varthabharthi


ಸಂಪಾದಕೀಯ

ತಿದ್ದೋಲೆ ಪ್ರಹಸನ: ‘ನಕಲಿ ಐಐಟಿ ಪ್ರೊಫೆಸರ್’ನ ಮರು ಪರಿಷ್ಕರಣೆಯಾಗಲಿ

ವಾರ್ತಾ ಭಾರತಿ : 29 Jun, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕ ವಿವಾದ ಹೊಸ ತಿರುವನ್ನು ಪಡೆದುಕೊಂಡಿದೆ. ಪರಿಷ್ಕರಿಸಿದ ಪಠ್ಯವನ್ನು ಮರು ಪರಿಷ್ಕರಿಸುವ ಹೊಸತೊಂದು ಪ್ರಹಸನಕ್ಕೆ ಸರಕಾರ ಮುಂದಾಗಿದೆ. ‘ಪರಿಷ್ಕರಣೆ’ಯೇ ಮರು ಪರಿಷ್ಕರಣೆಗೆ ಅರ್ಹವಾಗಿದೆ ಎಂದು ಸರಕಾರ ಒಪ್ಪಿಕೊಂಡಿದೆಯಾದರೆ, ಆ ‘ಪರಿಷ್ಕರಣೆ’ಯ ಅಗತ್ಯವಾದರೂ ಏನಿತ್ತು? ಯಾವುದೇ ಪಠ್ಯ ಪುಸ್ತಕ ಕಾಲ ಕಾಲಕ್ಕೆ ಪರಿಷ್ಕರಣೆಗೆ ಒಳಗಾಗಲೇ ಬೇಕು. ಇಲ್ಲವಾದರೆ ನಮ್ಮ ಶಿಕ್ಷಣ, ಕಲಿಕೆ ನಿಂತ ನೀರಾಗುತ್ತದೆ. ಬದುಕು ಹೊಸ ಹೊಸ ವಿಚಾರಗಳು, ಸಂಶೋಧನೆಗಳಿಗೆ ತೆರೆದುಕೊಂಡಂತೆ ಅದಕ್ಕೆ ಪೂರಕವಾಗಿ ಪುಸ್ತಕಗಳೊಳಗಿರುವ ವಿಚಾರಗಳಿಗೆ ತಿದ್ದುಪಡಿ ಮಾಡಲೇಬೇಕಾಗುತ್ತದೆ. ಪಠ್ಯ ಪುಸ್ತಕಗಳನ್ನು ಆಯಾ ಕಾಲದ ಅಗತ್ಯಕ್ಕೆ ತಕ್ಕ ಹಾಗೆ, ಆಯಾ ತಜ್ಞರು ತಯಾರಿಸುವುದರಿಂದ, ಕಾಲ ಬದಲಾದಂತೆಯೇ ಪಠ್ಯದೊಳಗೆ ಬದಲಾವಣೆ ಆಗುತ್ತಲೇ ಇರುತ್ತದೆ. ಆದರೆ ಪರಿಷ್ಕರಣೆ ಮತ್ತು ತಿರುಚುವಿಕೆ ಒಂದೇ ಅಲ್ಲ. ಇತಿಹಾಸ, ಸಂಶೋಧನೆ, ವಿಜ್ಞಾನ ಇವುಗಳನ್ನು ಅಧಿಕೃತ ತಜ್ಞ ವಿದ್ವಾಂಸರ ಕೃತಿಗಳ ಆಧಾರದಲ್ಲಿ ಪಠ್ಯಗಳಿಗೆ ಸೇರ್ಪಡಿಸುತ್ತಾ ಹೋಗುತ್ತೇವೆ. ಈ ಕೃತಿಗಳು ರಾಷ್ಟ್ರಮಟ್ಟದಲ್ಲಿ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆಯನ್ನು ಪಡೆದಿರಬೇಕು. ಯಾವುದೋ ಒಂದು ಸಂಘಟನೆ ತಮ್ಮ ರಾಜಕೀಯ ಅಜೆಂಡಾಗಳಿಗಾಗಿ ಮಾನ್ಯಗೊಳ್ಳದ ಕೃತಕ ಇತಿಹಾಸವನ್ನು ಪರಿಷ್ಕರಣೆಯ ಹೆಸರಿನಲ್ಲಿ ತುರುಕಿಸುವುದಕ್ಕಾಗುವುದಿಲ್ಲ. ಹಾಗೆ ಸೇರಿಸಿದರೆ ಅದು ಪರಿಷ್ಕರಣೆಯಲ್ಲ ‘ತಿರುಚುವಿಕೆ’. ವಿದ್ಯಾರ್ಥಿಗಳ ಆಲೋಚನೆ, ಚಿಂತನೆಗಳನ್ನು ಆಧುನಿಕತೆಗೆ ಪೂರಕವಾಗಿ ಬೆಳೆಸುವುದರ ಬದಲು, ಮನುವಾದದ ಕಾಲಕ್ಕೆ ತಿರುಗಿಸಲು ಯತ್ನಿಸುವ ಮೂಲಕ ಸರಕಾರ ಇಡೀ ಶಿಕ್ಷಣ ವ್ಯವಸ್ಥೆಯ ಬೆನ್ನಿಗೆ ಚೂರಿ ಹಾಕಿದೆ. ಇದೀಗ ಬೆನ್ನಿಗೆ ಹಾಕಿದ ಚೂರಿಯನ್ನು ವಾಪಸ್ ತೆಗೆದು, ಹೊಟ್ಟೆಗೆ ಹಾಕುವ ಭರವಸೆ ನೀಡಿದೆ. ಇದಕ್ಕೆ ‘ಚಕ್ರತೀರ್ಥ ಸಮಿತಿ ಕೈ ಬಿಟ್ಟ, ತಿದ್ದಿದ ಮರು ಪರಿಷ್ಕರಣೆಗೆ ತಿದ್ದೋಲೆ’ ಎಂದು ಕರೆದಿದೆ. ವ್ಯಾಪಕ ಪ್ರತಿಭಟನೆಗಳಿಂದ ಸರಕಾರ ಅನುಭವಿಸುತ್ತಿರುವ ಮುಜುಗರವನ್ನು ತಪ್ಪಿಸಲು ಈ ‘ತೇಪೆ’ ಕಾರ್ಯಕ್ರಮಕ್ಕೆ ಸರಕಾರ ಮುಂದಾಗಿದೆ.

ಸುಳ್ಳು ಶಿಕ್ಷಣ ಮಾಹಿತಿಯನ್ನು ನೀಡಿ ಶಿಕ್ಷಣ ಸಚಿವರನ್ನು ವಂಚಿಸಿ, ಪರಿಷ್ಕರಣಾ ಸಮಿತಿಯ ನೇತೃತ್ವ ವಹಿಸಿದ ರೋಹಿತ್ ಚಕ್ರತೀರ್ಥ ಎಂಬ ಫೇಸ್‌ಬುಕ್ ಟ್ರೋಲರ್‌ನನ್ನು ವಜಾಗೊಳಿಸಿ ಆತನ ಮೇಲೆ ಎಫ್‌ಐಆರ್ ದಾಖಲಿಸುವ ಮೂಲಕ ಸರಕಾರ ತಾನು ಮಾಡಿರುವ ಮೊದಲ ತಪ್ಪನ್ನು ತಿದ್ದುಪಡಿ ಮಾಡಬೇಕಾಗುತ್ತದೆ. ಯಾಕೆಂದರೆ, ಶಿಕ್ಷಣ ಸಚಿವರೇ ವಿಧಾನಸಭಾ ಸದಸ್ಯರಿಗೆ ಹಾಗೂ ಮಾಧ್ಯಮಗಳಿಗೆ ‘ರೋಹಿತ್ ಚಕ್ರತೀರ್ಥ ಐಐಟಿ ಪ್ರೊಫೆಸರ್’ ಎಂದು ಸ್ಪಷ್ಟೀಕರಣ ನೀಡಿದ್ದರು. ಅಂದರೆ ಆತ ಐಐಟಿ ಪ್ರೊಫೆಸರ್ ಎಂದು ಭಾವಿಸಿ ಶಿಕ್ಷಣ ಸಚಿವರು ಈ ಮಹತ್ವದ ಹೊಣೆಗಾರಿಕೆಯನ್ನು ರೋಹಿತ್ ಚಕ್ರತೀರ್ಥನಿಗೆ ವಹಿಸಿದ್ದಾರೆ ಎಂದಾಯಿತು. ಇವರು ಹೇಳಿಕೆ ನೀಡಿದ ಮರುದಿನವೇ ರೋಹಿತ್ ಚಕ್ರತೀರ್ಥ ಎಂಬಾತ ‘‘ನಾನು ಐಐಟಿ ಪ್ರೊಫೆಸರ್ ಅಲ್ಲ’ ಎಂದೂ ಸ್ಪಷ್ಟೀಕರಣ ನೀಡಿದ್ದಾನೆ. ಈತನನ್ನು ‘ಐಐಟಿ ಪೊಫೆಸರ್’ ಎಂದು ಸಚಿವರಿಗೆ ತಪ್ಪು