varthabharthi


ವಿಶೇಷ-ವರದಿಗಳು

ಗಾಂಧಿ v/s ಗೋಡ್ಸೆ ಹಿಂದುತ್ವ ಸಮರದ ಒಳಹೇತು ಹಾದಿಯಲಿ...

ವಾರ್ತಾ ಭಾರತಿ : 1 Jul, 2022
ಮಲ್ಲಿಕಾರ್ಜುನ ಕಡಕೋಳ

ವ್ಯಕ್ತಿ, ಜಾತಿ, ಮತ, ಪಂಥ, ಧರ್ಮ, ಲಿಂಗತ್ವಗಳು ಸೇರಿದಂತೆ ಕೃತಿಚೌರ್ಯದವರೆಗೆ ಲೋಪ ದೋಷಗಳು ಪಠ್ಯಪುಸ್ತಕಗಳ ಹೊಟ್ಟೆಯಲ್ಲಿ ತುಂಬಿಕೊಂಡಿರುವುದು ಪತ್ತೆಯಾಗುತ್ತಲೇ ನಡೆದಿದೆ. ಅಷ್ಟೇ ಯಾಕೆ ಎಲ್ಲಾ ಬಗೆಯಲ್ಲೂ ಅವು ಕಳಪೆ ಗುಣಮಟ್ಟದ ಪಠ್ಯಗಳಾಗಿವೆಯೆಂದು ತಜ್ಞರು ಹೇಳುತ್ತಿದ್ದಾರೆ. ಎರಡು ವರ್ಷಗಳ ಕಾಲ ಕೊರೋನದಿಂದ ನಲುಗಿ ಹೋಗಿರುವ ಮಕ್ಕಳು ಮತ್ತು ಪೋಷಕರ ಮನಸಿನ ಮೇಲೆ ಇಂತಹ ಬೆಳವಣಿಗೆಗಳಿಂದ ಎಂತಹ ಘೋರ ಪರಿಣಾಮ ಬೀರಬಹುದೆಂಬ ಕನಿಷ್ಠ ಪ್ರಮಾಣದ ಅರಿವು ಪ್ರಭುತ್ವಕ್ಕೆ ಇರಬಾರದೇ.?

ಕಾಂಗ್ರೆಸ್‌ನ ಸಿದ್ದರಾಮಯ್ಯನವರ ಕಾಲದಲ್ಲಿ ಆರು ಪಾಠ ಇದ್ದವು. ಬಿಜೆಪಿಯ ಬೊಮ್ಮಾಯಿ ಕಾಲದಲ್ಲಿ ಎಂಟು ಪಾಠಗಳಿವೆ. ಎಡಪಂಥೀಯ ಬರಗೂರು ಪಠ್ಯದಲ್ಲಿ ಒಂದೇ ಒಂದು ಪುಟ ಇಟ್ಟಿದ್ದು ಬಲಪಂಥೀಯ ಚಕ್ರತೀರ್ಥ ಮೂರು ಪುಟ ಇಟ್ಟಿದ್ದಾರೆ. ಅವರದು ಮುಸ್ಲಿಮ್ ತುಷ್ಟೀಕರಣ ಇವರದು ಹಿಂದುತ್ವದ ವೈಭವೀಕರಣ. ಅವರದು ಅಷ್ಟು ಉದ್ದದ ಸಾಲು, ನಮ್ಮದು ಅವರಿಗಿಂತ ಹೆಚ್ಚು ಉದ್ದ. ಈ ಬಗೆಯ ಮೂರನೇ ದರ್ಜೆಯ ಜಗಳಗಂಟಿ ಗೊಂದಲಗಳು. ಇವು ಪಠ್ಯಪುಸ್ತಕ ವಿವಾದದ ಹೇಳಿಕೆ ಮತ್ತು ಪ್ರತಿ ಹೇಳಿಕೆಗಳ ವಾಗ್ಯುದ್ಧಗಳು. ಬೀದಿ ಜಗಳಕ್ಕಿಂತ ಕಡೆಯದಾದ ಕೊಳಕು ಕಿತ್ತಾಟಗಳು. ಎಡ ಬಲ ಪಂಥಗಳ ಹೆಸರಿನ ಬಡಿದಾಟಗಳು.

ಸರಕಾರವು ಪಠ್ಯಪುಸ್ತಕಗಳ ಮರು ಪರಿಷ್ಕರಣೆ ಪ್ರಕರಣವನ್ನು ಪ್ರತಿಷ್ಠಿತ ಸವಾಲಿನಂತೆ, ಸಮರ್ಥನಾ ಪ್ರತಿಕ್ರಿಯೆಗಳ ಗೊಡ್ಡು ಹಾದಿ ಹಿಡಿದಿದೆ. ಅದರ ಜೊತೆಗೆ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿನ ಲೋಪದೋಷಗಳ ಮಹಾಪಟ್ಟಿ ಪ್ರತಿನಿತ್ಯವೂ ಬೆಳೆಯುತ್ತಲೇ ಇದೆ. ವ್ಯಕ್ತಿ, ಜಾತಿ, ಮತ, ಪಂಥ, ಧರ್ಮ, ಲಿಂಗತ್ವಗಳು ಸೇರಿದಂತೆ ಕೃತಿಚೌರ್ಯದವರೆಗೆ ಲೋಪ ದೋಷಗಳು ಪಠ್ಯಪುಸ್ತಕಗಳ ಹೊಟ್ಟೆಯಲ್ಲಿ ತುಂಬಿಕೊಂಡಿರುವುದು ಪತ್ತೆಯಾಗುತ್ತಲೇ ನಡೆದಿದೆ. ಅಷ್ಟೇ ಯಾಕೆ ಎಲ್ಲಾ ಬಗೆಯಲ್ಲೂ ಅವು ಕಳಪೆ ಗುಣಮಟ್ಟದ ಪಠ್ಯಗಳಾಗಿವೆಯೆಂದು ತಜ್ಞರು ಹೇಳುತ್ತಿದ್ದಾರೆ. ಎರಡು ವರ್ಷಗಳ ಕಾಲ ಕೊರೋನದಿಂದ ನಲುಗಿ ಹೋಗಿರುವ ಮಕ್ಕಳು ಮತ್ತು ಪೋಷಕರ ಮನಸಿನ ಮೇಲೆ ಇಂತಹ ಬೆಳವಣಿಗೆಗಳಿಂದ ಎಂತಹ ಘೋರ ಪರಿಣಾಮ ಬೀರಬಹುದೆಂಬ ಕನಿಷ್ಠ ಪ್ರಮಾಣದ ಅರಿವು ಪ್ರಭುತ್ವಕ್ಕೆ ಇರಬಾರದೇ.?

ಈ ರೀತಿ ಕಳೆದೆರಡು ತಿಂಗಳಿಂದಲೂ ಪಠ್ಯಪುಸ್ತಕಗಳ ಭಾನಗಡಿಯ ಬೆಂಕಿ ಹತ್ತಿ ಧಗಧಗ ಉರಿಯುತ್ತಲೇ ಇದೆ. ಅದನ್ನು ಆರಿಸುವ ಸಂಕಲ್ಪಕ್ಕೆ ಬದಲು ಇನ್ನೂ ಹೆಚ್ಚಿಗೆ ಉರಿಸುವ ವಿಕಲ್ಪಗಳೇ ಹೆಚ್ಚುತ್ತಲಿವೆ. ಶೈಕ್ಷಣಿಕ ಕಾಳಜಿಯಿಂದ ಮರು ಪರಿಷ್ಕರಣೆ ವಿರೋಧಿಸುತ್ತಿರುವ ಸಾಹಿತಿ, ಸಂಸ್ಕೃತಿ ಚಿಂತಕ, ಶಿಕ್ಷಣ ತಜ್ಞರ ಬಣದ ಮುಖಂಡರನ್ನು ಮಾನ್ಯ ಮುಖ್ಯಮಂತ್ರಿಯವರು ಕರೆದು ಕನಿಷ್ಠ ಪಕ್ಷ ಅವರೊಂದಿಗೆ ಮಾತಾಡುವ ಸೌಜನ್ಯ ತೋರುತ್ತಿಲ್ಲವೇಕೆ.? ಅದಕ್ಕೆ ಕೇಶವ ಕೃಪೆಯಾಗಬೇಕೇನೋ.? ಲೋಪ ದೋಷಗಳಿದ್ದರೆ ಸರಿಪಡಿಸಲು ಸರಕಾರ ಸಿದ್ಧ ಎಂಬ ಸಿದ್ಧ ಹೇಳಿಕೆಗಳು.

