varthabharthi


ಕಾಲಂ 9

ಅರ್ಧ ಸತ್ಯ, ಸಂಘೀ ಸತ್ಯ ಮತ್ತು ಮಕ್ಕಳ ಭವಿಷ್ಯ

ವಾರ್ತಾ ಭಾರತಿ : 25 May, 2022
ಶಿವಸುಂದರ್

ಕೋಮು ಧ್ರುವೀಕರಣದ ರಾಜಕಾರಣದಿಂದ ರಾಜ್ಯಾಧಿಕಾರವನ್ನೂ ಮತ್ತು ಜನಮಾನಸದಲ್ಲಿ ನೆಲೆಯನ್ನೂ ಪಡೆದುಕೊಂಡಿರುವ ಆರೆಸ್ಸೆಸ್-ಬಿಜೆಪಿ ಫ್ಯಾಶಿಸ್ಟ್ ಶಕ್ತಿಗಳು ಒಂದು ಶಾಶ್ವತ ಹಿಂದೂ-ಬ್ರಾಹ್ಮಣೀಯ ಸಮಾಜವನ್ನು ಕಟ್ಟಿ ಶಾಶ್ವತ ಹಿಂದೂ ಮೆಜಾರಿಟಿಯನ್ನು ಸೃಷ್ಟಿಸಿಕೊಳ್ಳುವ ಆಧುನಿಕ ಫ್ಯಾಶಿಸ್ಟ್ ಯೋಜನೆಯನ್ನು ಹೊಂದಿದೆ. ನವಶಿಕ್ಷಣ ನೀತಿಯಲ್ಲಿ ಈಗಾಗಲೇ ದೇಶಾದ್ಯಂತ ಎಲ್ಲಾ ಮಟ್ಟದಲ್ಲೂ ಬ್ರಾಹ್ಮಣ ಶ್ರೇಷ್ಠತೆಯನ್ನು, ಮುಸ್ಲಿಮ್ ದ್ವೇಷ ಮತ್ತು ಕ್ರಿಶ್ಚಿಯನ್‌ದ್ವೇಷವನ್ನು ಬೋಧಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಅದಕ್ಕೆ ತಕ್ಕಂತೆ ಒಂದು ಪಠ್ಯಕ್ರಮದ ಫ್ರೇಂವರ್ಕ್ ಕೂಡಾ ತಯಾರಾಗುತ್ತಿದೆ. ಈ ಪಠ್ಯ ಪರಿಷ್ಕರಣೆ ಅದರ ಒಂದು ಸಣ್ಣ ಭಾಗ ಅಷ್ಟೇ.ಸಿಇಟಿ ಪ್ರೊಫೆೆಸರ್ ರೋಹಿತ್ ಚಕ್ರತೀರ್ಥ ಅವರ ನೇತೃತ್ವದಲ್ಲಿ ನಡೆಸಲಾಗಿರುವ ಇತಿಹಾಸ ಪರಿಷ್ಕರಣೆಯನ್ನು ಸಂಘೀ ಸರಕಾರ ಸಂಪೂರ್ಣವಾಗಿ ಸಮರ್ಥಿಸಿಕೊಂಡಿರುವುದಲ್ಲದೆ, ಅದೇ ಮಹಾಶಯರಿಗೆ ಪಿಯು ಪಠ್ಯಗಳನ್ನು ತಿದ್ದುವ ಜವಾಬ್ದಾರಿಯನ್ನೂ ನೀಡಲಾಗಿದೆ. ಇದು ನಿರೀಕ್ಷಿತವೇ. ಮೋದಿಯಂತಹವರು ಪ್ರಧಾನ ಮಂತ್ರಿಯೂ, ಅಮಿತ್ ಶಾರಂತಹವರು ಗೃಹಮಂತ್ರಿಯೂ ಅಗಬಹುದಾದ ದೇಶದಲ್ಲಿ ರೋಹಿತ್ ಚಕ್ರತೀರ್ಥ ಪ್ರೊಫೆಸರ್ ಆಗುವುದು, ಸೂಲಿಬೆಲೆಯಂತಹವರ ಸುಳ್ಳುಪೊಳ್ಳುಗಳು ಅಧಿಕೃತ ಪಠ್ಯವಾಗುವುದರಲ್ಲಿ ಆಶ್ಚರ್ಯವೇನಿಲ್ಲ. ಈ ದೇಶದಲ್ಲಿ ನಡೆಯುತ್ತಿರುವ ಸಂವಿಧಾನ ವಿರೋಧಿ ಪ್ರತಿಕ್ರಾಂತಿಯ ಭಾಗಗಳಿವು. ಇವಕ್ಕೆ ಬಿಡಿಬಿಡಿ ಪರಿಹಾರಗಳಿವೆಯೇ ಎಂಬುದು ಅನುಮಾನ. ಇರಲಿ. ಶಿಕ್ಷಣ ಮಂತ್ರಿ ನಾಗೇಶರ ಪ್ರಕಾರ ಈವರೆಗೆ ನಮ್ಮ ಮಕ್ಕಳಿಗೆ ಅರ್ಧ ಸತ್ಯವನ್ನು ಕಲಿಸಲಾಗಿದೆ. ಬಿಜೆಪಿ ಸರಕಾರ ಸಂಪೂರ್ಣ ಸತ್ಯವನ್ನು ಕಲಿಸುವ ತೀರ್ಮಾನ ಮಾಡಿದೆ. ಹೀಗಾಗಿ ಕೆಲವು ಪಠ್ಯಗಳನ್ನು ಕಿತ್ತುಹಾಕಲಾಗಿದೆ. ಕೆಲವನ್ನು ಸೇರಿಸಲಾಗಿದೆ ಇತ್ಯಾದಿ. ವಾದಕ್ಕಾಗಿ, ಬಿಜೆಪಿ ಸರಕಾರದ ಘನ ಉದ್ದೇಶ ಅದೇ ಆಗಿತ್ತು