varthabharthi


ಅಂತಾರಾಷ್ಟ್ರೀಯ

ಶ್ರೀಲಂಕಾ: ದಾಖಲೆ ಮಟ್ಟ ತಲುಪಿದ ಪೆಟ್ರೋಲ್, ಡೀಸೆಲ್ ದರ

ವಾರ್ತಾ ಭಾರತಿ : 26 Jun, 2022

ಕೊಲಂಬೊ, ಜೂ.26: ಹಣದುಬ್ಬರ ಮತ್ತು ದೈನಂದಿನ ಬಳಕೆಯ ವಸ್ತುಗಳ ದರ ಗಗನಕ್ಕೇರಿರುವುದರಿಂದ ಕಂಗಾಲಾಗಿರುವ ಶ್ರೀಲಂಕಾದ ಜನತೆಗೆ ಮತ್ತೊಂದು ಆಘಾತ ಎದುರಾಗಿದೆ. ಡೀಸೆಲ್ ದರದಲ್ಲಿ 15% ಮತ್ತು ಪೆಟ್ರೋಲ್ ದರದಲ್ಲಿ 22% ಹೆಚ್ಚಳ ಮಾಡಿದ್ದು ಇದು ರವಿವಾರ ಮಧ್ಯಾಹ್ನ 2 ಗಂಟೆಯಿಂದಲೇ ಜಾರಿಗೆ ಬಂದಿರುವುದಾಗಿ ರವಿವಾರ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಶನ್ ಘೋಷಿಸಿದೆ.

 ಇದರಿಂದ ದ್ವೀಪರಾಷ್ಟ್ರದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 460 ರೂ, ಡೀಸೆಲ್ ಬೆಲೆ ಲೀಟರ್‌ಗೆ 550 ರೂ.ಗೆ ತಲುಪಿದೆ. ದೇಶದಲ್ಲಿ ತೈಲ ದಾಸ್ತಾನು ಬಹುತೇಕ ಬರಿದಾಗಿರುವುದರಿಂದ ಪೆಟ್ರೋಲ್ ಬಂಕ್ ಎದುರು ಕ್ಯೂ ನಿಲ್ಲಬಾರದು ಎಂದು ಜನತೆಗೆ ಮನವಿ ಮಾಡಿಕೊಂಡಿರುವ ಇಂಧನ ಸಚಿವ ಕಾಂಚನ ವಿಜೆಸೇಕರ, ಮುಂದಿನ ಕಚ್ಛಾ ತೈಲ ಸರಕು ಆಗಮಿಸುವವರೆಗೆ ತೈಲ ಸಂಸ್ಕರಣಾ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ ಎಂದು ಘೋಷಿಸಿದ್ದಾರೆ.

ಕಳೆದ ಮೇ 24ರಂದು ಪೆಟ್ರೋಲ್ ದರದಲ್ಲಿ 24%, ಡೀಸೆಲ್ ದರದಲ್ಲಿ 38% ಹೆಚ್ಚಳವಾಗಿತ್ತು. ಬ್ಯಾಂಕಿಂಗ್ ಮತ್ತು ವ್ಯವಸ್ಥಾಪನಾ ಕಾರಣಗಳಿಂದಾಗಿ ಇಂಧನದ ಸರಕು ದೇಶ ತಲುಪಲು ಅಡ್ಡಿಯಾಗಿದೆ ಎಂದು ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಶನ್ ಸರಕಾರಕ್ಕೆ ಮಾಹಿತಿ ನೀಡಿತ್ತು ಎಂದು ಸಚಿವರು ಹೇಳಿದ್ದಾರೆ. ಇದೀಗ ತೈಲ ಸರಕಿನ ವಿಳಂಬದಿಂದ ದೇಶದ ತೈಲ ದಾಸ್ತಾನು ಬಹುತೇಕ ಖಾಲಿಯಾಗಿದೆ. ಮುಂದಿನ ಸರಕು ಬರುವವರೆಗೆ ಈಗಿರುವ ದಾಸ್ತಾನನ್ನು ಸಾರ್ವಜನಿಕ ಸಾರಿಗೆ, ವಿದ್ಯುತ್‌ಛಕ್ತಿ ಉತ್ಪಾದನೆಗೆ ಆದ್ಯತೆ ಮೇಲೆ ಒದಗಿಸಲಾಗುವುದು. 

ಮುಂದಿನ ವಾರವಿಡೀ ದೇಶದ ಪೆಟ್ರೋಲ್ ಬಂಕ್‌ಗಳಲ್ಲಿ ಸೀಮಿತ ಪ್ರಮಾಣದ ಪೆಟ್ರೋಲ್, ಡೀಸೆಲ್ ಪೂರೈಕೆಯಾಗಲಿದೆ ಎಂದವರು ಮಾಹಿತಿ ನೀಡಿದ್ದಾರೆ. ಅಸಾಮಾನ್ಯ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆ ಎದುರಿಸುತ್ತಿರುವ ಶ್ರೀಲಂಕಾದ ವಿದೇಶ ವಿನಿಮಯ ದಾಸ್ತಾನು ತಳಮಟ್ಟಕ್ಕೆ ಕುಸಿದಿರುವುದರಿಂದ 22 ಮಿಲಿಯನ್ ಡಾಲರ್ ಮೊತ್ತದ ಅಂತಾರಾಷ್ಟ್ರೀಯ ಸಾಲ ಮರುಪಾವತಿಸಲು ವಿಫಲವಾಗಿತ್ತು. ಸ್ವಾತಂತ್ರ್ಯ ದೊರೆತ ಬಳಿಕದ ಅತ್ಯಂತ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ದೈನಂದಿನ ವಸ್ತುಗಳ ಕೊರತೆ, ಹಣದುಬ್ಬರದ ಪ್ರಮಾಣ ಹೆಚ್ಚುತ್ತಿರುವುದು ಮತ್ತು ತೈಲ ಕೊರತೆ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)