ಕರ್ನಾಟಕ
40 ಪರ್ಸೆಂಟ್ ಕಮಿಷನ್ ಪ್ರಕರಣದ ಬಗ್ಗೆ ಗೃಹ ಇಲಾಖೆ ತನಿಖೆ ಹಿಂದೆ ಷಡ್ಯಂತ್ರ: ಕಾಂಗ್ರೆಸ್ ಆರೋಪ

ಬೆಂಗಳೂರು, ಜೂ.29: ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಹಿಂದೆ ಷಡ್ಯಂತ್ರವಿದೆ. ಗೃಹ ಇಲಾಖೆ ಅಧಿಕಾರಿಗಳ ನಡೆ ದೂರು ನೀಡಿರುವ ಗುತ್ತಿಗೆದಾರರ ಸಂಘವನ್ನು ಬೆದರಿಸುವ ಹಾಗೂ ಭ್ರಷ್ಟ ಸಚಿವರನ್ನು ರಕ್ಷಣೆ ಮಾಡುವ ಪ್ರಯತ್ನದಂತೆ ಭಾಸವಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 40 ಪರ್ಸೆಂಟ್ ಕಮಿಷನ್ ವಿಚಾರವಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಮಂತ್ರಿಯ ಕಾರ್ಯಾಲಯಕ್ಕೆ ಪತ್ರ ಬರೆದು ಸುಮಾರು ಒಂದು ವರ್ಷ ಪೂರ್ಣಗೊಂಡಿದ್ದು, ಈಗ ಅದರ ವಿಚಾರಣೆಗೆ ಮುಂದಾಗಿದ್ದಾರೆ ಎಂದರು.
ಈ ಪ್ರಕರಣದ ವಿಚಾರಣೆ ಮಾಡಲು ಬಂದ ಅಧಿಕಾರಿಗಳು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ದಾಖಲೆ ಸಲ್ಲಿಸುವಂತೆ ಕೇವಲ ಮೌಖಿಕ ರೂಪದಲ್ಲಿ ಸೂಚನೆ ನೀಡಿರುವುದು ಏಕೆ? ಲಿಖಿತ ರೂಪದಲ್ಲಿ ನೋಟಿಸ್ ಅನ್ನು ನೀಡಿಲ್ಲ ಏಕೆ? ಕೆಂಪಣ್ಣನವರು ದೂರು ನೀಡಿದ್ದು, ಪ್ರಧಾನಿ ಕಾರ್ಯಾಲಯಕ್ಕೆ, ಆದರೆ ಗೃಹ ಇಲಾಖೆ ತನಿಖೆಗೆ ಮುಂದಾಗಿದೆ. ಪ್ರಧಾನಿ ಕಾರ್ಯಾಲಯದಿಂದ ತನಿಖೆ ನಡೆಸುವಂತೆ ಗೃಹ ಸಚಿವಾಲಯಕ್ಕೆ ಸೂಚನೆ ರವಾನೆಯಾಗಿದೆಯೇ? ಈ ಬಗ್ಗೆ ಪ್ರಧಾನಿ ಕಾರ್ಯಾಲಯವಾಗಲಿ, ಗೃಹ ಇಲಾಖೆಯಾಗಲಿ ಯಾಕೆ ಸ್ಪಷ್ಟನೆ ನೀಡಿಲ್ಲ? ಎಂದು ಅವರು ಪ್ರಶ್ನಿಸಿದರು.
ಗೃಹ ಸಚಿವಾಲಯದ ಅಧಿಕಾರಿಗಳು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರನ್ನು ಸಂಪರ್ಕಿಸಿ ಈ ಪ್ರಕರಣದ ಮಾಹಿತಿ ಕೋರಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ನಂತರ, ಗೃಹ ಇಲಾಖೆ ಅಧಿಕಾರಿಗಳು ಮಾಧ್ಯಮಗಳಿಗೆ ವಿಚಾರ ತಿಳಿದಿದೆ ನಾವು ಮತ್ತೆ ಬರುವುದಾಗಿ ಹೇಳಿ ಹೊರಟಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗೃಹ ಇಲಾಖೆ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಯದಂತೆ ಈ ಪ್ರಕರಣದ ಸಾಕ್ಷ್ಯಗಳನ್ನು ಕಲೆಹಾಕಲು ಪ್ರಯತ್ನಿಸಿದ್ದು ಯಾಕೆ? ಎಂದು ರಮೇಶ್ ಬಾಬು ಪ್ರಶ್ನಿಸಿದರು.
