varthabharthi


ಕಾಲಂ 9

ನರಮೇಧದ ರಾಜಕೀಯ ಮತ್ತು ದುಷ್ಟ ಬಂಡವಾಳ ಮೈತ್ರಿಕೂಟ

ಶ್ರೀಲಂಕಾಕ್ಕೂ ವಿಸ್ತರಿಸಿತೇ ಮೋದಿ-ಅದಾನಿ ಸಾಮ್ರಾಜ್ಯ?

ವಾರ್ತಾ ಭಾರತಿ : 14 Jun, 2022
ಶಿವಸುಂದರ್

ಮೋದಿ ಸರಕಾರದ ಈ ಮಾನವೀಯ ಮುಖದ ಹಿಂದೆ ಅದಾನಿ ಮುಖವಾಡ ಇದ್ದದ್ದು ಈಗ ಜಾಹೀರಾಗಿದೆ. ಜನರ ತೆರಿಗೆ ಹಣದಿಂದ ಶ್ರೀಲಂಕಾಗೆ ಕೊಟ್ಟ ಸಹಕಾರದ ಋಣವನ್ನು ಅದಾನಿಯ ಉದ್ಯಮಕ್ಕೆ-ಲಾಭಕ್ಕೆ ನಿಯಮಮೀರಿ ಅವಕಾಶ ಮಾಡಿಕೊಡಲು ಮೋದಿ ಸರಕಾರ ತಾಕೀತು ಮಾಡಿದೆ. ಅದರ ಪರಿಣಾಮವಾಗಿಯೇ ಶ್ರೀಲಂಕಾ ವಿದ್ಯುತ್ ಬೋರ್ಡ್ ಎಲ್ಲಾ ನೀತಿ-ನಿಯಮಗಳನ್ನು ಗಾಳಿಗೆ ತೂರಿ, ಶ್ರೀಲಂಕಾ ಜನರ ಹಿತಾಸಕ್ತಿಯನ್ನು ಬದಿಗಿರಿಸಿ ಅದಾನಿಗೆ ಸಹಕರಿಸಿದೆ.


ಭಾರತದ ಪ್ರಧಾನಿ ನರೆಂದ್ರ ಮೋದಿಯವರು ಶ್ರೀಲಂಕಾ ವಿದ್ಯುತ್ ಬೋರ್ಡಿನ ಮೇಲೆ ಹಾಕಿದ ಅಪಾರ ಒತ್ತಡದಿಂದಾಗಿಯೇ ಉತ್ತರ ಶ್ರೀಲಂಕಾದಲ್ಲಿ ಯೋಜಿಸಲಾಗಿದ್ದ 500 ಮೆಗಾವ್ಯಾಟ್ ಸಾಮರ್ಥ್ಯದ ವಾಯು ಹಾಗೂ ಸೌರ ವಿದ್ಯುತ್ ಉತ್ಪಾದನೆಯ ಕಾಂಟ್ರಾಕ್ಟನ್ನು ಭಾರತದ ಅದಾನಿ ಕಂಪೆನಿಗೆ ಕೊಡಬೇಕಾಯಿತೆಂದು, ಬೋರ್ಡಿನ ಅಧ್ಯಕ್ಷ ಫರ್ಡಿನಾಂಡೋ ಅವರು ಶ್ರೀಲಂಕಾದ ಸಂಸತ್ತಿನ ಸ್ಥಾಯಿ ಸಮಿತಿ ಮುಂದೆ ಒಪ್ಪಿಕೊಂಡಿದ್ದಾರೆ. ಆದರೆ ಸಹಜವಾಗಿಯೇ ಮರುದಿನವೇ ಅವರು ತಮ್ಮ ಮಾತು ವಾಪಸ್ ತೆಗೆದುಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಕೊಟ್ಟಿದ್ದಾರೆ. ಈ ಬೆಳವಣಿಗೆ ಅವರ ಮೇಲೆ ಎಷ್ಟು ಪ್ರಭಾವ ಇದ್ದಿರಬಹುದೆಂಬುದನ್ನು ಇದು ಮತ್ತಷ್ಟು ಸಾಬೀತುಪಡಿಸುತ್ತದೆ. ಭಾರತದಲ್ಲಿ ಇದು ನಡೆದಿದ್ದರೆ ಫರ್ಡಿನಾಂಡೊ ಅವರ ಮನೆ ಮುಂದೆ ಬುಲ್ಡೋಜರ್ ಮರುದಿನವೇ ಹಾಜರಾಗುತ್ತಿತ್ತು. ಅದರೆ ಅವರ ಹೇಳಿಕೆ ಮತ್ತು ರಾಜೀನಾಮೆಗಳು ಮೋದಿ ಸರಕಾರಕ್ಕೆ ಭಾರತದ ಹಿತಾಸಕ್ತಿಗಿಂತ ಅದಾನಿ ಹಿತಾಸಕ್ತಿ ಎಷ್ಟು ಮುಖ್ಯವೆಂಬುದನ್ನೂ ಮತ್ತು ಅದಾನಿಯ ಹಿತಾಸಕ್ತಿಯನ್ನು ಕಾಪಾಡಲು ಹೇಗೆ ಮೋದಿ ಸರಕಾರ ಭಾರತದ ಸ್ಥಾನಮಾನಗಳನ್ನು ಮತ್ತು ಶಕ್ತಿಯನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದೆಯೆಂಬುದನ್ನು ಬಯಲುಮಾಡಿದೆ.

ಭಾರತದ ಹಿತಾಸಕ್ತಿಯೆಂದರೆ ಅದಾನಿಯ ಹಿತಾಸಕ್ತಿ!

