varthabharthi


ಸಂಪಾದಕೀಯ

ಗುಜರಾತ್ ಹತ್ಯಾಕಾಂಡ: ಸಂತ್ರಸ್ತರೇ ಅಪರಾಧಿಗಳು?

ವಾರ್ತಾ ಭಾರತಿ : 27 Jun, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಗುಜರಾತ್ ಗಲಭೆಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ಟೀಸ್ಟಾ ಸೆಟಲ್ವಾಡ್ ಮತ್ತು ನಿವೃತ್ತ ಡಿಜಿಪಿ ಶ್ರೀಕುಮಾರ್ ಅವರನ್ನು ಬಂಧಿಸುವ ಮೂಲಕ ತುರ್ತು ಪರಿಸ್ಥಿತಿಯ 47ನೇ ವರ್ಷವನ್ನು ನಮ್ಮ ಕಾನೂನು ವ್ಯವಸ್ಥೆ ಸಂಭ್ರಮದಿಂದ ಆಚರಿಸಿದೆ. ತನ್ನ ಬಂಧು ಬಳಗವನ್ನು ಅತ್ಯಂತ ಭೀಕರವಾಗಿ ಕೊಂದು ಹಾಕಿದ, ಅದಕ್ಕೆ ಕಾರಣವಾದ ವ್ಯವಸ್ಥೆಯ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಝಕಿಯಾ ಜಾಫ್ರಿಯ ಅರ್ಜಿ ವಜಾಗೊಂಡ ಬೆನ್ನಿಗೇ, ನ್ಯಾಯಾಲಯದ ಕಣ್ಸನ್ನೆಯನ್ನು ಅರ್ಥಮಾಡಿಕೊಂಡ ಪೊಲೀಸ್ ಇಲಾಖೆ, ಸಂತ್ರಸ್ತರ ಪರವಾಗಿ ನಿಂತ ಇಬ್ಬರು ಹೋರಾಟಗಾರರನ್ನು ಬಂಧಿಸಿ, ಗುಜರಾತ್ ಹತ್ಯಾಕಾಂಡಕ್ಕೆ ತಾರ್ಕಿಕ ಅಂತ್ಯವೊಂದನ್ನು ನೀಡಿತು. ಗುಜರಾತ್ ಹತ್ಯಾಕಾಂಡದಲ್ಲಿ ಸಂತ್ರಸ್ತರೇ ಆರೋಪಿಗಳು ಎನ್ನುವುದನ್ನು ಈ ಮೂಲಕ ಪರೋಕ್ಷವಾಗಿ ಘೋಷಿಸಿದಸಂತಾಗಿದೆ. ಸಂವಿಧಾನ, ನ್ಯಾಯವ್ಯವಸ್ಥೆಯನ್ನು ಉಲ್ಲಂಘಿಸಿ ಗುಜರಾತ್‌ನ ಬೀದಿಯಲ್ಲಿ ನಿಂತು ಅತ್ಯಂತ ಉದ್ವಿಗ್ನಕಾರಿ ಭಾಷಣಗೈದವರು, ಹತ್ಯಾಕಾಂಡಕ್ಕೆ ಕರೆ ನೀಡಿದವರು, ಹತ್ಯಾಕಾಂಡವನ್ನು ಸಮರ್ಥಿಸಿದವರು, ಸಂಭ್ರಮಿಸಿದವರೆಲ್ಲ ಈ ದೇಶದಲ್ಲಿ ಇನ್ನು ಮುಂದೆ ಮುಕ್ತವಾಗಿ ಓಡಾಡಬಹುದು. ಓಡಾಡುತ್ತಿದ್ದಾರೆ ಕೂಡ. ಆದರೆ ನ್ಯಾಯವ್ಯವಸ್ಥೆ, ಸಂವಿಧಾನದ ಮೇಲೆ ನಂಬಿಕೆ ಹೊಂದಿ, ಅದರ ಮುಂದೆ ತಮ್ಮ ಅಹವಾಲುಗಳನ್ನು ಮಂಡಿಸುವವರು ಮಾತ್ರ ಎಚ್ಚರಿಕೆಯಿಂದ ಇರಬೇಕಾಗಿದೆ. ಈ ದೇಶದ ನ್ಯಾಯವ್ಯವಸ್ಥೆಯ ಮೇಲೆ ನಂಬಿಕೆಯಿಟ್ಟು, ಸಂತ್ರಸ್ತರ ಪರವಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಟೀಸ್ಟಾಸೆಟಲ್ವಾಡ್ ಸಮಾಜಕ್ಕೆ ಅತ್ಯಂತ ಅಪಾಯಕಾರಿ ವ್ಯಕ್ತಿಯಾಗಿ ನ್ಯಾಯಾಲಯ ಮತ್ತು ಪೊಲೀಸ್ ಇಲಾಖೆ ಭಾವಿಸಿರುವುದು ಇದೇ ಕಾರಣಕ್ಕಿರಬಹುದೆ? ಎಂದು ದೇಶದ ಸತ್‌ಪ್ರಜೆಗಳು ಅನುಮಾನ ಪಡುವಂತಾಗಿದೆ. ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಘಟನೆಯನ್ನು ಅತಿ ಹತ್ತಿರದಿಂದ ವೀಕ್ಷಿಸಿ, ಸತ್ಯಾಸತ್ಯತೆಗಳನ್ನು ಸಮಾಜದ ಮುಂದಿಟ್ಟ ಹಿರಿಯ ಪೊಲೀಸ್ ಅಧಿಕಾರಿ ಶ್ರೀಕುಮಾರ್ ಕೂಡ ಈ ಸಂದರ್ಭದಲ್ಲಿ ಬಂಧಿತರಾಗಿದ್ದಾರೆ. ಪ್ರಜಾಸತ್ತೆಯ ಮೇಲೆ ನಂಬಿಕೆಯಿಟ್ಟವರೆಲ್ಲ ಜೈಲು ಸೇರುತ್ತಾ, ಪ್ರಜಾಸತ್ತೆಯ ವಿರುದ್ಧ ಬೀದಿಯಲ್ಲಿ ನಿಂತು ಘೋಷಣೆ ಕೂಗಿದವರು ನಾಯಕರಾಗಿ ಕೊಂಡಾಡಲ್ಪಡುವುದೇ ಮೋದಿ ಕಟ್ಟಲು ಹೊರಟಿರುವ ನವಭಾರತವೆ?

    70ರ ದಶಕದಲ್ಲಿ ‘ಎರಡು ವರ್ಷಗಳ ಕಾಲ’ ಈ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು. ಆ ಕರಾಳ ದಿನ ಇದೀಗ ಮರುಕಳಿಸುತ್ತಿವೆ ಎಂದು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಹಿರಿಯರು ಆತಂಕ ಪಡುತ್ತಿದ್ದಾರೆ. ಅಂದಿಗೂ ಇಂದಿಗೂ ಒಂದು ಸಣ್ಣ ವ್ಯತ್ಯಾಸವಿದೆ. ಅಂದು ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ಇಂದು