varthabharthi


ಕರ್ನಾಟಕ

ಶೇ. 61.88 ವಿದ್ಯಾರ್ಥಿಗಳು ಉತ್ತೀರ್ಣ ► ದ.ಕ ಜಿಲ್ಲೆ ಪ್ರಥಮ ► ಈ ಬಾರಿಯೂ ಬಾಲಕಿಯರೇ ಮೇಲುಗೈ

2021-2022ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ವಾರ್ತಾ ಭಾರತಿ : 18 Jun, 2022

ಬೆಂಗಳೂರು, ಜೂ.18: ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ.68.72ರಷ್ಟು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಬಾಲಕರು ಶೇ.55.22 ಫಲಿತಾಂಶವನ್ನು ದಾಖಲಿಸಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2020ರಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ. 61.80ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ 61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಫಲಿತಾಂಶದಲ್ಲಿ ಉತ್ತೀರ್ಣ ಪ್ರಮಾಣ 0.08ರಷ್ಟು ಏರಿಕೆಯಾಗಿದೆ. ಈ ಬಾರಿ ಪರೀಕ್ಷೆಗೆ ಒಟ್ಟು 6,83,563 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 4,22,966 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದರು.

ವಿಜ್ಞಾನ ವಿಭಾಗದದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದು, ಶೇ.72.53ರಷ್ಟು ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದ ಶೇ.64.97ರಷ್ಟು ಹಾಗೂ ಕಲಾ ವಿಭಾಗದಲ್ಲಿ ಶೇ.48.71ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಗೆಯೇ ಈ ಬಾರಿ ಗ್ರಾಮೀಣ ಭಾಗದಲ್ಲಿ ಶೇ.62.18 ವಿದ್ಯಾರ್ಥಿಗಳು ಹಾಗೂ ನಗರ ಪ್ರದೇಶದಲ್ಲಿ ಶೇ.61.78 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಳೆದ ಬಾರಿ ನಗರ ಪ್ರದೇಶದಲ್ಲಿರುವ ವಿದ್ಯಾರ್ಥಿಗಳ ಫಲಿತಾಂಶವು ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳ ಫಲಿತಾಂಶಕ್ಕಿಂತ ಹೆಚ್ಚಾಗಿತ್ತು ಎಂದು ಅವರು ಮಾಹಿತಿ ನೀಡಿದರು.
ಗಣಿತಶಾಸ್ತ್ರದಲ್ಲಿ 14,210 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ.  ಕನ್ನಡದಲ್ಲಿ 563, ಸಂಸ್ಕøತದಲ್ಲಿ 1,119, ಗಣಕಶಾಸ್ತ್ರದಲ್ಲಿ 4,868, ವ್ಯವಹಾರ ಅಧ್ಯಯನದಲ್ಲಿ 2,837, ರಸಾಯನಶಾಸ್ತ್ರದಲ್ಲಿ 2,917, ಇಂಗ್ಲೀಷ್‍ನಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಫಲಿತಾಂಶವನ್ನು ದಾಖಲಿಸಿದ್ದಾರೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಫಲಿತಾಂಶ ದಾಖಲಾಗಿದ್ದು, ಶೇ.88.02ರಷ್ಟು ಫಲಿತಾಂಶ ಪಡೆದಿದೆ. ಉಡುಪಿ ಜಿಲ್ಲೆಯ ಶೇ.86.38ರಷ್ಟು ಹಾಗೂ ವಿಜಯಪುರದ ಶೇ.77.14ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶೇ.49.31ರಷ್ಟು ಫಲಿತಾಂಶವನ್ನು ಪಡೆದ ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ ಎಂದರು.

