varthabharthi


ಪ್ರಚಲಿತ

ಭಾರತ ಎಂಬುದು ಎಲ್ಲರ ದೇಶ

ವಾರ್ತಾ ಭಾರತಿ : 20 Jun, 2022
ಸನತ್ ಕುಮಾರ್ ಬೆಳಗಲಿ

ಲಕ್ಷಣಗಳು, ದೇವರುಗಳು ಇರುವ, ನಂಬಿಕೆಗಳಿರುವ, ಸಮುದಾಯ ಗಳಿರುವ, ಮತ ನಿರಪೇಕ್ಷ ದೇಶವೊಂದರಲ್ಲಿ ಯಾವುದೇ ಊರಿನ ಗುಡಿಯನ್ನು ರಾಷ್ಟ್ರ ಮಂದಿರ ಎಂದು ಕರೆಯಲಾಗುವುದಿಲ್ಲ. ದೇವರಲ್ಲಿ ದೊಡ್ಡ ದೇವರು, ಸಣ್ಣ ದೇವರು ಎಂಬುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ದೇಹವೇ ದೇಗುಲ ಎಂದು 800 ವರ್ಷಗಳ ಹಿಂದೆಯೇ ಸಾರಿದ ಬಸವಣ್ಣನವರು ನಡೆದಾಡಿದ ನೆಲವಿದು. ಇಲ್ಲಿ ತಮ್ಮ ಕೋಮುವಾದಿ ಅಜೆಂಡಾ ಜಾರಿಗಾಗಿ ಇಲ್ಲದ ವಿವಾದ ಸೃಷ್ಟಿಸುವವರ ಆಟ ಬಹಳ ದಿನ ನಡೆಯುವುದಿಲ್ಲ.


ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡ ಯಾವುದೇ ಒಂದು ದೇಶದಲ್ಲಿ ಅಸಮರ್ಥ ನಾಯಕತ್ವವಿದ್ದರೆ ಏನಾಗುತ್ತದೆ ಎಂಬುದಕ್ಕೆ ಈಗ ಭಾರತವೂ ಒಂದು ಉದಾಹರಣೆ ಆಗುತ್ತಿದೆ. ಪಂಡಿತ್ ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಮನಮೋಹನ್ ಸಿಂಗ್ ಅವರವರೆಗೆ ಹಲವಾರು ಪ್ರಧಾನಿಗಳನ್ನು ಕಂಡ ಒಕ್ಕೂಟ ರಾಷ್ಟ್ರವಿದು. ಹಿಂದೆ ನಾಯಕತ್ವ ವಹಿಸಿದವರೆಲ್ಲ ಭಾರತದ ಘನತೆಗೆ ಚ್ಯುತಿ ಬರದಂತೆ ಸೇವೆ ಸಲ್ಲಿಸಿ ನಿರ್ಗಮಿಸಿದರು. ಆದರೆ, ಈಗ ಪ್ರಸಕ್ತ ವಿದ್ಯಮಾನಗಳೇ ಈ ಪ್ರಶ್ನೆಗೆ ಉತ್ತರವಾಗಿವೆ.

ಕಳೆದ ಏಳು ವರ್ಷಗಳಲ್ಲಿ ಭಾರತ ಹಿಂದೆಂದೂ ಕಂಡರಿಯದ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ಹಣದುಬ್ಬರ ಮಿತಿ ಮೀರಿ ಆರ್ಥಿಕ ಪರಿಸ್ಥಿತಿ ಹಳ್ಳ ಹಿಡಿದಿದೆ. ಮೋದಿ ಸರಕಾರದ ಹೊಸ ನೇಮಕಾತಿ ನೀತಿ ‘ಅಗ್ನಿಪಥ’ ಯೋಜನೆಯನ್ನು ವಿರೋಧಿಸಿ ದೇಶಾದ್ಯಂತ ಯುವಕರ ಆಕ್ರೋಶ ಭುಗಿಲೆದ್ದಿದೆ. ಎಲ್ಲದರಲ್ಲೂ ಕೈ ಹಾಕಿ ಕೆಡಿಸಿ ಹಾಳುಗೆಡವಿದ್ದಾಯಿತು.ಈಗ ಈ ಕರಾಳ ಕೈಗಳು ಸೇನೆಯಲ್ಲೂ ಚಾಚಿ ಅನಾಹುತಕ್ಕೆ ಕಾರಣವಾಗಿವೆ.

