varthabharthi


ಕಾಲಮಾನ

ಪ್ರಜಾಪ್ರಭುತ್ವದಲ್ಲಿ ನಿರಂಕುಶ ನಾಯಕರು!

ವಾರ್ತಾ ಭಾರತಿ : 18 Jun, 2022
ರಾಮಚಂದ್ರ ಗುಹಾ

ಜನರಿಂದ ಮತ್ತು ಪರಿಣತರಿಂದ ಬರುವ ಸಲಹೆಗಳನ್ನು ಕೇಳಬಲ್ಲ ಮತ್ತು ಕಲಿಯಬಲ್ಲ, ತಮ್ಮ ಮಂತ್ರಿಗಳಿಗೆ ಅಧಿಕಾರವನ್ನು ಕೊಡಬಲ್ಲ (ಹಾಗೂ ಅವರು ಒಳ್ಳೆಯ ಕೆಲಸ ಮಾಡಿದಾಗ ಅವರನ್ನು ಅಭಿನಂದಿಸಬಲ್ಲ), ಸಾರ್ವಜನಿಕ ಸಂಸ್ಥೆಗಳ ಸ್ವಾಯತ್ತತೆ ಮತ್ತು ಪತ್ರಿಕಾ ಸ್ವಾತಂತ್ರವನ್ನು ಗೌರವಿಸಬಲ್ಲ ಹಾಗೂ ರಾಜಕೀಯ ಪ್ರತಿಪಕ್ಷಗಳನ್ನು ನಿಂದಿಸುವುದನ್ನು ಬಿಟ್ಟು ಅವುಗಳೊಂದಿಗೆ ರಚನಾತ್ಮಕ ಮಾತುಕತೆಯನ್ನು ನಡೆಸಬಲ್ಲ ನಾಯಕರಿಂದ ಮಾತ್ರ ಭಾರತಕ್ಕೆ ಮತ್ತು ಭಾರತೀಯರಿಗೆ ಅತ್ಯುತ್ತಮ ಸೇವೆ ಸಲ್ಲಿಸಲು ಸಾಧ್ಯ.1947ರಲ್ಲಿ ಸ್ವಾತಂತ್ರದ ಔಪಚಾರಿಕ ಘೋಷಣೆಯಾಯಿತು. ಆದರೆ, ಅದಕ್ಕಿಂತ ಒಂದು ದಶಕದ ಮೊದಲೇ, ಅಂದರೆ 1937ರಲ್ಲಿ ಭಾರತೀಯರು ಸ್ವಯಮಾಡಳಿತದ ರುಚಿಯನ್ನು ಅನುಭವಿಸಿದ್ದರು. ಅಂದು ಸೀಮಿತ ಮತದಾನದ ಮೂಲಕ ಆರಿಸಲ್ಟಟ್ಟ ಸರಕಾರಗಳು ಬ್ರಿಟಿಷ್ ರಾಜ್‌ನ ವಿವಿಧ ಪ್ರಾಂತಗಳಲ್ಲಿ ರಚನೆಯಾದವು. ಇದನ್ನು ಸಂಪೂರ್ಣ ಪ್ರಾತಿನಿಧಿಕ ಸರಕಾರದ ಹಾದಿಯಲ್ಲಿ ಇಟ್ಟ ಒಂದು ಹೆಜ್ಜೆ ಎಂಬುದಾಗಿ ಪರಿಗಣಿಸಲಾಯಿತು.

ಅಂದು, ಮದರಾಸು ಪ್ರೆಸಿಡೆನ್ಸಿಯಲ್ಲಿ ಕಾಂಗ್ರೆಸ್ ಸರಕಾರವೊಂದು ಪ್ರಮಾಣವಚನ ಸ್ವೀಕರಿಸಿದ ಸ್ವಲ್ಪವೇ ಸಮಯದ ಬಳಿಕ, ತಮಿಳು ಚಿಂತಕರೊಬ್ಬರು ನಾಯಕತ್ವದ ಬಗ್ಗೆ ಮಹತ್ವದ ಭಾಷಣವೊಂದನ್ನು ಮಾಡಿದರು. ಆ ಭಾಷಣಕಾರನ ಅಂದಿನ ಚಿಂತನೆಗಳು ಇಂದಿನ ಭಾರತದ ರಾಜಕೀಯ ಸಂಸ್ಕೃತಿಯನ್ನು ನಿಖರವಾಗಿ ಬಿಂಬಿಸಿವೆ.

ಆ ಭಾಷಣಕಾರ ಕೆ. ಸ್ವಾಮಿನಾಥನ್. ಅವರು ಆಗ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಾಹಿತ್ಯದ ಪ್ರೊಫೆಸರ್ ಆಗಿದ್ದರು. 1938ರಲ್ಲಿ ಅಣ್ಣಾಮಲೈವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ಮುಖ್ಯವಾಗಿ ಎರಡು ವಿಧಗಳ ರಾಜಕೀಯ ನಾಯಕರಿದ್ದಾರೆ- ತಾವು ಅನಿವಾರ್ಯವೆಂದು ಭಾವಿಸಿಕೊಂಡವರು ಮತ್ತು ಹಾಗೆ ಭಾವಿಸದವರು- ಎಂದು ಹೇಳಿದರು. ತಾವು ಅನಿವಾರ್ಯವೆಂದು ಭಾವಿಸದವರ ವಿಭಾಗದಲ್ಲಿ ಒಂದು ಹೆಸರನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿದರು. ಅವರು ಹೇಳಿದರು: ‘‘ಈ ಮೂರು-ನಾಲ್ಕು ವರ್ಷಗಳಲ್ಲಿ, ತನ್ನ ಉತ್ತರಾಧಿಕಾರಿಗಳನ್ನು ರೂಪಿಸುವಲ್ಲಿ ಗಾಂಧಿ ವಿಶೇಷ ಕಾಳಜಿ ವಹಿಸಿದರು ಮತ್ತು ಹೆಚ್ಚಿನ ಜಾಗರೂಕತೆ ವಹಿಸಿದರು. ತನ್ನನ್ನು ಅನಿವಾರ್ಯವಾಗಿಸಬೇಕು ಎಂಬ ಕಲ್ಪನೆಯೇ ಅವರಲ್ಲಿ ಇರಲಿಲ್ಲ. ಗಾಂಧೀಜಿ ಅಲ್ಲದಿದ್ದರೆ ಜವಾಹರಲಾಲ್ ನೆಹರೂ ಆಗಲಿ, ರಾಜೇಂದ್ರ ಪ್ರಸಾದ್ ಆಗಲಿ ಈಗೇನಾಗಿದ್ದಾರೋ ಹಾಗೆ ಆಗುತ್ತಿರಲಿಲ್ಲ. ಹಾಗಂತ, ಇವರಿಬ್ಬರೂ ಹೇಳಿದ್ದಕ್ಕೆಲ್ಲಾ ತಲೆಯಾಡಿಸುವ ಗೊಂಬೆಗಳೇನಲ್ಲ. ಗಾಂಧೀಜಿ ಸಾಮಾನ್ಯ ಮಣ್ಣಿನಿಂದ ಹೀರೋಗಳನ್ನು ಸೃಷ್ಟಿಸಬಲ್ಲವರಾಗಿದ್ದರು. ಹಾಗಾದರೆ, ಚಿನ್ನದಿಂದ ಅವರು ಏನೇನೆಲ್ಲ ಮಾಡಬಹುದಾಗಿತ್ತು? ತನ್ನದೇ ಯಾಂತ್ರಿಕ ವೈಭವೀಕರಣಗಳನ್ನು ಹೊರತುಪಡಿಸಿ, ಅವರು ಎಲ್ಲವನ್ನೂ ಮಾಡಬಹುದಾಗಿತ್ತು.

ಧನಾತ್ಮಕ ಉದಾಹರಣೆಯೊಂದನ್ನು ನೀಡಿದ ಸ್ವಾಮಿನಾಥನ್ ಬಳಿಕ ಎಚ್ಚರಿಕೆಯೊಂದನ್ನೂ ನೀಡಿದರು. ಅವರು ಹೀಗೆ ಹೇಳಿದರು: ‘‘ಆದರೆ, ಇನ್ನೊಂದು ರೀತಿಯ ನಾಯಕರೂ ಇದ್ದಾರೆ ಎನ್ನುವುದನ್ನು ನಾವು ಗಮನದಲ್ಲಿಡಬೇಕು. ಅವರು ತಮ್ಮ ಅನುಯಾಯಿಗಳನ್ನು ನಂಬುವುದಿಲ್ಲ ಮತ್ತು ಅವರಿಗೆ ಸ್ವತಂತ್ರವಾಗಿ ವ್ಯವಹರಿಸುವ ಸ್ವಾತಂತ್ರವನ್ನು ನೀಡುವುದಿಲ್ಲ. ಅವರಿಂದ ಸೇನಾ ಮಾದರಿಯ ಶಿಸ್ತನ್ನು ಬಯಸುತ್ತಾರೆ. ತಮ್ಮ ಪಕ್ಕದಲ್ಲಿ ಸ್ವತಂತ್ರ ಮತ್ತು ಸ್ವಾವಲಂಬಿ ಕಾರ್ಯಕರ್ತರ ಬದಲು ಯಾಂತ್ರಿಕವಾಗಿ ನಡೆದುಕೊಳ್ಳುವವರು ಇರಬೇಕು ಎಂದು ಈ ನಾಯಕರು ಬಯಸುತ್ತಾರೆ. ಇಂತಹ ನಾಯಕರು ಹುಣಸೆ ಮರ ಇದ್ದ ಹಾಗೆ. ಬಹುಷಃ ತನ್ನ ದಿನಗಳಲ್ಲಿ ಹುಣಸೆ ಮರವು ಶ್ರೇಷ್ಠ ಮತ್ತು ಉಪಯುಕ್ತವೇ ಆಗಿರಬಹುದು. ಆದರೆ ತನ್ನ ಅಡಿಯಲ್ಲಿ ಬೆಳೆಯುವ ಇತರ ಮರಗಳಿಗೆ ಅದು ವಿನಾಶಕಾರಿಯಾಗಿದೆ. ಅವರು ಭಿನ್ನಾಭಿಪ್ರಾಯಗಳನ್ನು ಸಹಿಸುವುದಿಲ್ಲ, ಸ್ನೇಹಪೂರ್ವಕ ಟೀಕೆಗೂ ಅವರು ಸಿಡಿಮಿಡಿಗೊಳ್ಳುತ್ತಾರೆ. ಅವರು ಸಿಂಹಾಸನದ ಸನಿಹಕ್ಕೆ ಬರಲು ಯಾರನ್ನೂ ಬಿಡುವುದಿಲ್ಲ. ಕೊನೆಗೆ ಅವರು ಹೋಗುವಾಗ, ನಿರ್ಜೀವ ಬಂಜರು ಭೂಮಿಯನ್ನು ಬಿಟ್ಟು ಹೋಗುತ್ತಾರೆ.’’

