varthabharthi


ವಿಶೇಷ-ವರದಿಗಳು

ಈ ತಿಂಗಳು ದೇಶದಲ್ಲಿ ಇಂಧನ ಕೊರತೆಯಾಗಿದ್ದು ಹೇಗೆ?

ವಾರ್ತಾ ಭಾರತಿ : 26 Jun, 2022

ಹೊಸದಿಲ್ಲಿ: ಈ ತಿಂಗಳು ದೇಶದ ಹಲವಾರು ನಗರಗಳಲ್ಲಿಯ ಪೆಟ್ರೋಲ್ ಬಂಕ್ ಗಳು ಇಂಧನಗಳ ಪೂರೈಕೆಯಲ್ಲಿ ರೇಷನಿಂಗ್ ಗೆ ಸಾಕ್ಷಿಯಾಗಿದ್ದವು ಅಥವಾ ಇಂಧನ ಲಭ್ಯತೆಯಿಲ್ಲದೆ ಮುಚ್ಚಲ್ಪಟ್ಟಿದ್ದವು. ಇದು ಗ್ರಾಹಕರಲ್ಲಿ ಇಂಧನ ಕೊರತೆಯ ಕಳವಳಗಳನ್ನು ಮತ್ತು ಖರೀದಿ ಧಾವಂತಕ್ಕೆ ಕಾರಣವಾಗಿತ್ತು. ಜೂನ್ ಮಧ್ಯಭಾಗದಲ್ಲಿ ಇಂಧನ ಉತ್ತುಂಗಕ್ಕೇರಿದ್ದು, ಸರಕಾರವು ಮಧ್ಯ ಪ್ರವೇಶಿಸಿ ತೆರೆದಿಡುವಂತೆ ಪೆಟ್ರೋಲ್ ಬಂಕ್ ಗಳಿಗೆ ಸೂಚಿಸುವುದರೊಡನೆ ಇಂಧನ ಲಭ್ಯತೆಯನ್ನು ಖಚಿತಪಡಿಸುವಂತೆ ತೈಲ ಮಾರಾಟ ಕಂಪನಿಗಳಿಗೆ ನಿರ್ದೇಶ ನೀಡುವಂತಾಗಿತ್ತು. ದೇಶದಲ್ಲಿ ಸಾಕಷ್ಟು ಇಂಧನ ಲಭ್ಯವಿದೆ ಎಂದು ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಪ್ರಕಟಣೆಯನ್ನೂ ಹೊರಡಿಸಿತ್ತು. ಅಲ್ಲಿಂದೀಚಿಗೆ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದೆ ಮತ್ತು ಜುಲೈನಿಂದ ಇಂಧನಗಳ ಲಭ್ಯತೆ ಸಹಜ ಸ್ಥಿತಿಗೆ ಮರಳುವ ಸಾಧ್ಯತೆಯಿದೆ ಎಂದು indianexpress ವರದಿ ಮಾಡಿದೆ.

ಕೊರತೆಗೆ ಕಾರಣವೇನು?: ಜಾಗತಿಕ ಕಚ್ಚಾ ತೈಲಗಳ ಬೆಲೆಯಲ್ಲಿ ಏರಿಕೆಯಾಗುವುದರೊಂದಿಗೆ ಡಾಲರ್ ನೆದುರು ರೂಪಾಯಿ ಅಪಮೌಲ್ಯಗೊಂಡಿತ್ತು ಮತ್ತು ಇದರಿಂದ ಸರಕಾರಿ ಸ್ವಾಮ್ಯದ ಎಚ್ಪಿಸಿಎಲ್, ಬಿಪಿಸಿಎಲ್ ಮತ್ತು ಖಾಸಗಿ ಕ್ಷೇತ್ರದ ನಯಾರಾ ಎನರ್ಜಿ ಮತ್ತು ರಿಲಯನ್ಸ್ ಲಿ.ನಂತಹ ತೈಲ ಮಾರಾಟ ಕಂಪನಿಗಳು ಚಿಲ್ಲರೆ ಮಾರಾಟದಲ್ಲಿ ನಷ್ಟವನ್ನು ಅನುಭವಿಸುವಂತಾಗಿತ್ತು. ಆದರೆ ಐಒಸಿಎಲ್ ಗೆ ರಶ್ಯಾದಿಂದ ಅಗ್ಗದ ದರಗಳಲ್ಲಿ ತೈಲ ಆಮದು ಸಾಧ್ಯವಾಗಿದ್ದರಿಂದ ಇದ್ದುದರಲ್ಲಿ ಅದರ ಸ್ಥಿತಿ ಉತ್ತಮವಾಗಿತ್ತು.