ತುರ್ತುಪರಿಸ್ಥಿತಿಯನ್ನು ಘೋಷಿಸದೆಯೇ ಕರಾಳ ದಿನಗಳನ್ನು ಜನರು ಅನುಭವಿಸಬೇಕಾಗಿದೆ. ಅಧಿಕೃತವಾಗಿ ಘೋಷಿಸಲ್ಪಟ್ಟ ತುರ್ತುಪರಿಸ್ಥಿತಿಗಿಂತ, ಪ್ರಜಾಸತ್ತೆಯ ಮುಖವಾಡದಲ್ಲಿ ಜಾರಿಗೊಂಡಿರುವ ತುರ್ತುಪರಿಸ್ಥಿತಿಯೇ ಅತ್ಯಂತ ಅಪಾಯಕಾರಿ. ಯಾಕೆಂದರೆ, ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವಂತೆಯೂ ಇಲ್ಲ. ಕೇಂದ್ರ ಸರಕಾರದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವವರೆಲ್ಲ, 70ರ ದಶಕದ ತುರ್ತುಪರಿಸ್ಥಿತಿಯ ಕುರಿತಂತೆ ಪದೇ ಪದೇ ಕಣ್ಣೀರು ಸುರಿಸುತ್ತಾ, ಇಂದಿನ ದಿನಮಾನವನ್ನು ಪರೋಕ್ಷವಾಗಿ ಸಂಭ್ರಮಿಸುತ್ತಿದ್ದಾರೆ. ಭಾವನಾತ್ಮಕವಾಗಿ ಜನರ ಮೆದುಳನ್ನು ಹೈಜಾಕ್ ಮಾಡಿ, ಪ್ರಜಾಸತ್ತೆಯ ಹೆಸರಿನಲ್ಲೇ ಈ ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಹೇರುವ ಅವಕಾಶವಿರುವಾಗ, ಅಧಿಕೃತವಾಗಿ ತುರ್ತುಪರಿಸ್ಥಿತಿಯನ್ನು ಘೋಷಿಸಿ ದೇಶದ ಮುಂದೆ ‘ವಿಲನ್’ ಆದ ಇಂದಿರಾಗಾಂಧಿ ಇಂದಿನ ನಾಯಕರಿಗೆ ಮೂರ್ಖಳಂತೆ ಕಾಣುತ್ತಿರಬೇಕು. ಈ ದೇಶದಲ್ಲಿ ಯಾವ ತುರ್ತುಪರಿಸ್ಥಿತಿ ಘೋಷಣೆ ಮಾಡದೆಯೂ ಸಾಮಾಜಿಕ ಹೋರಾಟಗಾರರನ್ನು ಬಂಧಿಸಬಹುದು, ಅವರ ಮನೆಗಳನ್ನು ಕೆಡಹಬಹುದು ಎನ್ನುವುದನ್ನು ನಮ್ಮನ್ನಾಳುವವರು ತೋರಿಸಿಕೊಡುತ್ತಿದ್ದಾರೆ. ಪರಿಣಾಮವಾಗಿ ಸಾವಿರಾರು ಸಾಮಾಜಿಕ ಕಾರ್ಯಕರ್ತರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅವರ ಸಾಲಿಗೆ ಇದೀಗ ಟೀಸ್ಟಾ ಸೆಟಲ್ವಾಡ್ ಮತ್ತು ನಿವೃತ್ತ ಡಿಜಿಪಿ ಶ್ರೀಕುಮಾರ್ ಕೂಡ ಸೇರಿದ್ದಾರೆ.

