varthabharthi


ಸಿನಿಮಾ

ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ 'ಹೇರಾ ಫೇರಿ' ಸಿನಿಮಾದ 3ನೇ ಭಾಗ ಬಿಡುಗಡೆ: ಮಾಹಿತಿ ನೀಡಿದ ನಿರ್ದೇಶಕ

ವಾರ್ತಾ ಭಾರತಿ : 24 Jun, 2022

ಮುಂಬೈ: ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ 'ಹೇರಾ ಫೇರಿ' ಚಿತ್ರದ ಮೂರನೇ ಭಾಗ ಬಿಡುಗಡೆಗೆ ತಯಾರಿ ನಡೆಯುತ್ತಿರುವ ಕುರಿತು ವರದಿಯಾಗಿದೆ. ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಅವರ ಅಭಿನಯದ  ಹಾಸ್ಯ ಚಲನಚಿತ್ರವು ಎರಡು ಭಾಗಗಳಲ್ಲಿ ವೀಕ್ಷಕರ ಮನಸ್ಸನ್ನು ಗೆದ್ದಿತ್ತು. 

ಬಾಬು ಭಯ್ಯಾ, ಘನಶ್ಯಾಮ್ ಮತ್ತು ರಾಜು ಪಾತ್ರಗಳನ್ನು ಮರಳಿ ತರುವ ಬಗ್ಗೆ ನಿರ್ಮಾಪಕ ಫಿರೋಝ್‌ ನಾದಿಯಾಡ್ವಾಲಾ ಇತ್ತೀಚಿನ ಸಂದರ್ಶನದಲ್ಲಿ ಖಚಿತಪಡಿಸಿದ್ದಾರೆ. ಇದು ಸಿನಿಮಾ ಪೇಮಿಗಳ ಕುತೂಹಲಕ್ಕೆ ಕಾರಣವಾಗಿದೆ. 'ಹೇರಾ ಫೆರಿ 3' ಮೂಲ ತಾರಾಗಣವನ್ನು ಹೊಂದಿರುತ್ತದೆ ಎಂದು ಅವರು ಹೇಳಿದ್ದು, ಪಾತ್ರಗಳ ಮುಗ್ಧತೆಯನ್ನು ಹಾಗೇ ಇಟ್ಟುಕೊಂಡು ಪ್ರೇಕ್ಷಕರಿಗೆ ತಕ್ಕಂತೆ ಚಿತ್ರ ಮಾಡಲಾಗುವುದು ಎಂದು ಫಿರೋಝ್‌ ಹೇಳಿದ್ದಾರೆ. 
 
"ನೀವು ಶೀಘ್ರದಲ್ಲೇ ಮೂಲ ತಾರಾಗಣದೊಂದಿಗೆ 'ಹೇರಾ ಫೆರಿ 3' ಅನ್ನು ನೋಡುತ್ತೀರಿ. ಅಕ್ಷಯ್, ಪರೇಶ್ ಭಾಯ್ ಮತ್ತು ಸುನೀಲ್ ಜಿ ಈ ಚಿತ್ರದ ಭಾಗವಾಗಲಿದ್ದಾರೆ. ಕಥೆಯು ಇದೆ, ಆದರೆ ನಾವು ಕೆಲವು ಹೊಸ ವಿಧಾನಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಪಾತ್ರಗಳ ಮುಗ್ಧತೆಯನ್ನು ಹಾಗೇ ಇಟ್ಟುಕೊಂಡು ಪ್ರೇಕ್ಷಕರಿಗೆ ತಕ್ಕಂತೆ ಮಾಡಲಾಗುವುದು. ಹಿಂದಿನ ಯಶಸ್ಸನ್ನು ನಾವು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಹಾಗಾಗಿ ನಾವು ನಮ್ಮ ವಿಷಯ, ಕಥೆ, ಚಿತ್ರಕಥೆ, ಪಾತ್ರಗಳು, ವಿಧಾನ ಇತ್ಯಾದಿಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು" ಎಂದು ಫಿರೋಝ್‌ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಹೆರಾಫೆರಿ ಚಿತ್ರಕ್ಕೆ ಅದರದ್ದೇ ಆದ ಒಂದು ಅಭಿಮಾನಿ ವರ್ಗವಿದ್ದು, ಅದರ ಮೂರನೇ ಭಾಗ ಬರುತ್ತದೆ ಎಂಬ ಸುದ್ದಿ ತಿಳಿದ ಬಳಿಕ ಅಭಿಮಾನಿಗಳು ಚಿತ್ರದ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. #HeraPheri3 ಎಂಬ ಹ್ಯಾಷ್‌ಟ್ಯಾಗ್‌ನಡಿಯಲ್ಲಿ ಈ ಸುದ್ದಿಯನ್ನು ಹಲವಾರು ಸಿನಿಪ್ರೇಮಿಗಳು ಸಾಮಾಜಿಕ ತಾಣಗಳಲ್ಲಿ ಸಂಭ್ರಮದಿಂದ ಹಂಚಿಕೊಂಡಿದ್ದಾರೆ. 

2000 ಇಸವಿಯಲ್ಲಿ ಮೊದಲ ಭಾಗ ಹಾಗೂ 2006 ರಲ್ಲಿ ಎರಡನೇ ಭಾಗ ಬಿಡುಗಡೆಗೊಂಡಿದ್ದ ಈ ಚಿತ್ರವು ಈಗಲೂ ಅದೇ ತಾಜಾತನವನ್ನು ಇಟ್ಟುಕೊಂಡಿದೆ. ಹಾಗಾಗಿಯೇ, ಸುದೀರ್ಘ ವರ್ಷದ ಬಳಿಕ ಅದರ ಮೂರನೆಯ ಭಾಗ ಬರುತ್ತಿದೆಯೆಂಬ ಸುದ್ದಿಯು ಚಿತ್ರಪ್ರೇಮಿಗಳ ಸಂಭ್ರಮಕ್ಕೆ ಕಾರಣವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)