‘‘ನಮ್ಮ ದೇಶಕ್ಕೆ ಇಂದು ಬೇಕಾಗಿರುವುದು ಸಾಮಾನ್ಯಕ್ಕಿಂತ ಕೊಂಚ ಮೇಲಿನ ದರ್ಜೆಯ ಹಲವು (ಒಂದಕ್ಕಿಂತ ಹೆಚ್ಚಿನ) ರಾಜಕೀಯ ನಾಯಕರು. ಅವರನ್ನು ಸೃಷ್ಟಿಸಲು ನಮ್ಮ ಹಾಸ್ಟೆಲ್‌ಗಳು ನೆರವು ನೀಡಬಹುದಾಗಿದೆ’’ ಎಂದು 1938ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸ್ವಾಮಿನಾಥನ್ ಹೇಳಿದರು. ‘‘ತನ್ನ ಅನುಯಾಯಿಗಳಿಗಿಂತ ತುಂಬಾ ಮೇಲಿರುವ ಒಂಟಿ ಸೂಪರ್‌ಮ್ಯಾನ್‌ನಿಂದ ನಮಗೆ ಹೆಚ್ಚಿನ ಖಾಯಂ ಉಪಯೋಗವಿದೆ ಎಂದು ನನಗನಿಸುವುದಿಲ್ಲ. ಇಂತಹ ನಾಯಕರು ಮತ್ತು ಅವರ ಅನುಯಾಯಿಗಳ ನಡುವೆ ಮುಚ್ಚಲಾಗದ ಶಾಶ್ವತ ಕಂದಕವಿರುತ್ತದೆ’’ ಎಂದು ಅವರು ಹೇಳಿದರು.