ಬಂಧಿತ ಟೀಸ್ಟಾ ಅವರು ಭಾರತದ ಮೊಟ್ಟ ಮೊದಲ ಅಟಾರ್ನಿ ಜನರಲ್ ಎಂ.ಸಿ. ಸೆಟಲ್ವಾಡ್ ಅವರ ಮೊಮ್ಮಗಳು. ನ್ಯಾಯವಾದಿ ಕುಟುಂಬದಿಂದ ಹೊರಬಂದವರು. ಈ ದೇಶದ ಸಂವಿಧಾನ, ಪ್ರಜಾಸತ್ತೆ, ಜಾತ್ಯತೀತತೆಯ ಬಗ್ಗೆ ಅಪಾರ ಕಾಳಜಿಯಿಟ್ಟುಕೊಂಡ ಪರಿಸರದಲ್ಲಿ ಬೆಳೆದವರು. ಆದುದರಿಂದಲೇ, ಗುಜರಾತ್‌ನಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡವನ್ನು ಕಂಡು ಅವರಿಗೆ ಸುಮ್ಮನಿರಲಾಗಲಿಲ್ಲ. ಹಾಗೆಂದು ಅವರು ಯಾವತ್ತೂ ಆರೋಪಿಗಳ ವಿರುದ್ಧ ಸಾರ್ವಜನಿಕವಾಗಿ ‘ಹೊಡಿ ಬಡಿ ಕೊಲ್ಲಿ’ ಎಂಬ ಹೇಳಿಕೆಗಳನ್ನು ನೀಡಿದವರಲ್ಲ. ನ್ಯಾಯ ವ್ಯವಸ್ಥೆಯ ಮೂಲಕವೇ ಅವರ ವಿರುದ್ಧ ಹೋರಾಡಿದವರು. ನ್ಯಾಯವ್ಯವಸ್ಥೆಯ ಮೇಲೆ ಅವರಿಗಿದ್ದ ನಂಬಿಕೆಯೇ ಇಂದು ನ್ಯಾಯಾಲಯದ ಕಣ್ಣಿಗೆ ಅಪರಾಧವಾಗಿ ಕಂಡಿದೆ. ನ್ಯಾಯಾಲಯದ ಹೊರಗಡೆ ನಿಂತು ಹತ್ಯಾಕಾಂಡಕ್ಕೆ ಪರೋಕ್ಷ ಕುಮ್ಮಕ್ಕು ನೀಡಿದವರೆಲ್ಲ ಅದರ ದೃಷ್ಟಿಯಲ್ಲಿ ಅಮಾಯರಾಗಿದ್ದಾರೆ. ಪರಿಣಾಮವಾಗಿ, ಟೀಸ್ಟಾ ಜೈಲು ಸೇರಿದ್ದಾರೆ. ತೊಗಾಡಿಯಾದಿಗಳು ಇಂದಿಗೂ ಸಾರ್ವಜನಿಕವಾಗಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ.

ಗುಜರಾತ್ ಹತ್ಯಾಕಾಂಡದ ಹಿಂದಿರುವ ಸಂಚುಕೋರರ ಬಗ್ಗೆ ಗಂಭೀರವಾಗಿ ಮಾತನಾಡಬೇಕಾದ ಸರ್ವೋಚ್ಚ ನ್ಯಾಯಾಲಯ, ‘ಗುಜರಾತ್ ಹತ್ಯಾಕಾಂಡ ಪ್ರಕರಣವನ್ನು ದುರುಪಯೋಗ ಪಡಿಸಿ ಕೆಲವರ ವಿರುದ್ಧ ಆರೋಪ ಹೊರಿಸಿದ ಎಲ್ಲರ ವಿಚಾರಣೆ ನಡೆಸಬೇಕು’ ಎಂದು ತನ್ನ ಇಂಗಿತವನ್ನು ವ್ಯಕ್ತಪಡಿಸಿದೆ. ಅಂದರೆ, ಗುಜರಾತ್ ಹತ್ಯಾಕಾಂಡ ನಡೆಯುವ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ನಾಯಕರನ್ನು ಯಾರೂ ಪ್ರಶ್ನಿಸಲೇಬಾರದು ಎನ್ನುವ ಎಚ್ಚರಿಕೆಯನ್ನು ಪರೋಕ್ಷವಾಗಿ ನ್ಯಾಯಾಲಯ ನೀಡುತ್ತಿದೆ. ಒಂದು ವೇಳೆ ಪ್ರಶ್ನಿಸಿದರೆ, ಅವರು ಪ್ರಕರಣವನ್ನು ದುರುಪಯೋಗ ಪಡಿಸಿಕೊಂಡ ಆರೋಪವನ್ನು ಎದುರಿಸಬೇಕಾಗುತ್ತದೆ. ಅಂದಿನ ಮೋದಿ ಸರಕಾರದ ಪರವಾಗಿ ಇಷ್ಟೊಂದು ಸ್ಪಷ್ಟವಾದ ತೀರ್ಪನ್ನು ನೀಡುವ ಮೂಲಕ ನ್ಯಾಯಾಲಯ, ಹತ್ಯಾಕಾಂಡದಲ್ಲಿ ಆಳುವವರ ವೈಫಲ್ಯವೇ ಇಲ್ಲ ಎಂದು ಹೇಳಿದಂತಾಗಿದೆ. ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ನಿಜಕ್ಕೂ ಸರಕಾರ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದೆಯಾದರೆ, 2,000ಕ್ಕೂ ಅಧಿಕ ಮಂದಿ ಪ್ರಾಣವನ್ನು ಕಳೆದುಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾದದ್ದು ಹೇಗೆ? ಹಾಗಾದರೆ ಗುಜರಾತ್ ಗಲಭೆಯಲ್ಲಿ ಇಷ್ಟು ಮಂದಿ ಸತ್ತಿರುವುದು, ಸಾವಿರಾರು ಮಂದಿ ಗಾಯಗೊಂಡಿರುವುದು, ಮಹಿಳೆಯರು ಅತ್ಯಾಚಾರಕ್ಕೊಳಗಾಗಿರುವುದು ಸುಳ್ಳೆ? ಈ ಎಲ್ಲ ಆರೋಪಗಳನ್ನು ಸರಕಾರದ ವಿರುದ್ಧ ನಡೆದ ಸಂಚು ಎಂದು ನಾವು ಭಾವಿಸಿ ಸಂತ್ರಸ್ತರನ್ನೇ ಅಪರಾಧಿಗಳಾಗಿಸಬೇಕೆೆ? ಪ್ರಧಾನಿ ಮೋದಿಗೆ ಕ್ಲೀನ್ ಚಿಟ್ ಕೊಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್, ಜಾಫ್ರಿ ಎನ್ನುವ ವೃದ್ಧ ಸಂತ್ರಸ್ತ ಮಹಿಳೆಯ ಮೇಲೆ ತನ್ನ ಅನುಮಾನದ ಕೂರಂಬುಗಳನ್ನು ಎಸೆದಿದೆ. ಸದ್ಯಕ್ಕೆ, ಜಾಫ್ರಿ ಅವರನ್ನೇ ‘ ಗುಜರಾತ್ ಹತ್ಯಾಕಾಂಡ’ಕ್ಕೆ ಹೊಣೆಯಾಗಿಸಿ, ಆಕೆಗೆ ಶಿಕ್ಷೆಯನ್ನು ಘೋಷಿಸಲಿಲ್ಲವಲ್ಲ, ಆ ಕಾರಣಕ್ಕಾಗಿ ನಮ್ಮ ನ್ಯಾಯ ವ್ಯವಸ್ಥೆಯನ್ನು ನಾವೆಲ್ಲ ಸೇರಿ ಅಭಿನಂದಿಸೋಣ. ಅದನ್ನೇ ಗುಜರಾತ್ ಗಲಭೆಯಲ್ಲಿ ಹತ್ಯೆಗೊಳಗಾದ ಜನರಿಗೆ ಸುಪ್ರೀಂಕೋರ್ಟ್ ನೀಡಿದ ನ್ಯಾಯ ಎಂದು ತೃಪ್ತಿ ಪಟ್ಟು, 70 ರ ದಶಕದಲ್ಲಿ ಇಂದಿರಾಗಾಂಧಿ ಘೋಷಿಸಿದ ತುರ್ತುಪರಿಸ್ಥಿಯನ್ನು ಖಂಡಿಸೋಣ. ಇನ್ನೂ ಅಗತ್ಯವಿದ್ದರೆ, ಗುಜರಾತ್ ಹತ್ಯಾಕಾಂಡಕ್ಕೆ 70ರ ದಶಕದಲ್ಲಿ ಇಂದಿರಾಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯೇ ಕಾರಣ ಎಂದು ಆರೋಪಿಸಿ, ನಮಗೆ ನಾವೇ ಸಮಾಧಾನ ಪಟ್ಟುಕೊಳ್ಳೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)