೆರೆ ಕಟ್ಟೆ ಕಾಲುವೆ ಗಳ ನಿರ್ಮಾಣ; ಜಲಸಂಪನ್ಮೂಲ ಅನ್ವೇಷಣೆ ಮುಂತಾದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಯುವಜನರು ತೊಡಗುವಂತೆ ಯೋಜನೆ ಗಳನ್ನು ರೂಪಿಸಬೇಕು. ಊರು ಕೇರಿ ಮಠ ಮಾನ್ಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಶ್ರಮದಾನ ಶಿಬಿರಗಳನ್ನು ಏರ್ಪಡಿಸುವುದು; ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದುಡಿಯುವ ಕೈಗಳಿಗೆಲ್ಲಾ ಕೆಲಸ ಕೊಡುವುದು; ಎಲ್ಲಕ್ಕಿಂತ ಮಿಗಿಲಾಗಿ ಗ್ರಾಮೀಣ ಭಾರತದಲ್ಲಿ ನೂರಕ್ಕೆ ನೂರು ಅಕ್ಷರ ಬಿತ್ತನೆಯ ಮೂಲಕ ಅನಕ್ಷರತೆಯನ್ನು ಹೋಗಲಾಡಿಸ ಬೇಕು. ಆಗ ದೇಶ ಸರ್ವಜನಾಂಗದ ಶಾಂತಿಯ ತೋಟವಾಗಿ ರೂಪುಗೊಳ್ಳುವುದು. ಈ ಸವಾಲುಗಳನ್ನು ಪಕ್ಷಭೇದವಿಲ್ಲದೆ ಸ್ವೀಕರಿಸುವುದಾದರೆ ರಾಷ್ಟ್ರಪಿತ ಬಯಸಿದ ಗ್ರಾಮಸ್ವರಾಜ್ಯ ನನಸಾಗಿ ‘ಪಿತೃಹತ್ಯಾ ದೋಷ’ದಿಂದ ದೇಶ ಮುಕ್ತವಾದೀತು!

ಕೊನೆಯದಾಗಿ, ದೇಶವಾಸಿ ಬಹುಸಂಖ್ಯಾತ ಶೂದ್ರ ವರ್ಗವು ಸವರ್ಣೀಯರ ಮಾತಿಗೆ ಮರುಳಾಗಿ ಬ್ರೈನ್‌ವಾಷ್ ಆಗದೆ ‘ದೇಶವು ನನ್ನದು, ನನ್ನದೀ ಭಾರತ’ ಎಂಬ ಎಚ್ಚರದ ಪ್ರಜ್ಞೆಯಿಂದ ದುಡಿಯಬೇಕು. ಆಗ ಕೈ ಜಾರುತ್ತಿರುವ ಪ್ರಜಾತಂತ್ರವನ್ನು ಸರ್ವಾಧಿಕಾರತ್ವದಿಂದ ತಪ್ಪಿಸಿ ಕಾಪಾಡಿಕೊಳ್ಳಬಹುದು ಮತ್ತು ಅಮಾಯಕರ ಅಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರ ಹಿಡಿಯುವವರ ಬಗ್ಗೆ ಸದಾ ಕಟ್ಟೆಚ್ಚರ ವಹಿಸಬೇಕು. ದೇವರು, ಧರ್ಮ, ಶಾಸ್ತ್ರ ಮುಂತಾಗಿ ಮೂಢನಂಬಿಕೆಗಳನ್ನು ಬಿತ್ತಿ ಜನರನ್ನು ದಿಕ್ಕು ತಪ್ಪಿಸುವವರಿಂದ ದೂರ ಇರಬೇಕು. ಆಗ ಮಾತ್ರ ರಾಷ್ಟ್ರೋತ್ಥಾನ ಸಾಧ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)