ಸ್ವಾಮಿನಾಥನ್‌ರ ಭಾಷಣದ ಬರಹದ ಪ್ರತಿ ನನಗೆ ಇತ್ತೀಚೆಗೆ ಸಿಕ್ಕಿತು. ಅದನ್ನು ನಾನು ಆಘಾತಕಾರಿ ಅನುಭವದೊಂದಿಗೆ ಓದಿದೆ. ಯಾಕೆಂದರೆ, 1938ರಲ್ಲಿ ಅವರು ನೀಡಿದ್ದ ಎಚ್ಚರಿಕೆಗಳು 2022ರ ಭಾರತಕ್ಕೆ ಅಂದಿಗಿಂತಲೂ ಹೆಚ್ಚು, ನಿಜ ಹೇಳಬೇಕೆಂದರೆ ಅಂದಿಗಿಂತ ತುಂಬಾ ಹೆಚ್ಚು ಪ್ರಸ್ತುತವಾಗಿವೆ. ಇಂದಿನ ಭಾರತದಲ್ಲಿ, ಬಹುಷಃ ಜಗತ್ತಿನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಅತಿರಂಜಿತ ವ್ಯಕ್ತಿತ್ವ (personality cult)ವನ್ನು ತನ್ನ ಸುತ್ತ ನಿರ್ಮಿಸಿಕೊಂಡಿರುವ ಪ್ರಧಾನಿಯೊಬ್ಬರನ್ನು ನಾವು ಹೊಂದಿದ್ದೇವೆ. ಈ ಅತಿರಂಜಿತ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಪಕ್ಷ ಮತ್ತು ಸರಕಾರದ ಅಗಾಧ ಪ್ರಮಾಣದ ಹಣವನ್ನು ಖರ್ಚು ಮಾಡಲಾಗಿದೆ ಹಾಗೂ ಅದರ (ಅತಿರಂಜಿತ ವ್ಯಕ್ತಿತ್ವದ) ನಿರ್ವಹಣೆಗಾಗಿ ಭಾರೀ ಸಂಖ್ಯೆಯಲ್ಲಿ ಜನರನ್ನು ತೊಡಗಿಸಲಾಗಿದೆ.
ನರೇಂದ್ರ ಮೋದಿಯ ವ್ಯಕ್ತಿಪೂಜೆಯ ಅಪಾಯಕಾರಿ ಪರಿಣಾಮಗಳ ಬಗ್ಗೆ ನಾನು ಹಿಂದೆಯೇ ಬರೆದಿದ್ದೇನೆ. ಹಾಗಾಗಿ, ಅದನ್ನು ನಾನು ಇಲ್ಲಿ ಪುನರುಚ್ಚರಿಸುವುದಿಲ್ಲ.
ಇನ್ನೊಂದು ವಿಷಯವನ್ನು ಗಮನಿಸಬೇಕು. ಅಧಿಕಾರಸ್ಥರ ವೈಭವೀಕರಣದ ಪ್ರವೃತ್ತಿಯು ಕೇಂದ್ರ ಸರಕಾರದಲ್ಲಿ ಮಾತ್ರವಲ್ಲ, ಹಲವು ರಾಜ್ಯ ಸರಕಾರಗಳಲ್ಲಿಯೂ ಕಾಣುತ್ತಿದೆ. ವಿಧಾನಸಭೆ ಮತ್ತು ಸಂಸತ್ತಿಗೆ ಚುನಾವಣೆಗಳು ನಡೆಯುವಾಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನರೇಂದ್ರ ಮೋದಿಗೆ ಬದ್ಧ ವಿರೋಧಿಯಾಗುತ್ತಾರೆ. ಆದರೆ ಅವರ ರಾಜಕೀಯದ ಮಾದರಿಯು ಮೋದಿಯ ಮಾದರಿಯನ್ನೇ ಹೋಲುತ್ತದೆ. ಅವರು ತೃಣಮೂಲ ಕಾಂಗ್ರೆಸ್, ಪಶ್ಚಿಮ ಬಂಗಾಳ ಸರಕಾರ ಹಾಗೂ ಒಟ್ಟಾರೆ ಬಂಗಾಳಿ ಜನತೆಯ ಭೂತ, ವರ್ತಮಾನ ಮತ್ತು ಭವಿಷ್ಯದ ಸಾಕಾರ ರೂಪ ತಾನು ಮಾತ್ರ ಎಂಬಂತೆ ತನ್ನನ್ನು ಬಿಂಬಿಸಿಕೊಳ್ಳಲು ಬಯಸುತ್ತಾರೆ.