ಎಂದಿಟ್ಟುಕೊಂಡರೂ, ಪಠ್ಯ ಪರಿಶೀಲನೆಯನ್ನು ಪರಿಪೂರ್ಣ ಮತ್ತು ಪರಿಪಕ್ವ ಮಾಡಲು ಬಿಜೆಪಿ ಸರಕಾರ ಹಿಂದಿನ ಬರಗೂರು ಸಮಿತಿಗಿಂತ ಹೆಚ್ಚಿನ ವಿಷಯ ಪರಿಣಿತರನ್ನು ಹಾಗೂ ಇನ್ನು ಎಲ್ಲಾ ಬಗೆಯ ಪ್ರಾತಿನಿಧ್ಯ ಇರುವಂಥ ಪರಿಪಕ್ವ ಸಮಿತಿಯನ್ನು ರಚಿಸಬೇಕಿತ್ತಲ್ಲವೇ? ಆದರೆ ಬಿಜೆಪಿ ಸರಕಾರ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ರಚಿಸಲಾದ ಸಮಿತಿ ಬರಗೂರು ಸಮಿತಿಯ ವೈವಿಧ್ಯ ಹಾಗೂ ಪರಿಣತಿಗಳಿಗೆ ಹಾಗೂ ಆ ಸಮಿತಿ ಅನುಸರಿಸಿದ ಪ್ರಕ್ರಿಯೆಗಳಿಗೆ ಹೋಲಿಸಿದಲ್ಲಿ ಚಕ್ರತೀರ್ಥ ಸಮಿತಿ ಅದರ ಅರ್ಧದಷ್ಟನ್ನೂ ಅನುಸರಿಸಿಲ್ಲ. ಖುದ್ದು ರೋಹಿತ್ ಚಕ್ರತೀರ್ಥರಿಗೆ ಹಿಂದುತ್ವವಾದಿ ವಾಚಾಳಿ ಸಾರ್ವಜನಿಕ ದ್ವೇಷ ಭಾಷಣಕಾರ ಎನ್ನುವ ಅರ್ಹತೆ ಬಿಟ್ಟರೆ ಪಠ್ಯ ಪರಿಷ್ಕರಣೆಗೆ ಬೇಕಾದ ಯಾವ ಅರ್ಹತೆಯೂ ಇಲ್ಲ. ಅದರ ಅರ್ಥ ಬರಗೂರು ಸಮಿತಿಯು ಕೂಡಾ ಪರಿಣಿತಿ ಮತ್ತು ಪ್ರಕ್ರಿಯೆಗಳ ಕಾರಣಕ್ಕೆ ಸಂಪೂರ್ಣ ದೋಷಾತೀತವೆಂದೇನೂ ಅಲ್ಲ. ಆದರೆ ಅದರ ದೋಷವನ್ನು ತಿದ್ದಬೇಕಾದರೆ ಆ ಸಮಿತಿಗಿಂತ ಹೆಚ್ಚಿನ ಪ್ರಕ್ರಿಯೆ ಮತ್ತು ಪರಿಣತಿ ಇರಬೇಕಲ್ಲವೇ? ಎರಡನೆಯದು ಅರ್ಧ ಸತ್ಯದ ಪ್ರಶ್ನೆ.

ಪೂರ್ಣ ಸತ್ಯವೋ? ಸಂಘೀ ಸತ್ಯವೋ?

ಬಿಜೆಪಿ ಸರಕಾರದ ಪ್ರಕಾರ ಬರಗೂರು ಸಮಿತಿಯ ಪಠ್ಯಗಳು ಮಾತ್ರವಲ್ಲ ಈವರೆಗಿನ ಎಲ್ಲಾ ಪಠ್ಯಗಳು ವಿದ್ಯಾರ್ಥಿಗಳಿಗೆ ಅರ್ಧ ಸತ್ಯವನ್ನು ಮಾತ್ರ ಬೋಧಿಸಿವೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಸಂಪೂರ್ಣ ಸತ್ಯವನ್ನು ತಿಳಿಸಲೆಂದೇ ಪಠ್ಯ ಪರಿಷ್ಕರಣೆ ಮಾಡಲಾಗಿದೆ. ಹಾಗಿದ್ದಲ್ಲಿ ಈಗ ಚಕ್ರತೀರ್ಥ ಸಮಿತಿ ಕಿತ್ತುಹಾಕಿರುವ ಮತ್ತು ಸೇರಿಸಿರುವ ಪಠ್ಯಗಳು ಪೂರ್ಣ ಸತ್ಯವನ್ನು ಹೇಳುತ್ತವೆಯೋ ಅಥವಾ ಪೂರ್ಣ ಸತ್ಯದ ಹೆಸರಿನಲ್ಲಿ ಸಂಘೀ ಸತ್ಯಗಳನ್ನು ಹೇಳುತ್ತವೋ ಎಂಬುದು ಮುಖ್ಯವಾದ ಪ್ರಶ್ನೆ. ಏಕೆಂದರೆ ಪರಮ ಹಾಗೂ ಅಂತಿಮ ಸತ್ಯ ಎಂಬ ಪರಿಕಲ್ಪನೆಗಳು ಭಾವನಾವಾದಿ ತತ್ವಶಾಸ್ತ್ರದಲ್ಲಿ ಸುಸಂಬದ್ಧವಾಗಿರುತ್ತವೆಯೇ ವಿನಾ ಸಾಮಾಜಿಕ ವಿಜ್ಞಾನಗಳಲ್ಲ. ಹೀಗಾಗಿ ಸತ್ಯವೆಂಬುದು ವ್ಯಕ್ತಿನಿಷ್ಠವಾಗಿರುತ್ತದೆ. ಹಾಗೂ ಆ ವ್ಯಕ್ತಿಗಳ ರಾಜಕೀಯ ಮತ್ತು ಸೈದ್ಧಾಂತಿಕ ದೃಷ್ಟಿಕೋನದ ಪ್ರಭಾವ ಇದ್ದೇ ಇರುತ್ತದೆ. ನಮ್ಮ ಸ್ವಾತಂತ್ರ್ಯ ಹೋರಾಟವೂ ಮತ್ತು ನಮ್ಮ ಸಂವಿಧಾನವು ಸಹ ಆ ಬಗೆಯಲ್ಲಿ ಎರಡು ತದ್ವಿರುದ್ಧ ರಾಜಕೀಯ ತಾತ್ವಿಕತೆಗಳ ಸಂಘರ್ಷವೇ ಆಗಿತ್ತು. ಕೊನೆಯಲ್ಲಿ ಸಾವರ್ಕರ್, ಹೆಡಗೆವಾರ್ ಪ್ರತಿನಿಧಿಸುತ್ತಿದ್ದ ಹಿಂದುತ್ವವಾದಿ ರಾಷ್ಟ್ರನಿರ್ಮಾಣದ ಪರಿಕಲ್ಪನೆಯನ್ನು ನಿರಾಕರಿಸಿ ಸರ್ವಧರ್ಮ ಸಮಭಾವ, ಸಾಮಾಜಿಕ ನ್ಯಾಯ, ಲಿಂಗ-ವರ್ಗ-ಜಾತಿ ಸಮಾನತೆಗಳನ್ನು ಎತ್ತಿಹಿಡಿಯುವ ಸಂವಿಧಾನವನ್ನು 1949ರ ಜನವರಿ 26ರಂದು ಅಳವಡಿಸಿಕೊಳ್ಳಲಾಯಿತು. ಆದ್ದರಿಂದ ಶಿಕ್ಷಣವನ್ನು ಒಳಗೊಂಡಂತೆ ನಮ್ಮ ಎಲ್ಲಾ ಸಾಮಾಜಿಕ ಜೀವನದ ಬಗೆಗಿನ ನೀತಿ ಮತ್ತು ಕಾನೂನುಗಳು ಈ ಮೌಲ್ಯಗಳನ್ನು ಎತ್ತಿಹಿಡಿಯಬೇಕು. ಅದಕ್ಕೆ ತದ್ವಿರುದ್ಧವಾಗಿ ಹಿಂದೂ ರಾಷ್ಟ್ರ ಕಲ್ಪನೆಯನ್ನೂ, ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು, ಲಿಂಗ ತಾರತಮ್ಯವನ್ನು ಬೋಧಿಸುವ ಮತ್ತು ಅದಕ್ಕೆ ತಕ್ಕಂತೆ ದೇಶದ ಇತಿಹಾಸವನ್ನು ಕಟ್ಟಿಕೊಡುವ ಶಿಕ್ಷಣ ಪಠ್ಯಗಳು ಸಂವಿಧಾನ ವಿರೋಧಿ ಹಾಗೂ ಶಿಕ್ಷಣ ವಿರೋಧಿಯೂ ಆಗುತ್ತವೆ. ಆ ದೃಷ್ಟಿಯಿಂದ ನೋಡಿದರೆ ಬರಗೂರರ ಸಮಿತಿಯು ಸಿದ್ಧಾಂತ ಮುಕ್ತವಾಗಿರಲಿಲ್ಲ. ಮುಕ್ತವಾಗಿರಬೇಕಿರಲಿಲ್ಲ. ಮುಕ್ತವಾಗಿರಲು ಸಾಧ್ಯವೂ ಇಲ್ಲ. ಬರಗೂರರ ಸಮಿತಿಯಾಗಲೀ, ರೋಹಿತ್ ಚಕ್ರತೀರ್ಥ ಸಮಿತಿಯಾಗಲೀ ಸಂವಿಧಾನ ವಿಧಿಸಿರುವ ಮೌಲ್ಯಗಳನ್ನು ಅನುಸರಿಸಿದೆಯೇ ಎಂಬುದು ಮಾತ್ರ ವಿಶ್ಲೇಷಣೆಗೆ ಮತ್ತು ವಿಮರ್ಶೆಗೆ ಪ್ರಮುಖ ಮಾನದಂಡಗಳಾಗಬೇಕು. ಈಗಾಗಲೇ ರೋಹಿತ್ ಚಕ್ರತೀರ್ಥ ಸಮಿತಿಯ ಬಹುಪಾಲು ಸದಸ್ಯರು ಬ್ರಾಹ್ಮಣ ಜಾತಿಗೆ, ಹಳೇ ಮೈಸೂರು ಪ್ರದೇಶಕ್ಕೆ ಮಾತ್ರವಲ್ಲದೆ ಒಂದು ಸಂವಿಧಾನ ಮೌಲ್ಯಗಳನ್ನು ವಿರೋಧಿಸುವ ಆರೆಸ್ಸೆಸ್ ಸಿದ್ಧಾಂತಕ್ಕೆ ಸೇರಿದ ಪುರುಷರಾಗಿದ್ದಾರೆ ಎಂಬುದು ಸಾಬೀತಾಗಿದೆ. ಹೀಗಾಗಿ ಬಿಜೆಪಿ ಸರಕಾರದ ಪರಿಷ್ಕರಣದ ಉದ್ದೇಶವಾಗಲೀ, ಅದು ರಚಿಸಿದ ಸಮಿತಿಯಾಗಲೀ ಆಥವಾ ಅದು ಪರಿಷ್ಕರಿಸಿದ ಪಠ್ಯಗಳಾಗಲೀ ಪೂರ್ಣ ಸತ್ಯವನ್ನು ತಿಳಿಸುವುದಕ್ಕಿಂತ ಸಂಘೀ ಸತ್ಯವನ್ನು ಪ್ರಚಾರ ಮಾಡುವ ಉದ್ದೇಶವನ್ನು ಹೊಂದಿತ್ತು ಎಂಬುದನ್ನು ಎತ್ತಿತೋರಿಸುತ್ತದೆ.