ವಾಸ್ತವವಾಗಿ ಈ ಒಪ್ಪಂದವಾಗಿದ್ದು ಕಳೆದವರ್ಷ- ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಬಿಗಡಾಯಿಸುವ ಮುನ್ನ. ಶ್ರೀಲಂಕಾ ತನ್ನ ಸ್ವಯಂಕೃತ ರಾಜಕೀಯ-ಆರ್ಥಿಕ ಪ್ರಮಾದಗಳಿಂದಾಗಿ ಇಂದಿನ ಬಿಕ್ಕಟ್ಟಿಗೆ ಸಿಲುಕಿಕೊಂಡಿದೆ. ಅದರೆ ಒಂದುಕಡೆ ಚೀನಾ ಹಾಗೂ ಮತ್ತೊಂದೆಡೆ ಭಾರತ ಮತ್ತು ಅಮೆರಿಕಗಳು ಶ್ರೀಲಂಕಾವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ನಿರಂತರ ಸಂಘರ್ಷ ನಡೆಸುತ್ತಿವೆ. ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡ ನಂತರ ಭಾರತ ಸರಕಾರ ಆ ದೇಶಕ್ಕೆ 300 ಬಿಲಿಯನ್ ಡಾಲರ್‌ಗಳಷ್ಟು ಸಾಲ ಸಹಕಾರಗಳನ್ನು ಕೊಟ್ಟಿದೆ. ಅಂದರೆ ಭಾರತದ ತೆರಿಗೆದಾರರ ಮತ್ತು ಜನರ ಉಳಿತಾಯದ ಹಣವನ್ನು ಮಾನವೀಯ ಸಹಕಾರದ ಹೆಸರಿನಲ್ಲಿ ಕೊಡಮಾಡಿದೆ. ಆದರೆ ಮೋದಿ ಸರಕಾರದ ಈ ಮಾನವೀಯ ಮುಖದ ಹಿಂದೆ ಅದಾನಿ ಮುಖವಾಡ ಇದ್ದದ್ದು ಈಗ ಜಾಹೀರಾಗಿದೆ. ಜನರ ತೆರಿಗೆ ಹಣದಿಂದ ಶ್ರೀಲಂಕಾಗೆ ಕೊಟ್ಟ ಸಹಕಾರದ ಋಣವನ್ನು ಅದಾನಿಯ ಉದ್ಯಮಕ್ಕೆ-ಲಾಭಕ್ಕೆ ನಿಯಮಮೀರಿ ಅವಕಾಶ ಮಾಡಿಕೊಡಲು ಮೋದಿ ಸರಕಾರ ತಾಕೀತು ಮಾಡಿದೆ. ಅದರ ಪರಿಣಾಮವಾಗಿಯೇ ಶ್ರೀಲಂಕಾ ವಿದ್ಯುತ್ ಬೋರ್ಡ್ ಎಲ್ಲಾ ನೀತಿ-ನಿಯಮಗಳನ್ನು ಗಾಳಿಗೆ ತೂರಿ, ಶ್ರೀಲಂಕಾ ಜನರ ಹಿತಾಸಕ್ತಿಯನ್ನು ಬದಿಗಿರಿಸಿ ಅದಾನಿಗೆ ಸಹಕರಿಸಿದೆ. ಮೊದಲನೆಯದಾಗಿ ಅದಾನಿ ಯೋಜನೆಯನ್ನು ಮಾನ್ಯ ಮಾಡಲೆಂದೇ ಶ್ರೀಲಂಕಾ ಸರಕಾರ ಇಂತಹ ಯೋಜನೆಗಳಿಗೆ ಸ್ಪರ್ಧಾತ್ಮಕ ಟೆಂಡರನ್ನು ಕರೆಯುವ ಪದ್ಧತಿಯನ್ನು ರದ್ದುಮಾಡಿತು. ಎರಡನೆಯದಾಗಿ ಅದಾನಿಯ ವಿದ್ಯುತ್ತಿನ ದರ ಒಂದು ಯುನಿಟ್‌ಗೆ 7.5 ಸೆಂಟು ಎಂದು ನಿಗದಿ ಪಡಿಸಿತು. ಇದು ಅಂತರ್‌ರಾಷ್ಟ್ರೀಯ ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹೆಚ್ಚು. ಇಂದು ಜಗತ್ತಿನ ಅತ್ಯಂತ ಭ್ರಷ್ಟ ಹಾಗೂ ದಮನಕಾರಿ ದುರಾಡಳಿತಕ್ಕೆ ಹೆಸರು ಮಾಡಿರುವ ಶ್ರೀಲಂಕಾದ ರಾಜಪಕ್ಸ ಕುಟುಂಬವು ನಡೆಸುತ್ತಿರುವ ಸರಕಾರಕ್ಕೆ ಮೋದಿ ಸರಕಾರ ಮುಂದೆಬಿದ್ದು ಮಾಡಿದ ಸಹಾಯದ ಹಿಂದಿನ ಅಸಲಿ ಉದ್ದೇಶವಿದು. ತಾನು ಭ್ರಷ್ಟಾಚಾರ ವಿರೋಧಿ ಎನ್ನುವ ಮೋದಿ-ಬಿಜೆಪಿಗಳ ಅಸಲಿ ಮುಖವಿದು.
 
ಮೋದಿ ಸರಕಾರ-ಅದಾನಿ ಸಾಮ್ರಾಜ್ಯದ ವಿಸ್ತರಣೆ

ಇದಕ್ಕೆ ಮುಂಚೆಯೂ, ಮೋದಿ ಸರಕಾರ ಶ್ರೀಲಂಕಾದಲ್ಲಿ ಅದಾನಿ ಹಿತಾಸಕ್ತಿಯನ್ನು ಕಾಯಲು ತನ್ನಿಡೀ ರಾಜನೀತಿ ಮತ್ತು ಆರ್ಥಿಕ ನೀತಿಯನ್ನು ಬದಲಿಸಿತ್ತು. ಉದಾಹರಣೆಗೆ ಕಳೆದ ವರ್ಷವೇ, ಕೊಲೊಂಬೋದ ಬಂದರಿನ ಪೂರ್ವ ಹಾಗೂ ಪಶ್ಚಿಮ ಭಾಗದ ಕಂಟೈನರ್ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಜಾಗತಿಕ ಟೆಂಡರ್ ಕರೆದಿತ್ತು. ಪೂರ್ವ ಬಂದರಿನ ಟೆಂಡರ್ ಜಪಾನ್ ಹಾಗೂ ಚೀನಾದ ಪೈಪೋಟಿಯಲ್ಲಿ ಸಿಲುಕಿಕೊಂಡಿದ್ದರೆ, ಮೋದಿಯವರ ಜಪಾನ್ ಭೇಟಿ ಮತ್ತು ರಾಜಪಕ್ಸರ ದಿಲ್ಲಿ ಭೇಟಿಯ ನಂತರ ಪಶ್ಚಿಮ ಬಂದರಿನ ಅಭಿವೃದ್ಧಿ ನಿಗೂಢ ರೀತಿಯಲ್ಲಿ ಅದಾನಿ ಪಾಲಾಯಿತು. ಅಷ್ಟು ಮಾತ್ರವಲ್ಲ. ಈ ಬಂದರಿನ ವಹಿವಾಟಿನ ಹಿಡುವಳಿಯಲ್ಲಿ ಪ್ರಧಾನ ಪಾಲು- ಶೇ. 51ರಷ್ಟು ಅದಾನಿ ಕಂಪೆನಿಯದೆಂದು ಕರಾರಾಯಿತು. ಈ ಅದಾನಿ ಸೇವೆಗೆ ಪ್ರತಿಯಾಗಿ ಮೋದಿ ಸರಕಾರ ಶ್ರೀಲಂಕಾದಲ್ಲಿ ರಾಜಪಕ್ಸ ಸರಕಾರ ನಡೆಸುತ್ತಿರುವ ಮಾನವಹಕ್ಕು ಉಲ್ಲಂಘನೆಗಳ ಬಗ್ಗೆ ಜಾಗತಿಕ ವೇದಿಕೆಗಳಲ್ಲಿ ತಟಸ್ಥ ನಿಲುವನ್ನು ತೆಗೆದುಕೊಂಡಿತು. ಅದನ್ನು ಭಾರತದ ದೀರ್ಘಕಾಲೀನ ಹಿತಾಸಕ್ತಿ ಎಂದೆಲ್ಲಾ ಸಮರ್ಥಿಸಿಕೊಂಡಿತು.

ಇಲ್ಲಿ ಭಾರತದ ಹಿತಾಸಕ್ತಿ ಅಂದರೆ ಬೇರೇನೂ ಅಲ್ಲ. ಅದಾನಿ ಹಿತಾಸಕ್ತಿ ಎಂದು ಮಾತ್ರ. ಅಷ್ಟು ಮಾತ್ರವಲ್ಲ.