ಮಾಹಿತಿ ನೀಡಿ ನೇಮಕ ಮಾಡಲು ಕಾರಣರಾದ ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇದುವೇ ಮರು ಪರಿಷ್ಕರಣೆಯಲ್ಲಿ ಮೊತ್ತ ಮೊದಲು ನಡೆಯಬೇಕಾದ ತಿದ್ದುಪಡಿ. ಇದು ನಡೆಯದೆ ಪಠ್ಯದೊಳಗೆ ಯಾವುದೇ ಮರು ಪರಿಷ್ಕರಣೆ ನಡೆದರೂ ಅದು ಮಾನ್ಯತೆಯನ್ನು ಪಡೆಯುವುದಿಲ್ಲ. ಯಾಕೆಂದರೆ, ಸಮಿತಿಯ ನೇತೃತ್ವ ವಹಿಸಿದವನೇ ‘ನಕಲಿ’ ಎಂದಾದ ಮೇಲೆ ಆತನ ನೇತೃತ್ವದಲ್ಲಿ ನಡೆದ ಯಾವುದೇ ಪರಿಷ್ಕರಣೆಯನ್ನು ಅಧಿಕೃತವಾಗಿ ಮಾನ್ಯ ಮಾಡುವುದು ಶಿಕ್ಷಣ ವ್ಯವಸ್ಥೆಯ ಅಣಕವೇ ಸರಿ. ಆದುದರಿಂದ ಮೊದಲು ಈ ‘ನಕಲಿ ಗಿರಾಕಿ’ಯನ್ನು ಹೊರ ಹಾಕಿ, ಆತನನ್ನು ಸಮಿತಿಯೊಳಗೆ ತುರುಕಿದವರು ಯಾರು? ಇದರ ಹಿಂದಿರುವ ಸಂಚುಗಳೇನು? ಎನ್ನುವುದನ್ನು ತನಿಖೆ ನಡೆಸುವುದು ಮುಖ್ಯಮಂತ್ರಿಯ ಜವಾಬ್ದಾರಿಯಾಗಿದೆ. ಇದೇ ಸಂದರ್ಭದಲ್ಲಿ, ಹೊಸತೊಂದು ಸಮಿತಿಯನ್ನು ರಚಿಸಿ ಹೊಸದಾಗಿಯೇ ಪರಿಷ್ಕರಣೆ ನಡೆಸುವುದು ಸರಿಯಾದ ಕ್ರಮವಾಗಿದೆ.

ಮೊತ್ತ ಮೊದಲಾಗಿ ಈ ಹಿಂದಿನ ಪಠ್ಯಗಳಿಗೆ ತುರ್ತು ಪರಿಷ್ಕರಣೆಯ ಅಗತ್ಯವಿದೆಯೆ? ಎನ್ನುವುದನ್ನು ಸರಕಾರ ಪ್ರಾಮಾಣಿಕವಾಗಿ ಚಿಂತಿಸಬೇಕಾಗಿದೆ. ಕೊರೋನೋತ್ತರ ಸಂಕಟಗಳ ದಿನಗಳಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯೇ ಕುಸಿದು ಬಿದ್ದಿರುವಾಗ ಅದನ್ನು ಮೇಲೆತ್ತಿ ನಿಲ್ಲಿಸುವ ಬಹುದೊಡ್ಡ ಹೊಣೆಗಾರಿಕೆ ಸರಕಾರದ ಮೇಲಿದೆ. ಅದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಶಿಕ್ಷಣ ಇಲಾಖೆಗಳಿಗೆ ಅನುದಾನವನ್ನು ನೀಡಬೇಕಾಗಿದೆ. ಶಾಲೆಗಳಿಂದ ಹೊರ ದಬ್ಬಲ್ಪಟ್ಟಿರುವ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತರುವ ಹೊಣೆಗಾರಿಕೆಗಳಿವೆ. ಸರಕಾರಿ ಶಾಲೆಗಳಿಗೆ ಪುನರುಜ್ಜೀವ ನೀಡುವ ಜವಾಬ್ದಾರಿಯಿದೆ. ಈಗಾಗಲೇ ಆನ್‌ಲೈನ್ ತರಗತಿಗಳ ಕಾರಣದಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೀರಾ ಹಿಂದುಳಿದಿದ್ದಾರೆ. ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳೇ ಮುಚ್ಚಲ್ಪಟ್ಟಿವೆ. ಸಾವಿರಾರು ಶಿಕ್ಷಕರು ನಿರುದ್ಯೋಗಿಗಳಾಗಿ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಎನ್ನುವ ಅನಗತ್ಯ ಹೊರೆಯನ್ನು ಹೊತ್ತುಕೊಳ್ಳುವ ಅಗತ್ಯವಿದೆಯೇ ಎನ್ನುವುದರ ಬಗ್ಗೆ ಸರಕಾರ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಇಷ್ಟಾದರೂ ಪರಿಷ್ಕರಣೆ ಅನಿವಾರ್ಯ ಎಂದಾದರೆ, ಆ ಪರಿಷ್ಕರಣೆಯನ್ನು ನಡೆಸುವುದಕ್ಕೆ ಅರ್ಹರಾಗಿರುವ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಸರಕಾರದ ಕರ್ತವ್ಯವಾಗಿದೆ. ಅಂತಹ ಅರ್ಹ ತಜ್ಞರು, ವಿದ್ವಾಂಸರ ಕೊರತೆ ಕರ್ನಾಟಕದಲ್ಲಿ ಖಂಡಿತ ಇಲ್ಲ. ಈ ಹಿಂದೆ ಪಠ್ಯವನ್ನು ರಚಿಸಿದ ಬರಗೂರು ನೇತೃತ್ವದ ತಂಡವನ್ನು ಈ ನಿಟ್ಟಿನಲ್ಲಿ ಮಾನದಂಡವಾಗಿ ಸರಕಾರ ಇಟ್ಟುಕೊಳ್ಳಬಹುದು. ಬರಗೂರರನ್ನು ಎಡಪಂಥೀಯರು ಎಂದು ಸರಕಾರ ಆರೋಪಿಸುತ್ತಿದೆ. ಹಾಗೆಯೇ ಇಟ್ಟುಕೊಳ್ಳೋಣ. ಆದರೆ ಬರಗೂರು ಅವರ ಶೈಕ್ಷಣಿಕ ಅರ್ಹತೆ, ಅವರು ಕರ್ನಾಟಕದಲ್ಲಿ ನಿರ್ವಹಿಸಿರುವ ವಿವಿಧ ಹುದ್ದೆಗಳು, ಅವರ ಕಾರ್ಯವ್ಯಾಪ್ತಿ, ಅವರ ಹಿರಿತನ ಇತ್ಯಾದಿಗಳನ್ನು ಯಾವ ಕಾರಣಕ್ಕೂ ನಾವು ಅಲ್ಲಗಳೆಯಲಾಗುವುದಿಲ್ಲ. ಇದು ಕೇವಲ ಬರಗೂರು ಅವರಿಗಷ್ಟೇ ಅನ್ವಯವಾಗುವುದಿಲ್ಲ. ಅವರ ಜೊತೆಗಿರುವ ಇಡೀ ತಂಡ ಇಂತಹದೇ ಶೈಕ್ಷಣಿಕ ಅರ್ಹತೆ ಮತ್ತು ಹಿನ್ನೆಲೆಯನ್ನು ಹೊಂದಿದೆ.

