varthabharthi


ಉಡುಪಿ

ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಹಿಂಪಡೆಯಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

ವಾರ್ತಾ ಭಾರತಿ : 26 May, 2022

ಉಡುಪಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡ್ಗೆವಾರ್ ಇವರ ಭಾಷಣವನ್ನು ೨೦೨೨-೨೩ನೇ ಸಾಲಿನ ಹತ್ತನೇ ತರಗತಿಯ ಕನ್ನಡ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಿದ್ದು, ಇದು ಶಿಕ್ಷಣದ ಕೇಸರೀಕರಣದ ಮುಂದುವರೆದ ಭಾಗವಾಗಿದೆ. ಇದನ್ನು ಕೂಡಲೇ ಹಿಂಪಡೆ ಯಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ  ಗುರುವಾರ ಪ್ರತಿಭಟನೆ ನಡೆಯಿತು.

ಅಜ್ಜರಕಾಡಿನಲ್ಲಿರುವ ಹುತಾತ್ಮರ ಸ್ಮಾರಕದ ಎದುರು ನಡೆದ ಪ್ರತಿಭಟನೆ ಯಲ್ಲಿ ಮಾತನಾಡಿದ ಪ್ರತಿಭಟನ ಕಾರರು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ನಿಜವಾದ ಆದರ್ಶ ಪುರುಷ ಯಾರಾಗಬೇಕು? ಎಂಬ ತಲೆಬರಹದಲ್ಲಿ ಹೆಡ್ಗೆವಾರ್ ಭಾಷಣವನ್ನು ಹತ್ತನೇ ತರಗತಿಯ ಕನ್ನಡ ಗದ್ಯಪುಸ್ತಕದಲ್ಲಿ ಐದನೇ ಪಠ್ಯವಾಗಿ ಸೇರಿಸಿದೆ. ದೇಶಾದ್ಯಂತ ನರಮೇಧಗಳನ್ನು ನಡೆಸಿದ, ದೇಶದಲ್ಲಿ ಹಲವು ಬಾರಿ ನಿಷೇಧಿ ಸಲ್ಪಟ್ಟ ಭಯೋತ್ಪಾದನಾ ಸಂಘಟನೆಯಾದ ಆರ್‌ಎಸ್‌ಎಸ್‌ನ ಸಂಸ್ಥಾಪಕ ಹೆಡ್ಗೆವಾರ್ ಹೇಗೆ ಆದರ್ಶ ಪುರುಷನಾಗಲು ಸಾಧ್ಯವೆಂದು ಪ್ರಶ್ನಿಸಿದರು.

ಪಠ್ಯಪುಸ್ತಕದ ಪಠ್ಯಕ್ರಮವನ್ನು ಬ್ರಾಹ್ಮಣೀಕರಣಗೊಳಿಸುವ ಗುರಿಯೊಂದಿಗೆ ಸಂಘದ ಗರಡಿಯಲ್ಲಿ ಪಳಗಿರುವ ರೋಹಿತ್ ಚಕ್ರತೀರ್ಥರಂತಹವರನ್ನು ಪರಿಷ್ಕರಣಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳನ್ನು ಕಲಿಸಿ, ಸಮಾಜದಲ್ಲಿ ಸೌಹಾರ್ದತೆ, ಸಾಮರಸ್ಯಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ವಿದ್ಯೆಯನ್ನು ನೀಡಬೇಕು ಹೊರತು ಹಿಂದೂ ರಾಷ್ಟ್ರವೆಂಬ ಸಂವಿಧಾನಕ್ಕೆ ಅಪಚಾರವೆಸಗುವ ದೇಶವಿರೋಧಿ ಆಲೋಚನೆ ಹೊಂದಿದ್ದ ವ್ಯಕ್ತಿಗಳ ಭಾಷಣ ಹೇಳಿ ಕೊಡುವ ಸರಕಾರದ ಈ ಕೃತ್ಯ ನೈಜ ಸ್ವಾತಂತ್ರ್ಯ ಹೋರಾಟ ಗಾರರರಿಗೆ ಮಾಡುವ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ತನ್ನದೇ ಆದ ಹಿಂದೂ ರಾಷ್ಟ್ರದ ಕಲ್ಪನೆಯೊಂದಿಗೆ ಜನರ ದಾರಿ ತಪ್ಪಿಸಿದ ವ್ಯಕ್ತಿಯ ಭಾಷಣವನ್ನು ಪಠ್ಯಕ್ರಮದಲ್ಲಿ ಸೇರಿಸಿರುವುದು ಶಿಕ್ಷಣದಲ್ಲಿ ಹಿಂದುತ್ವ ಸಿದ್ದಾಂತದ ಹೇರಿಕೆ ಯೆಂಬುದು ಸ್ಪಷ್ಟವಾಗಿದೆ. ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ವಿರೋಧಿಸುತ್ತದೆ ಹಾಗೂ ಈ ಹೆಡ್ಗೆವಾರ್ ಭಾಷಣವನ್ನು ಶೀಘ್ರವೇ ಪಠ್ಯಕ್ರಮ ದಿಂದ ಕೈ ಬಿಡಬೇಕು ಎಂದು ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಮುಖಂಡ ನವಾಝ್ ಶೇಖ್ ಪ್ರತಿಭಟನೆಯಲ್ಲಿ ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಕಾರ್ಯದರ್ಶಿ ಸಾದಿಕ್ ಮತ್ತು ಕ್ಯಾಂಪಸ್ ಫ್ರಂಟ್‌ನ ಕಾರ್ಯಕರ್ತರು ಉಪಸ್ಥಿತರಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)