ದೇಶ ಅಂಗೀಕರಿಸಿದ ಸಂವಿಧಾನದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲದ ಅವಿವೇಕಿಗಳ ಕೈಗೆ ಅಧಿಕಾರ ನೀಡಿದರೆ ಇಂಥ ಅನಾಹುತಗಳನ್ನು ಅನುಭವಿಸಲೇಬೇಕು. ಅಧಿಕಾರದಲ್ಲಿರುವವರಿಗೆ ತಮ್ಮ ಸ್ಥಾನಮಾನದ ಘನತೆಯ ಬಗ್ಗೆ ಅರಿವಿಲ್ಲದಿದ್ದರೆ, ಅರಿವಿದ್ದರೂ ಸಾಂವಿಧಾನಿಕ ವ್ಯವಸ್ಥೆಯ ಚಟ್ಟ ಕಟ್ಟಲು ಅಧಿಕಾರಕ್ಕೆ ಬಂದವರಿಗೆ ದೇಶಕ್ಕಿಂತ ತಮ್ಮ ಕಾರ್ಯಸೂಚಿಯನ್ನು ಜಾರಿಗೊಳಿಸುವುದು ಮುಖ್ಯವಾಗಿದೆ.

ಉತ್ತರ ಪ್ರದೇಶದಂಥ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಅವಾಂತರಗಳು ಎಲ್ಲರಿಗೂ ಗೊತ್ತಿವೆ. ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿ ರಾಮಮಂದಿರದ ಗರ್ಭಗುಡಿಯ ಅಡಿಗಲ್ಲು ಹಾಕುವ ಸಮಯದಲ್ಲಿ ‘ರಾಮಮಂದಿರ ರಾಷ್ಟ್ರ ಮಂದಿರವಾಗಲಿದೆ’ ಎಂದು ಘೋಷಿಸಿದರು. ಸುಪ್ರೀಂ ಕೋರ್ಟಿನಲ್ಲಿ ಈ ವಿವಾದ ಇತ್ಯರ್ಥವಾದ ನಂತರವೂ ಇದನ್ನು ಜೀವಂತವಾಗಿ ಇಟ್ಟುಕೊಂಡು ಕೋಮು ಆಧಾರದಲ್ಲಿ ಸಮಾಜವನ್ನು ಧ್ರುವೀಕರಣ ಮಾಡಿ ರಾಜಕೀಯ ಲಾಭ ಮಾಡಿಕೊಳ್ಳುವ ದುರುದ್ದೇಶ ಯೋಗಿ ಮಾತಿನಲ್ಲಿ ಇದೆ ಅಂದರೆ ಅತಿಶಯೋಕ್ತಿಯಲ್ಲ.

ಮತ ನಿರಪೇಕ್ಷ ದೇಶವೊಂದರಲ್ಲಿ ಚುನಾಯಿತ ಸರಕಾರದ ಮುಖ್ಯಸ್ಥರು ದೇಶದ ಎಲ್ಲರನ್ನೂ ಪ್ರತಿನಿಧಿಸಬೇಕೇ ಹೊರತು ಯಾವುದೋ ಕೋಮು, ಜಾತಿ, ಜನಾಂಗ, ಗುಂಪನ್ನು ಮಾತ್ರ ಪ್ರತಿನಿಧಿಸುವ ರೀತಿ ವರ್ತಿಸುವುದು ಅವರಿಗೆ ಶೋಭೆ ತರುವುದಿಲ್ಲ.