ಕೇಂದ್ರದ ಯಾವುದೇ ಇಲಾಖೆ ರಾಜ್ಯದ ಪ್ರಕರಣದಲ್ಲಿ ತನಿಖೆ ಮಾಡಬೇಕಾದರೆ, ಅಥವಾ ಮಾಹಿತಿ ಪಡೆಯಬೇಕಾದರೆ ಲಿಖಿತ ರೂಪದಲ್ಲಿ ನೋಟಿಸ್ ನೀಡಬೇಕು. ಆದರೆ ಸಂಘಕ್ಕೆ ಲಿಖಿತ ರೂಪದಲ್ಲಿ ನೋಟಿಸ್ ಯಾಕೆ ನೀಡಿಲ್ಲ? ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದು, ಗುತ್ತಿಗೆದಾರರ ಸಂಘಕ್ಕೆ ಪ್ರಧಾನಿ ಕಾರ್ಯಾಲಯದಿಂದ ಯಾವುದೇ ಸೂಚನೆ ಬಂದಿಲ್ಲ. ಗುತ್ತಿಗೆದಾರರ ಸಂಘವನ್ನು ಹೆದರಿಸಲು ಪ್ರಯತ್ನಿಸುತ್ತಿದೆಯೇ ಅಥವಾ ಬೇರೆ ಯಾವುದಾದರು ಸಂದೇಶವನ್ನು ರವಾನಿಸಲು ಗೃಹ ಇಲಾಖೆ ಪ್ರಯತ್ನಿಸುತ್ತಿದೆಯೇ ಎಂಬುದನ್ನು ಗೃಹ ಇಲಾಖೆಯೆ ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದರು.
ಗೃಹ ಇಲಾಖೆ ಅಡಿಯಲ್ಲಿ ಬರುವ ಸಿಬಿಐ, ಈಡಿ ಅಥವಾ ಇತರೆ ತನಿಖಾ ಸಂಸ್ಥೆಗಳನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಇಂದು ಗುತ್ತಿಗೆದಾರರ ಸಂಘಕ್ಕೆ ಮೌಖಿಕವಾಗಿ ಸೂಚನೆ ನೀಡಿ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ನಂತರ ಮಾಧ್ಯಮಗಳಿಗೆ ಹೆದರಿ ಪಲಾಯನ ಮಾಡಲಾಗಿದೆ ಎಂದು ರಮೇಶ್ ಬಾಬು ಟೀಕಿಸಿದರು.
ಕೆಂಪಣ್ಣನವರು ಕಳೆದ ವರ್ಷ ಜು.6ರಂದು ಪ್ರಧಾನಮಂತ್ರಿಗೆ ಪತ್ರ ಬರೆದು 40 ಪರ್ಸೆಂಟ್ ಕಮಿಷನ್ ವಿಚಾರದ ಕುರಿತು ದೂರು ನೀಡುತ್ತಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ವಿವರಿಸುತ್ತಾರೆ. ಪ್ರಧಾನಮಂತ್ರಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಭ್ರಷ್ಟಾಚಾರ ತಡೆಯಬೇಕು, ರಾಜ್ಯದ 1 ಲಕ್ಷ ಗುತ್ತಿಗೆದಾರರಿಗೆ ನ್ಯಾಯ ಒದಗಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ ಎಂದು ಅವರು ಹೇಳಿದರು.
ನಂತರ ಮುಖ್ಯಮಂತ್ರಿ ಬೊಮ್ಮಾಯಿ ಅವರು ದೂರಿನನ್ವಯ ಮುಖ್ಯ ಕಾರ್ಯದರ್ಶಿಗೆ ಕಳೆದ ವರ್ಷ ನ.25ರಂದು ಪತ್ರ ಬರೆದು, ಇಬ್ಬರು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವುದು, 50 ಕೋಟಿಗೂ ಮೇಲ್ಪಟ್ಟ ಕಾಮಗಾರಿಗಳನ್ನು ನೀಡಲು ಮಾನದಂಡ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ನಂತರ ನಡೆದಿರುವ ಎಲ್ಲ ಕಾಮಗಾರಿಗಳ ಪರಿಶೀಲಿಸಿ ಅಕ್ರಮ ನಡೆದರೆ ತನಿಖೆ ನಡೆಸಬೇಕು ಎಂದು ಸೂಚಿಸಿದ್ದಾರೆ ಎಂದು ರಮೇಶ್ ಬಾಬು ತಿಳಿಸಿದರು.