ಯಾರು ತಾತ್ವಿಕವಾಗಿ ವಿರೋಧಿಸುವರೋ ಅಂಥವರ ಕುಲಸ್ಥರನ್ನೇ ತಮ್ಮ ಕಡೆಯಿಂದ ಹುಡುಕಿ ಎತ್ತಿಕಟ್ಟಿ ಉತ್ತರಿಸುವ ಮತ್ತಷ್ಟು ಮೊಗೆದಷ್ಟು ಮರು ಪ್ರಶ್ನೋತ್ತರಗಳ ಪೈಪೋಟಿಗಿಳಿದಿರುವುದು ದುರಂತವಲ್ಲದೇ ಮತ್ತಿನ್ನೇನು.? ಹೀಗೆ ಶೂದ್ರರ ಭುಜದ ಮೇಲೆ ಬಂದೂಕು ಇರಿಸಿ ಗುಂಡು ಹಾರಿಸುವ ಮೇಲ್ಜಾತಿ ವೈದಿಕ ರಾಜಕಾರಣದ ಹುನ್ನಾರ ಬಟಾ ಬಯಲಾಗಿದೆ. ರಾಜಕಾರಣದಲ್ಲಿ ಅದೇನು ಹೊಸ ವಿಷಯವಲ್ಲ. ಆದರೆ ಶಿಕ್ಷಣ ಮತ್ತು ಆರೋಗ್ಯದಂತಹ ವಿಷಯಗಳಲ್ಲಿ ಮಕ್ಕಳೊಂದಿಗಿನ ಇಂತಹ ಅಪಾಯಕಾರಿ ರಾಜಕಾರಣ ಉಚಿತವಲ್ಲ. ಇದು ಸಂವಿಧಾನದ ವಿರೋಧಿ ಮತ್ತು ಅಮಾನವೀಯ ಬೆಳವಣಿಗೆ.

‘ಟ್ರಿಬಲ್ ಸೆವೆನ್ ಚಾರ್ಲಿ’ ಸಿನೆಮಾ ನೋಡುವಾಗ ಮುಖ್ಯಮಂತ್ರಿಯ ಕರುಳಿನ ಕಣ್ಣೀರ ಕತೆ ಮನಮಿಡಿಯಿತು. ಅವರಿಗೆ ಅವರ ಮನೆಯ ನಾಯಿ ಸನ್ನಿಯ ನೆನಪು ಗಾಢವಾಗಿ ಕಾಡಿರಬಹುದು. ಅವರ ಪ್ರಾಣಿ ದಯಾ ಸಂವೇದನೆ, ಪ್ರೀತಿ, ಮಮಕಾರ ಎಂಥವರಲ್ಲೂ ಅನುಭೂತಿ ಹುಟ್ಟಿಸಬಲ್ಲದು. ದಯೆಯೇ ಧರ್ಮದ ಮೂಲ. ಅದು ಸಕಲ ಜೀವಾತ್ಮರ ಲೇಸ ಬಯಸುವ ಬಸವ ಪ್ರಜ್ಞೆಯೂ ಆಗಿದೆ. ದುರಂತವೆಂದರೆ ಅಂತಹ ಬಸವಧರ್ಮಕ್ಕೆ ಪಠ್ಯಪುಸ್ತಕಗಳ ಮರು ಪರಿಷ್ಕರಣೆ ನೆಪದಲ್ಲಿ ಚ್ಯುತಿಯ ಇತಿಹಾಸವನ್ನು ತುರುಕಿದ್ದಾರೆ. ತಿರುಚು ವಿದ್ಯೆಯ ತಿರುಬೋಕಿಯೊಬ್ಬ ಪಠ್ಯಪುಸ್ತಕಗಳ ಮೂಲಕ ಕರುನಾಡ ಮಕ್ಕಳಿಗೆ ತನ್ನ ಕೊಳಕು ತೀರ್ಥ ಕುಡಿಸುವ ಕ್ರಿಯೆಗೆ ಕೈ ಹಾಕಿದ್ದಾಗಿದೆ.