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಯಾವುದೇ ದೇವಸ್ಥಾನ, ಮಠ ಮಂದಿರಗಳಿಗೆ ಭೇಟಿ ನೀಡುತ್ತಿರಲಿಲ್ಲ. ಧಾರ್ಮಿಕ ನಂಬಿಕೆ ಎಂಬುದು ವೈಯಕ್ತಿಕ. ಅಧಿಕಾರದಲ್ಲಿ ಇರುವವರು ಒಂದು ಜಾತಿ ಜನಾಂಗದ ನಾಯಕರೆಂದು ಬಿಂಬಿಸಿಕೊಳ್ಳಬಾರದೆಂಬ ಎಚ್ಚರ ಅವರಿಗಿತ್ತು. ದೇವೇಗೌಡರು ಪ್ರಧಾನಿಯಾಗಿದ್ದಾಗ ಗುಡಿ ಗುಂಡಾರಗಳಿಗೆ ಭೇಟಿ ನೀಡುತ್ತ ಲಿದ್ದರೂ ಇನ್ನೊಂದು ಸಮುದಾಯದ ಬಗ್ಗೆ ಅವಹೇಳನದ ಮಾತುಗಳನ್ನು ಆಡುತ್ತಿರಲಿಲ್ಲ.

ಪ್ರಜಾಪ್ರಭುತ್ವ ಮಾತ್ರವಲ್ಲ ಯಾವುದೇ ಆಡಳಿತ ವ್ಯವಸ್ಥೆಯಲ್ಲಿ ಸರಕಾರ ಎಂಬುದು ಎಲ್ಲ ಜಾತಿ, ಧರ್ಮ, ಭಾಷೆಯ ಜನರನ್ನು ಪ್ರತಿನಿಧಿಸು ವಂತಿರಬೇಕು. ರಾಜ ಮಹಾರಾಜರ ಕಾಲದಲ್ಲೂ ಇದು ಅಲಿಖಿತ ನಿಯಮವಾಗಿತ್ತು. ಅಂತಲೇ ಗುಜರಾತ್ ಹತ್ಯಾಕಾಂಡ ನಡೆದಾಗ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಹಮದಾಬಾದಿಗೆ ಭೇಟಿ ನೀಡಿ ಸಂತ್ರಸ್ತರ ಶಿಬಿರದಲ್ಲಿ ಕುಳಿತು ಹಿಂಸೆ ಗೆ ಪರೋಕ್ಷವಾಗಿ ಕಾರಣವಾಗಿದ್ದ ಅಲ್ಲಿನ ಮುಖ್ಯ ಮಂತ್ರಿ ನರೇಂದ್ರ ಮೋದಿಯವರಿಗೆ ರಾಜಧರ್ಮ ಪಾಲಿಸು ವಂತೆ ಕಿವಿ ಹಿಂಡಿ ಬುದ್ಧಿ ಹೇಳಿದ್ದರು. ಆದರೆ ಮುಂದೆ ನಾಗಪುರ ಬಾಸ್‌ಗಳು ಅಟಲ್ ಕಿವಿ ಹಿಂಡಿದ್ದರಿಂದ ಗೋವಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅಟಲ್‌ಜಿ ಮಾತು ಬದಲಿಸಿದ್ದರು.

ಬಿಜೆಪಿ ಮೇಲ್ನೋಟಕ್ಕೆ ಸ್ವತಂತ್ರ ರಾಜಕೀಯ ಪಕ್ಷವಾದರೂ ಅದನ್ನು ನಿಯಂತ್ರಿಸುತ್ತಿರುವುದು ನಾಗಪುರದಲ್ಲಿರುವ ಸಂವಿಧಾನೇತರ ಶಕ್ತಿ ಕೇಂದ್ರ. ಅವರು ಸೂತ್ರಧಾರರು ಇವರು ಪಾತ್ರಧಾರಿಗಳು.