ಕುವೆಂಪು ಅವಹೇಳನ-ಅಬ್ರಾಹ್ಮಣರ ಬಗೆಗಿನ ಬ್ರಾಹಣೀಯ ಅಸಹನೆ
ಉದಾಹರಣೆಗೆ ವಿಶ್ವಮಾನವ ಮತ್ತು ವಿಶ್ವ ಕವಿ ಕುವೆಂಪು ಅವರ ಬಗ್ಗೆ ಸಮಿತಿಯ ಧೋರಣೆ ನೋಡಿ. ಅದರ ಅಧ್ಯಕ್ಷ ಚಕ್ರತೀರ್ಥ ನಾಡಗೀತೆಯನ್ನು ‘‘ಜಯ ಕಾಂಗ್ರೆಸ್ ಜನನಿಯ ತನುಜಾತೆ, ಜಯಹೇ ಅರೇಬಿಕ್ ಮಾತೆ’’ ಎಂದು ಲೇವಡಿ ಮಾಡಿರುವ ವಿಷಯ ಇಡೀ ನಾಡಿಗೆ ಗೊತ್ತಾಗಿದೆ. ಇದಲ್ಲದೆ ಉಳಿಸಿಕೊಂಡಿರುವ ಕುವೆಂಪು ಪಠ್ಯದ ಜೊತೆಗೆ ಕೃತಿಕಾರರ ಪರಿಚಯ ಮಾಡುವಾಗ ಇತರರ ಬೆಂಬಲದಿಂದ ಕುವೆಂಪು ಅವರು ಪ್ರಖ್ಯಾತರಾದರು ಎಂದು ಬರೆಯಲಾಗಿದೆ. ಇದು ಅಬ್ರಾಹ್ಮಣ ಕವಿಯ ಬಗ್ಗೆ ಅವರು ಬದುಕಿದ್ದ ಕಾಲದಿಂದಲೂ ಸಂಘೀ ಮನಸ್ಸತ್ವದ ಬ್ರಾಹ್ಮಣ ಸಮುದಾಯದವರು ತೋರುತ್ತಾ ಬಂದ ಅಸಹನೆ. ಮುದ್ರಿತ ಪಠ್ಯದಲೂ ಇದೇ ವಾಕ್ಯಗಳು ಉಳಿದುಕೊಂಡಿದ್ದರೆ ಅದನ್ನು ಸಾರ್ವಜನಿಕವಾಗಿ ಸುಡಬೇಕೇ ವಿನ ಶಾಲಾಕೊಠಡಿಯೊಳಗೆ ಈ ಬ್ರಾಹ್ಮಣೀಯ ಜಾತಿ ಅಸಹನೆ ಪ್ರವೇಶಿಸಲು ಬಿಡಬಾರದು. ಅದು ಈ ನಾಡಿಗೇ ಮಾಡಿರುವ ಅವಮಾನ.

ಹೆಡಗೆವಾರ್‌ರ ಹಿಂದುತ್ವಕ್ಕೆ ಆದರ್ಶದ ಬಿಳಿಬಟ್ಟೆ?!
ಇದರ ಜೊತೆಗೆ ಹಿಂದೆಂದೂ ಇಲ್ಲದಂತೆ ಆರೆಸ್ಸೆಸ್‌ನ ಸಂಸ್ಥಾಪಕ ಹೆಡಗೆವಾರರ ಒಂದು ಭಾಷಣವನ್ನು 10ನೇ ತರಗತಿಯ ಪಠ್ಯದಲ್ಲಿ ಸೇರಿಸಲಾಗಿದೆ. ಇದು ಸಮಾಜದಲ್ಲಿ, ಸಂಸ್ಥೆಗಳಲ್ಲಿ ಮತ್ತು ಸರಕಾರದಲ್ಲಿ ಬಹಿರಂಗವಾಗಿ ಹೆಚ್ಚುತ್ತಿರುವ ಹಿಂದುತ್ವವಾದಿ ಪ್ರಭಾವದ ಪ್ರತಿಫಲನವಾಗಿದೆ. ಏಕೆಂದರೆ ಅದರ ಸೇರ್ಪಡೆಗೆ ಸರಕಾರ ಮತ್ತು ಸಮಿತಿ ಮುಂದಿಡುತ್ತಿರುವ ವಾದ: ‘‘ಆರೆಸ್ಸೆಸ್ ಒಂದು ಕಾನೂನುಬದ್ಧ ಸಂಘಟನೆ, ಎರಡನೆಯದಾಗಿ ಈವರೆಗೆ ಕಮ್ಯುನಿಸ್ಟ್ ಸಿದ್ಧಾಂತದ ಪಾಠಗಳಿರುತ್ತಿದ್ದವು. ಈಗ ವಿದ್ಯಾರ್ಥಿಗಳು ಆರೆಸ್ಸೆಸ್ ಸಿದ್ಧಾಂತದ ವಿಚಾರಗಳಿಗೂ ಪರಿಚಿತರಾಗಲಿ. ಮೇಲಾಗಿ ಆ ಭಾಷಣದಲ್ಲಿ ಆರೆಸ್ಸೆಸ್ ಸಿದ್ಧಾಂತದ ಅಂಶಗಳು ಯಾವುದೂ ಇಲ್ಲ. ಯುವಕರಿಗೆ ಆದರ್ಶಗಳು ಯಾವುದಾಗಬೇಕು ಎಂಬ ವಿವರಣೆ ಅಷ್ಟೆ ಇದೆ ಎಂಬುದು. ಪಠ್ಯದಲ್ಲಿ ಸೇರಿಸಲು ಲೇಖಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲೇ ಬೇಕೆಂದೇನಿಲ್ಲ. ಹಾಗೆ ನೋಡಿದರೆ ಹೆಡಗೆವಾರ್ ದೊಡ್ಡ ರಾಷ್ಟ್ರೀಯವಾದಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು’’ ಎಂಬಿತ್ಯಾದಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಇದರಲ್ಲಿ ಸರಕಾರ ಮತ್ತು ಸಮಿತಿಯ ಸಬೂಬುಗಳಲ್ಲಿರುವ ಸೋಗಲಾಡಿತನವನ್ನು ಮತ್ತು