ಬಸವ ನೆಲದ, ಕುವೆಂಪು ನೆಲದ ಮಕ್ಕಳು ಇಂತಹ ಬುಡಮೇಲು ಇತಿಹಾಸ ಪಠ್ಯ ಕಲಿಯಬೇಕಾದ ಸ್ಥಿತಿ ಕುರಿತು ಮುಖ್ಯಮಂತ್ರಿಯವರೇ ನಿಮಗೆ ಕಣ್ಣೀರು ಬೇಡ, ಕನಿಕರವಾದರೂ ಬೇಡವೇ.? ಸಿನೆಮಾದ ಕ್ಯಾನ್ಸರ್ ಪೀಡಿತ ನಾಯಿಯ ಪಾಡಿಗಿಂತ ಕನ್ನಡದ ಮಕ್ಕಳ ಪಾಡು ಕಡೆಗಾಯಿತೇ.? ಅದನ್ನು ನಾನು ನಾಯಿಪಾಡು ಅನ್ನಲಾರೆ. ಆ ಮೂಲಕ ಅದರ ಬಗ್ಗೆ ನಿಮಗಿರುವ ಅನನ್ಯತೆಗೆ ಅವಕೃಪೆ ಮಾಡಲಾರೆ. ಶಾಲಾ ಮಕ್ಕಳ ಮೊಟ್ಟೆಯಿಂದ ಹಿಡಿದು ಹಿಜಾಬ್ ಒಳಗೊಂಡಂತೆ ಇದೀಗ ಅದೇ ಶಾಲಾ ಮಕ್ಕಳ ಪಠ್ಯಪುಸ್ತಕಗಳಿಗೆ ಶಾಖೆಗಳ ಕೇಸರಿ ನೆರಳು.

ಹರಿಹರನ ಬಸವರಾಜ ದೇವ ರಗಳೆಯನ್ನೇ ಸುಳ್ಳು ಮಾಡಲು ಹೊರಟಿದ್ದೀರಾ ಆಳರಸ ಬಸವರಾಜರೇ.? ಕರ್ಮಲತೆಯಂತಹ ವಿಪ್ರತ್ವಕ್ಕೆ ಧಿಕ್ಕಾರ ಹೇಳಿ ಜನಿವಾರವನ್ನು ಕಿತ್ತೆಸೆದ ಅಣ್ಣ ಬಸವಣ್ಣನಿಗೆ ‘ಪು’ರೋಹಿತನೊಬ್ಬನ ಪರಿಷ್ಕೃತ ಪಠ್ಯದ ಮೂಲಕ ವೈದಿಕ್ಯದ ಕಂದಾಚಾರಕ್ಕೆ ಕಟ್ಟಿಹಾಕುವ ಕೆಟ್ಟ ಹಟವೇಕೆ?. ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು, ಪೆರಿಯಾರ್ ಹೀಗೆ ಇವರನ್ನೆಲ್ಲಾ ಟಾರ್ಗೆಟ್ ಮಾಡಿದಂತೆ ಬಸವ ನಾಡಿನೊಳಗೆ ಮನುವಾದದ ವಿಷಮಗಾಳಿಯ ಪ್ರವೇಶವಾಗಿದೆ. ಕಳೆದೆರಡು ತಿಂಗಳಿನಿಂದ ಪಠ್ಯಪುಸ್ತಕಗಳ ಅಪಸವ್ಯದ ವಾತಾವರಣ ಕರ್ನಾಟಕದ ತುಂಬೆಲ್ಲಾ ನಿರ್ಮಾಣಗೊಂಡಿದೆ. ಅದನ್ನು ತಿಳಿಗೊಳಿಸಬಲ್ಲ ಸೂಕ್ತವಾದ ಕ್ರಮ ತಮ್ಮಿಂದ ಜರುಗುತ್ತಲಿಲ್ಲ. ಅದಕ್ಕೆ ಬದಲು ರಾಜಕಾರಣದ ಹೇಳಿಕೆಗಳ ಮೇಲಾಟ. ಉಪರಾಟಿ ಸಮರ್ಥನೆಗೆ ಶೂದ್ರ ಶಕ್ತಿಗಳ ಬಳಕೆ.