ತೀರಾ ಇತ್ತೀಚಿನವರೆಗೂ ಮೋದಿ ಸರಕಾರ ಜಾಗತಿಕ ಆಕ್ಷೇಪಣೆಯನ್ನು ಮಾನ್ಯ ಮಾಡದೆ ಅದಾನಿಯ ಬಂದರು ಕಂಪೆನಿಯಾದ APSEZ ಮ್ಯಾನ್ಮಾರ್‌ನ ಮಿಲಿಟರಿ ಸರಕಾರದ ಕಂಪೆನಿಯೊಂದಿಗೆ ಮಾಡಿಕೊಂಡಿದ್ದ ಜಂಟಿ ಒಪ್ಪಂದವನ್ನು ಎಲ್ಲಾ ಜಾಗತಿಕ ವೇದಿಕೆಗಳಲ್ಲೂ ಬೆಂಬಲಿಸಿಕೊಂಡು ಬಂದಿತ್ತು. ಅದರೆ ಮ್ಯಾನ್ಮಾರ್‌ನಲ್ಲಿ ಹೆಚ್ಚುತ್ತಿರುವ ಮಾನವ ಹಕ್ಕುಗಳ ಮತ್ತು ಪ್ರಜಾತಂತ್ರದ ದಮನವನ್ನು ವಿರೋಧಿಸಿ ಅಂತರ್‌ರಾಷ್ಟ್ರೀಯ ಸಮುದಾಯ ಅದಕ್ಕೆ ಆರ್ಥಿಕ ದಿಗ್ಬಂಧನ ಇತ್ಯಾದಿಗಳನ್ನು ವಿಧಿಸುವ ಸನ್ನಾಹದಲ್ಲಿದ್ದಾಗ ವಿಶ್ವದ ಅತಿದೊಡ್ಡ ಪ್ರಜಾತಂತ್ರವಾಗಿರುವ ಭಾರತ ಮಿಲಿಟರಿ ಸರಕಾರದೊಂದಿಗೆ ನಡೆಸುತ್ತಿರುವ ವ್ಯವಹಾರ ತೀವ್ರ ಖಂಡನೆಗೆ ಗುರಿಯಾಯಿತು. ಮೋದಿಯವರು ಮೊದಲ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ ಕೆಲವೇ ತಿಂಗಳಲ್ಲಿ ಅದಾನಿ ಕಂಪೆನಿಯು ಅಸ್ಟ್ರೇಲಿಯದ ಕಲ್ಲಿದ್ದಲು ಕಂಪೆನಿಯನ್ನು ಕೊಂಡುಕೊಳ್ಳಲು ಮುಂದಾಯಿತು. ಅದಕ್ಕೆ ಬೇಕಿದ್ದ ಬಂಡವಾಳ ಸಾಲವನ್ನು ಕೊಡಲು ಜಗತ್ತಿನ ಬಹುಪಾಲು ಬ್ಯಾಂಕುಗಳು ನಿರಾಕರಿಸಿದವು. ಏಕೆಂದರೆ ಮೊದಲನೆಯದಾಗಿ ಅದಾನಿ ಕಂಪೆನಿಗೆ ಇಂತಹ ಕಲ್ಲಿದ್ದಲು ಸ್ಥಾವರಗಳನ್ನು ನಿರ್ವಹಿಸಿದ್ದ ಇತಿಹಾಸವಿರಲಿಲ್ಲ. ಎರಡನೆಯದಾಗಿ ಕಲ್ಲಿದ್ದಲು ಉದ್ಯಮವೇ ಜಾಗತಿಕವಾಗಿ ನಷ್ಟದಲಿದ್ದು ಲಾಭದ ಖಾತರಿ ಇರಲಿಲ್ಲ. ಮೂರನೆಯದಾಗಿ ಜಗತ್ತು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಗಿಂತ ವಾಯು, ಸೌರದಂತಹ ನವೀಕರಿಸಬಹುದಾದ ಶಕ್ತಿ ಮೂಲಗಳಿಗೆ ಹೋಗಬೇಕೆಂಬುದು ಎಲ್ಲಾ ಪ್ರಜ್ಞಾವಂತ ಸರಕಾರಗಳ ಅಭಿಮತವಾಗಿತ್ತು. ಆದರೆ ಮೋದಿ ಸರಕಾರ ಜಾಗತಿಕ ವೇದಿಕೆಗಳಲ್ಲಿ ಪರಿಸರದ ಬಗ್ಗೆ ಅಪಾರ ಕಾಳಜಿಯ ಭಾಷಣಗಳನ್ನು ಮಾಡುತ್ತಲೇ, ಭಾರತದ ಎಸ್‌ಬಿಐ ಬ್ಯಾಂಕಿನಿಂದ ಅದಾನಿಯ ಆಸ್ಟ್ರೇಲಿಯ ಕಲ್ಲಿದ್ದಲು ಗಣಿ ಖರೀದಿಗೆ ಒಂದು ಬಿಲಿಯನ್ ಡಾಲರ್ (7,500 ಕೋಟಿ ರೂ.)ದೀರ್ಘಾವಧಿ ಸಾಲ ಕೊಡಿಸಿತು. ಆ ನಂತರದಲ್ಲಿ ಅದಾನಿ ಕಂಪೆನಿ ಅಸ್ಟ್ರೇಲಿಯದಲ್ಲಿ ಗಣಿಗಾರಿಕೆ ಮಾಡುತ್ತಾ ನಡೆಸಿದ ಅಲ್ಲಿನ ಪರಿಸರ ನೀತಿ ಉಲ್ಲಂಘನೆಗಳ ವಿರುದ್ಧ ಅಸ್ಟ್ರೇಲಿಯ ಜನತೆ ನಿರಂತರ ಪ್ರತಿಭಟನೆ ನಡೆಸುತ್ತಾ 'ಅದಾನಿ ಗೋ ಬ್ಯಾಕ್' ಚಳವಳಿ ನಡೆಸುತ್ತಿದ್ದರೆ, ಪ್ರಧಾನಿ ಮೋದಿ ಅಸ್ಟ್ರೇಲಿಯ ಪ್ರವಾಸ ಮಾಡಿ ಆಸ್ಟ್ರೇಲಿಯ ಸರಕಾರ ಅದಾನಿ ಪರವಾಗಿರಬೇಕೆಂದು ಏನೇನು ಮಾಡಬೇಕೋ ಅವೆಲ್ಲವನ್ನೂ ಮಾಡಿ ಬಂದರು.

ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಟನ್ ಕಲ್ಲಿದ್ದಲಿನ ಬೆಲೆ 145 ಡಾಲರಿನಿಂದ 75 ಡಾಲರಿಗೆ ಇಳಿದಿದ್ದರೂ, ಅಧಿಕ ಬೆಲೆಗೆ ಅದಾನಿಯಿಂದಲೇ ಕೊಳ್ಳಬೇಕೆಂದು ಮೋದಿ ಸರಕಾರ NTPCಗೆ ತಾಕೀತು ಮಾಡಿದೆ. ಅಷ್ಟು ಮಾತ್ರವಲ್ಲ; ಈ ಹಿಂದೆ ಇಂಡೋನೇಶ್ಯದಿಂದ ಆಮದು ಮಾಡಿಕೊಂಡ ಕಲ್ಲಿದ್ದಲಿನ ಬೆಲೆಯನ್ನು ಕೃತಕವಾಗಿ ಹೆಚ್ಚಿಸಿ ಸಾವಿರಾರು ಕೋಟಿ ರೂ. ತೆರಿಗೆ ಕಳ್ಳತನವನ್ನು ಮಾಡಿದ್ದ ಹಗರಣದ ತನಿಖೆಯನ್ನು ಹಣಕಾಸು ಇಲಾಖೆ ಕೈಬಿಡುವಂತೆ ನೋಡಿಕೊಳ್ಳಲಾಗಿದೆ. ಅಷ್ಟೆಲ್ಲಾ ಏಕೆ ಮೋದಿಯವರು ಮೊದಲ ಬಾರಿ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ಭಾರತದ ತೆರಿಗೆದಾರನ 335 ಕೋಟಿ ರೂ.ನ್ನು ವೆಚ್ಚ ಮಾಡಿ 165 ದಿನಗಳ ಕಾಲ 52 ದೇಶಗಳ ಪ್ರವಾಸ ಮಾಡಿದ್ದರು. ಆಗ ಅವರ ಜೊತೆಗೂಡಿದ್ದವರಲ್ಲಿ ಪ್ರಮುಖರು ಅದಾನಿಯವರೇ. ಆ ಪ್ರವಾಸದಲ್ಲಿ ಇರಾನ್, ಪಾಕಿಸ್ತಾನ ಹಾಗೂ ಇನ್ನಿತರ ದೇಶಗಳೊಂದಿಗೆ ಭಾರತ ಸರಕಾರ ಮಾಡಿಕೊಂಡ 18 ಉದ್ಯಮ ಒಪ್ಪಂದಗಳಲ್ಲಿ 13 ಅದಾನಿ ಕಂಪೆನಿಯದ್ದು. ಇನ್ನುಳಿದ 5 ಅಂಬಾನಿಯದ್ದು. ಭಾರತವೆಂದರೆ ಮೋದಿಯವರ ಪಾಲಿಗೆ ಅದಾನಿ ಮತ್ತು ಅಂಬಾನಿಗಳೇ. ಅದಾನಿ ಕಾ ವಿಕಾಸ್ ಭಾರತ್ ಕಾ ವಿಕಾಸ್. ಉಳಿದವರೇನಿದ್ದರೂ ಅದರ ಬಗ್ಗೆ ವಿಶ್ವಾಸ್ ತೋರಬೇಕು. ಇಲ್ಲವೆಂದರೆ ಖಲ್ಲಾಸ್!  ಇದು ವಿಶ್ವಗುರು ನಡೆಸುತ್ತಿರುವ ಅದಾನಿ ಸೇವೆ.

