varthabharthi


ಸಂಪಾದಕೀಯ

ರಾಜಸ್ಥಾನದಲ್ಲಿ ಹೀಗೊಂದು ಪೈಶಾಚಿಕ, ಬರ್ಬರ ಕೃತ್ಯ!

ವಾರ್ತಾ ಭಾರತಿ : 30 Jun, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ರಾಜಸ್ಥಾನದಲ್ಲಿ ಮುಸ್ಲಿಮ್ ಹೆಸರಿನ ಇಬ್ಬರು, ಪ್ರವಾದಿ ನಿಂದನೆಯ ನೆಪವನ್ನು ಮುಂದಿಟ್ಟುಕೊಂಡು ವ್ಯಕ್ತಿಯೋರ್ವನನ್ನು ಅತ್ಯಂತ ಬರ್ಬರವಾಗಿ ಕೊಂದು ಹಾಕುವ ಮೂಲಕ ಪ್ರವಾದಿ ಮುಹಮ್ಮದರನ್ನು ಅತ್ಯಂತ ಕ್ರೂರವಾಗಿ ಅವಮಾನಿಸಿದ್ದಾರೆ. ದುಷ್ಕರ್ಮಿಗಳು ತಮ್ಮ ಈ ಕ್ರೌರ್ಯವನ್ನು ಬಳಿಕ ಸಂಭ್ರಮಿಸಿದ್ದಾರೆ. ಇಷ್ಟಕ್ಕೂ ಕೊಲೆಗೀಡಾಗಿರುವ ವ್ಯಕ್ತಿ ಮಾಡಿರುವ ಅಪರಾಧವೆಂದರೆ, ಇತ್ತೀಚೆಗೆ ಪ್ರವಾದಿಯನ್ನು ನಿಂದಿಸಿದ ಬಿಜೆಪಿಯ ನಾಯಕಿ, ನೂಪುರ್ ಶರ್ಮಾರನ್ನು ಬೆಂಬಲಿಸಿರುವುದು. ಆಕೆಯ ಕೃತ್ಯವನ್ನು ಸಮರ್ಥಿಸಿರುವುದು. ಆದರೆ ಕೊಲೆಗಾರರಿಬ್ಬರು ಅದಕ್ಕೆ ಪ್ರತಿಯಾಗಿ ಸೇಡನ್ನು ತೀರಿಸುವ ಭರದಲ್ಲಿ, ನೂಪುರ್ ಶರ್ಮಾ ಎಸಗಿದ್ದಕ್ಕಿಂತಲೂ ಭೀಕರ ಕೃತ್ಯವನ್ನು ಪ್ರವಾದಿಯ ವಿರುದ್ಧ ಎಸಗಿದ್ದಾರೆ. ನಾಳೆ ಇದೇ ನೂಪುರ್ ಶರ್ಮಾ ಒಂದು ಕ್ಷಮೆಯಾಚನೆಯೊಂದಿಗೆ ತನ್ನ ತಪ್ಪನ್ನು ತೊಳೆದುಕೊಳ್ಳಬಹುದು. ಆದರೆ, ನೂಪುರ್ ಶರ್ಮಾರ ಬೆಂಬಲಕ್ಕೆ ನಿಂತ ಒಂದೇ ಕಾರಣಕ್ಕಾಗಿ ಆತನನ್ನು ಬರ್ಬರವಾಗಿ ಕೊಂದ ದುಷ್ಕರ್ಮಿಗಳು ತಮ್ಮ ತಪ್ಪನ್ನು ತೊಳೆದುಕೊಳ್ಳುವುದು ಅಸಾಧ್ಯ.

ಇಲ್ಲಿ ಕೊಲೆಗೀಡಾದವರು ಮತ್ತು ಕೊಲೆಗೈದವರು ಜನಸಾಮಾನ್ಯರು. ಅವರಿಗೆ ಯಾವುದೇ ರಾಜಕೀಯ ಹಿನ್ನೆಲೆಯಿಲ್ಲ. ಕೊಲೆಯಾದವನಂತೂ ದ್ವೇಷ ರಾಜಕಾರಣ ರಾಜಕೀಯದ ನೇರ ಬಲಿಪಶು. ಇತ್ತೀಚೆಗೆ ನೂಪುರ್ ಶರ್ಮಾ ಎಸಗಿದ ಪ್ರವಾದಿ ನಿಂದನೆ ಕೃತ್ಯವನ್ನು ಜಗತ್ತು ತೀವ್ರವಾಗಿ ಖಂಡಿಸಿತ್ತು. ಭಾರತವೂ ಆ ಕೃತ್ಯಕ್ಕಾಗಿ ವಿಶ್ವದ ಮುಂದೆ ತನ್ನ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿತ್ತು. ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಹಲವು ಬಿಜೆಪಿ ಮುಖಂಡರು ಪ್ರಕರಣದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು.

