varthabharthi


ಕ್ರೀಡೆ

ನಾಯಕರಾಗಿ ಕಳೆದುಕೊಂಡದ್ದನ್ನು ಕೋಚ್ ಆಗಿ ದೊರಕಿಸಿಕೊಟ್ಟ ಚಂದ್ರಕಾಂತ್ ಪಂಡಿತ್

ವಾರ್ತಾ ಭಾರತಿ : 30 Jun, 2022
ಇಬ್ರಾಹಿಂ ಅಡ್ಕಸ್ಥಳ

ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರವಿವಾರ ನಡೆದ ರಣಜಿಟ್ರೋಫಿ ಫೈನಲ್‌ನಲ್ಲಿ ಮಧ್ಯಪ್ರದೇಶ ತಂಡವು ದೇಶಿಯ ಕ್ರಿಕೆಟ್‌ನ ದೈತ್ಯ ತಂಡ ಮುಂಬೈಯನ್ನು ಮಣಿಸಿ ಮೊದಲ ಬಾರಿ ರಣಜಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದರೊಂದಿಗೆ ಮಧ್ಯಪ್ರದೇಶ ತಂಡ ರಣಜಿ ಜಯಿಸಿದ ತಂಡಗಳ ಸಾಲಿಗೆ ಸೇರ್ಪಡೆಗೊಂಡು ಇತಿಹಾಸ ಬರೆಯಿತು.