ಸರಕಾರ ಹೊಸದಾಗಿ ಪರಿಷ್ಕರಣೆಗೆ ಒಳಪಡಿಸಲು ಸಮಿತಿಯನ್ನು ನೇಮಕಮಾಡುವುದಾದರೆ ಕನಿಷ್ಠ ಈ ಶೈಕ್ಷಣಿಕ ಅರ್ಹತೆ, ಸಾಮಾಜಿಕ ಅನುಭವಗಳು ಮತ್ತು ಹಿರಿತನವನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಅತ್ಯಗತ್ಯ. ಬಲಪಂಥೀಯರಲ್ಲೇ ಈ ಶೈಕ್ಷಣಿಕ ಅರ್ಹತೆ ಮತ್ತು ಹಿರಿತನಗಳುಳ್ಳ ಹಲವು ವಿದ್ವಾಂಸರಿದ್ದಾರೆ. ಅವರನ್ನಾದರೂ ಪರಿಗಣಿಸುವ ಅವಕಾಶ ಸರಕಾರಕ್ಕೆ ಧಾರಾಳವಾಗಿ ಇದೆ. ಬಲಪಂಥೀಯ ಒಲವುಳ್ಳ ಕನ್ನಡದ ಹಿರಿಯ ವಿದ್ವಾಂಸ, ಸಂಶೋಧಕ ತಾಳ್ತಜೆ ವಸಂತ ಕುಮಾರ್, ಪ್ರಭಾಕರ ಜೋಷಿ ಇಂತಹ ಹಲವು ಹಿರಿಯರು ಕರಾವಳಿಯಲ್ಲೇ ಇದ್ದಾರೆ. ರಾಜ್ಯ ಮಟ್ಟದಲ್ಲಿ ಬಲಪಂಥೀಯ ಒಲವುಳ್ಳ ಹಲವು ಹಿರಿಯ ವಿದ್ವಾಂಸರು, ಶಿಕ್ಷಣ ತಜ್ಞರು ಹಲವರಿದ್ದಾರೆ. ಹಾಗೆಯೇ ಅಗತ್ಯಬಿದ್ದಾಗ ಬಲಪಂಥ, ಕೆಲವೊಮ್ಮೆ ಎಡಪಂಥ ಎಂದು ಪಂಥಗಳ ನಡುವೆ ಉಯ್ಯೆಲೆಯಾಡುವ, ಸರಕಾರದ ಕೃಪೆಗಾಗಿ ಯಾವ ಪಂಥಕ್ಕೆ ಬೇಕಾದರೂ ತಲೆ ಕೊಡುವ ಹಿರಿಯ ತಜ್ಞರು, ವಿದ್ವಾಂಸರು, ನಿವೃತ್ತ ಎಚ್‌ಒಡಿಗಳು ಇದ್ದಾರೆ. ಅವರಲ್ಲೇ ಒಂದು ಹೆಸರನ್ನು ಆಯ್ಕೆ ಮಾಡಿ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ಶಿಕ್ಷಣದ ಘನತೆಯನ್ನು ಆ ಮಟ್ಟಿಗಾದರೂ ಉಳಿಸಲು ಸರಕಾರ ಮುಂದಾಗಬೇಕಾಗಿದೆ. ಇಲ್ಲದೇ ಇದ್ದರೆ, ಮುಂದೊಂದು ದಿನ ರೋಹಿತ್ ಚಕ್ರತೀರ್ಥ ಸಮಿತಿ ಆಯ್ಕೆ ಮಾಡಿದ ಅಡುಗೂಲಜ್ಜಿ ಪಠ್ಯಗಳ ದೆಸೆಯಿಂದಾಗಿಯೇ ರಾಜ್ಯ ಶಿಕ್ಷಣದಿಂದ ವಿದ್ಯಾರ್ಥಿಗಳು ದೂರವಾಗಲಿದ್ದಾರೆ. ಕೇಂದ್ರದ ಅಥವಾ ವಿದೇಶಿ ವಿವಿಗಳ ನಿಯಂತ್ರಣದಲ್ಲಿರುವ ಪಠ್ಯಗಳಿಗೆ ಅನಿವಾರ್ಯವಾಗಿ ಹೊರಳುವ ಸಾಧ್ಯತೆಗಳಿವೆ. ಈಗಾಗಲೇ ಇಂಗ್ಲಿಷ್ ಮೀಡಿಯಂ ದೆಸೆಯಿಂದ ನೆಲೆ ಕಳೆದುಕೊಂಡಿರುವ ನಮ್ಮ ಶಾಲೆಗಳು, ಕಳಪೆ ಪಠ್ಯಗಳ ಕಾರಣಕ್ಕಾಗಿ ಇನ್ನಷ್ಟು ಹಿನ್ನಡೆ ಅನುಭವಿಸುವುದಕ್ಕೆ ಸರಕಾರವೇ ಕಾರಣವಾಗಬಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)