varthabharthi


ಕರ್ನಾಟಕ

ಧಾರವಾಡ-ಬೆಳಗಾವಿ ರೈಲು ಯೋಜನೆ ಶೀಘ್ರದಲ್ಲಿ ಪ್ರಾರಂಭ: ಮುಖ್ಯಮಂತ್ರಿ ಬೊಮ್ಮಾಯಿ

ವಾರ್ತಾ ಭಾರತಿ : 26 Jun, 2022

ಸಾಂದರ್ಭಿಕ ಚಿತ್ರ

ಬೆಳಗಾವಿ, ಜೂ. 26: ‘ಧಾರವಾಡ ಮತ್ತು ಬೆಳಗಾವಿ ರೈಲು ಸಂಪರ್ಕ ಯೋಜನೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.

ರವಿವಾರ ಇಲ್ಲಿನ ತಿಲಕವಾಡಿಯ ಮಿಲೇನಿಯಮ್ ಗಾರ್ಡನ್ ಬಳಿ ಆಯೋಜಿಸಿದ್ದ ಬಿ.ಎಸ್.ಚನ್ನಬಸಪ್ಪ ಟೆಕ್ಸ್ ಟೈಲ್ ಶೋ ರೂಂ ಉದ್ಘಾಟಿಸಿ ಮಾತನಾಡಿದ ಅವರು, ‘ಬೆಳಗಾವಿ ಪ್ರಮುಖವಾದ ವಾಣಿಜ್ಯ ಕೇಂದ್ರ. ಇಲ್ಲಿ ಹಲವಾರು ಉದ್ದಿಮೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಧಾರವಾಡ ಮತ್ತು ಬೆಳಗಾವಿ ರೈಲು ಸಂಪರ್ಕ ಯೋಜನೆ ಅನುದಾನ ಬಿಡುಗಡೆಗೆ ಮಂಜೂರಾತಿ ನೀಡಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರ ಈಗಾಗಲೇ ಅನುಮತಿ ನೀಡಿದೆ. ಬೆಳಗಾವಿಯಲ್ಲಿ ಹಲವಾರು ಅಭಿವೃದ್ಧಿಯ ಕಾರ್ಯಕ್ರಮಗಳು ಕೈಗೊಳ್ಳಲಾಗುತ್ತಿವೆ' ಎಂದು ತಿಳಿಸಿದರು.

ನೈಜ್ಯವಾಗಿ ಬೆಳೆದ ಬ್ರ್ಯಾಂಡ್ ನೇಮ್: ಬಿ.ಎಸ್.ಚನ್ನಬಸಪ್ಪ ಟೆಕ್ಸ್ ಟೈಲ್ ಶೋರೂಂನಲ್ಲಿ ಗುಣಮಟ್ಟದ ವಸ್ತ್ರಗಳು ವಿವಿಧ ದರಗಳಲ್ಲಿ ಒಂದೇ ಸೂರಿನಡಿ ಲಭ್ಯವಿದ್ದು, ವಸ್ತ್ರ ಪ್ರಿಯರಿಗೆ ಸಂತೋಷವನ್ನು ನೀಡಲಿದೆ.   ಉತ್ಕøಷ್ಟ ಗುಣಮಟ್ಟ ಹಾಗೂ ಪ್ರಾಮಾಣಿಕ ಸೇವೆಯನ್ನು ಚನ್ನಬಸಪ್ಪ ಸಂಸ್ಥೆ ನೀಡುತ್ತಾ ಬಂದಿದ್ದು, ಜನರ ವಿಶ್ವಾಸವನ್ನು ಗಳಿಸಿದೆ. ಹಲವಾರು ಜವಳಿ ಸಂಸ್ಥೆಗಳು ಬ್ರ್ಯಾಂಡ್ ನೇಮ್‍ಗಾಗಿ ಕೋಟ್ಯಾಂತರ ಹಣ ಖರ್ಚು ಮಾಡಿದರೆ, ಬಿ.ಎಸ್.ಚನ್ನಬಸಪ್ಪ ತನ್ನ ಸೇವೆ, ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ನೈಜ್ಯವಾಗಿ ಬ್ರ್ಯಾಂಡ್ ನೇಮ್ ಆಗಿ ಬೆಳೆದಿದೆ' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

‘ಬಿ.ಎಸ್.ಚನ್ನಬಸ್ಪಪ್ಪ ಅವರ ದೂರದೃಷ್ಟಿ ಹಾಗೂ ಅವರ ಮುಂದಿನ ಪೀಳಿಗೆ ಕ್ರಿಯಾಶೀಲರಾಗಿದ್ದಾರೆ. ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ ಹೀಗೆ ಬಿಎಸ್‍ಸಿ ಮಳಿಗೆಗಳು ಬೆಂಗಳೂರಿನ ವರೆಗೂ ಬೆಳೆಯಬೇಕು. ರಾಜ್ಯದವರೇ ಆದ ಬಿಎಸ್‍ಸಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಕನ್ನಡದವರಲ್ಲಿ ವ್ಯಾಪಾರ ಮಾಡುವ ಯುಕ್ತಿ, ಶಕ್ತಿ ಇದೆ, ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂಬುದನ್ನು ಬಿಎಸ್‍ಸಿ ಕುಟುಂಬದವರು ನಿರೂಪಿಸಿದ್ದಾರೆ ಎಂದು ಅವರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)