varthabharthi


ಅಂತಾರಾಷ್ಟ್ರೀಯ

​ಬಾಂಗ್ಲಾದೇಶದ ಅತ್ಯಂತ ಉದ್ದದ ಪದ್ಮಾ ಸೇತುವೆ ಉದ್ಘಾಟನೆ

ವಾರ್ತಾ ಭಾರತಿ : 25 Jun, 2022

Photo: indianexpress.com

ಡಾಕಾ, ಜೂ.25: ಬಾಂಗ್ಲಾದೇಶದ ಅತ್ಯಂತ ಉದ್ದದ ಸೇತುವೆ ಎಂಬ ದಾಖಲೆಗೆ ಪಾತ್ರವಾಗಿರುವ ಪದ್ಮಾ ಸೇತುವೆಯನ್ನು ಬಾಂಗ್ಲಾದ ಪ್ರಧಾನಿ ಶೇಖ್ ಹಸೀನಾ ಶನಿವಾರ ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ ಎಂದು ವರದಿಯಾಗಿದೆ. ರಾಜಧಾನಿ ಢಾಕಾವನ್ನು ವಾಯವ್ಯ ಪ್ರಾಂತದ 21 ಜಿಲ್ಲೆಗಳಿಗೆ ಜೋಡಿಸುವ ರಾಷ್ಟ್ರೀಯ ಹೆಮ್ಮೆಯ ಸಂಕೇತ ಎಂಬ ಹಿರಿಮೆ ಹೊಂದಿರುವ ಈ ಸೇತುವೆ ನಿರ್ಮಾಣಕ್ಕೆ ಸುಮಾರು 4 ಬಿಲಿಯನ್ ಡಾಲರ್ನಷ್ಟು ವೆಚ್ಚವಾಗಿದೆ. 6.15 ಕಿ.ಮೀ ಉದ್ದದ ಈ ಸೇತುವೆಯ ನಿರ್ಮಾಣ ಕಾರ್ಯಕ್ಕೆ 2015ರ ನವೆಂಬರ್ನಲ್ಲಿ ಚಾಲನೆ ದೊರಕಿತ್ತು. ಇದರಿಂದ ಡಾಕಾದಿಂದ ವಾಯವ್ಯ ಪ್ರಾಂತದ ಜಿಲ್ಲೆಗಳ ಸುಮಾರು 300 ಕಿ.ಮೀ ದೂರವನ್ನು ಕ್ರಮಿಸುವ ಅವಧಿಯಲ್ಲಿ ಗಮನಾರ್ಹ ಕಡಿತವಾಗಲಿದೆ.

ಎರಡು ಪದರದ ಸೇತುವೆ ಇದಾಗಿದ್ದು ಮೇಲಿನ ಪದರದಲ್ಲಿ 4 ಪಥದ ಹೆದ್ದಾರಿ, ಕೆಳಗಿನ ಪದರದಲ್ಲಿ ಏಕಹಳಿಯ ರೈಲು ಮಾರ್ಗವನ್ನು ಹೊಂದಿದೆ. ಆರಂಭದಲ್ಲಿ ಈ ಯೋಜನೆಗೆ ವಿಶ್ವಬ್ಯಾಂಕ್ ಆರ್ಥಿಕ ನೆರವನ್ನು ಒದಗಿಸಿತ್ತು. ಆದರೆ ಯೋಜನೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 2021ರಲ್ಲಿ ವಿಶ್ವಬ್ಯಾಂಕ್ ಹಿಂದೆ ಸರಿದಿತ್ತು. ಬಳಿಕ ಇತರ ಸಂಸ್ಥೆಗಳಾದ ಏಶ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಮತ್ತು ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿಯೂ ಹಿಂದಕ್ಕೆ ಸರಿದಿತ್ತು. ಇದರಿಂದ ಧೃತಿಗಡೆದ ಪ್ರಧಾನಿ ಹಸೀನಾ, ತಮ್ಮ ಸರಕಾರವೇ ಈ ಯೋಜನೆಗೆ ಆರ್ಥಿಕ ನೆರವು ಒದಗಿಸುವುದಾಗಿ ಘೋಷಿಸಿದ್ದರು. 

ಸೇತುವೆಯ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ಹಸೀನಾ ‘ಕೆಲವರು ನಾವು ಯಾವಾಗಲೂ ಇತರರ ನೆರವನ್ನು ನಿರೀಕ್ಷಿಸುವುದಾಗಿ ಹೇಳಿಕೊಂಡಿದ್ದರು. ಆದರೆ ನಮ್ಮ ರಾಷ್ಟ್ರಪಿತ ಶೇಖ್ ಮುಜಿಬುರ್ ರೆಹ್ಮಾನ್ ನಮಗೆ ಸ್ವಾಭಿಮಾನದ ಮಹತ್ವವನ್ನು ಹೇಳಿಕೊಟ್ಟಿದ್ದಾರೆ. ಈ ಸೇತುವೆ ಕೇವಲ ಇಟ್ಟಿಗೆ ಮತ್ತು ಸಿಮೆಂಟ್ನ ನಿರ್ಮಾಣ ಮಾತ್ರವಲ್ಲ, ಬಾಂಗ್ಲಾದೇಶದ ಹೆಮ್ಮೆ, ಗೌರವ ಮತ್ತು ಸಾಮರ್ಥ್ಯದ ಸಂಕೇತವಾಗಿದೆ. ನಮ್ಮಿಂದ ಸಾಧ್ಯ ಎಂದು ವಿಶ್ವಕ್ಕೆ ತೋರಿಸಿಕೊಟ್ಟಿದ್ದೇವೆ ’ ಎಂದು ಹೇಳಿದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)