ಪಕ್ಷ, ಸರಕಾರ ಮತ್ತು ಜನತೆಯೇ ತಾನು ಎಂಬುದಾಗಿ ಬಿಂಬಿಸಿಕೊಳ್ಳಲು ಮಮತಾ ಬ್ಯಾನರ್ಜಿ ರಾಜ್ಯ ಮಟ್ಟದಲ್ಲಿ ನಡೆಸುವ ಪ್ರಯತ್ನಗಳು, ಪಕ್ಷ, ಸರಕಾರ ಮತ್ತು ಜನತೆಯೇ ತಾನು ಎಂಬುದಾಗಿ ರಾಷ್ಟ್ರಮಟ್ಟದಲ್ಲಿ ಮೋದಿ ನಡೆಸುವ ಪ್ರಯತ್ನಗಳಿಗೆ ಸಮವಾಗಿವೆ. ಹೋಲಿಕೆಗಳು ಇಷ್ಟಕ್ಕೇ ನಿಲ್ಲುವುದಿಲ್ಲ. ಬಿಜೆಪಿ ಸಂಸದರು ಮತ್ತು ಸಚಿವರು ಪ್ರಧಾನಿ ಮೋದಿ ಬಗ್ಗೆ ಭಟ್ಟಂಗಿತನದ ಮಾತುಗಳನ್ನು ಆಡುವಂತೆಯೇ, ಟಿಎಮ್‌ಸಿ ಶಾಸಕರು ಮತ್ತು ಸಂಸದರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಗ್ಗೆಯೂ ಭಟ್ಟಂಗಿತನದ ಮಾತುಗಳನ್ನು ಆಡುತ್ತಾರೆ. ಮೋದಿಯಂತೆಯೇ, ಮಮತಾ ಕೂಡ ನಿಷ್ಠ ಮತ್ತು ವಿಧೇಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಕೆಲಸ ಮಾಡಲು ಬಯಸುತ್ತಾರೆ. ಮೋದಿಯಂತೆಯೇ, ಮಮತಾ ಕೂಡ ಪತ್ರಿಕಾ ಸ್ವಾತಂತ್ರ ಮತ್ತು ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ ಬಗ್ಗೆ ಬಾಯಿ ಮಾತುಗಳನ್ನು ಆಡುತ್ತಾರೆ. ಆದರೆ, ವಾಸ್ತವವಾಗಿ, ಇಂತಹ ಸ್ವಾತಂತ್ರ ಮತ್ತು ಸ್ವಾಯತ್ತೆಯು ತನ್ನ ಆಳ್ವಿಕೆಗೆ ಬೆದರಿಕೆಯೊಡ್ಡಿದರೆ ಅವುಗಳನ್ನು ಕ್ಷಿಪ್ರವಾಗಿ ದಮನಿಸುತ್ತಾರೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಏನನ್ನು ಮಾಡಲು ಬಯಸುತ್ತಾರೋ, ಅದನ್ನೇ ಅರವಿಂದ ಕೇಜ್ರಿವಾಲ್ ದಿಲ್ಲಿಯಲ್ಲಿ, ಪಿಣರಾಯಿ ವಿಜಯನ್ ಕೇರಳದಲ್ಲಿ, ಆದಿತ್ಯನಾಥ್ ಉತ್ತರಪ್ರದೇಶದಲ್ಲಿ, ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದಲ್ಲಿ, ಕೆ. ಚಂದ್ರಶೇಖರ ರಾವ್ ತೆಲಂಗಾಣದಲ್ಲಿ ಮತ್ತು ಅಶೋಕ್ ಗೆಹ್ಲೋಟ್ ರಾಜಸ್ಥಾನದಲ್ಲಿ ಮಾಡಲು ಬಯಸುತ್ತಾರೆ. ಭಾರತದ ವಿವಿಧ ಭಾಗಗಳನ್ನು ಆಳುತ್ತಿರುವ ಮತ್ತು ಏಳು ವಿವಿಧ ಪಕ್ಷಗಳಿಗೆ ಸೇರಿರುವ ಈ ಎಲ್ಲ ಏಳು ಮುಖ್ಯಮಂತ್ರಿಗಳು ಸ್ವಭಾವತಃ ನಿರಂಕುಶಿಗಳೇ ಆಗಿದ್ದಾರೆ. ಅದು ಅವರ ಆಡಳಿತ ಶೈಲಿಯಲ್ಲಿಯೂ ಗೋಚರಿಸುತ್ತಿದೆ. (ಇಲ್ಲಿ ನನ್ನ ಪ್ರಯತ್ನ ಉದಾಹರಣೆಗಳನ್ನು ನೀಡುವುದೇ ಹೊರತು ಸಮಗ್ರ ಪಟ್ಟಿಯನ್ನು ಒದಗಿಸುವುದಲ್ಲ. ತಮ್ಮನ್ನೇ ರಾಜ್ಯವೆಂದುಕೊಂಡಿರುವ ಮತ್ತು ಅನುಯಾಯಿಗಳಿಗಿಂತ ತಮ್ಮನ್ನು ತುಂಬಾ ಎತ್ತರದಲ್ಲಿರಿಸಿಕೊಂಡಿರುವ ಇತರ ಹಲವು ಮುಖ್ಯಮಂತ್ರಿಗಳೂ ಇದ್ದಾರೆ).