ನಂತರ ಮುಖ್ಯಮಂತ್ರಿಗಳು ಗುತ್ತಿಗೆದಾರರ ಸಂಘದ ಜತೆ ಯಾವುದೇ ಮಾತುಕತೆ ನಡೆಸುವುದಿಲ್ಲ. ನಂತರ ರಾಜಕೀಯವಾಗಿ ಚರ್ಚೆ, ಟೀಕೆ ಎದುರಾದ ನಂತರ ಎಪ್ರಿಲ್‍ನಲ್ಲಿ ಗುತ್ತಿಗೆದಾರರ ಸಂಘದ ಜತೆ ಸಭೆ ಮಾಡುತ್ತಾರೆ. ಆಗ ಮುಖ್ಯಮಂತ್ರಿಗಳಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಕೆಯಾಗುತ್ತದೆ ಎಂದು ಅವರು ವಿವರಿಸಿದರು.
ಪ್ರಧಾನಮಂತ್ರಿ ಬೆಂಗಳೂರು ಹಾಗೂ ಮೈಸೂರು ಕಾರ್ಯಕ್ರಮಗಳಿಗಾಗಿ ರಾಜ್ಯ ಪ್ರವಾಸ ಕೈಗೊಂಡಿದ್ದರು. ಬೆಂಗಳೂರಿನಲ್ಲಿ ಅವರ ಭೇಟಿಗೆ ನಗರ ಶೃಂಗಾರಕ್ಕೆ 24 ಕೋಟಿ ವೆಚ್ಚ ಮಾಡಲಾಗಿದೆ ಎಂದು ರಾಜ್ಯ ಸರಕಾರವೇ ಮಾಹಿತಿ ನೀಡಿದೆ. ಒಬ್ಬ ಗುತ್ತಿಗೆದಾರರಿಗೆ 11.5 ಕೋಟಿ ಪಾವತಿಸಿ ಕಳಪೆ ಕಾಮಗಾರಿ ನಡೆದಿದೆ. ಈ ವಿಚಾರವಾಗಿ ಪ್ರಧಾನಿ ಕಾರ್ಯಾಲಯ ಸ್ಪಷ್ಟನೆ ಕೇಳಿದ ನಂತರ ಅವರಿಗೆ 3 ಲಕ್ಷ ರೂ.ದಂಡವನ್ನು ವಿಧಿಸಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂದು ರಮೇಶ್ ಬಾಬು ದೂರಿದರು.
ಗುತ್ತಿಗೆದಾರರ ಸಂಘ ಮಾಡಿದ ಆರೋಪದ ಪೈಕಿ, ಕೆಆರ್‍ಡಿಎಲ್ ಸಂಸ್ಥೆ ಮೂಲಕ ರಾಜ್ಯದ ನಿರ್ಮಿತಿ ಕೇಂದ್ರದ ಮೂಲಕ ಸ್ಥಳೀಯ ಶಾಸಕರು ಟೆಂಡರ್ ರಹಿತವಾಗಿ ಕಾಮಗಾರಿಗಳನ್ನು ತಮ್ಮ ಬಂಧುಗಳು ಹಾಗೂ ಬೇನಾಮಿ ಹೆಸರಲ್ಲಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆದರೂ ಇದ್ಯಾವುದರ ಮೇಲೆ ಒಂದೇ ಒಂದು ಪ್ರಕರಣದ ತನಿಖೆಯಾಗಿಲ್ಲ. ನಿರಾವರಿ ಇಲಾಖೆ, ಆರೋಗ್ಯ ಇಲಾಖೆ, ಲೋಕೋಪಯೋಗಿ ಇಲಾಖೆಗಳಲ್ಲಿ ಆಗಿರುವ ಅಕ್ರಮಗಳನ್ನು ಬಿಚ್ಚಿಟ್ಟಿದ್ದು, ಕೆಲವು ಸಚಿವರ ವಿರುದ್ಧವೂ ಆರೋಪ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಈಶ್ವರಪ್ಪ ಪ್ರಕರಣದಲ್ಲೂ ಬಿಜೆಪಿ ಕಾರ್ಯಕರ್ತ ದೂರು ನೀಡಿದ ನಂತರ ಆತನಿಗೆ ಹೆದರಿಸಿ ಆತ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣ ಮಾಡಲಾಯಿತು. ನಂತರ ಸಾರ್ವಜನಿಕ ಒತ್ತಾಯಕ್ಕೆ ಈಶ್ವರಪ್ಪ ರಾಜೀನಾಮೆ ಪಡೆಯಲಾಯಿತು. ಇದುವರೆಗೂ ಸಂತೋμï ಪಾಟೀಲ್ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ, ಆತ ಮಾಡಿದ ಕಾಮಗಾರಿಗೆ ಹಣ ಬಿಡುಗಡೆ ಮಾಡಿಲ್ಲ. ಇದು ರಾಜ್ಯ ಸರಕಾರ ತನ್ನ ವಿರುದ್ಧ ದೂರು ನೀಡುವವರನ್ನು ಹಣಿಯುವ ಪ್ರಯತ್ನಕ್ಕೆ ಸಾಕ್ಷಿಯಾಗಿದೆ ಎಂದು ರಮೇಶ್ ಬಾಬು ತಿಳಿಸಿದರು.
ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾದ ನಂತರ ಸರಕಾರದ ಮೇಲೆ ಬಿಟ್ ಕಾಯಿನ್, ಪಿಎಸ್‍ಐ ನೇಮಕಾತಿ, ನೀರಾವರಿ ಯೋಜನೆ, ಈಶ್ವರಪ್ಪನವರ 40 ಪರ್ಸೆಂಟ್ ಕಮಿಷನ್, ಬೇರೆ ಸಚಿವರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಇದ್ಯಾವುದರ ಮೇಲೂ ಸಮಗ್ರವಾದ ತನಿಖೆಯಾಗಿಲ್ಲ. ಪಿಎಸ್‍ಐ ಹಗರಣದಲ್ಲಿ ಸಣ್ಣ ಪುಟ್ಟ ಅಧಿಕಾರಿಗಳ ಬಂಧನವಾಗಿದೆಯೇ ಹೊರತು ದೊಡ್ಡವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳೀದರು.
ಕೆಂಪಣ್ಣ ಈ ವಿಚಾರವಾಗಿ ರಾಜ್ಯಪಾಲರಿಗೂ ದೂರು ನೀಡಿದ್ದು, ಅವರು ರಾಜಕಾರಣಕ್ಕೆ ಬರುವ ಮುನ್ನ ಗುತ್ತಿಗೆದಾರರಾಗಿ ಕೆಲಸ ಮಾಡಿದವರಾಗಿದ್ದು, ಅವರ ನೋವು ಅರ್ಥವಾಗುತ್ತದೆ. ಆದರೂ ಅವರು ತನಿಖೆಗೆ ಯಾಕೆ ಆದೇಶಿಸಿಲ್ಲ. ಅವರು ಬಿಜೆಪಿ ಒತ್ತಡಕ್ಕೆ ಮಣಿದಿದ್ದಾರಾ? ಎಂಬ ಪ್ರಶ್ನೆ ಮೂಡುತ್ತದೆ ಎಂದು ರಮೇಶ್ ಬಾಬು ತಿಳಿಸಿದರು.
ರಾಜ್ಯ ಗುತ್ತಿಗೆದಾರರ ಸಂಘದ ಆರೋಪದ ವಿಚಾರವಾಗಿ ರಾಜ್ಯ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡಿಸಬೇಕು. ಅಕ್ರಮದಲ್ಲಿ ಭಾಗಿಯಾಗಿರುವ ಸಚಿವರು ಹಾಗೂ ಅಧಿಕಾರಿಗಳ ಹೆಸರು ಬಹಿರಂಗವಾಗಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾನೂನು ವಿಭಾಗದ ಉಪಾಧ್ಯಕ್ಷ ದಿವಾಕರ್, ಮಾಧ್ಯಮ ವಿಭಾಗದ ಸಂಯೋಜಕರಾದ ರಾಮಚಂದ್ರಪ್ಪ, ಜಿ.ಸಿ.ರಾಜುಗೌಡ ಉಪಸ್ಥಿತರಿದ್ದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