ಅಧಿಕಾರದಲ್ಲಿ ಇರುವವರು ಎಲ್ಲರನ್ನೂ ಒಳಗೊಳ್ಳುವ ಮನೋಭಾವ ಹೊಂದಿರಬೇಕು. ಕಲ್ಯಾಣದ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣನವರು ‘ಇವನಾರವ, ಇವನಾರವ ಎನಬೇಡ ಇವ ನಮ್ಮವ ಇವ ನಮ್ಮವ’ ಎಂದು ಎಲ್ಲರನ್ನೂ ಅಪ್ಪಿಕೊಂಡು ಆದರಿಸುವ ಸಂದೇಶ ನೀಡಿದರು. ಬಾಬಾಸಾಹೇಬರ ಸಂವಿಧಾನ ಆಡಳಿತ ಹೇಗಿರಬೇಕು ಎಂಬುದಕ್ಕೆ ನಿರಂತರ ಬೆಳಕಿನ ದಾರಿ ತೋರಿಸುತ್ತಲೇ ಇದೆ. ಆದರೆ ಬಸವಣ್ಣನವರಿಗೆ ಅಪಚಾರ ಮಾಡುವ ಪಠ್ಯಪುಸ್ತಕ ರಚನೆ ಮಾಡಿ ಸಂವಿಧಾನವನ್ನು ಸಮಾಧಿ ಮಾಡಲು ಹೊರಟವರಿಗೆ ಇದೆಲ್ಲ ಅರ್ಥ ಆಗುವುದಿಲ್ಲ. ಶಾಖೆಗಳಲ್ಲಿ ಕವಾಯತು ಮಾಡಿದವರಿಗೆ ದೇಹ ಬೆಳೆದರೂ ಮೆದುಳು ಬೆಳೆದಿರುವುದಿಲ್ಲ.

ಇದಕ್ಕೆ ಉದಾಹರಣೆ ನಮ್ಮ ಪ್ರಧಾನ ಮಂತ್ರಿ. ಮತ ನಿರಪೇಕ್ಷ ದೇಶವೊಂದರ ನೇತೃತ್ವ ವಹಿಸಿದ ಸರಕಾರದ ಮುಖ್ಯಸ್ಥರಾಗಿ ಅವರು ಎಲ್ಲ ಸಾಂವಿಧಾನಿಕ ನಿಯಮಾವಳಿಗಳನ್ನು ಗಾಳಿಗೆ ತೂರಿ 2020ರಲ್ಲಿ ಅಯೋಧ್ಯೆಗೆ ಹೋಗಿ ರಾಮಮಂದಿರಕ್ಕೆ ಅಡಿಗಲ್ಲು ಹಾಕಿದರು. ಒಂದು ಬಹುತ್ವ ದೇಶದ ಪ್ರಧಾನಿಯಾಗಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಹೋಮ ನಡೆಸಿ ಹೊಗೆ ಎಬ್ಬಿಸಿದರು. ತಾನು ಮಾಡಿದ್ದು ಸಂವಿಧಾನಕ್ಕೆ ಅಪಚಾರ ಎಂದು ಅವರಿಗೆ ಅನಿಸಲೇ ಇಲ್ಲ.

ಬಹುತ್ವ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿದಿದ್ದರೆ ಅವರ ಘನತೆ ಹೆಚ್ಚಾಗುತ್ತಿತ್ತು. ಅವರು ತಾನೇನೆಂದು ತೋರಿಸಿಕೊಂಡರು. ಹಿರಿಯಕ್ಕನ ಚಾಳಿ ಮನೆ ಮಂದಿಗೆ ಎಂಬಂತೆ ಈಗ ಯೋಗಿ ಆದಿತ್ಯನಾಥ್ ಅವರೂ ಸಂವಿಧಾನಕ್ಕೆ ಅಪಚಾರ ಎಸಗುವ ಕೆಲಸ ಮಾಡಿದ್ದಾರೆ. ಆದಿತ್ಯನಾಥ್ ಹೇಳಿದ ಮಾತ್ರಕ್ಕೆ ರಾಮ ಮಂದಿರವಾಗಲಿ ಯಾವುದೇ ಮಂದಿರವಾಗಲಿ ರಾಷ್ಟ್ರ ಮಂದಿರವಾಗಲು ಸಾಧ್ಯವಿಲ್ಲ.