ಪ್ರೊಫೆಸರ್ ಸ್ವಾಮಿನಾಥನ್ ಈ ಮುಖ್ಯಮಂತ್ರಿಗಳನ್ನೂ ನೋಡಿದ್ದರೆೆ, ‘‘ಅವರು ತಮ್ಮ ಅನುಯಾಯಿಗಳನ್ನು ನಂಬುವುದಿಲ್ಲ ಮತ್ತು ಅವರಿಗೆ ಸ್ವತಂತ್ರವಾಗಿ ವ್ಯವಹರಿಸುವ ಸ್ವಾತಂತ್ರವನ್ನು ನೀಡುವುದಿಲ್ಲ. ಅವರಿಂದ ಸೇನಾ ಮಾದರಿಯ ಶಿಸ್ತನ್ನು ಬಯಸುತ್ತಾರೆ. ತಮ್ಮ ಪಕ್ಕದಲ್ಲಿ ಸ್ವತಂತ್ರ ಮತ್ತು ಸ್ವಾವಲಂಬಿ ಕಾರ್ಯಕರ್ತರ ಬದಲು ಯಾಂತ್ರಿಕವಾಗಿ ನಡೆದುಕೊಳ್ಳುವವರು ಇರಬೇಕು ಎಂದು ಈ ನಾಯಕರು ಬಯಸುತ್ತಾರೆ. ಇಂತಹ ನಾಯಕರು ಹುಣಸೆ ಮರ ಇದ್ದ ಹಾಗೆ. ಬಹುಷಃ ತನ್ನ ದಿನಗಳಲ್ಲಿ ಹುಣಸೆ ಮರವು ಶ್ರೇಷ್ಠ ಮತ್ತು ಉಪಯುಕ್ತವೇ ಆಗಿರಬಹುದು. ಆದರೆ ತನ್ನ ಅಡಿಯಲ್ಲಿ ಬೆಳೆಯುವ ಇತರ ಮರಗಳಿಗೆ ಅದು ವಿನಾಶಕಾರಿಯಾಗಿದೆ. ಅವರು ಭಿನ್ನಾಭಿಪ್ರಾಯಗಳನ್ನು ಸಹಿಸುವುದಿಲ್ಲ, ಸ್ನೇಹಪೂರ್ವಕ ಟೀಕೆಗೂ ಅವರು ಸಿಡಿಮಿಡಿಗೊಳ್ಳುತ್ತಾರೆ. ಅವರು ಸಿಂಹಾಸನದ ಸನಿಹಕ್ಕೆ ಬರಲು ಯಾರನ್ನೂ ಬಿಡುವುದಿಲ್ಲ. ಕೊನೆಗೆ ಅವರು ಹೋಗುವಾಗ, ನಿರ್ಜೀವ ಬಂಜರು ಭೂಮಿಯನ್ನು ಬಿಟ್ಟು ಹೋಗುತ್ತಾರೆ. ಅವರು ತಮ್ಮನ್ನು ಅನಿವಾರ್ಯವನ್ನಾಗಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಸಮರ್ಥ ಉತ್ತರಾಧಿಕಾರಿಗಳನ್ನು ರೂಪಿಸುವುದಕ್ಕೆ ಯಾವುದೇ ಆಸಕ್ತಿ ತೋರಿಸುವುದಿಲ್ಲ. ಅವರು ಅನುಯಾಯಿಗಳಿಗಿಂತ ತಮ್ಮನ್ನು ಎಷ್ಟು ಎತ್ತರದಲ್ಲಿ ಇರಿಸಿಕೊಳ್ಳಲು ಬಯಸುತ್ತಾರೆಂದರೆ, ಅವರು ಮತ್ತು ಅವರ ಅನುಯಾಯಿಗಳ ನಡುವೆ ಮುಚ್ಚಲಾಗದಷ್ಟು ದೊಡ್ಡ ಕಂದರ ಶಾಶ್ವತವಾಗಿ ಇರುತ್ತದೆ’’ ಎಂದು ಹೇಳುತ್ತಿದ್ದರು.

ನಾನು ಸರಿದೂಗಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದು ಯಾರಾದರೂ ಆರೋಪಿಸುವ ಮೊದಲು ಒಂದು ವಿಷಯವನ್ನು ಸ್ಪಷ್ಟಪಡಿಸಬೇಕಾಗಿದೆ: ಇವು ಭಿನ್ನ ಮಾದರಿಯ ಸರ್ವಾಧಿಕಾರಗಳು ಮತ್ತು ಅವುಗಳ ಪರಿಣಾಮಗಳೂ ಭಿನ್ನ. ಮೋದಿ ರಾಷ್ಟ್ರೀಯ ಮಟ್ಟದಲ್ಲಿ ಮತ್ತು ಆದಿತ್ಯನಾಥ್ ಭಾರತದ ಅತಿ ದೊಡ್ಡ ರಾಜ್ಯದಲ್ಲಿ ಸರ್ವಾಧಿಕಾರ ಮತ್ತು ಬಹುಸಂಖ್ಯತ್ವದ ಆಳ್ವಿಕೆಯನ್ನು ಬೆರೆಸಿದವರು. ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಕಳಂಕ ಹೊರಿಸಿ ಅವರನ್ನು ಹಿಂಸೆಗೆ ಗುರಿಪಡಿಸುವ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳುವುದು ಅವರ ಕಾರ್ಯವಿಧಾನ. ಮಾಧ್ಯಮವನ್ನು ಹತ್ತಿಕ್ಕಲು ಮತ್ತು ರಾಜಕೀಯ ಭಿನ್ನಮತೀಯರನ್ನು ಜೈಲಿಗೆ ಅಟ್ಟಲು ಸರಕಾರದ ಅಧಿಕಾರಗಳನ್ನು ದುರುಪಯೋಗಪಡಿಸುವಲ್ಲಿ ಮೋದಿ ಮತ್ತು ಆದಿತ್ಯನಾಥ್ ಅತ್ಯಂತ ನಿಸ್ಸೀಮರು. ಅದೇ ವೇಳೆ, ಮಮತಾ ಮತ್ತು ಕೇಜ್ರಿವಾಲ್‌ರ ರಾಜಕೀಯವೂ ಸರಕಾರಿ ಅಧಿಕಾರ ಮತ್ತು ಸಾರ್ವಜನಿಕ ಹಣವನ್ನು ಬಳಸಿ ವೈಯಕ್ತಿಕ ಪ್ರಭಾವ ಮತ್ತು ವೈಯಕ್ತಿಕ ಅಧಿಕಾರವನ್ನು ಬಲಪಡಿಸಿಕೊಳ್ಳುವುದೇ ಆಗಿದೆ ಎನ್ನುವುದನ್ನೂ ಹೇಳಬೇಕಾಗಿದೆ.