ಅದಾನಿ ಕಾ ವಿಕಾಸ್- ಭಾರತ್ ಕಾ ಬರ್ಬಾದ್

ಇದು ಕಳೆದ ಎಂಟು ವರ್ಷಗಳಲ್ಲಿ ಮೋದಿ ಸರಕಾರ ಕಾಲಕಾಲಕ್ಕೆ ರೂಪಿಸುತ್ತಿ ರುವ ಮತ್ತು ಬದಲಿಸುತ್ತಿರುವ ನೀತಿಗಳನ್ನು ಗಮನಿಸಿದರೆ ಅರ್ಥವಾಗುತ್ತದೆ. 2019ರಲ್ಲಿ ಎರಡನೇ ಬಾರಿ ಮೋದಿಯವರು ಅಧಿಕಾರಕ್ಕೆ ಬಂದಮೇಲಂತೂ ಅಭಿವೃದ್ಧಿಯ ಹೆಸರಿನಲ್ಲಿ ಭಾರತವು ಈವರೆಗೆ ನಿರ್ಮಿಸಿದ್ದ ಎಲ್ಲಾ ಬಂದರು, ವಿಮಾನ ನಿಲ್ದಾಣ, ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಅದಾನಿ ಕೊಂಡುಕೊಳ್ಳಲು ಬೇಕಾದ ಹಣ, ಕಾನೂನು ಸಡಿಲಿಕೆ, ನಿಯಮಗಳಿಂದ ರಕ್ಷಣೆ ಎಲ್ಲವನ್ನೂ ಮೋದಿ ಸರಕಾರ ಒದಗಿಸುತ್ತಿದೆ. ಹಾಲಿ ರಶ್ಯ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ರಶ್ಯದ ಅಗ್ಗದ ತೈಲವನ್ನು ಅಂಬಾನಿ ಆಮದು ಮಾಡಿಕೊಂಡು ಭಾರತೀಯರಿಗೆ ಒದಗಿಸದೆ ಹೆಚ್ಚು ಬೆಲೆಗೆ ವಿದೇಶಿ ಮಾರುಕಟ್ಟೆಯಲ್ಲಿ ಮಾರಿಕೊಳ್ಳಲು ಮೋದಿ ಸರಕಾರ ಅವಕಾಶ ಮಾಡಿಕೊಟ್ಟಿದೆ. ಹಾಗೆಯೇ ಭಾರತದಲ್ಲಿ ಖಾದ್ಯ ತೈಲ ಕೊರತೆಯನ್ನು ನಿವಾರಿಸಬಹುದಾದ ಎಲ್ಲಾ ಯೋಜನೆಗಳನ್ನು ನೆನೆಗುದಿಯಲ್ಲಿ ಇರಿಸಿ ಆದಾನಿ-ವಿಲ್ಮಾರ್ ಕಂಪೆನಿಯಿಂದ ಹೆಚ್ಚಿನ ಬೆಲೆಗೆ ಆಮದು ಮಾಡಿಕೊಂಡು ಅದರ ಬೊಕ್ಕಸ ತುಂಬಿಸುತ್ತಿದೆ. ಇತ್ತೀಚಿನ ಕೃಷಿ ಕಾಯ್ದೆಗಳೂ ಮೂಲಭೂತವಾಗಿ ಕೃಷಿ ಸೌಕರ್ಯಗಳಲ್ಲಿ ಆದಾನಿ ಬಂಡವಾಳ ಹೂಡಿಕೆಗೆ ಪೂರಕವಾಗಿ ರೂಪಿಸಲ್ಪಟ್ಟಿತ್ತು. ಈಗಾಗಲೇ ಇದು ಹಲವಾರು ರಾಜ್ಯಗಳಲ್ಲಿ ಜಾರಿಗೆ ಬಂದಾಗಿದೆ.