ಬಾಯಿಲೊಂದಾಡ್ತೀರಿ, ಮನಸಿನ್ಯಾಗೊಂದು ಮಾಡ್ತೀರಿ

ವಿಪ್ರತ್ವದ ಅಗ್ನಿಕುಂಡದೊಳಗೆ ಬಿದ್ದು ಒದ್ದಾಡ್ತೀರಿ. ಬಸವಣ್ಣನ ಹೆಸರಿಟ್ಟುಕೊಂಡ ಇದು ನಿಮಗೆ ಶೋಭೆಯಲ್ಲ. ಯಡಿಯೂರಪ್ಪನವರು ಇದ್ದಿದ್ದರೆ ಇಂತಹದ್ದಕ್ಕೆಲ್ಲ ಅವಕಾಶ ಕೊಡುತ್ತಿರಲಿಲ್ಲ ಎಂದು ಸಾಮಾನ್ಯ ಜನರೂ ರಾಜಾರೋಷವಾಗಿ ಮಾತಾಡಿಕೊಳ್ಳುತ್ತಿದ್ದಾರೆ. ಬಸವ ಚರಿತೆಗೆ ಚ್ಯುತಿ ಬಂದಿರುವುದು ನಿಮಗೆ ತಿಳಿಯದೇ.? ಕರ್ನಾಟಕ ಮತ್ತು ಕನ್ನಡ ಸಂಸ್ಕೃತಿಗೆ ಮಸಿ ಬಳಿಯುವ ಉದ್ದೇಶಿತ ಕೆಲಸ ಇದಲ್ಲವೇ.? ಎಳೆಯ ಮಕ್ಕಳಿಗೆ ಹುಸಿ ಇತಿಹಾಸ ಬೋಧಿಸುವುದೆಂದರೆ ವಿಷ ಉಣಿಸಿದಂತಲ್ಲವೇ.?

ಪಠ್ಯಪುಸ್ತಕ ಮರು ಪರಿಷ್ಕರಣೆಯ ಒಟ್ಟುಕ್ರಮವೇ ನಿಯಮ ಬಾಹಿರ. ಆರನೇ ಈಯತ್ತೆಯ ಪಾಠವೊಂದರ ಪರಿಶೀಲನೆಗೆ ನೇಮಕಗೊಂಡು, ಪರಿಷ್ಕರಣೆಗೆ ಕೈಹಾಕಿದ ಅದೊಂದು ಅಕ್ರಮ ಸಮಿತಿಯ ಅಕ್ರಮ ಕಾರ್ಯಕ್ರಮ. ಹೀಗೆಂದೇ ಘಟನೋತ್ತರ ಅನುಮತಿ ಗಿಟ್ಟಿಸಿಕೊಂಡು ಅಕ್ರಮ ಸಮಿತಿಯಿಂದ ಜರುಗಿದ ಅಕ್ರಮವನ್ನೇ ಸರಕಾರ ಸಕ್ರಮಗೊಳಿಸಿ ಮಕ್ಕಳ ಭವಿಷ್ಯದ ಮೇಲೆ ಅಕ್ರಮವಾಗಿ ಪಠ್ಯ ಹೇರಬಾರದು.