ಅಸಲೀ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಲು ಮೂರು ವಾದಗಳನ್ನು ತುಂಬಾ ಮುಖ್ಯವಾಗಿ ಪರಿಗಣಿಸಲೇಬೇಕು. ಮೊದಲನೆಯದಾಗಿ ಸರಕಾರ ಹೆಡಗೆವಾರರ ಭಾಷಣವನ್ನು ಸೇರಿಸುವ ಮೂಲಕ ಆರೆಸ್ಸೆಸ್ ಸಿದ್ಧಾಂತ ಮತ್ತು ಸಂಘಟನೆಯು ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್‌ನಂತೆ ಅಥವಾ ಸ್ವಾತಂತ್ರ್ಯ ಹೋರಾಟದಲ್ಲಿದ್ದ ಭಗತ್ ಸಿಂಗ್, ಅಂಬೇಡ್ಕರ್ ಧಾರೆಗಳಂತೆ ಮತ್ತೊಂದು ಸ್ವಾತಂತ್ರ್ಯ ಧಾರೆಯೆಂದು ಪರಿಚಯಿಸುವ ದುಷ್ಟ ಪ್ರಯತ್ನ ಇದರ ಹಿಂದೆ ಇದೆ. ಆರೆಸ್ಸೆಸ್‌ಗೂ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿದ್ದ ಇತರ ಧಾರೆಗಳಿಗೂ ಒಂದು ಪ್ರಮುಖ ವ್ಯತ್ಯಾಸವೆಂದರೆ ಆರೆಸ್ಸೆಸ್ ಎಂದೂ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ. ಹಿಂದೂ-ಮುಸ್ಲಿಮ್ ಏಕತೆಯನ್ನು ದೇಶದ ಪಿಡುಗು ಎಂದಿದ್ದ ಹೆಡಗೆವಾರ್ ಹೆಡಗೆವಾರ್ ಆರೆಸ್ಸೆಸ್ ಸ್ಥಾಪಿಸುವ ಮುಂಚೆ 1920ರಲ್ಲಿ ಗಾಂಧಿ ನೇತೃತ್ವದ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಜೈಲು ಸೇರಿದ್ದು ನಿಜ. ಆದರೆ ಗಾಂಧಿಯವರು ಆ ಚಳವಳಿಯಲ್ಲಿ ಹಿಂದೂ-ಮುಸ್ಲಿಮ್ ಐಕ್ಯತೆಗೆ ಹೆಚ್ಚು ಒತ್ತುಕೊಟ್ಟಿದ್ದನ್ನು ನೋಡಿ ಹೆಡಗೆವಾರ್‌ರಿಗೆ ಭ್ರಮನಿರಸನ ಮತ್ತು ಆಕ್ರೋಶ ಉಂಟಾಗಿ ಕಾಂಗ್ರೆಸ್ ಬಿಟ್ಟು ಹೊರಬಂದರು ಎಂದು ಅವರ ಜೀವನ ಚರಿತ್ರೆ ಬರೆದಿರುವ ಆರೆಸ್ಸೆಸ್‌ನ ಹಿರಿಯ ನಾಯಕರಾದ ಪಾಲ್ಕರ್, ಭಿಶಿಕರ್, ಪಿಂಗ್ಲೆ ಮತ್ತು ಹೂವೆ ಶೇಷಾದ್ರಿಯವರ ಕೃತಿಗಳೇ ಸ್ಪಷ್ಟಪಡಿಸುತ್ತವೆ. ಆ ನಂತರದಲ್ಲಿ ಮತ್ತೊಮ್ಮೆ ಸ್ವಾತಂತ್ರ್ಯ ಚಳವಳಿಯು 1930ರ ಜನವರಿ 26ರಂದು ದೇಶದ ಎಲ್ಲಾ ಕಡೆ ಸಂಪೂರ್ಣ ಸ್ವಾತಂತ್ರ್ಯ ಘೋಷಣೆ ಮಾಡಿ ತ್ರಿವರ್ಣ ಧ್ವಜ ಹಾರಿಸಬೇಕೆಂದು ಕರೆ ನೀಡಿದ್ದಾಗ ಹೆಡಗೆವಾರ್ ಸಂಘದಲ್ಲಿ ಕೇವಲ ಭಗವಾಧ್ವಜವನ್ನು ಮಾತ್ರ ಹಾರಿಸಬೇಕೆಂದು ಕರೆ ನೀಡುತ್ತಾರೆ. 1931ರಲ್ಲಿ ಮತ್ತೊಮ್ಮೆ ದಂಡಿ ಸತ್ಯಾಗ್ರಹದ ಕರೆ ಇಡೀ ದೇಶವನ್ನು ಆವರಿಸುತ್ತಾ ಆರೆಸ್ಸೆಸ್ ಸಹ ಒಂದು ನಿಲುವು ತೆಗೆದುಕೊಳ್ಳಲೇ ಬೇಕಾದ ಸಂದರ್ಭ ಬಂದಾಗ ಆರೆಸ್ಸೆಸ್‌ನ ಕಾರ್ಯಕರ್ತರು ವೈಯಕ್ತಿಕ ನೆಲೆಯಲ್ಲಿ ಸತ್ಯಾಗ್ರಹದಲ್ಲಿ ಭಾಗವಹಿಸಬಹುದೇ ವಿನಾ ಆರೆಸ್ಸೆಸ್ ಒಂದು ಸಂಘವಾಗಿ ಸತ್ಯಾಗ್ರಹದಲ್ಲಿ ಭಾಗವಹಿಸುವುದಿಲ್ಲ ಎಂಬ ನಿಲುವು ತೆಗೆದುಕೊಳ್ಳುತ್ತಾರೆ. ಅದರಂತೆ ಒತ್ತಡದ ಕಾರಣಕ್ಕಾಗಿ ಅವರೂ ಚಳವಳಿಯಲ್ಲಿ ಭಾಗವಹಿಸಿದರೂ ತಮ್ಮ ಸರಸಂಘಚಾಲಕ ಹುದ್ದೆಯನ್ನು