ಇಷ್ಟಾದರೂ, ಆತ ನೂಪುರ್ ಶರ್ಮಾರನ್ನು ಬೆಂಬಲಿಸುವ ಮೂಲಕ ತನ್ನನ್ನು ತಾನು ಒಬ್ಬ ‘ಪ್ರಖರ ಹಿಂದೂ’ ಎಂದು ಪ್ರತಿಪಾದಿಸಲು ಮುಂದಾಗಿದ್ದ. ನಾವು ನಮ್ಮ ಧರ್ಮವನ್ನು ಎತ್ತಿ ಹಿಡಿಯುವುದಕ್ಕಾಗಿ ಇನ್ನೊಂದು ಧರ್ಮವನ್ನು ನಿಂದಿಸುವ ಅಥವಾ ಇನ್ನೊಂದು ಧರ್ಮದ ನಾಯಕರನ್ನು ಟೀಕಿಸುವ ಅಗತ್ಯವಿಲ್ಲ. ನಮ್ಮ ಧರ್ಮ ನಮಗೆ ಕಲಿಸಿಕೊಟ್ಟ ಜೀವನ ವೌಲ್ಯಗಳನ್ನು ಪಾಲಿಸಿದರೆ ನಾವು ನಮ್ಮ ಧರ್ಮವನ್ನು ಉಳಿಸಿದಂತೆಯೇ ಸರಿ. ಇದನ್ನು ಹೇಳಿಕೊಡಬೇಕಾದವರು ಧಾರ್ಮಿಕ ಮುಖಂಡರು. ದುರದೃಷ್ಟವಶಾತ್ ಇಂದು ಧರ್ಮವನ್ನು ಜನಸಾಮಾನ್ಯರಿಗೆ ರಾಜಕೀಯ ನಾಯಕರು ಹೇಳಿಕೊಡುತ್ತಿದ್ದಾರೆ. ತನ್ನ ಧರ್ಮದ ಪಾಲನೆ ಎಂದರೆ ಇನ್ನೊಂದು ಧರ್ಮವನ್ನು ದ್ವೇಷಿಸುವುದು ಎನ್ನುವುದನ್ನು ಅವರು ಈ ಮೂಲಕ ಕಲಿಸಿಕೊಡುತ್ತಿದ್ದಾರೆ. ಅವರ ಮೂಲ ಉದ್ದೇಶ ದ್ವೇಷವನ್ನು ಹರಡುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸುವುದೇ ಹೊರತು, ಧರ್ಮವನ್ನು ಹರಡಿ ದೇಶವನ್ನು ಉದ್ಧರಿಸುವುದು ಅಲ್ಲವೇ ಅಲ್ಲ. ಇಂತಹ ಧಾರ್ಮಿಕ ರಾಜಕೀಯದ ಬಲಿಪಶುವಾಗಿದ್ದ ಟೈಲರ್ ವೃತ್ತಿ ನಿರ್ವಹಿಸುತ್ತಿದ್ದ ವ್ಯಕ್ತಿ, ಪ್ರವಾದಿಯ ನಿಂದನೆ ಮಾಡಿದ ಕಾರಣಕ್ಕಾಗಿಯೇ ನೂಪುರ್ ಶರ್ಮಾ ಎಂಬಾಕೆಯ ಬೆಂಬಲಕ್ಕೆ ನಿಂತಿದ್ದ. ಬಹುಶಃ ಈ ವಿವಾದವಲ್ಲದೇ ಇದ್ದಿದ್ದರೆ ಈತನಿಗೆ ನೂಪುರ್ ಶರ್ಮಾ ಎಂಬಾಕೆಯ ಹೆಸರೂ ಗೊತ್ತಿರುತ್ತಿರಲಿಲ್ಲ. ತನ್ನ ಟೈಲರ್ ವೃತ್ತಿಯನ್ನು ನಿರ್ವಹಿಸಿಕೊಂಡು ಬದುಕು ನಡೆಸುತ್ತಾ ಬರುತ್ತಿದ್ದ ಒಬ್ಬ ಅಮಾಯಕನ ತಲೆಗೆ ಧಾರ್ಮಿಕ ರಾಜಕೀಯವನ್ನು ತುರುಕಿಸಿ, ಇನ್ನೊಂದು ಧರ್ಮವನ್ನು, ಅದರ ನಾಯಕನನ್ನು ನಿಂದಿಸುವುದು ತನ್ನ ಧರ್ಮದ ಉದ್ಧಾರದ ಭಾಗ ಎಂದು ಕಲಿಸಿದ ರಾಜಕೀಯ ನಾಯಕರು ಎಲ್ಲಕ್ಕೂ ಮೂಲ ಕಾರಣರು ಮತ್ತು ಇವರ ಕಾರಣದಿಂದಲೇ ಆತ ಪ್ರಾಣ ತೆತ್ತಿದ್ದಾನೆ. ಆದರೆ ಆತನ ಸಾವಿಗೆ ಪರೋಕ್ಷ ಕಾರಣವಾಗಿರುವ ನೂಪುರ್ ಶರ್ಮಾ ಎಂಬಾಕೆಯನ್ನು ಕನಿಷ್ಠ ಬಂಧಿಸುವ ಕಾರ್ಯವನ್ನೂ ನಮ್ಮ ವ್ಯವಸ್ಥೆ ಮಾಡಿಲ್ಲ. ಸಂವಿಧಾನದ ತಳಹದಿಯಲ್ಲಿ ರೂಪುಗೊಂಡ ನಮ್ಮ ವ್ಯವಸ್ಥೆಯ ದೌರ್ಬಲ್ಯವೇ, ಇಂದು ಒಬ್ಬ ಅಮಾಯಕನ ಬರ್ಬರ ಸಾವಿಗೆ ಕಾರಣವಾಗಿದೆ ಎನ್ನುವುದನ್ನು ನಾವೆಲ್ಲ ಮೊದಲು ಅರ್ಥ ಮಾಡಿಕೊಳ್ಳಬೇಕಾಗಿದೆ. ಪ್ರವಾದಿ ನಿಂದನೆಯ ನೆಪದಲ್ಲಿ ಒಬ್ಬ ವ್ಯಕ್ತಿಯನ್ನು ಕೊಂದಿರುವುದು ಎಷ್ಟರಮಟ್ಟಿಗೆ ಪೈಶಾಚಿಕವೋ, ಹಾಗೆಯೇ ಪ್ರಜಾಸತ್ತಾತ್ಮಕ ವ್ಯವಸ್ಥೆಯೊಳಗೆ ಇದ್ದು ಇಂತಹ ಪಿಶಾಚಿಗಳನ್ನು ಸಮಾಜದಲ್ಲಿ ಸೃಷ್ಟಿಸಿ ತಲೆಮರೆಸಿ ಕೂತಿರುವ ನೂಪುರ್ ಶರ್ಮಾರಂತಹ ವ್ಯಕ್ತಿಗಳನ್ನು ಸಹಿಸಿಕೊಳ್ಳುವುದು ಸಂವಿಧಾನದ ಉಳಿವಿನ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ.