ಇದು ಮೇಲುನೋಟದಲ್ಲಿ ಮಕ್ಕಳ ಪಠ್ಯಪುಸ್ತಕಗಳ ಗೊಂದಲವೆಂದೇ ಕಂಡರೂ ಆಳುವ ಪಕ್ಷದ ಒಳಹೇತುವೇ ಬೇರೆಯಾಗಿದೆ. ಎಳಸು ಮನಸ್ಸುಗಳಲ್ಲಿ ತನ್ನ ಹಿಡನ್ ಅಜೆಂಡಾದ ಬೀಜಗಳನ್ನು ಬಿತ್ತಿಯೇ ತೀರುವ ಹುನ್ನಾರ. ಅದಕ್ಕೆ ಧರ್ಮದ ಬಳಕೆ. ಹಿಂದೂ ಮತ್ತು ಹಿಂದುತ್ವದ ಪ್ರಯೋಗ. ಮತ್ತಷ್ಟು ಆಳಕ್ಕಿಳಿದು ನೋಡುವುದಾದರೆ ಗಾಂಧಿ ಮತ್ತು ಗೋಡ್ಸೆ ಹಿಂದುತ್ವಗಳು ಒಳಗೊಳಗೆ ಸ್ಪರ್ಧೆಗಿಳಿದಂತಿವೆ.

ಸಂವಿಧಾನದ ಆಶಯಗಳಿಗೆ ನ್ಯಾಯ ಸಿಗಬೇಕಿದೆ. ಅಂದರೆ ಮಹಾತ್ಮಾ ಗಾಂಧಿಯವರ ಹಿಂದುತ್ವಕ್ಕೆ ಜಯ ಸಿಗಬೇಕಾದ ಪರಿವರ್ತನೆಯ ಕಾಲ ಇದಾಗಬೇಕಿದೆ. ಆಳುವ ಪ್ರಭುತ್ವಕ್ಕೆ ಗೋಡ್ಸೆ ಹಿಂದುತ್ವ ಹೇರಿಕೆಯ ಹಟದ ಪೈಪೋಟಿ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಬೇಕಾದುದು ಸಂವಿಧಾನದ ಆಶಯ. ವಿಷಾದದ ಸಂಗತಿಯೆಂದರೆ ಕೇವಲ ಆರ್ಥಿಕ ಹಿಂದುಳಿದಿರುವಿಕೆ ಹೆಸರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಬಲಾಢ್ಯತನದ ಮೇಲ್ಜಾತಿಯು ಹತ್ತು ಪರ್ಸೆಂಟ್ ಮೀಸಲಾತಿ ಹೊಡಕೊಂಡಿತು. ಅದಕ್ಕಾಗಿ ಅವರೇನು ತಳಸಮುದಾಯದ ಮೂಲ ನಿವಾಸಿಗಳಂತೆ ಪ್ರತಿಭಟನಾ ಸತ್ಯಾಗ್ರಹ ಮಾಡಲಿಲ್ಲ. ಆದರೆ ವಾರವೊಪ್ಪತ್ತಿನಲ್ಲೇ ಶೇಕಡಾ ಹತ್ತು ಮೀಸಲಾತಿ ಗಿಟ್ಟಿಸಿಕೊಂಡರು.