ತಾತ್ಕಾಲಿಕವಾಗಿ ಮತ್ತೊಬ್ಬ ನಾಯಕನಿಗೆ ವರ್ಗಾಯಿಸಿ ಒಬ್ಬ ವ್ಯಕ್ತಿಯಾಗಿ ಅದರಲ್ಲಿ ಭಾಗವಹಿಸುತ್ತಾರೆ. ಅಷ್ಟು ಮಾತ್ರವಲ್ಲ ಜಿ. ರಾಮಕೃಷ್ಣರ ‘ಭಗತ್ ಸಿಂಗ್’ ಪಾಠದ ಬದಲು ತಾವು ಭಗತ್ ಸಿಂಗ್ ಜೊತೆ ರಾಜಗುರ್, ಸುಖದೇವ್‌ರಂತಹ ಇನ್ನು ಹಲವು ಕ್ರಾಂತಿಕಾರಿಗಳನ್ನು ಪರಿಚಯಿಸುವ ಸೂಲಿಬೆಲೆ ಬರೆದ ಲೇಖನವನ್ನು ಬಳಸಿಕೊಂಡಿದ್ದೇವೆ ಎಂದು ಸಮಿತಿ ಮತ್ತು ಸರಕಾರ ಸಬೂಬು ಹೇಳುತ್ತಿದೆಯಷ್ಟೆ. ಆದರೆ ಹೆಡಗೆವಾರ್‌ಗಾಗಲೀ, ಆ ನಂತರದ ಆರೆಸ್ಸೆಸ್ ಸರಸಂಘಚಾಲಕ ಗೋಳ್ವಾಲ್ಕರ್‌ಗಾಗಲೀ ಹೀಗೆ ಬ್ರಿಟಿಷರ ವಿರುದ್ಧ ಹೋರಾಡಿ ಜೈಲು ಸೇರುವುದು ಒಂದು ಆದರ್ಶ ಅಲ್ಲ ಎಂಬ ಅಭಿಪ್ರಾಯ ಸ್ಪಷ್ಟವಾಗಿತ್ತು. ಆ ನಂತರದಲ್ಲಿ ಆರೆಸ್ಸೆಸ್ ಮತ್ತು ಅದರ ಸಹೋದರ ಸಂಘಟನೆ ಸಾವರ್ಕರ್ ಅವರ ‘ಹಿಂದೂ ಮಹಾಸಭಾ’ ಸ್ವಾತಂತ್ರ್ಯ ಹೋರಾಟವನ್ನು ದಮನಿಸಲು ಬ್ರಿಟಿಷರ ಜೊತೆ ಕೈಜೋಡಿಸಿದ ಇತಿಹಾಸ ಈಗ ಜಗಜ್ಜಾಹೀರಾಗಿದೆ. ಅಷ್ಟು ಮಾತ್ರವಲ್ಲ. ಇವರ ಹಿಂದೂ ಸಂಘಟನೆ ಎಂದರೆ ಹೇಗೆ ಬ್ರಾಹ್ಮಣ ಶ್ರೇಷ್ಠತೆಯನ್ನು ಮರುಸ್ಥಾಪಿಸುವ ರಾಜಕೀಯ ಕುತಂತ್ರವೆಂಬುದೂ ಸಹ ಹೆಡಗೆವಾರರ ಜೀವನ ಚರಿತ್ರೆ ಮತ್ತು ಗೋಳ್ವಾಲ್ಕರ್‌ರ ಭಾಷಣಗಳು ಸಾಬೀತುಪಡಿಸುತ್ತವೆ.

ಬ್ರಾಹ್ಮಣ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಸರಸಂಘ ಚಾಲಕರು 

ಭಿಷಿಕರ್ ಅವರು ಬರೆದಿರುವ ಹೆಡಗೆವಾರ್‌ರ ಜೀವನಚರಿತ್ರೆಯಲ್ಲಿ ಮೇಲ್ಜಾತಿ ಹಿತೈಷಿಗಳ ಮನೆಗೆ ಹೋದಾಗ ಹೆಡಗೆವಾರ್ ಹಿಂದುಳಿದ ಜಾತಿಯ ಆರೆಸ್ಸೆಸ್ ಸದಸ್ಯರೊಂದಿಗೆ ಸಹಭೋಜನಕ್ಕೆ ಸಮ್ಮತಿಸುತ್ತಿರಲಿಲ್ಲ ಎಂದು ದಾಖಲಿಸಿದ್ದಾರೆ. ಏಕೆಂದರೆ ಅದರಿಂದ ಮೇಲ್ಜಾತಿ ಹಿತೈಷಿಗಳ ಮನನೋಯಿಸಿದಂತಾಗುತ್ತದೆ ಎಂದು ಹೆಡಗೆವಾರ್ ಹೇಳುತ್ತಿದ್ದರಂತೆ. ಇದನ್ನು ಹೂವೆ ಶೇಷಾದ್ರಿಯವರ ಬರಹದಲ್ಲೂ ನೋಡಬಹುದು. ಇದಕ್ಕಿಂತ ದಲಿತದ್ರೋಹಿ ಧೋರಣೆ ಆರೆಸ್ಸೆಸ್‌ನ ಎರಡನೇ ಸರಸಂಘ ಚಾಲಕ ಗೋಳ್ವಾಲ್ಕರ್ ಅವರದ್ದು. 1960ರಲ್ಲಿ ಅವರು ಗುಜರಾತಿನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ:

‘‘ಜನಾಂಗೀಯ ಪರಿಶುದ್ಧತೆ ಒಂದು ಶ್ರೇಷ್ಠ ಜನಾಂಗವನ್ನು ಕಟ್ಟಲು ಅಗತ್ಯ. ಇದನ್ನು ಜರ್ಮನಿಯಲ್ಲಿ ಹಿಟ್ಲರ್ ಜರ್ಮನರ ಆರ್ಯ ಜನಾಂಗೀಯ ಶ್ರೇಷ್ಠತೆಗೆ ಅಡ್ಡಿಯಾಗಿದ್ದ ಯೆಹೂದಿಗಳನ್ನು ಕೊಂದು ಸಾಧಿಸಿದ. ಆದರೆ ನಮ್ಮ ನಾಗರಿಕತೆಯಲ್ಲಿ ಶುದ್ಧ ಹಾಗೂ ಶ್ರೇಷ್ಠ ರಕ್ತವನ್ನು ಕಾಪಾಡಿಕೊಳ್ಳಲು ಪಾರಂಪರಿಕ ಜಾತಿ ವಿಧಾನವನ್ನು