ಸೇನಾ ಸರ್ವಾಧಿಕಾರಗಳು, ಫ್ಯಾಶಿಸ್ಟ್ ಸರಕಾರಗಳು ಅಥವಾ ಕಮ್ಯುನಿಸ್ಟ್ ಆಡಳಿತಗಳಂತಹ ಏಕಾಧಿಪತ್ಯದ ಆಳ್ವಿಕೆಗಳಲ್ಲಿ ಸರ್ವೋನ್ನತ ನಾಯಕರ ವೈಭವೀಕರಣವು ಸಾಮಾನ್ಯವಾಗಿ ವಿಜೃಂಭಿಸುತ್ತದೆ. ಅತ್ಯುನ್ನತ ರಾಜಕೀಯ ಅಧಿಕಾರಕ್ಕೆ ಏರಿದ ಹೊರತಾಗಿಯೂ, ಓರ್ವ ವ್ಯಕ್ತಿ ಎಲ್ಲ ನಾಗರಿಕರ ಅಭಿಪ್ರಾಯವನ್ನು ಪ್ರತಿನಿಧಿಸುತ್ತಾರೆ ಎನ್ನುವ ಕಲ್ಪನೆಯು ಪ್ರಜಾಪ್ರಭುತ್ವದ ಕಲ್ಪನೆಗೆ ವಿರುದ್ಧವಾಗಿದೆ.

ಭಾರತ ಇಂದು 75ನೇ ವರ್ಷದ ಸ್ವಾತಂತ್ರವನ್ನು ಆಚರಿಸುತ್ತಿದೆ. ಆದರೆ, ಅದೀಗ ನಿರಂಕುಶ ಪ್ರವೃತ್ತಿಗಳನ್ನು ಹೊಂದಿರುವ ವ್ಯಕ್ತಿಗಳಿಂದ ಆಳಲ್ಪಡುತ್ತಿರುವ ಪ್ರಜಾಪ್ರಭುತ್ವವಾಗಿ ದಿನೇ ದಿನೇ ಮಾರ್ಪಡುತ್ತಿದೆ. ಈ ಬೆಳವಣಿಗೆಯು ನಮ್ಮ ಮನಸ್ಸುಗಳನ್ನು ಮುಕ್ತ ಮತ್ತು ಸ್ವತಂತ್ರಗೊಳಿಸುವ ಬದಲು ಸಂಕಲೆಯಿಂದ ಬಂಧಿಸಿಡುತ್ತದೆ ಮತ್ತು ವಿಮರ್ಶೆ ಮಾಡದಂತೆ ತಡೆಯುತ್ತದೆ. ಇದು ಮನಸ್ಸುಗಳಿಗಷ್ಟೇ ಕೆಟ್ಟದಲ್ಲ, ನಮ್ಮ ಜೀವಗಳಿಗೂ ಕೆಟ್ಟದು. ಅಧಿಕಾರ ಮತ್ತು ಸ್ವಯಂಪ್ರಚಾರದ ಗೀಳಿಗೆ ಬೀಳುವ ನಾಯಕರು ತಮ್ಮ ದೈನಂದಿನ ಜವಾಬ್ದಾರಿಗಳನ್ನು ನಿರ್ಲಕ್ಷಿಸುತ್ತಾರೆ. ಅಭಿವೃದ್ಧಿ ಮತ್ತು ಆಡಳಿತ ಕುಂಠಿತಗೊಳ್ಳುತ್ತದೆ. ನಿರ್ಧಾರ ತೆಗೆದುಕೊಳ್ಳುವ ಎಲ್ಲ ಅಧಿಕಾರಗಳನ್ನು ತಮ್ಮಲ್ಲೇ ಕೇಂದ್ರೀಕರಿಸಿಕೊಳ್ಳುವ ನಾಯಕರು ಇತರ ಸಚಿವರು ಮತ್ತು ಅಧಿಕಾರಿಗಳನ್ನು ನಂಬುವುದಿಲ್ಲ ಮತ್ತು ಅವರಿಗೆ ಅಧಿಕಾರ ನೀಡುವುದಿಲ್ಲ. ಇಂತಹ ನಾಯಕರು ಭಾರತವನ್ನು ಬಿಡಿ, ಪಶ್ಚಿಮ ಬಂಗಾಳದಂತಹ ಬೃಹತ್, ಜನಭರಿತ ಮತ್ತು ವೈವಿಧ್ಯ ರಾಜ್ಯವೊಂದನ್ನೂ ಪರಿಣಾಮಕಾರಿಯಾಗಿ ಆಳಲು ಸಾಧ್ಯವಿಲ್ಲ.