ಪ್ರವಾದಿ ನಿಂದನೆಯನ್ನು ವಿರೋಧಿಸಿ ಒಬ್ಬನನ್ನು ಕೊಂದು, ಅದನ್ನು ಸಂಭ್ರಮಿಸುವಾತನ ಮನಸ್ಸಿನೊಳಗೆ ಪ್ರವಾದಿಯಾಗಲಿ, ಅವರು ಪ್ರತಿಪಾದಿಸಿದ ದೇವರಾಗಲಿ ಉಪಸ್ಥಿತಿಯಿರಲು ಸಾಧ್ಯವೂ ಇಲ್ಲ. ಈ ಇಬ್ಬರು ಕೊಲೆಗಡುಕರನ್ನು ಗಲ್ಲಿಗೇರಿಸುವ ಮುನ್ನ, ಈ ಕೊಲೆಗಡುಕರನ್ನು ಸೃಷ್ಟಿಸಿದ ಪಾತಕ ಮನಸ್ಸುಗಳನ್ನು ಕಂಡು ಹಿಡಿಯುವ ಪ್ರಯತ್ನ ನಡೆಯಲೇ ಬೇಕು. ನಿಜಕ್ಕೂ ಇದು ಇವರೇ ಎಸಗಿದ ಕೃತ್ಯವೋ, ಇವರ ಮೂಲಕ ಇನ್ಯಾವುದೋ ರಾಜಕೀಯ ಅಥವಾ ಇನ್ನಿತರ ಧಾರ್ಮಿಕ ಸಂಘಟನೆಗಳು ಎಸಗಿದ ಕೃತ್ಯವೋ ಎನ್ನುವುದು ತನಿಖೆಯಿಂದ ಹೊರ ಬರಬೇಕಾಗಿದೆ. ಮುಖ್ಯವಾಗಿ ಈ ಇಬ್ಬರು ದುಷ್ಕರ್ಮಿಗಳು ಯಾವುದೇ ವ್ಯವಸ್ಥಿತ ಸಂಘಟನೆಗಳನ್ನು ಪ್ರತಿನಿಧಿಸಿರುವ ಕುರಿತಂತೆ ಈವರೆಗೆ ಮಾಹಿತಿಗಳಿಲ್ಲ. ಹಾಗೆಂದು ಈ ಕೃತ್ಯಕ್ಕೆ ಈ ಇಬ್ಬರನ್ನೇ ಹೊಣೆ ಮಾಡಿಕೊಂಡು ಪ್ರಕರಣವನ್ನು ಮುಗಿಸುವಂತೆಯೂ ಇಲ್ಲ. ಪ್ರವಾದಿ ನಿಂದನೆಯ ಪ್ರಕರಣದ ಬಳಿಕ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಭಾರತ ಇದಕ್ಕಾಗಿ ಭಾರೀ ಬೆಲೆಯನ್ನು ತೆರುತ್ತಿದೆ. ಇವೆಲ್ಲವನ್ನು ಪರಿಗಣಿಸಿ, ಪೈಶಾಚಿಕ ಕೃತ್ಯಗಳನ್ನು ಎಸಗುತ್ತಿರುವ ಪಿಶಾಚಿಗಳನ್ನು ಮಾತ್ರವಲ್ಲ, ಮನುಷ್ಯರೊಳಗೆ ಮಲಗಿರುವ ಪಿಶಾಚಿಗಳನ್ನು ಬಡಿದೆಬ್ಬಿಸಿ ಸಭ್ಯ ಸಮಾಜದೊಳಗೆ ಛೂಬಿಟ್ಟು, ಬಹಿರಂಗವಾಗಿ ಗಣ್ಯರ ವೇಷದಲ್ಲಿ ಓಡಾಡುವವರನ್ನು ಗುರುತಿಸುವ ಕೆಲಸ ನಡೆಯಬೇಕು. ಆಗ ಮಾತ್ರ ಇಂತಹ ಕೃತ್ಯಗಳು ಮರುಕಳಿಸದಂತೆ ನಾವು ತಡೆಯಬಹುದು.