ಅದಾನಿಯ ಮುಂದ್ರಾ ಬಂದರಿನಲ್ಲಿ ಡ್ರಗ್ಸ್ ಕಳ್ಳಸಾಗಣೆ-ದಿಟ್ಟ, ನೇರ ನಿರಂತರ

ಅದಾನಿಯ ಬೆಳವಣಿಗೆಯ ಹಿಂದೆ ಹಲವಾರು ನಿಗೂಢಗಳೂ ಇವೆ. ಅದಕ್ಕೆ ಮೋದಿ ಸರಕಾರದ ಶ್ರೀರಕ್ಷೆಗಳೂ ಇವೆ. ಉದಾಹರಣೆಗೆ, ಪ್ರತೀ ತಿಂಗಳೂ ಹೆಚ್ಚೂ ಕಡಿಮೆ ಅದಾನಿ ನಿಯಂತ್ರಣದ ಗುಜರಾತಿನ ಮುಂದ್ರಾ ಬಂದರಿನಿಂದ ನೂರಾರು ಟನ್‌ಗಳಷ್ಟು ಕೋಕೈನ್, ಇನ್ನಿತರ ಅಮಲು ಪದಾರ್ಥಗಳು ಜಪ್ತಿಯಾಗುತ್ತವೆ. ಆದರೆ ಶಾರುಕ್ ಖಾನ್ ಮಗನ ಬಳಿ ಒಂದು ಗ್ರಾಂ ಡ್ರಗ್ ಸಿಕ್ಕಿತೆಂದು ಸುಳ್ಳು ಆಪಾದನೆ ಹೊರಿಸಿ ಆಕಾಶ ಭೂಮಿ ಒಂದು ಮಾಡಿ ಕಾನೂನುಬಾಹಿರವಾಗಿ ಕ್ರಮಗಳನ್ನು ತೆಗೆದುಕೊಂಡ ಕೇಂದ್ರ ಸರಕಾರ ಮುಂದ್ರಾ ಬಂದರಿನಲ್ಲಿ ನೂರಾರು ಟನ್‌ಗಳಷ್ಟು ಡ್ರಗ್ಸ್‌ಗಳು ಇಷ್ಟು ಸರಾಗವಾಗಿ ಹೇಗೆ ಹಾದುಹೋಗುತ್ತಿವೆ ಎಂಬ ಬಗ್ಗೆ ಈವರೆಗೂ ಒಂದು ತನಿಖೆ ನಡೆಸಿಲ್ಲ. ಇದೇ ಮುಂದ್ರಾ ಬಂದರಿನ ನಿರ್ಮಾಣದಲ್ಲಿ ಅದಾನಿ ಕಂಪೆನಿ ನಡೆಸಿದ ಪರಿಸರ ನಿಯಮಗಳ ಉಲ್ಲಂಘನೆಯ ಬಗ್ಗೆ ಹಿಂದಿನ ಸರಕಾರ ವಿಧಿಸಿದ್ದ 200 ಕೋಟಿ ರೂ. ದಂಡವನ್ನು ಮೋದಿ ಸರಕಾರ ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ರದ್ದು ಮಾಡಲಾಯಿತು. ಅಷ್ಟು ಮಾತ್ರವಲ್ಲ; ಬೇರೆ ಯಾವುದೇ ಕಂಪೆನಿಗೂ ಇಲ್ಲದಷ್ಟು ಸರಾಗವಾಗಿ ಅದಾನಿ ಕಂಪೆನಿಗೆ ಹಣಕಾಸು ಬಂಡವಾಳವನ್ನು ಭಾರತದ ಬ್ಯಾಂಕುಗಳು ಒದಗಿಸುತ್ತವೆ. ಆ ಕಾರಣದಿಂದಾಗಿಯೇ ಅದಾನಿ ಇಂದು ಭಾರತದ ಬಹುಪಾಲು ಬಂದರು, ರಸ್ತೆ, ವಿಮಾನ ನಿಲ್ದಾಣ, ಸಂಗ್ರಹ ಸೌಕರ್ಯ ಇತ್ಯಾದಿಗಳ ಸಾಮ್ರಾಜ್ಯವನ್ನು ನಿರ್ಮಿಸಿಕೊಂಡಿರುವುದು. ಅದರಿಂದಾಗಿಯೇ ಶೇರು ಮಾರುಕಟ್ಟೆಯಲ್ಲಿ ಅದಾನಿಯ ಶೇರು ಮೊತ್ತ 10 ಲಕ್ಷ ಕೋಟಿಯ ವರೆಗೆೆ ಮುಟ್ಟಿದೆ.

ಅತ್ಯಂತ ದೊಡ್ದ ಸಾಲಗಾರ- ಅತ್ಯಂತ ದೊಡ್ಡ ಕುಬೇರ- ಮೋದಿ ಮ್ಯಾಜಿಕ್!

ಆದರೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿಯವರೇ ಹೇಳುವಂತೆ ಅದಾನಿಯ ಬಹುಪಾಲು ಬ್ಯಾಂಕು ಸಾಲಗಳು ಮರುಪಾವತಿಯಾಗದ ಸಾಲಗಳಾಗಲಿವೆ. ಏಕೆಂದರೆ ಇಂದು ಅದಾನಿ ಕಂಪೆನಿ ನಮ್ಮ ಬ್ಯಾಂಕುಗಳಿಂದ 2.25 ಲಕ್ಷ ಕೋಟಿ ಸಾಲವನ್ನು ಪಡೆದಿದೆ. ಭಾರತದ ಅತಿ ದೊಡ್ಡ ಸಾಲಗಾರ ಕಂಪೆನಿ ಅದಾನಿ ಕಂಪೆನಿಯೇ ಆಗಿದೆ. ಜಗತ್ತಿನ ಯಾವೊಂದು ರಾಷ್ಟ್ರಗಳು ಒಂದು ಕಂಪೆನಿಗೆ ಇಷ್ಟೊಂದು ದೊಡ್ಡ ಮೊತ್ತದ ಸಾಲ ಕೊಟ್ಟಿಲ್ಲ. ಇವೆಲ್ಲದರ ಪರಿಣಾಮವಾಗಿಯೇ, ಮೋದಿ ಅಧಿಕಾರಕ್ಕೆ ಬಂದ ಈ ಎಂಟು ವರ್ಷಗಳಲ್ಲಿ ಅದಾನಿಯ ಸಂಪತ್ತು 1.9 ಬಿಲಿಯನ್ ಡಾಲರ್‌ನಿಂದ 32 ಬಿಲಿಯನ್ ಡಾಲರ್‌ಗೆ ಏರಿದೆ. ಅದೇ ಸಮಯದಲ್ಲಿ ಇತರ ಮಧ್ಯಮ ಹಾಗೂ ಸಣ್ಣ ಹಾಗೂ ಅತಿ ಸಣ್ಣ ಕಂಪೆನಿಗಳು ಮೋದಿ ಸರಕಾರದಿಂದ ಕನಿಷ್ಠ ಬೆಂಬಲವೂ ದೊರಕದೆ ಅಸುನೀಗುತ್ತಿವೆ. ಅದಾನಿ ಪರವಾದ ನೀತಿಗಳಿಂದ ಭಾರತದ ಕೃಷಿ, ಅಸಂಘಟಿತ ಉದ್ಯಮಗಳ ಬಹುಜನರ ಒಟ್ಟಾರೆ ಆರ್ಥಿಕ ಆರೋಗ್ಯವೂ ಕುಸಿಯುತ್ತಿದೆ. ಜಾಗತಿಕವಾಗಿಯೂ ಅದಾನಿ ಪರ ನೀತಿಯಿಂದಾಗಿ ಭಾರತದ ಪ್ರತಿಷ್ಠೆ ಕುಸಿಯುತ್ತಿದೆ. ಇದು, ಭಾರತವೆಂದರೆ ಅದಾನಿ-ಅಂಬಾನಿಯೆಂಬ ಮೋದಿ ನೀತಿಯ ಪರಿಣಾಮ. ಆದರೆ ಮೋದಿಯವರೇಕೆ ಅದಾನಿಯ ಬೆನ್ನಿಗೆ? ಅದಾನಿಯೇಕೆ ಮೋದಿಯವರ ಬೆನ್ನಿಗೆ?
 