ನಷ್ಟದ ಪ್ರಮಾಣ ಹೆಚ್ಚುತ್ತಿದ್ದರಿಂದ ಅದನ್ನು ಸೀಮಿತಗೊಳಿಸಲು ತೈಲ ಕಂಪನಿಗಳು ಪೆಟ್ರೋಲ್ ಬಂಕ್ ಗಳಿಗೆ ಇಂಧನ ಪೂರೈಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದವು. ಇದು ದೇಶಾದ್ಯಂತ ವಿವಿಧ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನಗಳ ಕೊರತೆಗೆ ಕಾರಣವಾಗಿತ್ತು.

ಆದಾಗ್ಯೂ ಐಒಸಿಎಲ್ ಪೂರೈಕೆ ಸಕ್ಷಮತೆಯನ್ನು ಕಾಯ್ದುಕೊಂಡಿತ್ತು ಮತ್ತು ಇದು ಅದಕ್ಕೆ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳಲು ನೆರವಾಗಿತ್ತು.
ಜೂ.15ರಂದು ಹೇಳಿಕೆಯೊಂದರಲ್ಲಿ ಸರಕಾರವು ಸಮಸ್ಯೆಯನ್ನು ಒಪ್ಪಿಕೊಂಡಿತ್ತು. ಕಳೆದ ವರ್ಷದ ಜೂನ್ ಪೂರ್ವಾರ್ಧಕ್ಕೆ ಹೋಲಿಸಿದರೆ ಈ ವರ್ಷದ ಇದೇ ಅವಧಿಯಲ್ಲಿ ಇಂಧನಗಳಿಗೆ ಬೇಡಿಕೆ ಶೇ.50ರಷ್ಟು ಏರಿಕೆಯಾಗಿದ್ದು ಕೊರತೆಗೆ ಕಾರಣ ಎಂದು ಅದು ಸಮಜಾಯಿಷಿ ನೀಡಿತ್ತು. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆ ಬೇಡಿಕೆಯಲ್ಲಿ ಯಾವುದೇ ಹೆಚ್ಚಳವನ್ನು ನಿಭಾಯಿಸಲು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿಯೇ ಇದೆ ಎಂದು ಅದು ಭರವಸೆ ನೀಡಿತ್ತು.

ಭಾರತದಲ್ಲಿ ಸುಮಾರು 81,700 ಪೆಟ್ರೋಲ್ ಬಂಕ್ ಗಳಿದ್ದು,ಈ ಪೈಕಿ ಸುಮಾರು 7,200 ಬಂಕ್ ಗಳು ಖಾಸಗಿ ಕಂಪನಿಗಳ ಒಡೆತನದಲ್ಲಿವೆ.
ಮೇ ತಿಂಗಳಿನಲ್ಲಿ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು ಮತ್ತು ಜೂನ್ ತಿಂಗಳಿನಲ್ಲಿ ಚಿಲ್ಲರೆ ಮಾರಾಟ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು indianexpress ವರದಿ ಮಾಡಿದೆ.

