varthabharthi


ಕರ್ನಾಟಕ

ಮಡಿಕೇರಿ | ಕುಂಡತ್ತಿಕಾನದಲ್ಲಿ ಮನೆ ಮೇಲೆ ಉರುಳಿದ ಬಂಡೆ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ವಾರ್ತಾ ಭಾರತಿ : 28 Jun, 2022

ಮಡಿಕೇರಿ, ಜೂ.28: ಕೊಡಗಿನ ವಿವಿಧೆಡೆ ಸಂಭವಿಸುತ್ತಿರುವ ಭೂಕಂಪನದ ಆತಂಕದ ನಡುವೆಯೇ ಕರಿಕೆ ಗ್ರಾಪಂ ವ್ಯಾಪ್ತಿಯ ಕುಂಡತ್ತಿಕಾನ ಗ್ರಾಮದಲ್ಲಿ ಬಂಡೆಯೊಂದು ಮನೆಯ ಮೇಲೆ ಉರುಳಿರುವುದು ವರದಿಯಾಗಿದೆ.

ಜೂ.26ರ ಮಧ್ಯ ರಾತ್ರಿ ಜೋರಾಗಿ ಮಳೆ ಸುರಿದ ಪರಿಣಾಮ ವಾರ್ಡ್ ನಂಬರ್ 3ರ ನಿವಾಸಿ ಜಾನಕಿ ಎಂಬವರ ಶೀಟ್ ಮನೆಯ ಮೇಲೆ ಬಂಡೆಕಲ್ಲೊಂದು ಉರುಳಿ ಬಿದ್ದಿದೆ. ಇದರಿಂದ ಮನೆಯ ಮೇಲ್ಛಾಣಿ ಮತ್ತು ಅಡುಗೆ ಕೋಣೆ ಸಂಪೂರ್ಣವಾಗಿ ಹಾನಿಗೀಡಾಗಿದೆ. ಬಂಡೆಕಲ್ಲು ಅಡುಗೆ ಮನೆಗೆ ಬಿದ್ದ ಪರಿಣಾಮ ವಸ್ತುಗಳೆಲ್ಲವೂ ಧ್ವಂಸಗೊಂಡಿದೆ. ಅದೃಷ್ಟವಶಾತ್ ಪಕ್ಕದ ಕೋಣೆಯಲ್ಲೇ ನಿದ್ರಿಸುತ್ತಿದ್ದ ಜಾನಕಿ ಹಾಗೂ ಅವರ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಧ್ಯರಾತ್ರಿ ಕೇಳಿ ಬಂದ ದೊಡ್ಡ ಶಬ್ದದಿಂದ ಗಾಬರಿಯಾಗಿ ಎಚ್ಚರಗೊಂಡಾಗ ಬಂಡೆಕಲ್ಲು ಅಡುಗೆ ಕೋಣೆಯೊಳಗೆ ಬಿದ್ದಿತ್ತು. ನಂತರ ನಾವು ಮತ್ತಷ್ಟು ಅನಾಹುತ ಸಂಭವಿಸಬಹುದೆಂದು ಭಯಗೊಂಡು ಪಕ್ಕದ ಮನೆಯಲ್ಲಿ ಆಶ್ರಯ ಪಡೆದೆವು ಎಂದು ಜಾನಕಿ ಹೇಳಿದರು.

ಇನ್ನೂ 2 ಬಂಡೆಗಳಿವೆ

ಪಕ್ಕದಲ್ಲೇ ಇರುವ ಬೆಟ್ಟದಿಂದ ಬಂಡೆ ಉರುಳಿದ್ದು, ಇನ್ನೂ ಎರಡು ಬಂಡೆಗಳು ಬೀಳುವ ಹಂತದಲ್ಲಿವೆ. ಈ ಭಾಗದಲ್ಲಿ ಹತ್ತಾರು ಮನೆಗಳಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ವಾರ್ಡ್ ಸಂಖ್ಯೆ 3ರ ಗ್ರಾ.ಪಂ ಸದಸ್ಯೆ ಜಯಶ್ರೀ ಸ್ಥಳ ಪರಿಶೀಲನೆ ನಡೆಸಿದರು.

ಹಿಂದಿನ ದಿನ ಭೂಮಿ ಕಂಪಿಸಿತ್ತು

ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಜೂ.25ರಂದು ಬೆಳಗ್ಗೆ ಭೂಮಿ ಕಂಪಿಸಿತ್ತು. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.3ರಷ್ಟಿತ್ತು.

ಈ ಭೂಕಂಪನದ ಪರಿಣಾಮದಿಂದ ಬಂಡೆ ಉರುಳಿರಬಹುದೆಂದು ಕರಿಕೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿದ ನಂತರವಷ್ಟೇ ಸತ್ಯಾಂಶ ಹೊರ ಬೀಳಲಿದೆ.

ಹಿರಿಯ ಭೂವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಆತಂಕ ದೂರ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)