ಪ್ರವಾದಿಯವರ ಕಾಲದಲ್ಲೂ ದುಷ್ಕರ್ಮಿಗಳು ಪ್ರವಾದಿಯವರನ್ನು ನಿಂದಿಸಿದ್ದಾರೆ, ಅವಮಾನಿಸಿದ್ದಾರೆ. ಆಗ ಸ್ವತಃ ಪ್ರವಾದಿಯವರು ಅಪರಿಮಿತ ತಾಳ್ಮೆ, ಸಹನೆಯನ್ನು ಪ್ರದರ್ಶಿಸಿದ್ದರು. ತನ್ನನ್ನು ಅವಮಾನಿಸಿದವರ ವಿರುದ್ಧ ದಾಳಿ ನಡೆಸಲು ತನ್ನ ಸಂಗಾತಿಗಳಿಗೂ ಅನುಮತಿಸಿರಲಿಲ್ಲ. ಇಂದು ನಾವು ಪ್ರವಾದಿಯವರಿಗೆ ನೀಡಬಹುದಾದ ಅತಿ ದೊಡ್ಡ ಗೌರವ, ಅವರು ಅಳವಡಿಸಿಕೊಂಡ ಸಂಯಮವನ್ನು ಪಾಲಿಸುವುದು. ಹಾಗೆಯೇ, ಪ್ರವಾದಿಯವರಿಗೆ ಅಪಮಾನವಾಯಿತೆಂಬ ನೆಪದಲ್ಲಿ, ಪ್ರವಾದಿಯವರ ಹೆಸರಿನಲ್ಲಿ ಇನ್ನೊಬ್ಬರ ಮೇಲೆ ಹಿಂಸಾತ್ಮಕ ದಾಳಿ ನಡೆಸುವುದು ಅವರಿಗೆ ಮಾಡುವ ಅವಮಾನ ಎನ್ನುವ ಎಚ್ಚರಿಕೆಯೂ ಪ್ರವಾದಿ ಅನುಯಾಯಿಗಳಲ್ಲಿರಬೇಕು. ದುಷ್ಕರ್ಮಿಗಳು ಪ್ರದರ್ಶಿಸಿದ ಕ್ರೌರ್ಯಕ್ಕೆ ತಕ್ಕ ಕಠಿಣ ಶಿಕ್ಷೆಯಾಗಲೇ ಬೇಕು. ಹಾಗೆಯೇ ಜನ ಸಾಮಾನ್ಯರನ್ನು ಇಂತಹ ಕ್ರೌರ್ಯಕ್ಕಿಳಿಸಿ ತಮ್ಮ ರಾಜಕೀಯ ದುರುದ್ದೇಶಗಳನ್ನು ಸಾಧಿಸುತ್ತಿರುವ ರಾಜಕೀಯ ನಾಯಕರನ್ನೂ ಗುರುತಿಸಿ ಜೈಲಿಗೆ ತಳ್ಳುವ ಕೆಲಸ ನಡೆಯಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)