ನರಮೇಧದ ರಾಜಕೀಯ ಮತ್ತು ದುಷ್ಟ ಬಂಡವಾಳದ ಮೈತ್ರಿ

ಇದಕ್ಕೊಂದು ಐತಿಹಾಸಿಕ ಕಾರಣವೂ ಇದೆ. 2002ರಲ್ಲಿ ಗುಜರಾತಿನಲ್ಲಿ ಭಾರತವನ್ನೇ ಕಂಗೆಡಿಸಿದ ಮುಸ್ಲಿಮ್ ನರಮೇಧ ನಡೆಸಿ ಅತ್ಯಂತ ಕ್ರೂರ ಕೋಮುಧ್ರುವೀಕರಣ ರಾಜಕೀಯವನ್ನು ಪ್ರಾರಂಭಿಸಿ 'ಹಿಂದೂ ಹೃದಯ ಸಾಮ್ರಾಟ'ನೆಂಬ ಹೆಗ್ಗಳಿಕೆಯಿಂದ 2002ರ ಡಿಸೆಂಬರ್‌ನಲ್ಲಿ ಮೋದಿ ಮತ್ತೊಮ್ಮೆ ಗುಜರಾತಿನ ಮುಖ್ಯಮಂತ್ರಿಯಾದರಷ್ಟೆ. ಆಗ ಇನ್ನೂ ಪ್ರಾರಂಭದ ದಿನಗಳು. ಭಾರತಕ್ಕೆ ಅಲ್ಪಸ್ವಲ್ಪಆತ್ಮಸಾಕ್ಷಿಯಿತ್ತು. ಹೀಗಾಗಿ ಭಾರತದ ಬೃಹತ್ ಉದ್ಯಮಿಗಳ ಸಂಸ್ಥೆಯಾಗಿದ್ದ CII ಮೋದಿ ನೀತಿಯನ್ನು ಕಟುವಾಗಿ ಖಂಡಿಸುವ ಧೈರ್ಯವನ್ನು ತೋರಿತ್ತು. ಅಮೆರಿಕ ಮೋದಿಗೆ ವೀಸಾ ನಿರಾಕರಿಸಿತ್ತು. ಸುಪ್ರೀಂ ಕೋರ್ಟ್ ಸಹ ಕಟುವಾದ ಮಾತುಗಳಿಂದ ಗುಜರಾತ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಹೀಗಾಗಿ ಮೋದಿ ಸರಕಾರ ಭಾರತದ ಉದ್ಯಮಿಗಳ ಹಾಗೂ ಇತರ ಸಂಸ್ಥೆಗಳ ಬೆಂಬಲವನ್ನು ಕಳೆದುಕೊಂಡಿತ್ತು. ಆಗ ಮೋದಿಯ ಬೆಂಬಲಕ್ಕೆ ನಿಂತಿದ್ದು ಆಗಿನ್ನು ಗುಜರಾತಿನಲ್ಲಿ ಮಧ್ಯಮ ಗಾತ್ರದ ಉದ್ಯಮ ನಡೆಸುತ್ತಿದ್ದ ಈ ಅದಾನಿ. ಮತ್ತು ಅಂಬಾನಿ. ಅದಾನಿಯ ನೇತೃತ್ವದಲ್ಲಿ CIIಗೆ ಪರ್ಯಾಯವಾಗಿ ಅದಾನಿ-ಅಂಬಾನಿ Resurgent Group of Gujarat  ಎಂಬ ಮೋದಿಪರ ಉದ್ಯಮಿಗಳ ಗುಂಪನ್ನು ಕಟ್ಟಿದರು. ಆ ನಂತರ ಪ್ರತಿವರ್ಷ ಗುಜರಾತಿನಲ್ಲಿ 'ವಿರಾಟ್ ಗುಜರಾತ್' ಎಂಬ ಹೆಸರಿನಲ್ಲಿ ಜಾಗತಿಕ ಹೂಡಿಕೆದಾರರ ಸಮ್ಮೇಳನವನ್ನು ಸಂಘಟಿಸಲು ಪ್ರಾರಂಭಿಸಿದರು. ಈ ಪ್ರಕ್ರಿಯೆಯಲ್ಲಿ ಗುಜರಾತಿನ ಹಣಕಾಸು, ಭೂಮಿ, ತೆರಿಗೆ ಕಡಿತ, ಕಾಡು..ಇತ್ಯಾದಿ ಎಲ್ಲವನ್ನು ಬಿಡಿಗಾಸಿಗೆ ಕಾರ್ಪೊರೇಟ್ ಉದ್ಯಮಿಗಳಿಗೆ ಮಾರಿಕೊಳ್ಳಲು ಪ್ರಾರಂಭಿಸಲಾಯಿತು.

