varthabharthi


ನಿಮ್ಮ ಅಂಕಣ

ಇಸಂಗಳ ತಲೆಭಾರದಲ್ಲಿ ನಲುಗದಿರಲಿ ಪಠ್ಯಪುಸ್ತಕಗಳು!

ವಾರ್ತಾ ಭಾರತಿ : 22 Jun, 2022
ಡಾ.ಸಂಪತ್ ಬೆಟ್ಟಗೆರೆ, ಮೂಡಿಗೆರೆ

ಈಗ ಕೆಲವು ದಿನಗಳ ಹಿಂದಿನಿಂದ ಕರ್ನಾಟಕದಲ್ಲಿ ಎದ್ದಿರುವ ಪಠ್ಯಪುಸ್ತಕಗಳ ವಿವಾದವು ಕ್ಷಣಕ್ಕೊಂದು ಹೊಸ ಸ್ವರೂಪವನ್ನು ಪಡೆದುಕೊಂಡು ತಾರಕಕ್ಕೇರುತ್ತಲೇ ಹೋಗಿದ್ದು ಗೊತ್ತೇ ಇದೆ. ಅದರಂತೆ ಇದನ್ನು ಮುಖ್ಯವಾಗಿ ಅಭ್ಯಾಸ ಮಾಡಿಸಬೇಕಾದ ಶಿಕ್ಷಕರು ಹಾಗೂ ಓದಬೇಕಾದ ವಿದ್ಯಾರ್ಥಿಗಳು ಗೊಂದಲಕ್ಕಿಡಾಗಿ ಒಂದಷ್ಟು ಶೈಕ್ಷಣಿಕ ಕ್ಷೇತ್ರದ ಅವ್ಯವಸ್ಥೆಗೆ ಇದು ಕಾರಣವಾಯಿತು ಕೂಡ. ಅಂದರೆ ಪರಸ್ಪರ ಇಸಂಗಳ ತಲೆಭಾರವನ್ನು ಹೊತ್ತುಕೊಂಡು ಕಾದಾಡುತ್ತಿರುವ ಪರ ಮತ್ತು ವಿರೋಧದವರ ನಡುವೆ ಸಿಕ್ಕಿ ವಿನಾಕಾರಣದಿಂದ ಕಾಲಹರಣವಾಗಿ ಹಾಗೇ ಸುಮ್ಮನೆ ನಲುಗುವಂತಾಯಿತು. ಆದ್ದರಿಂದ ಇನ್ನು ಮುಂದೆ ಪಠ್ಯಪುಸ್ತಕಗಳನ್ನು ರೂಪಿಸುವ ಸಂದರ್ಭದಲ್ಲಿ ಯಾವುದೇ ಸರಕಾರವು ಮುಂದಾಲೋಚನೆಯನ್ನು ಹೊಂದಿರಬೇಕಿರುತ್ತದೆ. ಅದರಂತೆ ಕನ್ನಡ, ಚರಿತ್ರೆ, ವಿಜ್ಞಾನ, ವಾಣಿಜ್ಯ, ಗಣಿತ ಹೀಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಎಡ, ಬಲ ಎಂಬ ಯಾವುದೇ ಇಸಂಗಳ ಪೂರ್ವಾಗ್ರಹಗಳಿಲ್ಲದ ಸಮನ್ವಯ ಮನದ ವಿಷಯ ತಜ್ಞರನ್ನು ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರನ್ನಾಗಿ ನೇಮಿಸಿದರೆ ಈಗಿನ ತರಹದ ವಿವಾದಗಳಿಗೆ ಆಸ್ಪದವೇ ಇರುವುದಿಲ್ಲವೇನೋ. ಹಿರಿಯರೆಲ್ಲರೂ ನಮ್ಮ ಮಕ್ಕಳ ಮನದಂಗಳಕ್ಕೆ ಕಲ್ಲುಹಾಕಿ ನೋವು ನೀಡುವ ಬದಲು ಗಿಡನೆಟ್ಟು ಹೂವರಳಿಸಿ ಸಂಭ್ರಮಪಡುವಂತಾಗಬೇಕಿದೆ. ಅದರಂತೆ ನಮ್ಮ ಮಕ್ಕಳನ್ನು ಅಂಕಗಳ ಯಂತ್ರ ಮಾನವರನ್ನಾಗುವಂತೆ ಮಾತ್ರ ಪ್ರೇರಣೆ ಮಾಡದೆ ಕವಿ, ಕಲಾವಿದ, ವಿಜ್ಞಾನಿ, ಸಂಶೋಧಕ, ಕ್ರೀಡಾಪಟು ಹೀಗೆ ಅವರವರ ಆಸಕ್ತಿಯನ್ನೂ ಪೋಷಣೆ ಮಾಡುವಂತಹ ವಾತಾವರಣವನ್ನು ಪಠ್ಯಪುಸ್ತಕಗಳಲ್ಲಿ ಇನ್ನಷ್ಟು ವಿಸ್ತರಿಸುತ್ತ ಹೋಗಬೇಕಿದೆ. ಈಗ ಪ್ರಾದೇಶಿಕವಾಗಿಯೂ ಕೂಡ ಸರಕಾರದಡಿಯಲ್ಲಿ ಕನ್ನಡ ಮಾಧ್ಯಮ ಅಂಗನವಾಡಿ, ಶಿಶುವಿಹಾರ; ಖಾಸಗಿಯವರ ನೇತೃತ್ವದಲ್ಲಿ ಇಂಗ್ಲಿಷ್ ಅನ್ನು ಹೆಚ್ಚು ಕಲಿಸಲಾಗುತ್ತಿರುವ ಎಲ್‌ಕೆಜಿ, ಯುಕೆಜಿ ಎಂಬ ಅಸಮಾನತೆಯ ಶೈಕ್ಷಣಿಕ ವಾತಾವರಣ ಬಹಳಷ್ಟಿದೆ. ಇದರಿಂದ ಬಡವರ ಮಕ್ಕಳು ಇಂಗ್ಲಿಷ್ ಕಲಿಯಲು ಮಾಧ್ಯಮಿಕ ಹಂತದವರೆಗೆ ಕಾಯ್ದಿರಿಸಿದ ವಿಶೇಷ ಸದಸ್ಯರಂತಾಗಿದ್ದಾರೆ. ಆದ್ದರಿಂದ ಪೂರ್ವ ಪ್ರಾಥಮಿಕ ಶಿಕ್ಷಣವು ಮೊದಲುಗೊಂಡು ಉನ್ನತ, ಸ್ನಾತಕೋತ್ತರ ಪದವಿಯವರೆಗೂ ಖಾಸಗಿ ಮತ್ತು ಸರಕಾರಿ ವಿದ್ಯಾಸಂಸ್ಥೆಗಳಲ್ಲಿ ಒಂದೇ ಸ್ವರೂಪದಲ್ಲಿ ಅಂದರೆ ಭಾಷಿಕವಾಗಿ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಒಳಗೊಂಡಿರುವ ಏಕರೂಪದ ಒಂದೇ ಶೈಕ್ಷಣಿಕ ವ್ಯವಸ್ಥೆಯನ್ನು ಜಾರಿಗೆ ತಂದರೆ ಎಲ್ಲರನ್ನೂ ಸರ್ವೋದಯ ಸಮಾನತೆಯ ಸಮರ್ಥ ಪ್ರಜೆಗಳನ್ನಾಗಿಸಬಹುದು. ಇದರಿಂದ ಯಾವುದೇ ಮಕ್ಕಳು ಪರಸ್ಪರ ತಾರತಮ್ಯದ ಕೀಳರಿಮೆಯಿಂದ ಬಳಲದಂತೆ ಕಾಪಾಡಿಕೊಳ್ಳಬಹುದಲ್ಲವೇ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)