ಬಳಸುತ್ತಿದ್ದೆವು. ಉದಾಹರಣೆಗೆ ಕೇರಳದಲ್ಲಿ ಶೂದ್ರ ಜಾತಿಗಳು ತಮ್ಮ ಮೊದಲನೇ ಮಗುವನ್ನು ನಂಬೂದ್ರಿ ಬ್ರಾಹ್ಮಣ ಪುರುಷರ ಸಂಯೋಗದಿಂದಲೇ ಪಡೆದುಕೊಳ್ಳುವ ನಿಯಮವಿತ್ತು. ಅದರ ಮೂಲಕ ಶ್ರೇಷ್ಠ ರಕ್ತವನ್ನು ಈ ದೇಶದಲ್ಲಿ ಕಾಪಾಡಿಕೊಂಡು ಬರಲಾಗುತ್ತಿತ್ತು’’ ಎಂದು ಜಾತಿ ವ್ಯವಸ್ಥೆಯ ಕ್ರೌರ್ಯವನ್ನೂ ನಾಗರಿಕ ಹಿರಿಮೆಯೆಂದು ಘೋಷಿಸಿದ್ದರು. ಈ ದೇಶದಲ್ಲಿ ದಲಿತ ಜಾಗೃತಿ ಹೆಚ್ಚಾಗುತ್ತಿದ್ದಂತೆ ಸಮಯಕ್ಕೆ ತಕ್ಕನಾಗಿ ಊಸರವಳ್ಳಿಯಂತೆ ಬಣ್ಣ ಬದಲಾಯಿಸುವ ಆರೆಸ್ಸೆಸ್ ಆನಂತರದಲ್ಲಿ ಈ ಲೇಖನವನ್ನು ಗೋಳ್ವಾಲ್ಕರ್ ಅವರ ಸಮಗ್ರ ಬರಹದಿಂದ ಕೈಬಿಟ್ಟಿದೆ. ಆದರೆ ಆ ದಿನಗಳಲ್ಲಿ ‘ಆರ್ಗನೈಸರ್’ ಪತ್ರಿಕೆ ಅದನ್ನು ಯಥಾವತ್ತಾಗಿ ಪ್ರಕಟಿಸಿತ್ತು. ಆಸಕ್ತರು ಅವರ ಆ ಭಾಷಣವನ್ನು ಈ ಕೊಂಡಿಯಲ್ಲಿ ಓದಬಹುದು:
https://www.sabrangindia.in/article/defence-caste-and-against-cross-breeding-kerala-golwalkar
ಇಂತಹ ಜನದ್ರೋಹಿ ಹಾಗೂ ದೇಶದ್ರೋಹಿ ಇತಿಹಾಸವನ್ನು ಹೊಂದಿರುವ ಸಿದ್ಧಾಂತ ಹಾಗೂ ಸಂಘಟನೆಗಳಿಗೆ ಬಿಳಿಬಣ್ಣ ತೊಡಿಸಿ ಹೊಸ ಸುಳ್ಳು ಇತಿಹಾಸವನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ಬೋಧಿಸುವ ಕುತಂತ್ರವೇ ಹೆಡಗೆವಾರ್‌ರ ಆದರ್ಶಗಳ ಪಾಠ.

ಜಿನ್ನಾ ಭಾಷಣ ಏಕೆ ಬೇಡವೋ ಅದಕ್ಕೆ ಹೆಡಗೆವಾರ್ ಭಾಷಣವೂ ಬೇಡ
ಹೆಡಗೆವಾರ್ ಪಾಠ ಸೇರ್ಪಡೆಗೆ ಸರಕಾರ ಹಾಗೂ ಸಮಿತಿ ಮುಂದಿಡುತ್ತಿರುವ ಮತ್ತೊಂದು ಹಾಸ್ಯಾಸ್ಪದ ವಾದವೇನೆಂದರೆ ಹೆಡಗೆವಾರ್ ಪಠ್ಯವನ್ನು ನೋಡಿ. ಅದರಲ್ಲಿ ಮಕ್ಕಳಿಗೆ ಆದರ್ಶರಾಗಬೇಕಿರುವುದು ತತ್ವಗಳೇ ವಿನಾ ವ್ಯಕ್ತಿಗಳಲ್ಲ ಎಂಬ ಸಂದೇಶವಿದೆ. ಅದನ್ನು ಮಕ್ಕಳಿಗೆ ಕಲಿಸುವುದರಲ್ಲಿ ಏನು ತಪ್ಪಿದೆ. ಪಠ್ಯವನ್ನು ನೋಡಿ, ಲೇಖಕರನ್ನಲ್ಲ ಇತ್ಯಾದಿ.. ಹಾಗಿದ್ದಲ್ಲಿ ಈ ದೇಶದ ಕೂಡು ನಾಗರಿಕತೆಯ ಹಿರಿಮೆಯ ಬಗ್ಗೆ ಜಿನ್ನಾ ಅವರು 1916ರಲ್ಲಿ ಮಾಡಿದ ಅತ್ಯುತ್ತಮ ಭಾಷಣವಿದೆ. ಅದನ್ನೂ ಏಕೆ ಸೇರಿಸಬಾರದು? ಹಾಗೆ ನೋಡಿದರೆ 1930ರ ತನಕ ಇಡೀ ದೇಶ ಜಿನ್ನಾ ಅವರನ್ನು ಹಿಂದೂ-ಮುಸ್ಲಿಮ್ ಭಾವೈಕ್ಯತೆಯ ರಾಯಭಾರಿ ಎಂದೇ ಕರೆಯುತ್ತಿತ್ತು. ವಾಸ್ತವದಲ್ಲಿ ಹೆಡಗೆವಾರ್ 1925ರಲ್ಲಿ ಭಾರತವನ್ನು ಕೋಮು ಆಧಾರಿತವಾಗಿ ವಿಭಜಿಸುವ ಆರೆಸ್ಸೆಸ್ ಕಟ್ಟುತ್ತಿದ್ದಾಗ ಅದೇ ವರ್ಷ ಸೆಂಟ್ರಲ್ ಅಸೆಂಬ್ಲಿಯಲ್ಲಿ ಜಿನ್ನಾ ಅವರು ಹಿಂದೂ ಮುಸ್ಲಿಮ್ ಏಕತೆಗಾಗಿ ಕೋಮುವಾರು ರಾಜಕೀಯ ಮೀಸಲಾತಿ ಬೇಡ ಎಂದು ಭಾಷಣ ಮಾಡುತ್ತಿದ್ದರು!