ಈ ಬಾರಿಯ ರಣಜಿ ಫೈನಲ್ ಮಧ್ಯಪ್ರದೇಶ ತಂಡದ ಪಾಲಿಗೆ ಮಹತ್ವ ಪೂರ್ಣವಾಗಿರುವುದು ಒಂದಡೆಯಾದರೆ, ತಂಡದ ಕೋಚ್ 60ರ ಹರೆಯದ ಚಂದ್ರಕಾಂತ್ ಪಂಡಿತ್ ಅವರ ಪಾಲಿಗೆ ಇದೊಂದು ಸ್ಮರಣೀಯ ಪಂದ್ಯವಾಗಿತ್ತು. 23 ವರ್ಷಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ಮಧ್ಯ ಪ್ರದೇಶ ತಂಡ ರಣಜಿ ಫೈನಲ್‌ನಲ್ಲಿ ಕರ್ನಾಟಕ ವಿರುದ್ಧ ಸೋತು ಟ್ರೋಫಿ ಎತ್ತುವ ಅವಕಾಶವನ್ನು ಕಳೆದುಕೊಂಡಿತ್ತು. ಆಗ ಮಧ್ಯಪ್ರದೇಶ ತಂಡದ ನಾಯಕರಾಗಿದ್ದವರು ಚಂದ್ರಕಾಂತ್ ಪಂಡಿತ್. ಅವರು ಭಾರವಾದ ಹೃದಯದೊಂದಿಗೆ ಕ್ರೀಡಾಂಗಣದಿಂದ ನಿರ್ಗಮಿಸಿದ್ದರು. ಇದು ಅವರ ಪಾಲಿಗೆ ಕೊನೆಯ ರಣಜಿ ಆಗಿತ್ತು. ನಾಯಕನಾಗಿ ಮಧ್ಯಪ್ರದೇಶ ತಂಡಕ್ಕೆ ರಣಜಿ ಟ್ರೋಫಿ ತಂದು ಕೊಡಲು ಸಾಧ್ಯವಾಗದಿರುವುದಕ್ಕೆ ಅವರು ನೊಂದು ಕೊಂಡಿದ್ದರು. ಬಳಿಕ ಅವರು ತೆರೆಯಮರೆಗೆ ಸರಿದರು. ಆ ಬಳಿಕ ಮಧ್ಯ ಪ್ರದೇಶ ತಂಡ ರಣಜಿ ಫೈನಲ್ ಪ್ರವೇಶಿಸಲು ಚಂದ್ರಕಾಂತ್ ಪಂಡಿತ್ ಕೋಚ್ ಆಗಿ ಬರಬೇಕಾಯಿತು. ಆವರು ಉತ್ತಮ ತಂಡವನ್ನು ಕಟ್ಟಿದರು. ಆದಿತ್ಯ ಶ್ರೀವಾಸ್ತವ್‌ಗೆ ನಾಯಕತ್ವದ ಜವಾಬ್ದಾರಿ ನೀಡಿ ಅವರ ಮೂಲಕ ಮಧ್ಯಪ್ರದೇಶ ತಂಡ ರಣಜಿ ಟ್ರೋಫಿ ಗೆಲ್ಲಲು ಸಮರ್ಥ ಮಾರ್ಗದರ್ಶನ ನೀಡಿದರು. ಪಂಡಿತ್‌ರ ಸಾಂಪ್ರದಾಯಿಕ ಕೋಚ್ ಶೈಲಿ ಮತ್ತೊಮ್ಮೆ ಫಲ ನೀಡಿತು. ತಂಡ ಪ್ರಶಸ್ತಿಯನ್ನು ಗೆಲ್ಲಲೇಬೇಕು ಎಂಬ ಒಂದೇ ಗುರಿಯೊಂದಿಗೆ ಪಂಡಿತ್ ತಂಡದ ಆಟಗಾರರನ್ನು ದುಡಿಸಿಕೊಂಡಿದ್ದರು. ಆಟಗಾರರಿಗೆ ಕೇಳಿದಷ್ಟು ರಜೆ ನೀಡುತ್ತಿರಲಿಲ್ಲ. ನಾಯಕ ಶ್ರೀವಾಸ್ತವ್ ಮದುವೆಗಾಗಿ 10 ದಿನಗಳ ರಜೆ ಕೇಳಿದ್ದರು. ಆದರೆ ಪಂಡಿತ್ ಕೇವಲ 2 ದಿನಗಳ ರಜೆ ಮಂಜೂರು ಮಾಡಿದ್ದರು ಎನ್ನುವುದನ್ನು ಶ್ರೀವಾಸ್ತವ್ ಬಹಿರಂಗಪಡಿಸಿದ್ದಾರೆ. ಚಂದ್ರಕಾಂತ್ ಪಂಡಿತ್ ಇಂದು ದೇಶೀಯ ಕ್ರಿಕೆಟ್‌ನಲ್ಲಿ ಯಶಸ್ವಿ ಕೋಚ್. ಅವರು ಕೋಚ್ ಆಗಿ 6 ಬಾರಿ ವಿವಿಧ ತಂಡಗಳಿಗೆ ರಣಜಿ ಟ್ರೋಫಿ ಗೆಲ್ಲಲು ಮಾರ್ಗದರ್ಶನ ನೀಡಿದ್ದಾರೆ. ಮಧ್ಯಪ್ರದೇಶದ ತಮ್ಮ ಮೊದಲ ರಣಜಿ ಟ್ರೋಫಿ ಗೆಲುವಿಗೆ ಕಾರಣರಾಗಿ ತಂಡದ ಋಣವನ್ನು ತೀರಿಸಿಕೊಂಡಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನ 5ನೇ ದಿನದಾಟದಲ್ಲಿ ಮಧ್ಯಪ್ರದೇಶ ತಂಡ ಮುಂಬೈ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ರಜತ್ ಪಾಟಿದಾರ್ ಗೆಲುವಿನ ರನ್ ಬಾರಿಸಿದರು. ಡ್ಯಾಶಿಂಗ್ ಸ್ಟ್ರೋಕ್‌ಪ್ಲೇಯರ್ ಮತ್ತು ಸಮರ್ಥ ವಿಕೆಟ್‌ಕೀಪರ್ ಚಂದ್ರಕಾಂತ್ ಪಂಡಿತ್ ಅವರು 80ರ ದಶಕದ ಮಧ್ಯಭಾಗದಲ್ಲಿ ಸೈಯದ್ ಕಿರ್ಮಾನಿ ಅವರಿಂದ ಕೈಗವಸುಗಳನ್ನು ತೆಗೆದುಕೊಳ್ಳಲು ಸ್ಪರ್ಧೆಯಲ್ಲಿದ್ದ ಹಲವು ಯುವ ಆಟಗಾರರಲ್ಲಿ ಒಬ್ಬರಾಗಿದ್ದರು. ಆದರೆ ಟೀಮ್ ಇಂಡಿಯಾದ ಪೂರ್ಣಾವಧಿ ವಿಕೆಟ್ ಕೀಪರ್ ಆಗಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಸೋತರು. ಅವರು ಆಡಿದ ಐದು ಟೆಸ್ಟ್‌ಗಳಲ್ಲಿ ಮೂರರಲ್ಲಿ ಅವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಆಯ್ಕೆಯಾದರು, ಆದರೂ ಅವರು ಎರಡು ಟೆಸ್ಟ್‌ಗಳಲ್ಲಿ (1991-92 ಆಸ್ಟ್ರೇಲಿಯಾ ಪ್ರವಾಸಕ್ಕೆ ಕಿರಣ್ ಮೋರೆ ಅಲಭ್ಯರಾಗಿದ್ದಾಗ) ವಿಕೆಟ್ ಕೀಪರ್ ಆಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಹನ್ನೊಂದು ಕ್ಯಾಚ್ ತೆಗೆದುಕೊಳ್ಳುವ ಮೂಲಕ ತಮ್ಮ ಕೈಚಳಕ ತೋರಿಸಿದ್ದರು. ಪಂಡಿತ್ ಅವರ ಆಕರ್ಷಕ ಬ್ಯಾಟಿಂಗ್ ಶೈಲಿಯ ನೆರವಿನಲ್ಲಿ ಸ್ವಲ್ಪಸಮಯದವರೆಗೆ ಅವರಿಗೆ ಭಾರತದ ಏಕದಿನ ತಂಡದಲ್ಲಿ ಆಟಗಾರನಾಗಿ ಅವಕಾಶ ಪಡೆದಿದ್ದರು. 36 ಏಕದಿನ ಪಂದ್ಯಗಳಲ್ಲಿ ಭಾರತ ತಂಡದಲ್ಲಿ ಆಡಿದ್ದ ಪಂಡಿತ್ 290 ರನ್ ಗಳಿಸಿದ್ದರು. ಗರಿಷ್ಠ ವೈಯಕ್ತಿಕ ಸ್ಕೋರ್ 33. 1987, ನವೆಂಬರ್ 5ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತದ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್‌ನಲ್ಲಿ 35 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು. ದಿಲೀಪ್ ವೆಂಗ್ ಸರ್ಕಾರ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಪಂಡಿತ್ ಆ ಪಂದ್ಯದಲ್ಲಿ 24 ರನ್‌ಗಳ ಕಾಣಿಕೆ ನೀಡಿದ್ದರು.