ಈಗಿನ ಬೆಲೆಗಳಲ್ಲಿ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಬಂಕ್ ಗಳಿಗೆ ಪೂರೈಸುವ ಪ್ರತಿ ಲೀ.ಪೆಟ್ರೋಲ್ ಮೇಲೆ 25 ರೂ. ಮತ್ತು ಡೀಸೆಲ್ ಮೇಲೆ 10 ರೂ.ಗಳ ನಷ್ಟವನ್ನು ಅನುಭವಿಸುತ್ತಿವೆ ಎಂದು ಉದ್ಯಮವು ಅಂದಾಜಿಸಿದೆ. ಹೀಗಾಗಿ ಖಾಸಗಿ ಕ್ಷೇತ್ರದ ಹೆಚ್ಚಿನ ತೈಲ ಮಾರಾಟ ಕಂಪನಿಗಳು ತಮ್ಮ ಚಿಲ್ಲರೆ ವಿತರಕರಿಗೆ ಮಾರಾಟವನ್ನು ಸ್ಥಗಿತಗೊಳಿಸಿದ್ದವು ಮತ್ತು ಇದು ಕೊರತೆಗೆ ಕಾರಣವಾಗಿತ್ತು. ಸರಕಾರಿ ಸ್ವಾಮ್ಯದ ಕೆಲವು ಕಂಪನಿಗಳೂ ಪೆಟ್ರೋಲ್ ಬಂಕ್ಗಳಿಗೆ ಪೂರೈಕೆ ಪ್ರಮಾಣವನ್ನು ತಗ್ಗಿಸಿದ್ದವು.

ಉದ್ಯಮಕ್ಕೆ ಸಂಬಂಧಿಸಿದವರು ತೈಲ ಬೆಲೆಗಳಲ್ಲಿ ಸ್ತಂಭನಕ್ಕೆ ಪ್ರಚಲಿತ ಸ್ಥಿತಿಯನ್ನು ದೂರುತ್ತಿದ್ದಾರೆ. ತೈಲ ಮಾರಾಟ ಕಂಪನಿಗಳ ಕಾರ್ಯದಲ್ಲಿ ಪೆಟ್ರೋಲಿಯಂ ಸಚಿವಾಲಯವು ಆಗಾಗ್ಗೆ ಹಸ್ತಕ್ಷೇಪ ನಡೆಸುತ್ತಿರುವುದು ಈಗಿನ ಸ್ಥಿತಿಗೆ ಕಾರಣವಾಗಿದೆ ಮತ್ತು ಚುನಾವಣೆಗಳ ಮೇಲೆ ಕಣ್ಣಿರಿಸಿ 150 ದಿನಗಳಿಗೂ ಅಧಿಕ ಸಮಯ ಇಂಧನ ಬೆಲೆಗಳ ಏರಿಕೆಗೆ ಕಡಿವಾಣ ಹಾಕಿದ್ದು ತೈಲ ಮಾರಾಟ ಕಂಪನಿಗಳ ನಷ್ಟಕ್ಕೆ ಕಾರಣವಾಗಿದೆ ಎಂದು ಎಂಪವರಿಂಗ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ನ ಸದಸ್ಯ ಹೇಮಂತ ಸಿರೋಹಿ ಹೇಳಿದರು.

ತೈಲ ಮಾರಾಟ ಕಂಪನಿಗಳ ನಷ್ಟವನ್ನು ತಪ್ಪಿಸಲು ಇಂಧನಗಳ ಚಿಲ್ಲರೆ ಮಾರಾಟ ಬೆಲೆಗಳನ್ನು ಹೆಚ್ಚಿಸುವುದು ಸಮಸ್ಯೆಗೆ ಪರಿಹಾರವಾಗಿದೆ. ಆದರೆ ಅದು ಸದ್ಯಕ್ಕೆ ಸಂಭವಿಸುವ ಸಾಧ್ಯತೆಯಿಲ್ಲ. ಸರಕಾರವು ಹಣದುಬ್ಬರವನ್ನು ನಿಯಂತ್ರಿಸಲು ಹೆಣಗಾಡುತ್ತಿದೆ ಮತ್ತು ಹೆಚ್ಚಿನ ಇಂಧನ ಬೆಲೆಗಳು ಸರಕಾರದ ಈ ಪ್ರಯತ್ನಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತವೆ.

ಮಳೆಗಾಲವು ಕೃಷಿಯಂತಹ ಕ್ಷೇತ್ರಗಳಿಂದ ಇಂಧನ ಬೇಡಿಕೆಯನ್ನು ತಗ್ಗಿಸುವುದರಿಂದ ಮುಂದಿನ ತಿಂಗಳು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲು ಅರಂಭವಾಗಬಹುದು ಎಂದು indianexpress ವರದಿ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)