ಅದೆಲ್ಲ ನಾಗಪುರದ ಹಾವಾಡಿಗರ ಎರಡು ಪರ್ಸೆಂಟೇಜ್ ಮೇಲ್ಜಾತಿ ವೈದಿಕ್ಯದ ಹುನ್ನಾರ. ಶ್ರಮವಿಲ್ಲದೆ ಎಲ್ಲ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ತಂತ್ರಕೋರರು. ಶೇಕಡಾ ತೊಂಭತ್ತೆಂಟು ಭಾಗ ಭಾರತ ಮಲಗಿ ನಿದ್ರಿಸುತ್ತಿದೆಯಾ.? ಹಾಗೆ ನಿದ್ರೆಗೆ ಜಾರಿಸುವ ಎಲ್ಲ ಹಿಕಮತ್ತುಗಳು ಆಳರಸರ ಮೋಡಿ ವಿದ್ಯೆಯ ಪ್ರಭುತ್ವಕ್ಕೆ ಪ್ರಾಪ್ತವಾಗಿದೆ. ತೊಂಭತ್ತೆಂಟು ಭಾಗದ ಐಕ್ಯಭಾರತವನ್ನು ತನ್ನ ಮುಷ್ಟಿಗೆ ಸೇರಿಸಿ ಹಿಡಿದಿಟ್ಟು ಕೊಳ್ಳುವ ಎರಡು ಪರ್ಸಂಟೇಜ್ ಧರ್ಮಪ್ರಭುತ್ವದ ಹುನ್ನಾರ. ಇಂತಹ ಪರಮಸತ್ಯಗಳನ್ನು ಅರ್ಥೈಸಿಕೊಂಡು ಐಕ್ಯತೆಯ ಹೋರಾಟಕ್ಕೆ ಸಿದ್ಧಗೊಳ್ಳಬೇಕು. ಅಂತಹ ಹೋರಾಟದ ಮೂಲಕ ಪಠ್ಯ ಪುಸ್ತಕಗಳ ಶೈಕ್ಷಣಿಕ ಅನ್ಯಾಯಗಳಿಗೆ ನ್ಯಾಯ ದೊರಕಿಸಿ ಕೊಳ್ಳಬೇಕಿದೆ.

ಈ ಲೇಖನ ಬರೆದು ಮುಗಿಸುವ ಸಮಯದಲ್ಲಿ ಸರಕಾರ ಪ್ರತಿಭಟನೆಗೆ ಮಣಿದು, ತಪ್ಪೊಪ್ಪಿಗೆಯಂತೆ ತಿದ್ದೋಲೆ ಹೊರಡಿಸಿದ ಸುದ್ದಿ ಬಂದಿದೆ. ಇದು ಮತ್ತೊಂದು ಮಹಾಗೊಂದಲ. ಆದರೆ ಪರಿಷ್ಕೃತ ಪಠ್ಯ ಪೂರ್ತಿಯಾಗಿ ತಿರಸ್ಕರಿಸಿದ ಮಜಕೂರಗಳಿಲ್ಲ. ಇಡೀ ಪ್ರಕರಣದ ಹಿಂದೆ ‘ಸಂಘ’ಟಿತ ಶಕ್ತಿಯೊಂದು ಹೊರಗಡೆಯಿಂದಲೇ ಹೊಲಬುಗೆಡಿಸುತ್ತಿದೆಯೆಂಬುದು ಜಗಜ್ಜಾಹೀರು. ಹೌದು ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಆಗಿದ್ದು ಪರಿಷ್ಕರಣೆ ಹೆಸರಿನ ಇತಿಹಾಸದ ತಿರುಚುವಿಕೆ. ತಿರುಚು ಪಠ್ಯಕ್ಕೆ ತಿದ್ದೋಲೆ, ತಪ್ಪೋಲೆ, ಒಪ್ಪೋಲೆಗಳ ಹೆಸರಿನ ಮೆಲೊಡ್ರಾಮಾ ಕೂಡಲೇ ನಿಲ್ಲಲಿ. ಮರು ಪರಿಷ್ಕರಣೆ ಹೆಸರಿನ ತಿರುಚಿದ ಪಠ್ಯ ತಿರಸ್ಕರಣೆಯೇ ಸರಕಾರಕ್ಕೆ ಉಳಿದಿರುವ ಏಕೈಕ ಆಯ್ಕೆ. ಇದೊಂದು ಬಾರಿಗೆ ಹಳೆಯ ಪಠ್ಯ ಬೋಧನೆಯೇ ಗತಿಯಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)