ರಾಷ್ಟ್ರದ ಲಾಂಛನ ಯಾವುದಾಗಿರಬೇಕು, ರಾಷ್ಟ್ರ ಧ್ವಜ ಯಾವುದಾಗಿರಬೇಕು ಹಾಗೂ ರಾಷ್ಟ್ರಗೀತೆ ಯಾವುದಾಗಿರಬೇಕೆಂಬುದನ್ನು ಸಂವಿಧಾನ ರಚನಾ ಸಮಿತಿ ತೀರ್ಮಾನಿಸಿದೆ. ಇಂಥ ಸೂಕ್ಷ್ಮ ವಿಷಯದಲ್ಲಿ ಬಾಯಿಗೆ ಬಂದಂತೆ ಹೇಳುವ ಅಧಿಕಾರವನ್ನು ಆದಿತ್ಯನಾಥರಿಗೆ ಕೊಟ್ಟವರಾರು? ಇದು ನೂರ ಮೂವತ್ತೈದು ಕೋಟಿ ಜನಸಂಖ್ಯೆ ಇರುವ ದೇಶ. ಇದರಲ್ಲಿ ಎಲ್ಲ ಜಾತಿ, ಮತ, ಭಾಷೆ, ಸಂಸ್ಕೃತಿ, ಪ್ರದೇಶಗಳಿಗೆ ಸೇರಿದ ಜನರಿದ್ದಾರೆ. ಇವರೆಲ್ಲರ ಪರವಾಗಿ ಮಾತಾಡುವ ಅಧಿಕಾರ ಆದಿತ್ಯನಾಥರಿಗಿಲ್ಲ. ಜನ ಅವರನ್ನು ಚುನಾಯಿಸಿದ್ದು ಉತ್ತರ ಪ್ರದೇಶ ಸರಕಾರವನ್ನು ನಡೆಸಲು. ಈ ಅರಿವು ಅವರಿಗೆ ಇರಬೇಕಾಗಿತ್ತು.

 ಲಕ್ಷಣಗಳು, ದೇವರುಗಳು ಇರುವ, ನಂಬಿಕೆಗಳಿರುವ, ಸಮುದಾಯ ಗಳಿರುವ, ಮತ ನಿರಪೇಕ್ಷ ದೇಶವೊಂದರಲ್ಲಿ ಯಾವುದೇ ಊರಿನ ಗುಡಿಯನ್ನು ರಾಷ್ಟ್ರ ಮಂದಿರ ಎಂದು ಕರೆಯಲಾಗುವುದಿಲ್ಲ. ದೇವರಲ್ಲಿ ದೊಡ್ಡ ದೇವರು, ಸಣ್ಣ ದೇವರು ಎಂಬುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ದೇಹವೇ ದೇಗುಲ ಎಂದು 800 ವರ್ಷಗಳ ಹಿಂದೆಯೇ ಸಾರಿದ ಬಸವಣ್ಣನವರು ನಡೆದಾಡಿದ ನೆಲವಿದು. ಇಲ್ಲಿ ತಮ್ಮ ಕೋಮುವಾದಿ ಅಜೆಂಡಾ ಜಾರಿಗಾಗಿ ಇಲ್ಲದ ವಿವಾದ ಸೃಷ್ಟಿಸುವವರ ಆಟ ಬಹಳ ದಿನ ನಡೆಯುವುದಿಲ್ಲ.

ಭಾರತದಲ್ಲಿ ದೇವಾಲಯಗಳ ಜೊತೆ ಬುದ್ಧ ವಿಹಾರಗಳಿವೆ, ಜೈನ ಬಸದಿಗಳಿವೆ, ಮಸೀದಿಗಳಿವೆ, ಚರ್ಚುಗಳಿವೆ. ಇವಾವುದರಲ್ಲಿ ನಂಬಿಕೆ ಯಿಲ್ಲದ ನಿರೀಶ್ವರವಾದಿಗಳಿದ್ದಾರೆ. ಭಾರತ ಎಂಬುದು ಇವರೆಲ್ಲರಿಗೆ ಸೇರಿದ್ದು ಎಂಬುದನ್ನು ಅಧಿಕಾರದಲ್ಲಿ ಇರುವವರು ಮತ್ತು ಅವರ ಜುಟ್ಟು ಹಿಡಿದು ಆಡಿಸುವ ನಾಗಪುರದ ನಿಗೂಢ ಗುರುಗಳು ಮರೆಯಬಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)