ಎಸೆಸೆಲ್ಸಿ ವಿದ್ಯಾರ್ಥಿಗಳು ಮೊದಲ ಬಾರಿಗೆ ಪಬ್ಲಿಕ್ ಪರೀಕ್ಷೆಯನ್ನು ಎದುರಿಸುತ್ತಿರುತ್ತಾರೆ. ಹಾಗಾಗಿ ಪ್ರಶ್ನೆಪತ್ರಿಕೆಗಳು ವಿದ್ಯಾರ್ಥಿ ಸ್ನೇಹಿಯಾಗಿ ರೂಪಿಸಲಾಗಿರುತ್ತದೆ. ಆದರೆ ಪಿಯುಸಿಯಲ್ಲಿ ಇದಕ್ಕೆ ಅವಕಾಶ ಇರುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳ ನಿಜವಾದ ಸಾಮಥ್ರ್ಯ ಪಿಯುಸಿ ಪರೀಕ್ಷೆಯಲ್ಲಿ ತಿಳಿಯುತ್ತದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ಗೈರು ಹಾಜರಾಗಿರುವ ಅಂಕಿ-ಅಂಶಗಳು ಲಭ್ಯ ಇದೆ. ಆದರೆ ಅವರು ಯಾವ ಕಾರಣಕ್ಕಾಗಿ ಗೈರಾದರೂ ಎಂಬುದರ ಬಗ್ಗೆ ಮಾಹಿತಿಯನ್ನು ಕಲೆ ಹಾಕುವುದಿಲ್ಲ. ಕೆಲವರು ಅನಾರೋಗ್ಯದಿಂದ ಗೈರು ಹಾಜರಾಗಿರಬಹುದು. ಇನ್ನೂ, ಕೆಲವರು ಹಿಜಾಬ್ ಕಾರಣಕ್ಕಾಗಿ ಗೈರು ಹಾಜರಾಗಿರಬಹುದು. ಇದರ ಬಗ್ಗೆ ಚರ್ಚೆಗಳು ನಡೆದಿಲ್ಲ ಎಂದರು.

ಜು.7ರಿಂದ ಮರುಮೌಲ್ಯಮಾಪನ: ಪರೀಕ್ಷೆಯನ್ನು ಬರೆದಿರುವವರು ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರತಿಗಾಗಿ ಜೂ.30ರೊಳಗೆ ಆನ್‍ಲೈನ್ ಅರ್ಜಿ ಸಲ್ಲಿಸಿ, ಜು.6ರಿಂದ ಜು.10ರೊಳಗೆ ಡೌನ್‍ಲೋಡ್ ಮಾಡಿಕೊಳ್ಳಬಹುದು. ಮರುಮೌಲ್ಯಮಾಪನ ಮತ್ತು ಮರುಎಣಿಕೆಗಾಗಿ ಜು.7ರಿಂದ ಜು.13ರೊಳಗೆ ಅರ್ಜಿ ಸಲ್ಲಿಸಬಹುದು. ಪ್ರತಿ ವಿಷಯಕ್ಕೆ ಸ್ಕ್ಯಾನಿಂಗ್ ಪ್ರತಿಯನ್ನು ಪಡೆಯಲು 530 ರೂ.ಗಳನ್ನು ಮತ್ತು ಮರುಮೌಲ್ಯಮಾಪನಕ್ಕಾಗಿ 1,670 ರೂ.ಗಳನ್ನು ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ. ಮರುಮೌಲ್ಯಮಾಪನದಲ್ಲಿ ಮರುಮೌಲ್ಯಮಾಪಕರು ತೆಗೆದುಕೊಂಡ ನಿರ್ಧಾರವೇ ಅಂತಿಮವಾಗಿದ್ದು, ಅದನ್ನು ಮರುಪರಿಶೀಲನೆ ಮಾಡಲು ಸಾಧ್ಯವಿಲ್ಲ ಎಂದು ಪಿಯು ಮಂಡಳಿ ತಿಳಿಸಿದೆ.

ಜೂನ್ ಕೊನೆಯ ವಾರದಲ್ಲಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ: ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳನ್ನು ಆಗಸ್ಟ್ ತಿಂಗಳಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಜೂನ್ ಕೊನೆಯ ವಾರದಲ್ಲಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಲಿದೆ. ಪೂರಕ ಪರೀಕ್ಷಾ ಶುಲ್ಕವನ್ನು ಜೂ.24ರಿಂದ ಜು.4ರವರೆಗೆ ದಂಡರಹಿತ ಹಾಗೂ ಜು.4ರಂದು ದಂಡಸಹಿತ ಶುಲ್ಕವನ್ನು ಪಾವತಿಸಬಹುದು. ಫಲಿತಾಂಶವನ್ನು ತಿರಸ್ಕರಿಸಿ ಪರೀಕ್ಷೆಯನ್ನು ಬರೆಯಲು ಇಚ್ಚಿಸಿದ್ದಲ್ಲಿ, ಮೂಲ ಅನುತ್ತೀರ್ಣ ಓಎಂಆರ್‍ಗಳನ್ನು ಪಡೆದುಕೊಂಡ ನಂತರವೇ ಕ್ರಮವಹಿಸಲಾಗುತ್ತದೆ. 