1920ರಲ್ಲಿ ಹಿಂದೂ-ಮುಸ್ಲಿಮ್ ಏಕತೆಯ ಘೋಷಣೆಯನ್ನು ವಿರೋಧಿಸುತ್ತಾ ಹೆಡಗೆವಾರ್ ಕಾಂಗ್ರೆಸ್‌ನಿಂದ ದೂರ ಸರಿದರೆ ಜಿನ್ನಾ ಅವರು ರಾಜಕೀಯದೊಂದಿಗೆ ಧರ್ಮವನ್ನು ಮಿಶ್ರಣ ಮಾಡುತ್ತಾ ಹಿಂದೂ-ಮುಸ್ಲಿಮ್ ಮೂಲಭೂತವಾದಕ್ಕೆ ಕುಮ್ಮಕ್ಕು ಕೊಡುವ ಗಾಂಧಿ ರಾಜಕಾರಣ ದೇಶಕ್ಕೆ ಒಳ್ಳೆಯದು ಮಾಡುವುದಿಲ್ಲ ಎಂದು ಘೋಷಿಸಿ ಕಾಂಗ್ರೆಸ್‌ನಿಂದ ದೂರ ಸರಿದಿದ್ದರು. ಆ ನಂತರದಲ್ಲಿ ಒಂದೆಡೆ ಜಿನ್ನಾ 1939ರ ನಂತರದಲ್ಲಿ ದೇಶವನ್ನು ವಿಭಜಿಸಿ ಪಾಕಿಸ್ತಾನದ ಹುಟ್ಟಿಗೆ ಕಾರಣವಾದರೆ ಮತ್ತೊಂದೆಡೆ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಹಿಂದೂ ಕೋಮುವಾದವನ್ನು ಉದ್ರೇಕಿಸುತ್ತಾ ದೇಶ ವಿಭಜನೆಗೂ ಮತ್ತು ದೇಶದೊಳಗಿನ ಶಾಶ್ವತ ಕೋಮು ವಿಭಜನೆಗೂ ಕಾರಣರಾದರು. ಯಾವ ಕಾರಣಕ್ಕಾಗಿ ಜಿನ್ನಾರ ಪಠ್ಯವನ್ನು ಶಾಲಾ ಮಕ್ಕಳಿಗೆ ಬೋಧಿಸದಿರಲೂ ಆ ವ್ಯಕ್ತಿಯ ಐತಿಹಾಸಿಕ ಪಾತ್ರ ಹೇಗೆ ಕಾರಣವಾಗುತ್ತದೋ, ಅದೇ ಕಾರಣಕ್ಕಾಗಿ ಪಠ್ಯ ಎಷ್ಟೇ ಬೋಧಪ್ರದವಾಗಿದ್ದರೂ (ಹೆಡಗೆವಾರ್‌ರ ಆ ಭಾಷಣ ಆ ದೃಷ್ಟಿಯಿಂದಲೂ ಅತ್ಯಂತ ಸಮಸ್ಯಾತ್ಮಕವಾಗಿದೆ ಎನ್ನುವುದು ಮತ್ತೊಂದು ವಿಷಯ) ಶಾಲಾ ಮಕ್ಕಳ ಪಠ್ಯವಾಗಲು ಹೆಡಗೆವಾರ್ ಪಠ್ಯ ಅನರ್ಹವಾಗಿದೆ. ಆದರೂ ಕೋಮು ಧ್ರುವೀಕರಣದ ರಾಜಕಾರಣದಿಂದ ರಾಜ್ಯಾಧಿಕಾರವನ್ನೂ ಮತ್ತು ಜನಮಾನಸದಲ್ಲಿ ನೆಲೆಯನ್ನೂ ಪಡೆದುಕೊಂಡಿರುವ ಆರೆಸ್ಸೆಸ್-ಬಿಜೆಪಿ ಫ್ಯಾಶಿಸ್ಟ್ ಶಕ್ತಿಗಳು ಒಂದು ಶಾಶ್ವತ ಹಿಂದೂ-ಬ್ರಾಹ್ಮಣೀಯ ಸಮಾಜವನ್ನು ಕಟ್ಟಿ ಶಾಶ್ವತ ಹಿಂದೂ ಮೆಜಾರಿಟಿಯನ್ನು ಸೃಷ್ಟಿಸಿಕೊಳ್ಳುವ ಆಧುನಿಕ ಫ್ಯಾಶಿಸ್ಟ್ ಯೋಜನೆಯನ್ನು ಹೊಂದಿದೆ. ನವಶಿಕ್ಷಣ ನೀತಿಯಲ್ಲಿ ಈಗಾಗಲೇ ದೇಶಾದ್ಯಂತ ಎಲ್ಲಾ ಮಟ್ಟದಲ್ಲೂ ಬ್ರಾಹ್ಮಣ ಶ್ರೇಷ್ಠತೆಯನ್ನು, ಮುಸ್ಲಿಮ್ ದ್ವೇಷ ಮತ್ತು ಕ್ರಿಶ್ಚಿಯನ್‌ದ್ವೇಷವನ್ನು ಬೋಧಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಅದಕ್ಕೆ ತಕ್ಕಂತೆ ಒಂದು ಪಠ್ಯಕ್ರಮದ ಫ್ರೇಂವರ್ಕ್ ಕೂಡಾ ತಯಾರಾಗುತ್ತಿದೆ. ಈ ಪಠ್ಯ ಪರಿಷ್ಕರಣೆ ಅದರ ಒಂದು ಸಣ್ಣ ಭಾಗ ಅಷ್ಟೇ. ಇದನ್ನು ಹಿಮ್ಮೆಟ್ಟಿಸುವ ಸಕಲ ಪ್ರಯತ್ನಗಳನ್ನು ಮಾಡುತ್ತಲೇ ಶಿಕ್ಷಣ ಕ್ಷೇತ್ರದಲ್ಲಿರುವ ಪ್ರಗತಿಪರ ವಿದ್ಯಾರ್ಥಿ-ಶಿಕ್ಷಕ-ಪೋಷಕ ಸಂಘಟನೆಗಳು ಈ ಆರೆಸ್ಸೆಸ್‌ವಾದಿ ಪಠ್ಯಗಳಿಗೆ ಪರ್ಯಾಯವಾಗಿ ಸಾಂವಿಧಾನಿಕ ಮೌಲ್ಯಗಳನ್ನು ಬಿತ್ತುವ ಇತಿಹಾಸವನ್ನು ಶಾಲೆಯೊಳಗೂ ಶಾಲಾ ಚೌಕಟ್ಟಿನಾಚೆಗೂ ನಿರಂತರವಾಗಿ ಬೋಧಿಸುವ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಅಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)