ಕೆಲವು ನಾಯಕರು ಭಟ್ಟಂಗಿಗಳ ಸೀಮಿತ ವಲಯದಿಂದ ನಿರಂತರ ಹೊಗಳಿಕೆಗಳನ್ನು ಕೇಳಲು ಬಯಸುತ್ತಾರೆ. ಆದರೆ ಅಂತಹವರು ಜನರಿಂದ ಬರುವ ಪ್ರತಿಕ್ರಿಯೆಗಳನ್ನು ಆಲಿಸುವ ಹಾಗೂ ರಾಜಕೀಯ ಸಹೋದ್ಯೋಗಿಗಳು, ರಾಜಕೀಯ ಎದುರಾಳಿಗಳು ಮತ್ತು ಸ್ವತಂತ್ರ ಮಾಧ್ಯಮಗಳ ಟೀಕೆಗಳನ್ನು ಸ್ವೀಕರಿಸುವ ಮತ್ತು ಅವುಗಳಿಗೆ ಸ್ಪಂದಿಸುವ ನಾಯಕರಿಗೆ ಹೋಲಿಸಿದರೆ ಅತ್ಯಂತ ಕಳಪೆ ಪ್ರಧಾನಿ (ಅಥವಾ ಮುಖ್ಯಮಂತ್ರಿಗಳು) ಆಗುತ್ತಾರೆ.
ಭಾರತ ಸರಕಾರವನ್ನು ಒಂಟಿ ಸೂಪರ್‌ಮ್ಯಾನ್ ಒಬ್ಬ ಹೊಸದಿಲ್ಲಿಯಿಂದ ನಡೆಸಿದರೆ ನಮ್ಮ ದೇಶದ ಆರ್ಥಿಕತೆ ಬೆಳೆಯುವುದಿಲ್ಲ, ನಮ್ಮ ಸಾಮಾಜಿಕ ಸಾಮರಸ್ಯ ಗಟ್ಟಿಯಾಗುವುದಿಲ್ಲ ಮತ್ತು ನಮ್ಮ ರಾಷ್ಟ್ರೀಯ ಭದ್ರತೆ ಬಲಗೊಳ್ಳುವುದಿಲ್ಲ. ಒಬ್ಬ ಸರ್ವಾಧಿಕಾರಿ ಪ್ರವೃತ್ತಿಯ ಪ್ರಧಾನಿಗೆ ಪೂರಕವಾಗಿ ಅಷ್ಟೊಂದು ಸಂಖ್ಯೆಯಲ್ಲಿ ಸರ್ವಾಧಿಕಾರಿ ಪ್ರವೃತ್ತಿಯ ಮುಖ್ಯಮಂತ್ರಿಗಳಿದ್ದರೆ ನಮ್ಮ ದೇಶದ ಭವಿಷ್ಯ ಮತ್ತಷ್ಟು ಹದಗೆಡುತ್ತದೆ.

ಜನರಿಂದ ಮತ್ತು ಪರಿಣಿತರಿಂದ ಬರುವ ಸಲಹೆಗಳನ್ನು ಕೇಳಬಲ್ಲ ಮತ್ತು ಕಲಿಯಬಲ್ಲ, ತಮ್ಮ ಮಂತ್ರಿಗಳಿಗೆ ಅಧಿಕಾರವನ್ನು ಕೊಡಬಲ್ಲ (ಹಾಗೂ ಅವರು ಒಳ್ಳೆಯ ಕೆಲಸ ಮಾಡಿದಾಗ ಅವರನ್ನು ಅಭಿನಂದಿಸಬಲ್ಲ), ಸಾರ್ವಜನಿಕ ಸಂಸ್ಥೆಗಳ ಸ್ವಾಯತ್ತತೆ ಮತ್ತು ಪತ್ರಿಕಾ ಸ್ವಾತಂತ್ರವನ್ನು ಗೌರವಿಸಬಲ್ಲ ಹಾಗೂ ರಾಜಕೀಯ ಪ್ರತಿಪಕ್ಷಗಳನ್ನು ನಿಂದಿಸುವುದನ್ನು ಬಿಟ್ಟು ಅವುಗಳೊಂದಿಗೆ ರಚನಾತ್ಮಕ ಮಾತುಕತೆಯನ್ನು ನಡೆಸಬಲ್ಲ ನಾಯಕರಿಂದ ಮಾತ್ರ ಭಾರತಕ್ಕೆ ಮತ್ತು ಭಾರತೀಯರಿಗೆ ಅತ್ಯುತ್ತಮ ಸೇವೆ ಸಲ್ಲಿಸಲು ಸಾಧ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)