ಖಾಸಗಿ ಕಾಲೇಜುಗಳೇ ಮುಂದೆ

ಸರಕಾರಿ ಕಾಲೇಜುಗಳಿಗಿಂತ ಖಾಸಗಿ ಕಾಲೇಜುಗಳು ಹೆಚ್ಚು ಫಲಿತಾಂಶವನ್ನು ನೀಡಿದ್ದು, 50 ಖಾಸಗಿ ಕಾಲೇಜುಗಳು ಶೇ.100ರಷ್ಟು ಫಲಿತಾಂಶವನ್ನು ನೀಡಿವೆ. 4 ಸರಕಾರಿ ಹಾಗೂ 2 ಅನುದಾನಿತ ಪದವಿ ಪೂರ್ವ ಕಾಲೇಜುಗಳು ಶೇ.100ರಷ್ಟು ಫಲಿತಾಂಶವನ್ನು ಪಡೆದಿವೆ. ಈ ಬಾರಿ ಯಾವ ಶಿಕ್ಷಣ ಸಂಸ್ಥೆಯು ಶೂನ್ಯ ಫಲಿತಾಂಶವನ್ನು ಪಡೆದಿಲ್ಲ. ಆದರೆ ಶೇಕಡವಾರು ಫಲಿತಾಂಶದಲ್ಲೂ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚು ಫಲಿತಾಂಶವನ್ನು ದಾಖಲಿಸಿದ್ದು, ಶೇ.76.50 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಸರಕಾರಿ ಕಾಲೇಜಿನಲ್ಲಿ ಶೇ.52.84 ರಷ್ಟು ವಿದ್ಯಾರ್ಥಿಗಳು ಹಾಗೂ ಅನುದಾನಿತ ಕಾಲೇಜುಗಳಲ್ಲಿ ಶೇ.62.05 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಗೆಯೇ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಿಂತ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿದೆ.

6,086 ವಿದ್ಯಾರ್ಥಿಗಳಿಗೆ ಗ್ರೇಸ್ ಮಾಕ್ರ್ಸ್: ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ಅನುತ್ತೀರ್ಣವಾಗಿದ್ದು, ಉಳಿದ ವಿಷಯಗಳಲ್ಲಿ ಕನಿಷ್ಠ ಶೇ.35ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಲ್ಲಿ, ಒಟ್ಟು ಅಂಕಗಳ ಶೇ.10 ಅಂಕಗಳನ್ನು ಗ್ರೇಸ್ ಅಂಕವಾಗಿ ನೀಡಲಾಗುತ್ತದೆ. ಈ ಬಾರಿ ಒಟ್ಟು 6,086 ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗಿದೆ ಎಂದು ಸಚಿವರು ಹೇಳಿದರು.  

ಫಲಿತಾಂಶವನ್ನು ಆನ್ ಲೈನ್ ನಲ್ಲಿ ಚೆಕ್ ಮಾಡುವುದು ಹೇಗೆ?


- ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌  www.karresults.nic.in ಗೆ ಭೇಟಿ ನೀಡಿ. 

- ವೆಬ್ ಸೈಟ್ ತೆರೆದ ಬಳಿಕ ಪೇಜ್‌ನಲ್ಲಿ ಪಿಯುಸಿ ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.

- ಪೇಜ್‌ನಲ್ಲಿ ಇಲಾಖೆಯ ಇನ್ನೊಂದು ಪೇಜ್‌ ಓಪನ್‌ ಆಗುತ್ತದೆ.

- ಆ ಓಪನ್‌ ಆದ ಪೇಜ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್‌ ನಂಬರ್‌ ಟೈಪ್‌ ಮಾಡಿ. ನಂತರ 'Submit' ಎಂಬಲ್ಲಿ ಕ್ಲಿಕ್ ಮಾಡಿ.

- ನಿಮಗೆ ಫಲಿತಾಂಶ ಪ್ರದರ್ಶನವಾಗುತ್ತದೆ. ಬಳಿಕ ಅದನ್ನು ಡೌನ್‌ಲೋಡ್‌ ಮಾಡಿಕೊಂಡು, ಪ್ರಿಂಟ್‌ ತೆಗೆದುಕೊಳ್ಳಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)