ಇದರ ಪ್ರಧಾನ ಫಲಾನುಭವಿಗಳು ಅದಾನಿ ಮತ್ತು ಅಂಬಾನಿ. ಇದರ ಜೊತೆಗೆ 2008ರಲ್ಲಿ ಟಾಟಾ ಕೂಡ ತಮ್ಮ ನ್ಯಾನೋ ಕಾರು ಉದ್ಯಮವನ್ನು ಬಂಗಾಲದಿಂದ ಗುಜರಾತಿಗೆ ಸ್ಥಳಾಂತರಿಸಿದರು. 2009ರ ವೇಳೆಗೆ ಮೋದಿಯ ಗುಜರಾತ್ ಸರಕಾರ ಒದಗಿಸುತ್ತಿದ್ದ ಲಾಭಾವಕಾಶಗಳಿಂದ ಸಂತೃಪ್ತರಾಗಿದ್ದ ಭಾರತದ ಎಲ್ಲಾ ಕಾರ್ಪೊರೇಟ್ ಉದ್ಯಮಿಗಳೂ ಮೋದಿಯ ಬಗ್ಗೆ ಇದ್ದ ಎಲ್ಲಾ ಆಕ್ಷೇಪಗಳನ್ನೂ ಬದಿಗಿಟ್ಟು ಮೋದಿಯ ಬೆನ್ನಿಗೆ ನಿಂತರು. ಇವೆಲ್ಲದರ ಭಾಗವಾಗಿಯೇ 2013ರಲ್ಲಿ ಭಾರತದ ಕಾರ್ಪೊರೇಟ್ ಲೋಕ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯೆಂದು ಮುಕ್ತಕಂಠದಿಂದ ಎತ್ತಿಹಿಡಿಯಿತು. 2013ರ ಚುನಾವಣೆಯಲ್ಲೂ ಅದಾನಿ ಮೋದಿಯ ಬೆನ್ನಿಗೆ ನಿಂತು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟರು. ಎಲ್ಲಿಯತನಕ ಎಂದರೆ ಮೋದಿಯವರು ಪ್ರಧಾನಿಯಾಗಿ ಆಯ್ಕೆಯಾದ ನಂತರ ಗುಜರಾತಿನಿಂದ ದಿಲ್ಲಿಗೆ ಬಂದದ್ದು ಅದಾನಿಯ ಚಾರ್ಟೆಡ್ ಫ್ಲೈಟಿನಲ್ಲೇ!. ಇದು ಭಾರತದ ನಂತರದ ರಾಜಕೀಯ-ಆರ್ಥಿಕತೆಗೆ ಸಾಂಕೇತಿಕವಾಗಿಯೂ, ರೂಪಕಾತ್ಮಕವಾಗಿಯೂ ಇತ್ತು. ಈಗ ಭಾರತದ ಪ್ರಜಾತಂತ್ರ ಎಂಬುದು ಮೋದಿಯಿಂದ-ಅದಾನಿ- ಅಂಬಾನಿಗಳಿಗಾಗಿ ಎಂದಾಗಿದೆ. ಆರ್ಥಿಕ ಅಭಿವೃದ್ಧಿ ಎಂದರೆ ಅದಾನಿ-ಅಂಬಾನಿಗಳ ಅಭಿವೃದ್ಧಿ ಮಾತ್ರ ಎಂದಾಗಿದೆ. ಇದನ್ನೇ 'ಕ್ರೋನಿ ಕ್ಯಾಪಿಟಲಿಸಂ' ಎಂದು ಆರ್ಥಿಕ ಪರಿಭಾಷೆಯಲ್ಲಿ ಕರೆಯುತ್ತಾರೆ. ಇಂತಹ ಕ್ರೋನಿ ಕಾರ್ಪೊರೇಟ್ ಆರ್ಥಿಕತೆಯಿಂದ ಒಟ್ಟಾರೆ ಆರ್ಥಿಕತೆ ದುಸ್ಥಿತಿಯತ್ತ ಧಾವಿಸುತ್ತದೆ. ಆದರೆ ಅದು ಜನರ ಅರಿವಿಗೆ ಬಾರದಂತೆ ತಡೆಯಲು, ಅಂದರೆ ಅದಾನಿ-ಅಂಬಾನಿ ವಿಕಾಸವೆಂದರೆ ಭಾರತದ ಬರ್ಬಾದಿ ಎಂಬುದನ್ನು ಮರೆಮಾಚಲು ಹಿಂದೂ-ಮುಸ್ಲಿಮ್, ಮಂದಿರ-ಮಸೀದಿ ಎಂಬ ಕೋಮು ಉನ್ಮಾದಗಳನ್ನು ನಿರಂತರವಾಗಿ ಹುಟ್ಟುಹಾಕಲಾಗುತ್ತದೆ. ಮನೆಗಳನ್ನು ಕಟ್ಟುವುದನ್ನು ಬಿಟ್ಟು ಮನೆಗಳ ನೆಲಸಮವನ್ನು ಸಂಭ್ರಮಿಸುವ ಉನ್ಮಾದವನ್ನು ಹುಟ್ಟುಹಾಕಲಾಗುತ್ತದೆ. ಆದರೆ ಎಲ್ಲಿಯತನಕ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)