ದೇಶೀಯ ಕ್ರಿಕೆಟ್‌ನಲ್ಲಿ ಪಂಡಿತ್ ಉತ್ತಮ ದಾಖಲೆ ನಿರ್ಮಿಸಿದ್ದರು. 138 ಪ್ರಥಮ ದರ್ಜೆ ಪಂದ್ಯಗಳಲ್ಲಿ 22 ಶತಕ ಮತ್ತು 20 ಅರ್ಧಶತಕಗಳನ್ನು ಒಳಗೊಂಡ 8,209 ರನ್ ದಾಖಲಿಸಿದ್ದರು. ಗರಿಷ್ಠ ವೈಯಕ್ತಿಕ ಸ್ಕೋರ್ 202. ಅಂತರ್‌ರಾಷ್ಟ್ರೀಯ ವೃತ್ತಿಜೀವನ ಕೊನೆಗೊಂಡ ನಂತರ, ಪಂಡಿತ್ ಮಧ್ಯಪ್ರದೇಶ ತಂಡದಲ್ಲಿ ಪೂರ್ಣಾವಧಿ ಆಟಗಾರನಾಗಿ ಸೇರಿಕೊಂಡರು ಮತ್ತು ಬ್ಯಾಟ್‌ನೊಂದಿಗೆ ಕೆಲವು ಉತ್ತಮ ಋತುಗಳನ್ನು ಆನಂದಿಸಿದರು. 1999ರ ತನಕ ಆ ತಂಡದಲ್ಲಿದ್ದು, ಮುಂದೆ ಯಶಸ್ವಿ ಕೋಚ್ ಆಗಿ ಬೆಳೆದರು. ಮುಂಬೈ ತಂಡವನ್ನು 2003, 2004 ಮತ್ತು 2016ರಲ್ಲಿ ಸತತ ಮೂರು ರಣಜಿ ಟ್ರೋಫಿ ಜಯಗಳಿಸಲು ಮಾರ್ಗದರ್ಶನ ನೀಡಿದರು. 2005ರಲ್ಲಿ ಅವರು ಮಹಾರಾಷ್ಟ್ರದ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದರು. 2018 ಮತ್ತು 2019ರಲ್ಲಿ ವಿದರ್ಭ ತಂಡಕ್ಕೆ ಸತತವಾಗಿ ರಣಜಿ ಟ್ರೋಫಿ ಗೆಲ್ಲಲು ಪಂಡಿತ್ ಕೋಚ್ ಆಗಿ ನೆರವಾಗಿದ್ದರು. ಇದೀಗ ಮಧ್ಯಪ್ರದೇಶ ರಣಜಿ ಚಾಂಪಿಯನ್ ಆಗಲು ನೆರವಾಗಿದ್ದಾರೆ. ಈ ಬಾರಿ ರಣಜಿಯಲ್ಲಿ ಮುಂಬೈ ತಂಡದ ಪರ ಯುವ ಬ್ಯಾಟರ್ ಸರ್ಫರಾಝ್ ಖಾನ್ 6 ಪಂದ್ಯಗಳಲ್ಲಿ 4 ಶತಕ ಮತ್ತು 2 ಅರ್ಧಶತಕಗಳನ್ನು ಒಳಗೊಂಡ 982 ರನ್ ಕಲೆ ಹಾಕಿ ಮುಂಬೈ ತಂಡವನ್ನು ಫೈನಲ್ ತಲುಪಿಸುವಲ್ಲಿ ನೆರವಾಗಿದ್ದರು. ಆದರೆ ಅವರ ಪ್ರಯತ್ನ ಫಲ ನೀಡಲಿಲ್ಲ. ಮುಂಬೈ ತಂಡಕ್ಕೆ ಫೈನಲ್ ಪ್ರವೇಶಿಸಲು ಗರಿಷ್ಠ ಕೊಡುಗೆ ನೀಡಿದ ಅವರು ‘ಪ್ಲೇಯರ್ ಆಫ್ ದಿ ಸೀರಿಸ್’ ಪ್ರಶಸ್ತಿಗೆ ಭಾಜನರಾದರು.

ಚಾಂಪಿಯನ್ ಮಧ್ಯಪ್ರದೇಶ ತಂಡದ ರಜತ್ ಪಾಟಿದಾರ್ ಸರಣಿಯಲ್ಲಿ 2 ಶತಕ ಮತ್ತು 5 ಅರ್ಧಶತಕಗಳ ನೆರವಿನಿಂದ 658 ರನ್ ಕಲೆ ಹಾಕಿ ತಂಡದ ಗೆಲುವಿಗೆ ನೆರವಾದರು. ಎರಡೂ ಇನಿಂಗ್ಸ್‌ಗಳಲ್ಲಿ 116 ಮತ್ತು 30 ರನ್ ಗಳಿಸಿದ ಶುಭಮ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಒಟ್ಟಿನಲ್ಲಿ ಈ ಬಾರಿಯೂ ಮುಂಬೈಗೆ 42ನೇ ಪ್ರಶಸ್ತಿ ಒಲಿದು ಬರಲಿಲ್ಲ. ಆರು ವರ್ಷಗಳಿಂದ ಪ್ರಶಸ್ತಿಗಾಗಿ ಪ್ರಯತ್ನ ನಡೆಸುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)